ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ಖೆಡ್ಡಾ ಖ್ಯಾತಿಯ ಕರ್ನಾಟಕದ ಆನೆ ಶಿಬಿರಗಳಲ್ಲಿ ಮರಣ ಮೃದಂಗ, ಅರಣ್ಯ ಇಲಾಖೆ ಎಡವುತ್ತಿರುವುದು ಎಲ್ಲಿ

Forest Tales: ಖೆಡ್ಡಾ ಖ್ಯಾತಿಯ ಕರ್ನಾಟಕದ ಆನೆ ಶಿಬಿರಗಳಲ್ಲಿ ಮರಣ ಮೃದಂಗ, ಅರಣ್ಯ ಇಲಾಖೆ ಎಡವುತ್ತಿರುವುದು ಎಲ್ಲಿ

Elephants Camp ಕರ್ನಾಟಕದಲ್ಲಿ ಸಾಕಾನೆಗಳ ಶಿಬಿರಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಆನೆ ಯೋಜನೆ( Project Elephant) ಇದ್ದರೂ ಅದು ನೆಪ ಮಾತ್ರ ಎನ್ನುವಂತಿರುವಾಗ ಆನೆಗಳ ಮೂಕ ರೋದನ ಕೇಳುವವರೇ ಇಲ್ಲದಾಗಿದೆ.

ಕರ್ನಾಟಕದ ಸಾಕಾನೆ ಶಿಬಿರಗಳು ಸಂಕಟದ ತಾಣಗಳಾಗಿವೆ.
ಕರ್ನಾಟಕದ ಸಾಕಾನೆ ಶಿಬಿರಗಳು ಸಂಕಟದ ತಾಣಗಳಾಗಿವೆ.

ಅರ್ಜುನ ಎನ್ನುವ ಆನೆ ಬದಲಾದ ಇತಿಹಾಸವನ್ನು ನೆನಪಿಸಿಕೊಳ್ಳಿ. ದಸರಾಕ್ಕೆ ಬಂದಾಗ ಸಿಬ್ಬಂದಿಯನ್ನೇ ಕೊಂದು ಹಾಕಿದ್ದ. ಆನಂತರ ದೊಡ್ಡ ಮಾಸ್ತಿ ಎನ್ನುವ ಮಾವುತನ ಕಾರಣದಿಂದಲೇ ಬದಲಾಗಿ ದಶಕ ಕಾಲ ಅಂಬಾರಿ ಹೊತ್ತು ಜಗತ್ತಿನ ಗಮನ ಸೆಳೆದಾತ. ಮಾವುತ ತೀರಿಕೊಂಡ ಮೂರೇ ವರ್ಷದಲ್ಲಿ ಅರ್ಜುನನೂ ಹಾಸನ ಆನೆ ಸೆರೆ ಕಾರ್ಯಾಚರಣೆಯಲ್ಲಿ ಪ್ರಾಣ ಬಿಟ್ಟ. ಇದರ ಹಿಂದೆ ಇದ್ದುದು ಅಧಿಕಾರಿಗಳು ನೇಮಿಸಿದ ಸಿಬ್ಬಂದಿ ಎಡವಟ್ಟು. ಆರೇ ವರ್ಷದಲ್ಲಿ ಕಠಿಣ ಶಿಕ್ಷೆಗಳನ್ನು ಅರಗಿಸಿಕೊಂಡು ಎರಡು ಬಾರಿ ದಸರೆಗೂ ಬಂದು ಭವಿಷ್ಯದಲ್ಲಿ ಅಂಬಾರಿ ಹೊರುವ ಆನೆಯಾಗಬೇಕಿದ್ದ ಅಶ್ವತ್ಥಾಮನೂ ಜೀವ ಕಳೆದುಕೊಂಡಿದ್ದು ಮತ್ತದೇ ಸಿಬ್ಬಂದಿ, ಅಧಿಕಾರಿಗಳ ನಿರ್ಲಕ್ಷ್ಯದ ಮನೋಭಾವ.

ಕರ್ನಾಟಕದ ಸಾಕಾನೆ ಶಿಬಿರಗಳು ಸಾವಿನ ಮನೆಯಾಗಿ ಮಾರ್ಪಟ್ಟಿರುವ ಲಕ್ಷಣಗಳು ಗೋಚರಿಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ನಿಷ್ಕಾಳಜಿ, ಇಡೀ ಇಲಾಖೆಯ ವೈಫಲ್ಯವೂ ಇದರ ಹಿಂದೆ ಇರುವುದಂತೂ ಕಾಣುತ್ತಿವೆ. ಆನೆ ಶಿಬಿರಗಳನ್ನು ಪ್ರವಾಸಿ ತಾಣವಾಗಿ ರೂಪಿಸಿ ಹಣ ಮಾಡುವ ಪ್ರಯತ್ನ ಕೆಲ ಅಧಿಕಾರಿಗಳಿಂದ ಆಗುತ್ತಿದೆಯೇ ವಿನಃ ಆನೆಗಳನ್ನು ಸರಿಯಾಗಿ ನೋಡಿಕೊಳ್ಳದೇ ಅನಾಥವಾಗಿ ಸಾಯುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಖೆಡ್ಡಾ ಕಾರ್ಯಾಚರಣೆ ಮೂಲಕ ಆನೆಗಳನ್ನು ಪಳಗಿಸಿ, ಕರ್ನಾಟಕದ ಆನೆಗಳು ಎಂದರೆ ಅವು ದಸರೆಯ ಜಂಬೂ ಸವಾರಿ ಮೆರವಣಿಗೆಗೂ ಸೈ, ಪುಂಡಾನೆ ಸೆರೆ ಕಾರ್ಯಾಚರಣೆಯಾದರೂ ತೊಂದರೆಯಿಲ್ಲ ಎನ್ನುವ ವಾತಾವರಣ ಇರುವುದು ನಿಧಾನವಾಗಿ ಬದಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಆನೆ ಶಿಬಿರಗಳ ಸುತ್ತ

ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ಆನೆ ಶಿಬಿರಗಳಿವೆ. ಮೈಸೂರು, ಕೊಡಗು, ಚಾಮರಾಜನಗರ, ಶಿವಮೊಗ್ಗ, ಉತ್ತರ ಕನ್ನಡ. ಬೆಂಗಳೂರು ಜಿಲ್ಲೆಯಲ್ಲೂ ಶಿಬಿರಗಳನ್ನು ಸ್ಥಾಪಿಸಲಾಗಿದೆ. 200 ಕ್ಕೂ ಹೆಚ್ಚು ಆನೆಗಳು ಶಿಬಿರದಲ್ಲಿ ದಶಕಗಳಿಂದ ನೆಲೆ ಕಂಡುಕೊಂಡಿವೆ. ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು, ಬಳ್ಳೆ, ಮೂರ್ಕಲ್‌, ಭೀಮನಕಟ್ಟೆ ಆನೆ ಶಿಬಿರ, ಕೊಡಗಿನ ದುಬಾರೆ, ಹಾರಂಗಿ, ಚಾಮರಾಜನಗರದ ಕೆಗುಡಿ, ಬಂಡೀಪುರದ ರಾಮಪುರ, ಉತ್ತರ ಕನ್ನಡದ ದಾಂಡೇಲಿ ಸಮೀಪದ ಪಣಸೋಲಿ, ಬೆಂಗಳೂರಿನ ಬನ್ನೇರಘಟ್ಟ, ಶಿವಮೊಗ್ಗದ ಸಕ್ರೇಬೈಲ್‌ನಲ್ಲಿ ಆನೆ ಶಿಬಿರಗಳಿವೆ. ಇದರಲ್ಲಿ ಮೂರ್ಕಲ್‌ ನಲ್ಲಿದ್ದ ಆನೆ ಸ್ಥಳಾಂತರಿಸಿದ್ದರೆ, ಬಳ್ಳೆ ಶಿಬಿರದಲ್ಲೂ ಆನೆಗಳು ಒಂದೊಂದಾಗಿ ಸತ್ತು ಹೋಗಿವೆ. ಮತ್ತಿಗೋಡು, ದುಬಾರೆ,ಸಕ್ರೇಬೈಲ್‌ ಶಿಬಿರಗಳಲ್ಲಿ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ನಾಗರಹೊಳೆಗೆ ಹೋದರೆ ಅಲ್ಲಿ ಬಳ್ಳೆ, ಮೂರ್ಕಲ್‌ ಶಿಬಿರಗಳು ಪ್ರವಾಸಿಗರನ್ನು ಸೆಳೆಯುತ್ತಿದ್ದವು. ಮತ್ತಿಗೋಡು ಶಿಬಿರ ಕೂಡ ಹಾಗೆಯೇ ಇತ್ತು. ದುಬಾರೆ ಆನೆ ಶಿಬಿರ ಕಾವೇರಿ ನದಿಗೆ ಹೊಂದಿಕೊಂಡ ಪ್ರಮುಖ ತಾಣವೂ ಹೌದು. ಶಿವಮೊಗ್ಗ ಸಕ್ರೇಬೈಲ್‌ ಶಿಬಿರ ತುಂಗಾ ನದಿ ತಟದಲ್ಲಿರುವ ಆಕರ್ಷಕ ಸ್ಥಳ. ಈಗ ಕೆಲವು ಆನೆಗಳೇ ಇಲ್ಲದೇ ಬರೀ ಹಳೆ ಹೆಸರಿನಿಂದ ಉಳಿದುಕೊಂಡರೆ, ಇನ್ನಷ್ಟು ಶಿಬಿರಗಳಲ್ಲಿ ಸರಿಯಾಗಿ ಆನೆ ನೋಡಿಕೊಳ್ಳುವವರೂ ಇಲ್ಲದೇ ಏನೆಲ್ಲಾ ಆಗುತ್ತಿವೆ ಎನ್ನುವುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಉದಾಹರಣೆ.

ಖೆಡ್ಡಾ ಖ್ಯಾತಿಯ ಕರ್ನಾಟಕ

ಕರ್ನಾಟಕ ಆನೆ ಖೆಡ್ಡಾಕ್ಕೆ ಖ್ಯಾತಿಯಾದ ರಾಜ್ಯ. ಶತಮಾನದ ಹಿಂದೆಯೇ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಕಾಕನಕೋಟೆಯಲ್ಲಿ ಖೆಡ್ಡಾ ಇತ್ತು. ಅಂದರೆ ಆನೆಗಳನ್ನು ದೊಡ್ಡ ಗುಂಡಿಗಳಲ್ಲಿ ಹಾಕಿ ಪಳಗಿಸಲಾಗುತ್ತಿತ್ತು. ಭಾರೀ ಗಾತ್ರದ ಆನೆಗಳನ್ನು ಪಳಗಿಸುವುದೇ ಸವಾಲಿನ ಕೆಲಸವಾಗಿತ್ತು. ಈ ಕಾರಣದಿಂದ ಕಾಕನಕೋಟೆ ಖೆಡ್ಡಾ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಖೆಡ್ಡಾ ಕುರಿತು ಹಲವರು ಅನುಭವವನ್ನೂ ದಾಖಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯಿದೆ ಬಿಗಿಗೊಂಡಿದ್ದರಿಂದ ಎಪ್ಪತ್ತರ ದಶಕದಲ್ಲಿ ಖೆಡ್ಡಾ ಕಾರ್ಯಾಚರಣೆ ನಿಂತು ಹೋಯಿತು. ಆದರೂ ಆನೆ ಸೆರೆ ಕಾರ್ಯಾಚರಣೆ, ಪಳಗಿಸುವ ಚಟುವಟಿಕೆ ಮಾತ್ರ ಮುಂದುವರಿಯಿತು.

ಈಗಲೂ ನಡೆದಿದೆ ಸೆರೆ

ಕಾಡಾನೆಗಳ ಸೆರೆ ಕಾರ್ಯಾಚರಣೆ ಕರ್ನಾಟಕದಲ್ಲಿ ಈಗಲೂ ಮುಂದುವರಿದಿದೆ. ಏಕೆಂದರೆ ಹಾಸನ, ಕೊಡಗು, ಮೈಸೂರು, ದಕ್ಷಿಣ ಕನ್ನಡ ಭಾಗದಲ್ಲಿ ಆನೆಗಳ ಉಪಟಳ ಕಡಿಮೆಯಾಗಿಲ್ಲ. ಹಾಸನ ಭಾಗದಲ್ಲಂತೂ ಆನೆಗಳು ಊರಿಗೆ ನುಗ್ಗಿ ತೊಂದರೆ ನೀಡುತ್ತಲೇ ಇವೆ. ಈ ಕಾರಣದಿಂದಲೇ ಅರಣ್ಯ ಇಲಾಖೆ ಕಾಡಾನೆ ಸೆರೆಗೆ ಅನುಮತಿಯನ್ನೇನೋ ನೀಡಿದೆ. ಈಗಾಗಲೇ ಆರಕ್ಕೂ ಹೆಚ್ಚು ಆನೆಗಳನ್ನು ಕೊಡಗಿನಲ್ಲಿ, ನಾಲ್ಕು ಆನೆಗಳನ್ನು ಮೈಸೂರಲ್ಲಿ ಸೆರೆ ಹಿಡಿಯಲಾಗಿದೆ. ಇದರಲ್ಲಿ ಕೆಲ ಆನೆಗಳನ್ನು ಕಾಡಿಗೆ ಮರಳಿ ಬಿಟ್ಟಿದ್ದರೆ, ಕೆಲವು ಆನೆ ಶಿಬಿರದಲ್ಲಿ ಪಳಗಿಸಲಾಗುತ್ತಿದೆ. ಖೆಡ್ಡಾ ಕಾರ್ಯಾಚರಣೆ ನಿಷೇಧವಾದ ನಂತರ ಆನೆಗಳನ್ನು ಸೆರೆ ಹಿಡಿದು ಪಳಗಿಸುವ ಮಾರ್ಗವನ್ನು ಬದಲಾಯಿಸಲಾಗಿದೆ. ಎಂಬತ್ತರ ದಶಕದಲ್ಲಿ ಸೆರೆ ಹಿಡಿದ ಬಹುತೇಕ ಆನೆಗಳೇ ಈಗಿನ ದಸರಾದಲ್ಲಿರುವ ಆನೆಗಳು, ಇದಾದ ನಂತರ ತೊಂಬತ್ತರ ದಶಕದಲ್ಲೂ ಕೆಲ ಆನೆ ಸೆರೆ ಹಿಡಿಯಲಾಗಿತ್ತು. ಇದಾದ ನಂತರ ಹತ್ತು ವರ್ಷದ ಹಿಂದೆ ಹಾಸನ- ಕೊಡಗಿನಲ್ಲಿ 25 ಆನೆಗಳನ್ನು ಹಾಸನದ ಸಿಸಿಎಫ್‌ ಆಗಿ ಜಿ.ವಿ.ರಂಗರಾವು ಅವರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ಹಿಡಿಯಲಾಗಿತ್ತು. ಅವುಗಳಲ್ಲಿ ಕೆಲವು ಪಳಗಿಸಿಯೂ ಆಗಿದೆ.

ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ವೇಳೆಯೇ ಶೂಟರ್‌ ವೆಂಕಟೇಶ್‌ ಮೃತಪಟ್ಟರೆ, ಆನಂತರ ಅರ್ಜುನ ಆನೆಯೂ ಕಾಡಾನೆ ದಾಳಿಗೆ ಬಲಿಯಾಯಿತು. ಇದಾದ ನಂತರವೂ ಆನೆ ಸೆರೆ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಹೊರ ರಾಜ್ಯಗಳಿಂದ ಬೇಡಿಕೆ

ಕರ್ನಾಟಕದ ಸಾಕಾನೆಗಳಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆ. ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕೂ,ಇಲ್ಲಿಂದ ಆನೆಗಳನ್ನು ನೀಡಲಾಗಿದೆ. ಈಗ ಆಂಧ್ರಪ್ರದೇಶದಿಂದಲೂ 22 ಆನೆಗಳಿಗೆ ಬೇಡಿಕೆಯಿದೆ. ಕರ್ನಾಟಕದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಬೇಡಿಕೆಯನ್ನು 8 ಆನೆಗಳಿಗೆ ಇಳಿಸಲಾಗಿದೆ. ಆದರೆ ಈವರೆಗೂ ಯಾವುದೇ ನಿರ್ಧಾರ ಮಾತ್ರ ಆಗಿಲ್ಲ. ಒಂದು ಕಡೆ ಆನೆಗಳನ್ನು ನೋಡಿಕೊಳ್ಳುವ ಹೊರೆಯಿಂದ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಹೊರ ರಾಜ್ಯಗಳಿಗೆ ಆನೆ ಕೊಡಬಹುದು ಎನ್ನುವ ಸಲಹೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಬಂದಿದೆ. ವಿರೋಧವೂ ಇರುವ ಕಾರಣಕ್ಕೆ ಏನು ಮಾಡುವುದು ಎನ್ನುವ ಚರ್ಚೆಗಳಂತೂ ನಡೆಯುತ್ತಲೇ ಇವೆ.

ಶಿಬಿರಗಳಲ್ಲಿ ತಪ್ಪಿದ ತಾಳ

ಕರುನಾಡ ಆನೆ ಸೆರೆ ಕಾರ್ಯಾಚರಣೆ, ಆನೆಗಳ ವೈಶಿಷ್ಟ್ಯ, ಪಳಗಿಸುವ ರೀತಿ, ದಸರಾದಂತಹ ನಾಡಹಬ್ಬದಲ್ಲಿ ಸಿಗುವ ಗೌರವದ ಕಾರಣದಿಂದಲೂ ಇಲ್ಲಿನ ಆನೆಗಳಿಗೆ ಗೌರವ ಇದೆ. ದಸರಾ ಆನೆಗಳು ವರ್ಷದಲ್ಲಿ ಎರಡು ತಿಂಗಳು ಮೈಸೂರಿನಲ್ಲಿಯೇ ಇದ್ದು ಉಳಿದ ಅವಧಿ ಶಿಬಿರದಲ್ಲಿ ಉಳಿಯುತ್ತವೆ. ಉಳಿಕೆ ಆನೆಗಳಿಗೆ ಶಿಬಿರವೇ ಆಸರೆ. ಅಲ್ಲಿ ನೋಡಿಕೊಳ್ಳುವ ಆನೆ ಮಾವುತ, ಕವಾಡಿ, ಆ ವಲಯದ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಹಿಂದೆ ಇದ್ದ ಅಧಿಕಾರಿಗಳು ಆನೆ ಶಿಬಿರಗಳು ಎಂದರೆ ಅದಕ್ಕೆ ಮುತುವರ್ಜಿ ಕೊಟ್ಟು ನೋಡುತ್ತಿದ್ದರು. ಸಿಬ್ಬಂದಿ ಕೂಡ ನಮ್ಮ ಆನೆ ಎನ್ನುವ ಅಭಿಮಾನದಿಂದಲೇ ಸಾಕುತ್ತಿದ್ದರು ಕೂಡ. ಕೆಲವೇ ವರ್ಷದಲ್ಲಿ ಚಿತ್ರಣ ಬದಲಾಗಿದೆ. ಆನೆ ಶಿಬಿರಗಳನ್ನು ಖರ್ಚು ವೆಚ್ಚದ ಲೆಕ್ಕ ತೋರಿಸಿ ಒಂದಷ್ಟು ದುಡ್ಡು ಮಾಡುವ ಭಾಗವನ್ನಾಗಿಯೂ ಮಾಡಲಾಯಿತು. ಆನೆಗಳ ಜವಾಬ್ದಾರಿಯನ್ನು ಸಿಬ್ಬಂದಿಗೆ ವಹಿಸಿ ಅಧಿಕಾರಿಗಳು ಬರೀ ಆರ್ಥಿಕ ವಹಿವಾಟಿನ ಉಸ್ತುವಾರಿ ಉಳಿಸಿಕೊಂಡರು. ಸಿಬ್ಬಂದಿ ಮೇಲೆ ನಿಯಂತ್ರಣವೂ ತಪ್ಪಿತು. ಮಾವುತರು, ಕವಾಡಿಗರು ಸಮಯ ಸಿಕ್ಕಾಗ ಆನೆ ನೋಡಿಕೊಳ್ಳುವ, ಹದಿನೈದು ದಿನಗಟ್ಟಲೇ ಆನೆಯನ್ನು ನೋಡಿಕೊಳ್ಳದ ಸನ್ನಿವೇಶಗಳೂ ಇವೆ. ಊರಿಗೆ ಹೋದರೆ ಆನೆ ನೋಡಿಕೊಳ್ಳೋರು ಇಲ್ಲದೇ ಅನಾಥವಾಗಿ ಆನೆ ಮೃತಪಟ್ಟ ಸನ್ನಿವೇಶವೂ ಇದೆ. ಅಶ್ವತ್ಥಾಮ ಆನೆ ಮೃತಪಟ್ಟಿದ್ದು ಸೋಲಾರ್‌ ತಂತಿ ಸಿಲುಕಿ ಎನ್ನುವ ಅಭಿಪ್ರಾಯವಿದೆ. ಆದರೆ ಅದಕ್ಕೆ ಸರಿಯಾಗಿ ಆಹಾರ ನೀಡದೇ ಭೇದಿಯಿಂದ ಜೀವ ಕಳೆದುಕೊಂಡಿದೆ ಎನ್ನುವ ಮಾತುಗಳು ಇಲಾಖೆಯಲ್ಲಿಯೇ ಕೇಳಿ ಬರುತ್ತಿವೆ. ಕುಮಾರಸ್ವಾಮಿ ಎನ್ನುವ ಆನೆ ಕಾಡಿನಲ್ಲಿ ಕಾಣೆಯಾಗಿ ಮೂರು ದಿನದ ನಂತರ ಶವವಾಗಿ ಪತ್ತೆಯಾಯಿತು. ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಂತೂ ಆನೆಗಳು ನಿರಂತರವಾಗಿ ಸಾಯುತ್ತಲೇ ಇವೆ. ಅದರಲ್ಲೂ ದಸರೆಯಲ್ಲಿ ಭಾಗಿಯಾಗಬೇಕಿದ್ದ ಪ್ರಮುಖ ಆನೆಗಳೇ ಸಿಬ್ಬಂದಿಗಳ ನಿರ್ಲಕ್ಷ್ಯ, ಕೆಲ ಅಧಿಕಾರಿಗಳ ಧನದಾಹಕ್ಕೆ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಿವೆ.

ಅಧಿಕಾರಿಯೊಬ್ಬರ ನೆನಪು

ಆನೆ ಶಿಬಿರವಿದ್ದ ವಲಯದಲ್ಲಿಯೇ ನಾನೂ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ದಸರಾ ಆನೆಗಳೂ ಅಲ್ಲಿದ್ದವು. ಎಲ್ಲಾ ಆನೆಗಳನ್ನು ಸಿಬ್ಬಂದಿ ಪ್ರೀತಿಯೊಂದಲೇ ನೋಡಿಕೊಳ್ಳುತ್ತಿದ್ದರು. ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತಿದ್ದುದರಿಂದ ಗೊಂದಲವಿರಲಿಲ್ಲ. ಈಗ ಶಿಬಿರಗಳಲ್ಲಿ ನಿರ್ವಹಣೆ ವ್ಯವಸ್ಥೆಯೇ ಕುಸಿದು ಹೋಗಿದೆ. ಶಿಬಿರಗಳು ಅನಾದಾರಕ್ಕೆ ಒಳಗಾಗಿ ಆನೆಗಳು ಸಾಯುತ್ತಿವೆ. ಇಲಾಖೆ ಎಚ್ಚೆತ್ತುಕೊಳ್ಳಲೇಬೇಕು. ಸರ್ಕಾರ ಒಂದೊಂದು ಆನೆಗೆ ಸಿಬ್ಬಂದಿ ಸಂಬಳ ಸೇರಿ ವರ್ಷಕ್ಕೆ ಹತ್ತು ಲಕ್ಷ ರೂ.ಗೂ ಅಧಿಕ ಖರ್ಚು ಮಾಡುತ್ತದೆ. ವೈದ್ಯಾಧಿಕಾರಿ, ಇಲಾಖೆ ಸಿಬ್ಬಂದಿಯೂ ಇದನ್ನು ನೋಡಿಕೊಳ್ಳುವಾಗ ವ್ಯವಸ್ಥೆಯನ್ನು ಸುಧಾರಿಸಲೇಬೇಕು ಎನ್ನುವುದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳುವ ಮಾತು.

ಖರ್ಚಿನ ಮುಂದೆ ಇಲ್ಲ ಆನೆ ಲೆಕ್ಕ

ಆನೆ ಸೆರೆ ಕಾರ್ಯಾಚರಣೆಗೆ ಸರ್ಕಾರ ಖರ್ಚು ಮಾಡುವ ಲೆಕ್ಕ ನೋಡಿದರೆ ಅಬ್ಬಾ ಎನ್ನಿಸುತ್ತದೆ. ರೇಡಿಯೋ ಕಾಲರ್‌ ಮಾಡಿದರೆ ಒಂದು ಆನೆ ಖರ್ಚು 22 ಲಕ್ಷ ರೂ.ವರೆಗೂ ಆಗಲಿದೆ. ರೇಡಿಯೋ ಕಾಲರ್‌ ಇಲ್ಲದೇ ಇದ್ದರೆ 12 ಲಕ್ಷ ರೂ.ಗಳಾಗಲಿದೆ. ಆನಂತರ ಅವುಗಳ ನಿರ್ವಹಣೆಗೂ ಯಥೇಚ್ಚ ಅನುದಾನ ಬರುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಅವುಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಷ್ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಇತ್ತೀಚಿನ ಸರಣಿ ಸಾವೇ ಉದಾಹರಣೆ. ಅದರಲ್ಲೂ ದಸರಾ ಆನೆಗಳೂ ಸಾಯುತ್ತಿರುವುದು ಬೇಸರದಾಯಕ. ಆನೆಗಳ ಹೆಸರಲ್ಲಿ ಊಟ ಮಾಡುವ ಸಿಬ್ಬಂದಿಗಳಿಗಾದರೂ ಅವುಗಳನ್ನು ನೋಡಿಕೊಳ್ಳುವ ಪ್ರೀತಿ ಇಲ್ಲ ಎಂದರೆ ಯಾರನ್ನೂ ದೂಷಿಸುವುದು ಎಂದು ವನ್ಯಜೀವಿ ಹೋರಾಟಗಾರ ಜೋಸೆಫ್‌ ಹೂವರ್‌ ಪ್ರಶ್ನಿಸುತ್ತಾರೆ.

ಇದಕ್ಕೆ ಉತ್ತರಿಸಬೇಕಾದ ಹಿರಿಯ ಅಧಿಕಾರಿಗಳು, ಅರಣ್ಯ ಸಚಿವರು ತನಿಖೆ, ವಿಚಾರಣೆಯ ಉತ್ತರ ನೀಡಿ ಸುಮ್ಮನಾಗುತ್ತಿದ್ದಾರೆ. ಆನೆಗಳ ಸಾವು ಮುಂದುವರಿಯುತ್ತಲೇ ಇದೆ. ಹೊಣೆ ಹೊತ್ತುಕೊಳ್ಳಬೇಕಾದವರು ಹಣ ಮಾಡಿಕೊಂಡು ಕುಳಿತಿದ್ದಾರಷ್ಟೇ. ಸಾಕಾನೆಗಳಿಗೆ ಬಂದಿರುವ ಸಂಕಟವನ್ನು ವಿಘ್ನನಿವಾರಕನೇ ದೂರ ಮಾಡಬೇಕಷ್ಟೇ. ಕರ್ನಾಟಕದಲ್ಲಿ ಆನೆ ಯೋಜನೆ ಇದೆ ಎನ್ನುವುದೇ ಮರೆತು ಹೋಗಿರುವಾಗ ಇನ್ನೇನು ನಿರೀಕ್ಷಿಸಲು ಸಾಧ್ಯವೇ ಇಲ್ಲ.

-ಕುಂದೂರು ಉಮೇಶಭಟ್ಟ, ಮೈಸೂರು