Operation Bandipur Tiger: ಮಧ್ಯರಾತ್ರಿ ಸೆರೆ ಸಿಕ್ಕ ಬಂಡೀಪುರ ಹುಲಿರಾಯ: ಕೊಂದ ಹಸು ತಿನ್ನಲು ಬಂದಾಗ ಸೆರೆಯಾದ ವ್ಯಾಘ್ರ-forest news bandipur tiger captured in midnight operation by karnataka forest department after killing woman kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Operation Bandipur Tiger: ಮಧ್ಯರಾತ್ರಿ ಸೆರೆ ಸಿಕ್ಕ ಬಂಡೀಪುರ ಹುಲಿರಾಯ: ಕೊಂದ ಹಸು ತಿನ್ನಲು ಬಂದಾಗ ಸೆರೆಯಾದ ವ್ಯಾಘ್ರ

Operation Bandipur Tiger: ಮಧ್ಯರಾತ್ರಿ ಸೆರೆ ಸಿಕ್ಕ ಬಂಡೀಪುರ ಹುಲಿರಾಯ: ಕೊಂದ ಹಸು ತಿನ್ನಲು ಬಂದಾಗ ಸೆರೆಯಾದ ವ್ಯಾಘ್ರ

Bandipur Tiger Captured ಮೂರು ದಿನದಿಂದ ಮೈಸೂರು( Mysore) ಜಿಲ್ಲೆಯ ನಂಜನಗೂಡು ತಾಲ್ಲೂಕು ಭಾಗದಲ್ಲಿ ಆತಂಕ ಮೂಡಿಸಿದ್ದ ಬಂಡೀಪುರ ಹುಲಿಯನ್ನು( Bandipur Tiger) ಕರ್ನಾಟಕ ಅರಣ್ಯ ಇಲಾಖೆ( Karnataka Forest Department) ಸೆರೆ ಹಿಡಿದಿದೆ.

ಮಹಿಳೆ ಕೊಂದು ಆತಂಕ ಸೃಷ್ಟಿಸಿದ್ದ ಬಂಡೀಪುರದ ಹುಲಿಯನ್ನು ಸೆರೆ ಹಿಡಿದು ಮೈಸೂರು ಮೃಗಾಲಯದಲ್ಲಿ ಇರಿಸಲಾಗಿದೆ.
ಮಹಿಳೆ ಕೊಂದು ಆತಂಕ ಸೃಷ್ಟಿಸಿದ್ದ ಬಂಡೀಪುರದ ಹುಲಿಯನ್ನು ಸೆರೆ ಹಿಡಿದು ಮೈಸೂರು ಮೃಗಾಲಯದಲ್ಲಿ ಇರಿಸಲಾಗಿದೆ.

ಮೈಸೂರು: ಬಂಡೀಪುರ ಭಾಗದಲ್ಲಿ ಉಪಟಳ ನೀಡಿ ಮಹಿಳೆ ಸಾವಿಗೆ ಕಾರಣವಾಗಿದ್ದ ಭಾರೀ ಗಾತ್ರದ ನರಭಕ್ಷಕ ವ್ಯಾಘ್ರನನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಅದೂ ಮಧ್ಯರಾತ್ರಿ ವೇಳೆ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಹುಲಿ ಸಿಕ್ಕಿ ಬಿದ್ದಿದೆ.

ಇದರಿಂದ ಆತಂಕದಿಂದ ದಿನ ದೂಡುತ್ತಿದ್ದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.

ಎರಡು ದಿನದ ಹಿಂದೆ ಹಸುವೊಂದನ್ನು ಕೊಂದಿದ್ದ ಜಾಗದಲ್ಲಿಯೇ 10 ವರ್ಷದ ಗಂಡು ಹುಲಿ ಸೆರೆ ಹಿಡಿಯಲಾಗಿದೆ. ಸೋಮವಾರ ಮಧ್ಯರಾತ್ರಿ 1.45ರ ಹೊತ್ತಿಗೆ ಹುಲಿ ಅಲ್ಲಿಗೆ ಬಂದಾಗ ಅರವಳಿಕೆ ನೀಡಿ ಹುಲಿಯನ್ನು ಹಿಡಿಯಲಾಯಿತು. ಆನಂತರ ಅದನ್ನು ಮೈಸೂರು ಮೃಗಾಲಯಕ್ಕೆ ತಂದು ಬಿಡಲಾಗಿದ್ದು, ಆರೋಗ್ಯದಿಂದ ಇದೆ.

ಸತತ ಮೂರು ದಿನದಿಂದ ನಡೆದ ಕಾರ್ಯಾಚರಣೆಯಲ್ಲಿ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ನಂಜನಗೂಡು ತಾಲ್ಲೂಕು ಬಳ್ಳೂರು ಹುಂಡಿಯಲ್ಲಿಯೇ ಹುಲಿ ಸಿಕ್ಕಿದ್ದು, ಬೆಳಗಿನ ಜಾವದ ಹೊತ್ತಿಗೆ ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿದೆ. ಹುಲಿ ಆರೋಗ್ಯ ತಪಾಸಣೆ ನಡೆದಿದ್ದು,. ಆರೋಗ್ಯ ಸ್ಥಿತಿಗತಿ ತಿಳಿಯಲಿದೆ ಎಂದು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್‌(ವನ್ಯಜೀವಿ) ಖಚಿತಪಡಿಸಿದರು.

ಬಳ್ಳೂರು ಹುಂಡಿ ಬಳಿ ದನ ಮೇಯಿಸಲು ಹೋಗದ್ದ ರತ್ನಮ್ಮ ವೆಂಕಟಯ್ಯ ಎಂಬ ಮಹಿಳೆಯ ಮೇಲೆ ಎರಗಿದ್ದ ವ್ಯಾಘ್ರ ಆಕೆಯನ್ನು ಕೊಂದು ಹಾಕಿತ್ತು. ಅಲ್ಲದೇ ದೇಹದ ಭಾಗವನ್ನೂ ತಿಂದು ಹಾಕಿತ್ತು.ಮರು ದಿನ ಅದೇ ಗ್ರಾಮದ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.

ಹುಲಿ ಒಮ್ಮೆ ಬೇಟೆಯಾಡಿದರೆ ಬೇಟೆ ಸ್ಥಳಕ್ಕೆ ಬಂದೇ ಬರುತ್ತದೆ. ಈ ಕಾರಣದಿಂದ ಹುಲಿ ದಾಳಿ ಮಾಡಿದ ಸ್ಥಳದಲ್ಲಿ ಕ್ಯಾಮರಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಸೋಮವಾರ ರಾತ್ರಿ 9ರ ಸಮಯದಲ್ಲಿಯೇ ಹುಲಿ ಹಸು ತಿನ್ನಲು ಬಂದಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಮೀಪದಲ್ಲಿಯೇ ಬೋನು ಇರಿಸಿ ಅದರೊಳಗೆ ವೈದ್ಯಾಧಿಕಾರಿ ಡಾ.ವಾಸೀಂ ಜಾಫರ್‌ ಅವರು ಇರುವಂತೆ ನೋಡಿಕೊಂಡಿತ್ತು. ಅಲ್ಲದೇ ಸಿಬ್ಬಂದಿಯೂ ಅಲ್ಲಿಯೇ ಇದ್ದರು. ಮಧ್ಯರಾತ್ರಿ ಮತ್ತೆ ಹುಲಿ ಬಂದಾಗ ಅದಕ್ಕೆ ಅರವಳಿಕೆಯನ್ನು ಡಾ.ವಾಸೀಂ ಜಾಫರ್‌ ಅವರು ನೀಡುವಲ್ಲಿ ಯಶಸ್ವಿಯಾದರು. ಕೆಲವೇ ಕ್ಷಣದಲ್ಲಿ ಉರುಳಿ ಬಿದ್ದ ಹುಲಿಯನ್ನು ಬಲೆ ಹಾಕಿ ಸೆರೆ ಹಿಡಿದು ಬೆಳಗಿನ ಜಾವವೇ ಮೈಸೂರು ಮೃಗಾಲಯಕ್ಕೆ ತರಲಾಯಿತು. ಅಂದರೆ ಜನ ಏಳುವ ಮುನ್ನವೇ ಹುಲಿ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಮಾಡಿ ಮುಗಿಸಿದೆ.

ಹುಲಿ ಸೆರೆಗೆ 200 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, 100 ಮಂದಿ ಗಿರಿಜನರನ್ನು ನಿಯೋಜನೆ ಮಾಡಲಾಗಿತ್ತು. ಢ್ರೋಣ್‌ ಬಳಸಿ ಹುಲಿ ಜಾಡು ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು. ಇದರೊಟ್ಟಿಗೆ ಮೂರು ಸಾಕಾನೆಗಳೂ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಭಾಗದಲ್ಲಿ ಹುಲಿ ದಾಳಿ ಆಕ್ರೋಶ ತೀವ್ರವಾಗಿದ್ದರಿಂದ ಹುಲಿಯನ್ನು ಸೆರೆ ಹಿಡಿಯಲು ಇಲ್ಲವೇ ಗುಂಡಿಕ್ಕಿ ಕೊಲ್ಲಲು ಆದೇಶಿಸಲಾಗಿತ್ತು. ಅರಣ್ಯ ಇಲಾಖೆಯೂ ಸವಾಲಾಗಿ ಸ್ವೀಕರಿಸಿ ಹುಲಿಯನ್ನು ಜೀವಂತವಾಗಿ ಹಿಡಿದಿದೆ.

ಹುಲಿ ಸೆರೆ ಹಿಡಿಯಲು ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಸಿಬ್ಬಂದಿ, ಅರಣ್ಯ ಇಲಾಖೆ ಮೈಸೂರು ವಿಭಾಗ, ವಿಶೇಷ ಕಾರ್ಯಪಡೆ ಸಹಿತ ವಿವಿಧ ವಿಭಾಗಗಳ ಸಿಬ್ಬಂದಿಯನ್ನು ನಿಯೋಜಿಸಿ ಮೂರು ದಿನವೂ 24 ಗಂಟೆ ಕಾರ್ಯಾಚರಣೆ ನಡೆಸಲಾಗಿತ್ತು. ಎರಡು ರಾತ್ರಿಯೂ ಹುಲಿ ಪತ್ತೆಗೆ ಸಿಬ್ಬಂದಿ ಪ್ರಯತ್ನಿಸಿದ್ದರು. ಮೂರನೇ ದಿನ ರಾತ್ರಿ ಹುಲಿ ಸೆರೆ ಸಿಕ್ಕಿದೆ. ಹುಲಿಯನ್ನು ಮರಳಿ ಕಾಡಿಗೆ ಬಿಡಬೇಕೋ ಅಥವಾ ಮೃಗಾಲಯದಲ್ಲಿಯೇ ಉಳಿಸಬೇಕೋ ಎನ್ನುವ ಕುರಿತು ವೈದ್ಯರ ವರದಿ ಬಂದ ನಂತರ ಹಿರಿಯ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ. ಸದ್ಯಕ್ಕಂತೂ ಹುಲಿ ಆರೋಗ್ಯವಾಗಿದೆ. ಯಾವುದೇ ಗಾಯಗಳು ಕಂಡು ಬಂದಿಲ್ಲ ಎಂದು ಹುಲಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ ಕುಮಾರ್‌ ತಿಳಿಸಿದರು.