ಕನ್ನಡ ಸುದ್ದಿ  /  Karnataka  /  Forest News Bangalore Bases Shark Tank India Startup Company Bring Device To Control Wildlife Menace Prk

Forest News: ವನ್ಯಜೀವಿಗಳ ಉಪಟಳವೇ, ಬೆಂಗಳೂರಿನ ಸಂಸ್ಥೆ ರೂಪಿಸಿದೆ ವಿನೂತನ ಉಪಕರಣ, ಆನೆ, ಮಂಗಗಳನ್ನು ಓಡಿಸುವ ಸಾಧನ

ಬೆಂಗಳೂರು ಮೂಲದ ಸ್ಟಾರ್ಟಪ್‌ ಕಂಪೆನಿ ಶಾರ್ಟ್‌ ಟ್ಯಾಂಕ್‌ ಇಂಡಿಯಾ ವನ್ಯಜೀವಿಗಳ ಉಪಟಳ ತಗ್ಗಿಸಲು ಉಪಕರಣವನ್ನು ರೂಪಿಸಿದೆ. ಇದರ ವಿಶೇಷ ಇಲ್ಲಿದೆ.ವರದಿ:ಪ್ರಿಯಾಂಕಗೌಡ, ಬೆಂಗಳೂರು

ಬೆಂಗಳೂರು ಸಂಸ್ಥೆ ರೂಪಿಸಿರುವ ಹೊಸ ಉಪಕರಣ.
ಬೆಂಗಳೂರು ಸಂಸ್ಥೆ ರೂಪಿಸಿರುವ ಹೊಸ ಉಪಕರಣ.

ಬೆಂಗಳೂರು: ಕಾಡು ನಾಶವಾಗಿ ನಾಡು ಹೆಚ್ಚುತ್ತಿದೆ. ಅರಣ್ಯವಿಲ್ಲದೆ ವನ್ಯಜೀವಿಗಳು ನಾಡಿನತ್ತ ಲಗ್ಗೆಯಿಡುತ್ತಿರುವುದು ಸಾಮಾನ್ಯವಾಗುತ್ತಿದೆ. ಇದು ರೈತರು ಬೆಳೆಯುತ್ತಿರುವ ಬೆಳೆಗಳ ಮೇಲೆ ನೇರವಾಗಿ ಪರಿಣಾಮ ಬೀಳುತ್ತಿದೆ. ಹೀಗಾಗಿ ಬೆಂಗಳೂರು ಮೂಲದ ಕಂಪನಿಯೊಂದು ರೈತರಿಗೆ ಪ್ರಯೋಜನವಾಗುವಂತಹ ಉತ್ಪನ್ನವನ್ನು ವಿನ್ಯಾಸಗೊಳಿಸಿದೆ. ರೈತರು ತಮ್ಮ ಬೆಳೆಗಳನ್ನು ಮತ್ತು ಜಾನುವಾರುಗಳನ್ನು ರಾತ್ರಿಯ ಸಮಯದಲ್ಲಿ ವನ್ಯಜೀವಿಗಳಿಂದ ರಕ್ಷಿಸಲು, ಬೆಂಗಳೂರಿನ ಸ್ಟಾರ್ಟಪ್ ಕಂಪನಿಯೊಂದು ಬೆಳಕಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಾರೆ. ಈ ನವೀನ ಉತ್ಪನ್ನವು ಕಾಡು ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ. ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಸ್ಟಾರ್ಟಪ್ ಕಂಪನಿಯೊಂದು ಇತ್ತೀಚೆಗೆ ಶಾರ್ಕ್ ಟ್ಯಾಂಕ್ ಇಂಡಿಯಾ ಎಂಬ ರಿಯಾಲಿಟಿ ಶೋನಲ್ಲಿ ರೂ. 1.5 ಕೋಟಿ ರೂ. ಕೂಡ ಗೆದ್ದಿದೆ.

ಭಾರತದಲ್ಲಿ ರೈತರು ತಾವು ಬೆಳೆದ ಶೇ.30 ರಿಂದ ಶೇ.50 ರಷ್ಟು ಬೆಳೆಗಳನ್ನು ವನ್ಯಜೀವಿಗಳಿಂದ ಕಳೆದುಕೊಳ್ಳುತ್ತಾರೆ. ಕಾಡು ಪ್ರಾಣಿಗಳನ್ನು ದೂರವಿಡಲು ಕೆಲವರು ವಿದ್ಯುತ್ ಬೇಲಿಗಳನ್ನು ನಿರ್ಮಿಸುವುದು, ಕಚ್ಚಾ ಬಾಂಬ್‌ಗಳನ್ನು ಸಿಡಿಸುವುದು ಸೇರಿದಂತೆ ಹಲವು ರೀತಿಯ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇದರಿಂದ ವನ್ಯಜೀವಿಗಳು ಸಾವಿಗೀಡಾಗಿರುವ ಪ್ರಕರಣಗಳು ನಡೆದಿವೆ. ಕಳೆದ ನವೆಂಬರ್‌ನಲ್ಲಿ ಚಿಕ್ಕಮಗಳೂರಿನಲ್ಲಿ ವಿದ್ಯುತ್ ಬೇಲಿಯ ಸ್ಪರ್ಶಕ್ಕೊಳಗಾಗಿ ಆನೆಯೊಂದು ಮೃತಪಟ್ಟ ದುರ್ಘಟನೆ ನಡೆದಿತ್ತು ಎಂದು ಕಟಿಧಾನ್ ಸ್ಟಾರ್ಟಪ್ ಕಂಪನಿಯ ಸಂಸ್ಥಾಪಕ ಎಸ್.ಆರ್. ಅಯಾನ್ ವಿವರಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಉಲ್ಲೇಖಿಸಿದೆ.

ವಿನೂತನ ಸಾಧನದ ಅಧ್ಯಯನ ಹಂಚಿಕೊಂಡ ಅಯಾನ್

ಪರಿಸರ ಸಮತೋಲನದಲ್ಲಿಡುವಲ್ಲಿ ವನ್ಯಜೀವಿಗಳ ಪಾತ್ರ ಬಹಳ ಮುಖ್ಯವಾದದ್ದು. ಹೀಗಾಗಿ ಅವುಗಳ ರಕ್ಷಣೆಯನ್ನು ಕೂಡ ನಾವು ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಯಾನ್ ಅವರು ಹೊಸ ಉತ್ಪನ್ನವನ್ನು ವಿನ್ಯಾಸಗೊಳಿಸಿದ್ದಾರೆ. ಇದರಿಂದ ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಗಟ್ಟಬಹುದು. ಸಾಮಾನ್ಯವಾಗಿ ಪ್ರಾಣಿಗಳು, ಪ್ರಾಣಿಗಳಿಗೆ ಹೆದರುತ್ತದೆ. ಈ ಉತ್ಪನ್ನದ ಸುತ್ತಲೂ ಬೆಳಕಿನ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಪ್ರತಿ ಸಾಧನವು ನಾಲ್ಕು ಎಲ್ಇಡಿ ದೀಪಗಳನ್ನು ಒಳಗೊಂಡಿದೆ. ದೀಪಗಳನ್ನು ಜೋಡಿಯಾಗಿ ಇರಿಸಲಾಗುತ್ತದೆ. ದೂರದಿಂದ ಪ್ರಾಣಿಗಳಿಗೆ ಇದು ಪರಭಕ್ಷಕ ಜೀವಿಯ ಹೊಳೆಯುವ ಕಣ್ಣುಗಳಂತೆ ಕಾಣುತ್ತದೆ. ಇದು ವನ್ಯಜೀವಿಗಳನ್ನು ಹೆದರಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಈ ವಿನೂತನ ಉತ್ಪನ್ನವು ಸ್ವಾಯತ್ತ ಸಾಧನವಾಗಿರುವುದರಿಂದ, ಇದು ಕತ್ತಲೆಯಲ್ಲಿ ಸ್ವಿಚ್ ಆನ್ ಆಗುತ್ತದೆ. ಬೆಳಕಿಗೆ ಸ್ವಿಚ್ ಆಫ್ ಆಗುತ್ತದೆ. ಅಲ್ಲದೆ, ಇದು ಸೌರಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬ್ಯಾಕಪ್‌ಗಾಗಿ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ.

ಒಂದು ಹೆಕ್ಟೇರ್ ಕೃಷಿ ಭೂಮಿಯನ್ನು ರಕ್ಷಿಸಲು ಪ್ರತಿ ಮೂಲೆಯಲ್ಲಿ ಒಂದರಂತೆ ಇಂತಹ ನಾಲ್ಕು ದೀಪಗಳ ಅಗತ್ಯವಿದೆ. ಇವುಗಳನ್ನು ಬಿದಿರಿನ ಕೋಲುಗಳು ಅಥವಾ ಉಕ್ಕಿನ ಕಂಬಗಳ ಮೇಲೆ ಜೋಡಿಸಬಹುದು. ಕಾಡುಹಂದಿ, ನೀಲಗಾಯ್, ಆನೆ, ಹುಲಿ, ಚಿರತೆ ಮತ್ತು ಹಿಮಾಲಯ ಕರಡಿಗಳನ್ನು ಹಿಮ್ಮೆಟ್ಟಿಸಲು ಇದು ಹೆಚ್ಚು ಪರಿಣಾಮಕಾರಿ ಎಂದು ಅಯಾನ್ ವಿವರಿಸಿದ್ದಾರೆ.

ಈ ದೀಪಗಳನ್ನು ತಮಿಳುನಾಡಿನ ಜಮೀನೊಂದರಲ್ಲಿ ಅಧ್ಯಯನಕ್ಕಾಗಿ ಸ್ಥಾಪಿಸಲಾಯಿತು. ದೀಪಗಳನ್ನು ನೋಡಿದ ಆನೆಗಳು ಪರಭಕ್ಷಕ ಎಂದು ಭಾವಿಸಿ ಹಿಂತಿರುಗಿದವು. ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರಿಗೆ, ಕಾಡುಹಂದಿಗಳ ಬೆಳೆ ನಷ್ಟವು ಶೇ. 25 ರಷ್ಟು ಕಡಿಮೆಯಾಗಿದೆ. ಆನೆ ದಾಳಿ ನಿಂತ ನಂತರ ಒಡಿಶಾದ ರೈತರೊಬ್ಬರ ಆದಾಯ ದ್ವಿಗುಣಗೊಂಡಿದೆ.

ವಿನೂತನ ಸಾಧನ ಕಂಡುಹಿಡಿಯಲು ಕಾರಣವೇನು?

ತಾನು ಈ ರೀತಿಯ ವಿನೂತನ ಉತ್ಪನ್ನವನ್ನು ಕಂಡುಹಿಡಿಯಲು ಏನು ಕಾರಣ ಎಂಬುದನ್ನು ಅಯಾನ್ ವಿವರಿಸಿದ್ದಾರೆ. ಅವರ ಸ್ನೇಹಿತರೊಬ್ಬರು ಲಡಾಖ್‌ನಲ್ಲಿ ವನ್ಯಜೀವಿ ಸಂಘಟನೆಯಲ್ಲಿ ಸ್ವಯಂಸೇವಕನಾಗಿದ್ದರಂತೆ. ಒಂದು ಬಾರಿ ಗ್ರಾಮಸ್ಥರು ತಮ್ಮ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹಿಮ ಚಿರತೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರಂತೆ. ತನಗೆ ಉತ್ಪನ್ನ ವಿನ್ಯಾಸ ಮತ್ತು ರೊಬೊಟಿಕ್ಸ್ ಬಗ್ಗೆ ಪರಿಚಯವಿದ್ದುದರಿಂದ ತನ್ನಲ್ಲಿ ಇದಕ್ಕೆ ಏನಾದರೂ ಪರಿಹಾರ ನೀಡಬಹುದೇ ಎಂದು ಕೇಳಿಕೊಂಡಿದ್ದರು ಎಂದು ಅಯಾನ್ ನೆನಪಿಸಿಕೊಂಡಿದ್ದಾರೆ.

ಲಡಾಖ್‌ನಲ್ಲಿ ಪ್ರಾಯೋಗಿಕದ ನಂತರ ಈ ಪರಬ್ರಕ್ಷ್ ಉತ್ಪನ್ನವು 2020 ರಲ್ಲಿ ಮಾರುಕಟ್ಟೆಗೆ ಬಂದಿತು. ಅಂದಿನಿಂದ ಸುಮಾರು 1,100 ಯೂನಿಟ್‌ಗಳು, ತಲಾ 9,500 ರೂಪಾಯಿಯಂತೆ ಈ ಉತ್ಪನ್ನಗಳನ್ನು ಮಹಾರಾಷ್ಟ್ರದ ಕೃಷಿ ಮತ್ತು ಸಾಮಾಜಿಕ ಅಭಿವೃದ್ಧಿ ಸಮೂಹಗಳಿಗೆ ಮಾರಾಟ ಮಾಡಲಾಗಿದೆ. ಇದೀಗ ಕನಕಪುರ, ಕೊಡಗು ಮತ್ತು ಹಾಸನದಿಂದಲೂ ಬೇಡಿಕೆ ಶುರುವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಗಳನ್ನು ಹಿಮ್ಮೆಟ್ಟಿಸಲೂ ಇದೆ ಸಾಧನ

ಹಲವೆಡೆಗಳಲ್ಲಿ ಕೋತಿಗಳ ಕಾಟ ವಿಪರೀತವಾಗಿ. ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಕಟಿಧಾನ್ ಕಂಪನಿಯ ಸಂವೇದಕ ಆಧಾರಿತ ಕಪಿಕಾಟ್ ಉತ್ಪನ್ನವನ್ನೂ ಸಹ ಪರಿಚಯಿಸಲಾಗಿದೆ. ಇದರ ಬೆಲೆ ಸುಮಾರು ರೂ. 5,000. ಇದು ಹಗಲಿನ ವೇಳೆಯಲ್ಲಿ ಮಂಗಗಳನ್ನು ಹಿಮ್ಮೆಟ್ಟಿಸಲು ದೊಡ್ಡ ಶಬ್ದಗಳನ್ನು ಹೊರಸೂಸುತ್ತದೆ. ಇದು ಶೇ. 70 ರಿಂದ 75ರಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಸಂಸ್ಥೆಯ ವಿವರಣೆ.

(ವರದಿ: ಪ್ರಿಯಾಂಕಗೌಡ, ಬೆಂಗಳೂರು)

ವಿಭಾಗ