ಕನ್ನಡ ಸುದ್ದಿ  /  Karnataka  /  Forest News Bandipur Tiger Reserve Yuva Mitra Program Successful 88 Percentage Of People Did Not See Bandipur Forest Kub

Forest Tales: ಕಾಡು ನೋಡಲು ವೇದಿಕೆಯಾಯ್ತು ಬಂಡೀಪುರ ಯುವಮಿತ್ರ, ಶೇ. 88 ಜನರಿಗೆ ಅರಣ್ಯ ವೀಕ್ಷಣೆ ಅನುಭವವೇ ಮೊದಲು !

Bandipur yuva mitra ಭಾರತದ ಹಳೆಯ ಹುಲಿಧಾಮಗಳಲ್ಲಿ ಒಂದಾದ ಬಂಡೀಪುರದ ಅರಣ್ಯದಂಚಿನ ಜನರಿಗೆ, ಯುವಕರಿಗೆ ತೋರಿಸಲು ಯುವ ಮಿತ್ರ ಯೋಜನೆ ಶುರುವಾಗಿ ಒಂದು ವರ್ಷ ಕಳೆದು ಯಶಸ್ವಿಯಾಗಿದೆ.

ಬಂಡೀಪುರದ ಯುವ ಮಿತ್ರ ಯೋಜನೆ ಹಲವು ಅರಣ್ಯ ಕುತೂಹಲಿಗಳನ್ನು ಹುಟ್ಟು ಹಾಕಿದೆ.
ಬಂಡೀಪುರದ ಯುವ ಮಿತ್ರ ಯೋಜನೆ ಹಲವು ಅರಣ್ಯ ಕುತೂಹಲಿಗಳನ್ನು ಹುಟ್ಟು ಹಾಕಿದೆ.

ಆಕೆಯ ಹೆಸರು ರಶ್ಮಿ. 8ನೇ ತರಗತಿ ವಿದ್ಯಾರ್ಥಿನಿ. ತಮ್ಮ ಊರಿನಿಂದ 5 ಕಿ.ಮಿ ದೂರದಲ್ಲಿಯೇ ಕಾಡಿದೆ. ಅದೂ ದೇಶದಲ್ಲಿಯೇ ಅತಿ ಹೆಚ್ಚು ಹುಲಿ ಹಾಗೂ ಆನೆ ಸಾಂಧ್ರತೆಯನ್ನು ಹೊಂದಿರುವ ಬಂಡೀಪುರ ಅರಣ್ಯ. ವಿಶ್ವದ ಯಾವುದೋ ಭಾಗದಿಂದಲೋ ಇಲ್ಲವೇ ದೇಶದ ಮತ್ತೊಂದು ತುದಿಯಿಂದಲೋ ಜನ ಬಂಡೀಪುರ ಬಂದು ನೋಡಿಕೊಂಡು ಹೋಗುತ್ತಾರೆ. ಆದರೆ ಕೂಗಳತೆ ದೂರದಲ್ಲಿಯೇ ಬಂಡೀಪುರ ಕಾಡಿದ್ದರೂ ಅದನ್ನು ನೋಡಲು ಆಗಿರಲಿಲ್ಲ. ಊರ ಪಕ್ಕದಲ್ಲಿಯೇ ಹುಲಿ, ಆನೆ ಬಂದಿದ್ದನ್ನು ಕೇಳಿದ್ದು ಬಿಟ್ಟರೆ ಅದನ್ನೂ ನೋಡಿರಲಿಲ್ಲ. ಶಾಲೆಯಿಂದ ಬಂಡೀಪುರ ನೋಡಲು ಹೋಗೋಣವೆ ಎಂದು ಕೇಳಿದಾಗ ಆಕೆಗೆ ತಪ್ಪಿಸಿಕೊಳ್ಳಲು ಮನಸಾಗಲಿಲ್ಲ. ಖುಷಿಯಾಗಿಯೇ ಹೋಗಿ ಬಂದಳು. ಸಫಾರಿ ಬಸ್ಸನೇರಿ ಹತ್ತಿರದಿಂದಲೇ ಆನೆ ನೋಡಿದಳು. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಮನಸಿನಲ್ಲಿದ್ದ ಅದೆಷ್ಟೋ ಅನುಮಾನಗಳನ್ನೂ ಬಗೆಹರಿಸಿಕೊಂಡಳು. ಆ ನೆನಪು ಆಕೆಯಲ್ಲಿ ಅಚ್ಚಳಿಯದೇ ಉಳಿದಿದೆ. ಅಷ್ಟೇ ನಮ್ಮೂರ ಕಾಡು ಎಂಬ ಅಭಿಮಾನವೂ ಮೂಡಿದೆ.

ಮಹದೇವು ಅವರೂ ಬಂಡೀಪುರದಂಚಿನ ಗ್ರಾಮವೊಂದರಲ್ಲಿ ಶಿಕ್ಷಕ. ನಿತ್ಯ ಕಾಡಿನ ಪಕ್ಕದಲ್ಲಿಯೇ ಶಾಲೆಗೆ ಹೋಗಬೇಕು. ಕಾಡ ಭಯದ ನಡುವೆಯೂ ವೃತ್ತಿ ಜೀವನ ಸಾಗಿದೆ. ಆದರೆ ಕಾಡನ್ನು ಒಳಹೊಕ್ಕು ನೋಡಲು ಆಗಿರಲೇ ಇಲ್ಲ. ಬಂಡೀಪುರವನ್ನು ತೋರಿಸಲು ಅರಣ್ಯ ಇಲಾಖೆ ತಮ್ಮ ಶಾಲೆಯ ಮಕ್ಕಳೊಂದಿಗೆ ಶಿಕ್ಷಕರನ್ನೂ ಕರೆದುಕೊಂಡು ಹೋದಾಗ ಮಹದೇವು ಕೂಡ ಸಂತಸದಿಂದಲೇ ಹೋದರು. ಒಂದು ದಿನ ಅಲ್ಲಿ ಕಳೆದರು. ಅರಣ್ಯದ ಜಗತ್ತು ಎಷ್ಟೊಂದು ವಿಶಾಲವಾಗಿದೆಯಲ್ಲಾ ಎನ್ನುವ ಕುತೂಹಲದಿಂದಲೇ ಬಂದರು. ಈಗ ಅರಣ್ಯದ ಬಗ್ಗೆ ಮಕ್ಕಳಿಗೆ ಮಾತ್ರವಲ್ಲವೇ ಊರಿನವರಿಗೂ ಅಭಿಮಾನದಿಂದಲೇ ಹೇಳುತ್ತಾರೆ.

ಚಾಮರಾಜನಗರ ಜಿಲ್ಲೆ ಅರಣ್ಯದಂಚಿನ ಪಂಚಾಯಿತಿಯೊಂದರ ನೌಕರ ಸೋಮಶೇಖರ. ಅವರಿಗೂ ಕಾಡಿನ ಬಗ್ಗೆ ಆಸಕ್ತಿ. ಕಾಡು ನೋಡಲು ಮಾತ್ರ ಆಗಿರಲೇ ಇಲ್ಲ. ಅರಣ್ಯ ಇಲಾಖೆಯ ಕಾಡು ತೋರಿಸುವ ಯೋಜನೆ ಭಾಗವಾಗಿ ಒಂದು ದಿನ ತಾವೂ ಹೋಗಿ ಬಂದರು. ಸಫಾರಿ, ಅರಣ್ಯ ಕುರಿತಾದ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ ಸಾಕಷ್ಟು ಜ್ಞಾನವನೂ ಸಂಪಾದಿಸಿಕೊಂಡು ಬಂದರು.

ಕಾಡು ನೋಡ ಹೋದೆ…

ಇದು ಒಬ್ಬಿಬ್ಬರ ಕಥಾನಕವಲ್ಲ. ಒಂದೇ ವರ್ಷದಲ್ಲಿ ಕರ್ನಾಟಕದ ಬಂಡೀಪುರ ಅರಣ್ಯ ನೋಡಿದ 8412 ಮಂದಿಗೆ ಆಗಿರುವ ವಿಭಿನ್ನ ಅನುಭವ. ತಮ್ಮ ಊರ ಹತ್ತಿರದಲ್ಲಿದ್ದರೂ ಬಂಡೀಪುರ ಕಾಡು ಎಂದರೆ ಹೀಗೆ ಇರಬಹುದು ಎಂದು ಊಹಿಸಿಕೊಳ್ಳುತ್ತಿದ್ದವರಿಗೆ ಹತ್ತಿರದಿಂದ ನೋಡಲು ನೆರವಾಯಿತು ಯುವ ಮಿತ್ರ ಕಾರ್ಯಕ್ರಮ.

ದೇಶದಲ್ಲಿ ಹುಲಿ ಯೋಜನೆಗೆ ಈಗ 50 ವರ್ಷ. ಅಂದರೆ 1973ರಲ್ಲಿ ಆರಂಭಗೊಂಡ ಹುಲಿ ಯೋಜನೆ ಮೊದಲು ಜಾರಿಯಾಗಿದ್ದು ಬಂಡೀಪುರದಲ್ಲಿಯೇ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಹಂಚಿ ಹೋಗಿರುವ ಬಂಡೀಪುರ ಹುಲಿ ಧಾಮದ ಸುತ್ತಲೂ ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು, ಸರಗೂರು ಹಾಗೂ ಎಚ್‌ಡಿಕೋಟೆ ತಾಲ್ಲೂಕುಗಳು ಬರುತ್ತವೆ. ಮತ್ತೊಂದು ಬದಿಯಲ್ಲಿ ಕೇರಳ, ಇನ್ನೊಂದು ಬದಿಯಲ್ಲಿ ತಮಿಳುನಾಡು. ಹೀಗೆ 900 ಚದರ ಕಿ.ಮಿನಲ್ಲಿ ಹರಡಿಕೊಂಡಿರುವ ಈ ಅರಣ್ಯ ತನ್ನದೇ ಆದ ಮಹತ್ವ ಹೊಂದಿದೆ. ಹುಲಿ., ಆನೆ ಮಾತ್ರವಲ್ಲದೇ ಹತ್ತಾರು ರೀತಿಯ ಪ್ರಾಣಿಗಳು, ಪಕ್ಷಿ ಸಂಕುಲ, ಜೀವವೈವಿಧ್ಯದ ಭಾಗವಾದ ಮರ, ಹೂವು, ಹಣ್ಣುಗಳ ಭಾಗವೇ ಆಗಿ ಹೋಗಿದೆ. ಅದೇನೋ ಕಾಡಿನ ಪ್ರವಾಸ ಎಂದರೆ ಎಂತವರ ಮನಸು ಪ್ರಫುಲ್ಲ ಗೊಳ್ಳುತ್ತದೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡಿಕೊಂಡು ಬಂದು ಮೂರ್ನಾಲ್ಕು ದಿನ ಕಾಡಿನ ಪ್ರದೇಶದಲ್ಲಿ ಕಳೆದು ಹೋಗುವವರು ಅದೆಷ್ಟೋ. ಅದೇ ಅರಣ್ಯದಂಚಿನಲ್ಲಿ ಬದುಕು ಕಟ್ಟಿಕೊಂಡಿದ್ದರೂ ಬಂಡೀಪುರ ನೋಡಲು ಆಗದವರು ಇನ್ನೆಷ್ಟೋ ಜನ. ಅವರಿಗೆ ನಮ್ಮೂರಿನ ಕಾಡ ನೋಡಬೇಕು ಎನ್ನುವ ತವಕ. ಅಲ್ಲಿಗೆ ಹೋದರೆ ಎಷ್ಟು ದುಡ್ಡು ಖರ್ಚು ಮಾಡಬೇಕೋ, ನಮ್ಮನ್ನ ಒಳಕ್ಕೆ ಬಿಡುತ್ತಾರೋ ಎನ್ನುವ ಬಿಗುಮಾನ. ಈ ಕಾರಣದಿಂದ ಬಂಡೀಪುರವನ್ನು ನೋಡುವ ಮನಸ್ಸಿನಿಂದ ದೂರ ಉಳಿದವರೇ ಅಧಿಕ.

ಬಂಡೀಪುರ 50ರ ನೆನಪು

ಬಂಡೀಪುರ ಹುಲಿ ಯೋಜನೆಗೆ 50 ತುಂಬಿದ ಸಂದರ್ಭದಲ್ಲಿ ಈಗಿನ ನಿರ್ದೇಶಕ ಹಾಗೂ ಹಿರಿಯ ಐಎಫ್‌ಎಸ್‌ ಅಧಿಕಾರಿ ಡಾ.ಪಿ.ರಮೇಶ್‌ ಕುಮಾರ್‌ ಒಂದು ಯೋಜನೆ ರೂಪಿಸಿದರು. ಅದರ ಹೆಸರು ಯುವ ಮಿತ್ರ. ಅಂದರೆ ಬಂಡೀಪುರಕ್ಕೆ ಹೊಂದಿಕೊಂಡಿರುವ ಐದು ತಾಲ್ಲೂಕುಗಳ ಏಳರಿಂದ ಪದವಿವರಗಿನ ವಿದ್ಯಾರ್ಥಿಗಳಿಗೆ ಕಾಡು ತೋರಿಸುವುದು. ಬೆಳಿಗ್ಗೆ ಅವರನ್ನು ಕರೆದುಕೊಂಡು ಬಂದು ಒಂದು ದಿನ ಬಂಡೀಪುರ ಸುತ್ತಿ ಹೋಗುವುದು ಯೋಜನೆ. ಇದನ್ನು ಬರೀ ಸಫಾರಿಗೆ ಸೀಮಿತಗೊಳಿಸದೇ ಶೈಕ್ಷಣಿಕ ಕಾರ್ಯಕ್ರಮವಾಗಿ ರೂಪಿಸಲಾಗಿದೆ. ಮಕ್ಕಳು ಇಲ್ಲಿ ಒಂದು ಎಂಟು ತಾಸಿಗೂ ಹೆಚ್ಚು ಕಾಲ ಹಲವು ಚಟುವಟಿಕೆಗಳಲ್ಲೂ ಭಾಗವಾಗಿ, ಸಾಕ್ಷ್ಯಚಿತ್ರ ವೀಕ್ಷಣೆ, ಸಂವಾದ, ಕ್ಷೇತ್ರ ಸುತ್ತಾಟ, ಸಫಾರಿಯಲ್ಲಿ ಭಾಗಿಯಾಗುತ್ತಾರೆ. ಬಂಡೀಪುರದ ಪ್ರಾಣಿ ಪಕ್ಷಿ, ಮರ ಗಿಡಗಳ ಕುರಿತು ತಾವು ಪಡೆದ ಮಾಹಿತಿಯೊಂದಿಗೆ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಇದೊಂದು ರೀತಿಯಲ್ಲಿ ಅವರಿಗೆ ವಿಭಿನ್ನ ಲೋಕವೇ.

ವಾರದಲ್ಲಿ ಐದು ದಿನ ಚಟುವಟಿಕೆ

ದೇಶದಲ್ಲಿ ಸದ್ಯ 54 ಹುಲಿ ಯೋಜಿತ ಪ್ರದೇಶಗಳಿವೆ. ಕರ್ನಾಟಕದಲ್ಲಿ ಮಾತ್ರ ಯುವ ಮಿತ್ರ ಕಾರ್ಯರಂಭಗೊಂಡಿದೆ. ಇದಕ್ಕಾಗಿಯೇ ಪ್ರತ್ಯೇಕ ಅಧಿಕಾರಿ. ಶೈಕ್ಷಣಿಕ ಅಧಿಕಾರಿ, ಪರಿಸರ ತಜ್ಞರು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡು ಪ್ರತ್ಯೇಕ ಬಸ್‌ಗಳು ಯುವ ಮಿತ್ರಕ್ಕಾಗಿಯೇ ಮೀಸಲಿವೆ. ಶಾಲೆಯಿಂದ ಕರೆದುಕೊಂಡು ಬಂದು ಸಂಜೆ ಅಲ್ಲಿಗೆ ವಾಪಾಸ್‌ ಬಿಡಲು ಬಸ್‌ಗಳನ್ನು ಬಳಸಲಾಗುತ್ತದೆ. ಬಂಡೀಪುರದಲ್ಲಿ ವಿಶೇಷ ಹಾಲ್‌ನಲ್ಲಿ ಸಾಕ್ಷ್ಯಚಿತ್ರ ವೀಕ್ಷಣೆ, ಸಂವಾದ, ಚಟುವಟಿಕೆಯನ್ನು ನಡೆಸಲಾಗುತ್ತದೆ. ಯುವ ಮಿತ್ರ ಯೋಜನೆ ನಿರಂತರವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಯುವಮಿತ್ರಕ್ಕಾಗಿಯೇ ರೂಪಿಸಿರುವ ನಾಲ್ಕು ಪುಸ್ತಕಗಳಲ್ಲಿ ಪ್ರಾಣಿಗಳು, ಪಕ್ಷಿಗಳು, ಮರಗಳು ಹಾಗೂ ಜೀವವೈವಿಧ್ಯತೆ ವಿವರ ಒದಗಿಸಲಾಗಿದೆ. ಪುಸ್ತಕದಲ್ಲಿಯೇ ಅವುಗಳ ಬಗ್ಗೆ ತಿಳಿದುಕೊಂಡು ಬಣ್ಣ ಹಚ್ಚುವ ಹಾಗೂ ಕೆಲವು ಪ್ರಶ್ನೆಗಳಿಗೆ ಉತ್ತರ ಒದಗಿಸುವ ಚಟುವಟಿಕೆಯೂ ಇರಲಿದೆ. ಶನಿವಾರ ಹಾಗೂ ಭಾನುವಾರ, ರಜೆ ದಿನ ಹೊರತುಪಡಿಸಿ ವಾರದ ಐದು ದಿನವೂ ಯುವಮಿತ್ರ ನಡೆಯಲಿದೆ.

ಕುತೂಹಲಿಗಳ ಕಥನ

ಕಾಡಿನ ಬಗ್ಗೆ ಹಲವರಿಗೆ ಕುತೂಹಲ ಇದ್ದೇ ಇರುತ್ತದೆ. ನೋಡಬೇಕು ಎಂದರೆ ಅವಕಾಶ ಸಿಕ್ಕಿರುವುದಿಲ್ಲ. ಈ ಕಾರಣದಿಂದ ಶೈಕ್ಷಣಿಕ ಸೇತುಬಂಧವಾಗಿ ಇಂತಹ ಕಾರ್ಯಕ್ರಮವನ್ನು ಕಳೆದ ವರ್ಷ ಆರಂಭಿಸಿದೆವು. ಒಂದೇ ವರ್ಷದಲ್ಲಿ ಅದೆಷ್ಟು ಮಂದಿ. ಅದರಲ್ಲೂ ಮಕ್ಕಳು ಬಂದು ಸಂತಸದಿಂದಲೇ ಪಾಲ್ಗೊಳ್ಳುವಾಗ, ಕಾಡಿನ ಕುರಿತಾಗಿ ಅವರು ಪ್ರಶ್ನೆಗಳೊಂದಿಗೆ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದನ್ನು ನೋಡುವಾಗ ಇದರ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ವಿವರಿಸುತ್ತಾರೆ.

ಯುವಮಿತ್ರ ಎನ್ನುವ ಪರಿಕಲ್ಪನೆಯಡಿ ಕೆಲಸ ಮಾಡುತ್ತಲೇ ಒಂದು ವರ್ಷದಲ್ಲಿ 8412 ಮಂದಿಗೆ ಕಾಡಿನ ಜ್ಞಾನ ಹಂಚಿರುವ ಕೆಲಸವಾಗಿದೆ. ಯುವಕರಲ್ಲಂತೂ ಕಾಡಿನ ಬಗ್ಗೆ ಅರಿವು ಕಡಿಮೆ. ಇಲ್ಲಿಗೆ ಬರುವಾಗ, ಒಂದು ದಿನ ಇದ್ದು ಹೊರಡುವ ವೇಳೆ ಅವರಲ್ಲಾದ ಬದಲಾವಣೆ, ಆನಂತರವೂ ಕೆಲವರು ನಮ್ಮೊಂದಿಗೆ ಸ್ವಯಂ ಸೇವಕರಾಗಿ ಬರಲು ಮುಂದಾಗಿರುವುದು ಒಂದು ಪೀಳಿಗೆಯನ್ನೇ ಬೆಳಸಲು ಸಹಕಾರಿಯಾಗಲಿದೆ ಎನ್ನುವುದು ಶೈಕ್ಷಣಾಧಿಕಾರಿ ಮೋಹನ್‌ ಕುಂದಾಪುರ.

ಮೊದಲ ನೋಟದಲ್ಲಿ…

ಹಿಂದಿನ ವರ್ಷದ ಮಾರ್ಚ್‌ನಲ್ಲಿ ಯೋಜನೆ ಶುರುವಾಗಿದ್ದು, ಒಂದು ವರ್ಷದಲ್ಲಿಯೇ 162 ದಿನ ಯುವಮಿತ್ರ ನಡೆದಿದೆ. ಇದರಲ್ಲಿ 7013 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. 662 ಶಿಕ್ಷಕರು ಬಂದಿದ್ಧಾರೆ. ಸ್ಥಳೀಯರಿಗೆ ಒತ್ತು ನೀಡಲೆಂದೇ ಪಂಚಾಯಿತಿ ನೌಕರರು. ಸ್ಥಳೀಯ ರೈತರು, ಗಿರಿಜನರಿಗೂ ಯುವಮಿತ್ರ ಅಡಿಯೇ ಕಾಡು ತೋರಿಸಲಾಗಿದೆ.

ಈವರೆಗೂ 8412 ಮಂದಿ ಬಂಡೀಪುರ ನೋಡಿ ಖುಷಿಪಟ್ಟಿದ್ದಾರೆ. ಇದರಲ್ಲಿ 7305 ಮಂದಿ ಅಂದರೆ ಶೇ.88 ರಷ್ಟು ಜನ ಬಂಡೀಪುರ ನೋಡಿದ್ದು ಇದೇ ಮೊದಲು. ಇದನ್ನು ಬಹುತೇಕರು ತಮ್ಮ ಅನುಭವದಲ್ಲಿ ದಾಖಲಿಸಿದ್ದಾರೆ. ಇದು ಬಂಡೀಪುರ ಒಂದೇ ಅಲ್ಲ. ಬಹುತೇಕ ಪ್ರಮುಖ ಅರಣ್ಯಗಳ ಕಥೆಯೂ ಹೌದು.

-ಕುಂದೂರು ಉಮೇಶಭಟ್ಟ, ಮೈಸೂರು