ಕನ್ನಡ ಸುದ್ದಿ  /  ಕರ್ನಾಟಕ  /  Forest Fire: ಬಿಳಿಗಿರಿರಂಗನಬೆಟ್ಟ ಹುಲಿಧಾಮದಲ್ಲಿ ಕಿಡಿಗೇಡಿಗಳಿಂದ ಹೆಚ್ಚಿದ ಕಾಡಿನ ಬೆಂಕಿ, ಭಾರೀ ಪ್ರಮಾಣದ ಅರಣ್ಯ ನಾಶ

Forest Fire: ಬಿಳಿಗಿರಿರಂಗನಬೆಟ್ಟ ಹುಲಿಧಾಮದಲ್ಲಿ ಕಿಡಿಗೇಡಿಗಳಿಂದ ಹೆಚ್ಚಿದ ಕಾಡಿನ ಬೆಂಕಿ, ಭಾರೀ ಪ್ರಮಾಣದ ಅರಣ್ಯ ನಾಶ

Chamarajanagar News: ಕರ್ನಾಟಕ-ತಮಿಳುನಾಡು ಗಡಿ ಭಾಗದ ಬಿಳಿಗಿರಿರಂಗಬೆಟ್ಟ ಹುಲಿಧಾಮ ವ್ಯಾಪ್ತಿಯಿ ಕಾಡಿನಲ್ಲಿ ಬೆಂಕಿ ಈ ಬಾರಿ ಹೆಚ್ಚು ಬಿದ್ದಿದ್ದು ಅರಣ್ಯ ನಾಶವಾಗಿದೆ.

ಬೈಲೂರು ಅರಣ್ಯದಲ್ಲಿ ಬಿದ್ದಿರುವ ಬೆಂಕಿ.
ಬೈಲೂರು ಅರಣ್ಯದಲ್ಲಿ ಬಿದ್ದಿರುವ ಬೆಂಕಿ.

ಚಾಮರಾಜನಗರ: ಕರ್ನಾಟಕದ ಪ್ರಮುಖ ಹುಲಿಧಾಮಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಹುಲಿಧಾಮ ವ್ಯಾಪ್ತಿಯಲ್ಲಿ ಈ ಬಾರಿ ಕಾಡಿನಬೆಂಕಿ ಪ್ರಕರಣ ಮಿತಿ ಮೀರಿದೆ. ಎರಡು ತಿಂಗಳ ಅವಧಿಯಲ್ಲಿಯೇ 15ಕ್ಕೂ ಹೆಚ್ಚು ಬಾರಿ ಬೆಂಕಿ ಬಿದ್ದಿದೆ. ಅದರಲ್ಲೂ ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬೈಲೂರು- ಪುಣಜನೂರು ಭಾಗದಲ್ಲಿಯೇ ಹೆಚ್ಚಿನ ಅರಣ್ಯ ನಾಶವಾಗಿದೆ. ಬೇಸಿಗೆ ಇನ್ನೂ ಒಂದೂವರೆ ತಿಂಗಳು ಇರುವುದರಿಂದ ಮತ್ತೆ ಬೆಂಕಿ ಬಿದ್ದರೆ ಹೇಗೆ ಎಂದು ಕರ್ನಾಟಕ ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಭಾಗದಲ್ಲಿ ಮಳೆಯೂ ಆಗದೇ ಇರುವುದರಿಂದ ಒಣಗಿರುವ ಮರಗಳಿಗೆ ಬೆಂಕಿ ಬಿದ್ದರೆ ಇನ್ನಷ್ಟು ಅನಾಹುತ ಆಗಬಹುದು ಎನ್ನುವ ಆತಂಕವೂ ಅರಣ್ಯ ಇಲಾಖೆಯಲ್ಲಿ ಮನೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಅರಣ್ಯ ಪ್ರದೇಶ ಹುಲಿಧಾಮವಾಗಿ ದಶಕಗಳೇ ಕಳೆದಿವೆ. ಈ ಹುಲಿಧಾಮ ತಮಿಳುನಾಡು ಗಡಿ ಭಾಗವನ್ನೇ ಹೆಚ್ಚು ಹೊಂದಿದೆ. ಅದರಲ್ಲೂ ಎತ್ತರದ ಗುಡ್ಡ, ಬೆಟ್ಟಗಳನ್ನೊಳಗೊಂಡ ಅರಣ್ಯ ಇಲ್ಲಿನ ವಿಶೇಷ. ಈಗಲೂ 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಅರಣ್ಯ ಪ್ರದೇಶ ಹಾಗೂ ಅಂಚಿನಲ್ಲೇ ವಾಸವಿದೆ. ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ಹಾಗೂ ಹನೂರು ತಾಲ್ಲೂಕು ವ್ಯಾಪ್ತಿಯ ಈ ಅರಣ್ಯದಲ್ಲಿ ಈ ಬಾರಿಯಂತೂ ಹೆಚ್ಚು ಪ್ರಮಾಣದಲ್ಲಿ ಬೆಂಕಿ ಬಿದ್ದಿದೆ. ಐವತ್ತಕ್ಕೂ ಹೆಚ್ಚು ಬಾರಿ ಬೆಂಕಿ ಬಿದ್ದಿದ್ದು. ದೊಡ್ಡ ಪ್ರಮಾಣದಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಕಾಡಿನ ಬೆಂಕಿ ಕಾಣಿಸಿಕೊಂಡಿದೆ. ಬೈಲೂರು ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ ಬೆಂಕಿಗೆ ಭಾರೀ ಹಾನಿಯಾಗಿದೆ. ಇದನ್ನು ಉಪಗ್ರಹ ಆಧರಿತ ತಂತ್ರಜ್ಞಾನದ ಮೂಲಕವೂ ಪತ್ತೆ ಮಾಡಲಾಗಿದೆ. ಎರಡು ದಿನ ಹಿಂದೆಯೂ ಭಾರೀ ಬೆಂಕಿ ಬಿದ್ದು ಸೋಮವಾರವಿಡೀ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಮಂಗಳವಾರವೂ ಇನ್ನೂ ಕೆಲವು ಕಡೆ ಬೆಂಕಿ ಆರಿಸುವ ಕೆಲಸ ನಡೆದಿದೆ. ಬೆಂಕಿ ತೀವ್ರತೆಯ ಜತೆಗೆ ಎತ್ತರದ ಬೆಟ್ಟ ಪ್ರದೇಶದಲ್ಲಿ ಬೆಂಕಿ ಬಿದ್ದಿರುವುದರಿಂದ ಆರಿಸಲು ಇನ್ನಿಲ್ದ ಶ್ರಮವನ್ನು ಸಿಬ್ಬಂದಿ ಹಾಕುತ್ತಿದ್ದಾರೆ. ಡಿಸಿಎಫ್‌ ದೀಪ್‌ ಜೆ ಕಂಟ್ರಾಕ್ಟರ್‌ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ.

ಕಿಡಿಗೇಡಿಗಳು ಸಮಯ ನೋಡಿಕೊಂಡು ಕಾಡಿಗೆ ಬೆಂಕಿ ನೀಡುತ್ತಿರುವುದು ಕಂಡು ಬಂದಿದೆ. ಹೊರಗಿನಿಂದ ಬಂದವರ ಜತೆಗೆ ಸ್ಥಳೀಯರು ಬೆಂಕಿ ನೀಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಅವರ ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಹನೂರು ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಬಂಡೀಪುರ ಹಾಗೂ ನಾಗರಹೊಳೆಯಲ್ಲೂ ಇದೇ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗಲೂ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿ ಕೆಲವರನ್ನು ಬಂಧಿಸಲಾಗಿತ್ತು. ಅಧಿಕಾರಿಗಳನ್ನು ಸರ್ಕಾರ ಅಮಾನತುಪಡಿಸಿ ಕೆಲವರನ್ನು ವರ್ಗಮಾಡಿತ್ತು.

ಬಿಳಿಗಿರಿರಂಗ ಅರಣ್ಯ ಧಾಮದಲ್ಲಿ ಹಲವು ಕಡೆ ಈ ಬಾರಿ ಬೆಂಕಿ ನೀಡಲಾಗಿದೆ. ಬೈಲೂರು ವಲಯದಲ್ಲಿ ಅಧಿಕವಾಗಿದೆ. ಸ್ಥಳೀಯ ಅರಣ್ಯ ಅಧಿಕಾರಿಗಳ ಸಮನ್ವಯ ಕೊರತೆಯೂ ಇದರಲ್ಲಿದೆ. ಸ್ಥಳೀಯ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದರ ಪರಿಣಾಮ ಕಾಡಿನ ಮೇಲೆ ಆಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ಇದನ್ನು ಅಲ್ಲಗೆಳೆಯುವ ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ್‌ ಕಂಟ್ರಾಕ್ಟರ್‌, ಈ ಭಾಗದ ಅರಣ್ಯವೇ ವಿಭಿನ್ನವಾಗಿದೆ. ನೆಲ ಹಂತದಲ್ಲಿ ಬೆಂಕಿ ಕೊಟ್ಟರೆ ಬೇಗನೇ ಬೆಂಕಿಯು ಹಬ್ಬುತ್ತದೆ. ಅದನ್ನು ಆರಿಸಲು ಕಷ್ಟಪಡಲೇಬೇಕು. ಅಧಿಕಾರಿಗಳು, ಸಿಬ್ಬಂದಿ ಬೆಂಕಿ ಆರಿಸಲು ಇನ್ನಿಲ್ಲದ ಶ್ರಮ ಹಾಕಿದ್ದಾರೆ. ಸಮನ್ವಯದ ಕೊರತೆಯೇನೂ ಕಂಡು ಬಂದಿಲ್ಲ ಎನ್ನುತ್ತಾರೆ.

ಬೆಂಕಿ ಬಿದ್ದ ಪ್ರದೇಶದಲ್ಲಿ ಬಳಕೆಯಾಗಿರುವ ಮೊಬೈಲ್‌ ಸಂಖ್ಯೆಯ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಇದರಲ್ಲಿ ಕೆಲವು ಅನುಮಾನಾಸ್ಪದ ಸಂಖ್ಯೆಗಳೂ ಇವೆ. ಇದನ್ನು ಪೊಲೀಸರಿಗೆ ಹಸ್ತಾಂತರಿಸುತ್ತೇವೆ. ಈ ಬಾರಿ ಕಂದಾಯ ಇಲಾಖೆಯೂ ಒತ್ತುವರಿ ಅರಣ್ಯ ಭೂಮಿ ತೆರವುಗೊಳಿಸಲು ನೊಟೀಸ್‌ ನೀಡಿದೆ. ಈ ಸಿಟ್ಟಿಗೂ ಬೆಂಕಿ ನೀಡಲಾಗಿದೆಯೇ ಎನ್ನುವುದನ್ನು ಗಮನಿಸಲಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ