ಕನ್ನಡ ಸುದ್ದಿ  /  ಕರ್ನಾಟಕ  /  Elephant Census2024: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೇ 23ರಿಂದ ಆನೆಗಣತಿಗೆ ಸಿದ್ದತೆ, ಕರ್ನಾಟಕದಲ್ಲೂ ತಯಾರಿ, ಏನಿದರ ವಿಶೇಷ

Elephant Census2024: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೇ 23ರಿಂದ ಆನೆಗಣತಿಗೆ ಸಿದ್ದತೆ, ಕರ್ನಾಟಕದಲ್ಲೂ ತಯಾರಿ, ಏನಿದರ ವಿಶೇಷ

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಆನೆಗಳ ಗಣತಿ( Elephant Census) ಮುಂದಿನ ವಾರ ಆರಂಭವಾಗಲಿದೆ.

ಆನೆಗಳ ಗಣತಿಗೆ ಸಿದ್ದತೆ ನಡೆದಿದೆ.
ಆನೆಗಳ ಗಣತಿಗೆ ಸಿದ್ದತೆ ನಡೆದಿದೆ.

ಬೆಂಗಳೂರು: ಕರ್ನಾಟಕದ ಸೇರಿದಂತೆ ದಕ್ಷಿಣ ಭಾರತದ 4 ರಾಜ್ಯಗಳಲ್ಲಿ ಆನೆ ಗಣತಿಗೆ ಸಿದ್ದತೆಗಳು ನಡೆದಿವೆ. ಈಗಾಗಲೇ ಯೋಜಿಸಿರುವಂತೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಆನೆಗಳ ಗಣತಿ ಕಾರ್ಯ ಮೇ 17ರಿಂದಲೇ ಆರಂಭಗೊಂಡು ಮೂರು ದಿನ ನಡೆಯಬೇಕಾಗಿತ್ತು. ಕೇರಳ ಅರಣ್ಯ ಇಲಾಖೆ ಸಮಯ ಕೇಳಿರುವುದರಿಂದ ಬಹುತೇಕ ಮುಂದಿನ ವಾರದಿಂದ ಏಕ ಕಾಲಕ್ಕೆ ಆನೆಗಳ ಗಣತಿ ಕಾರ್ಯ ಶುರುವಾಗಲಿದೆ. ಬಹುತೇಕ ಮೇ 23ರ ಗುರುವಾರದಿಂದಲೇ ಶುರುವಾಗಿ ಮೂರು ದಿನ ಮುಂದುವರಿಯಲಿದೆ. ಕರ್ನಾಟಕದಲ್ಲೂ ಅರಣ್ಯ ಇಲಾಖೆ ಇದಕ್ಕಾಗಿ ಸಿದ್ದತೆ ಮಾಡಿಕೊಂಡಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿನಲ್ಲಿ ಹೆಜ್ಜೆ ಹಾಕ ಆನೆಗಳ ಲೆಕ್ಕವನ್ನು ಹಾಕಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಆನೆಗಳಿರುವುದು ಭಾರತದಲ್ಲಿ. ಅದರಲ್ಲೂ ದಕ್ಷಿಣ ಭಾರತದಲ್ಲೂ ಆನೆಗಳ ಪ್ರಮಾಣ ಹೆಚ್ಚು. ಆನೆಗಳ ಸಂಖ್ಯೆ, ಸಾಂಧ್ರತೆ ಕೂಡ ಅಧಿಕವಾಗಿರುವುದು ಈ ಭಾಗದಲ್ಲಿಯೇ. ಕರ್ನಾಟದಲ್ಲಿಯೇ ಹೆಚ್ಚಿನ ಸಂಖ್ಯೆಯ ಆನೆಗಳಿವೆ ಎನ್ನುವ ಮಾಹಿತಿಯನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು.

2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು, ಕಳೆದ ವರ್ಷ ನಡೆದಿದ್ದ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350ರಷ್ಟು ಹೆಚ್ಚಳವಾಗಿದೆ. ರಾಜ್ಯದ 32 ವಿಭಾಗಗಳಲ್ಲಿ ಆನೆಗಳ ಗಣತಿ ಕಾರ್ಯವನ್ನು ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 23 ವಿಭಾಗಗಳಲ್ಲಿ ಆನೆಗಳು ಕಂಡುಬಂದಿವೆ. ಸಮೀಕ್ಷೆಯ ದಿನದಂದು ನೇರವಾಗಿ ಏಣಿಸಿದ ಒಟ್ಟು ಆನೆಗಳ ಸಂಖ್ಯೆ-2219 ಆಗಿತ್ತು. ಈ 23 ವಿಭಾಗಗಳಲ್ಲಿ ಇರುವ 18975 ಚದರ ಕಿ.ಮೀ ಪ್ರದೇಶದ ಪೈಕಿ 6104 ಚದರ ಕಿ.ಮೀ ಪ್ರದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರದೇಶವನ್ನು ಸಮೀಕ್ಷೆಗೆ ಒಳಪಡಿಸಿರುವುದರಿಂದ ಈ ಸಮೀಕ್ಷೆ ಮತ್ತು ವರದಿಯು ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದರು.

ಗಣತಿಗೆ ಯಾವ ಮಾರ್ಗ

ಆನೆ ಗಣತಿಯನ್ನು ಮೂರು ವಿಧಾನಗಳಲ್ಲಿ ಅಂದರೆ, ನೇರ ಏಣಿಕೆ ಅಥವಾ ಬ್ಲಾಕ್‌ ಏಣಿಕೆ (Direct Count) ವಿಧಾನದಲ್ಲಿ 5.0 ಚದರ ಕಿ.ಮೀ ವ್ಯಾಪ್ತಿಯ ವಿವಿಧ ಮಾದರಿ ಬ್ಲಾಕ್‌ ಗಳಲ್ಲಿ ಆನೆಗಳ ನೇರ ಏಣಿಕೆಯನ್ನು ನಡೆಸಲಾಗುತ್ತದೆ.\ಒಟ್ಟು ಬೀಟ್‌ ಗಳ ಸಂಖ್ಯೆಯ ಸುಮಾರು ಶೇ. 30 ರಿಂದ 50 ರಷ್ಟು ಇರಲಿದೆ. ಟ್ರಾಂಜೆಕ್ಟ್‌ ಸಮೀಕ್ಷೆ ಅಥವಾ ಲದ್ದಿ ಏಣಿಕೆ ವಿಧಾನ (Dung Count) ವಿಧಾನದಲ್ಲಿ 2 ಕಿ.ಮೀ ಉದ್ದದ ಟ್ರಾಂಜಾಕ್ಟ್‌ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಆನೆಗಳ ಲದ್ದಿ ರಾಶಿಗಳ ಸಂಖ್ಯೆಯನ್ನು ಏಣಿಸಲಾಗುತ್ತದೆ. ಈ ಅಂಕಿ ಅಂಶದ ಮಾದರಿಗಳ ಮೂಲಕ ಆನೆಗಳ ಸಂಖ್ಯೆಯ ಮಾಹಿತಿ ಪಡೆಯಲು ಸದರಿ ದತ್ತಾಂಶವನ್ನು ಸಂಸ್ಕರಿಸಲಾಗುತ್ತದೆ. ಇನ್ನು ವಾಟರ್‌ ಹೋಲ್‌ ಏಣಿಕೆ (Waterhole Count) ಆನೆಗಳು ನಿಯಮಿತವಾಗಿ ಭೇಟಿ ನೀಡುವ ವಾಟರ್‌ ಹೋಲ್‌ ಗಳು ಮತ್ತು ಇತರೆ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ನೋಡಿ ಏಣಿಸುವ ಕಾರ್ಯ ನಡೆಯಲಿದೆ. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗುತ್ತದೆ ಎನ್ನುವುದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನೀಡುವ ಮಾಹಿತಿ.

ಭಾರತ ಮಟ್ಟದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಗಣತಿ ನಡೆಯಲಿದೆ. ಆದರೆ ದಕ್ಷಿಣ ಭಾರತದ ಅರಣ್ಯ ಇಲಾಖೆಗಳ ಸಮನ್ವಯದಲ್ಲಿ ಪ್ರತ್ಯೇಕ ಗಣತಿ ಹಿಂದಿನ ವರ್ಷವೂ ಆಗಿತ್ತು. ಈ ಬಾರಿಯೂ ನಡೆಸಲಾಗುತ್ತಿದೆ. ಆನೆಗಳ ಗಣತಿ ಲೆಕ್ಕದಲ್ಲಿ ಗೊಂದಲ ಆಗಬಾರದು ಎನ್ನುವ ಉದ್ದೇಶ ಇದರ ಹಿಂದೆ ಇದೆ. ಈ ಮಾಹಿತಿಯನ್ನು ಆಧರಿಸಿ ಮುಂದೆ ನಾಲ್ಕು ವರ್ಷದ ಗಣತಿ ನಡೆಸುವಾಗ ನಿಖರ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದು ಕರ್ನಾಟಕದ ಆನೆ ಯೋಜನೆ ನಿರ್ದೇಶಕ ಮನೋಜ್‌ ರಂಜನ್‌.

ಪ್ರತ್ಯೇಕ ಏಕೆ

ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ಹಿಂದೆ ಆನೆ ಗಣತಿ 2017 ರಲ್ಲಿ ನಡೆದಿತ್ತು. ಬಳಿಕ 2022ರಲ್ಲಿ ಆನೆ ಗಣತಿಯನ್ನು ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು. ಆದರೆ ಈ ಸಮೀಕ್ಷೆಯು ಮಾದರಿ ಬ್ಲಾಕ್‌ ಏಣಿಕೆ (Sample Block Count) ಮತ್ತು ಆನೆಗಳ ಸಂಖ್ಯೆ ಸ್ವರೂಪದ (Population Structure) ಮೌಲ್ಯ ಮಾಪನವನ್ನು ಒಳಗೊಂಡಿರಲಿಲ್ಲ. ಈ ವಿಧಾನ ಆನೆಗಳ ಗಣತಿ ಮತ್ತು ಸಂಖ್ಯಾ ಸ್ವರೂಪ ಅಂದರೆ ಲಿಂಗ ಮತ್ತು ವಯಸ್ಸಿನ ವರ್ಗೀಕರಣ ಮಾಡಲು ಬಹಳ ಮುಖ್ಯವಾಗಿರುವ ಕಾರಣದಿಂದ ಈ ಬಾರಿಯೂ ಗಣತಿ ನಡೆಸಲಾಗುತ್ತಿದೆ.

ಹೊರಗಿನವರಿಗೆ ಅವಕಾಶವಿಲ್ಲ

ಕರ್ನಾಟಕದ ಅರಣ್ಯ ಇಲಾಖೆಯ 32 ವಿಭಾಗಗಳಿಂದ 3400 ಕ್ಕೂ ಹೆಚ್ಚು ಸಿಬ್ಬಂದಿ ಆನೆಗಳ ಗಣತಿ ಕಾರ್ಯದಲ್ಲಿ ಭಾಗವಹಿಸುವರು. ಇಲ್ಲಿ ವನ್ಯಜೀವಿ ಆಸಕ್ತರು, ಅರಣ್ಯ ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರ ಸಹಿತ ಯಾರಿಗೂ ಅವಕಾಶವಿಲ್ಲ. ಸಿಬ್ಬಂದಿಗಳಿಗೂ ಸದ್ಯವೇ ಕಾರ್ಯಾಗಾರವನ್ನು ನಾಗರಹೊಳೆಯಲ್ಲಿ ಆಯೋಜಿಸಲಾಗುತ್ತಿದೆ ಎನ್ನುವುದು ಹುಣಸೂರು ವನ್ಯಜೀವಿ ವಿಭಾಗದ ಡಿಸಿಎಫ್‌ ಹರ್ಷಕುಮಾರ ಚಿಕ್ಕನರಗುಂದ ವಿವರಣೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

IPL_Entry_Point