ಕನ್ನಡ ಸುದ್ದಿ  /  ಕರ್ನಾಟಕ  /  Forest News: ನಾಗರಹೊಳೆಯಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್‌ ಹಾವಳಿ, ಕಣ್ಣಾರೆ ಕಂಡ ಅರಣ್ಯ ಸಚಿವರು

Forest News: ನಾಗರಹೊಳೆಯಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್‌ ಹಾವಳಿ, ಕಣ್ಣಾರೆ ಕಂಡ ಅರಣ್ಯ ಸಚಿವರು

ಕಾಡಿನಲ್ಲಿ ಪ್ರವಾಸಿಗರು ಪ್ಲಾಸ್ಟಿಕ್‌( Plastic) ಕಸ ಎಸೆಯುವುದನ್ನು ಬಿಡಬೇಕು ಎಂದು ನಾಗರಹೊಳೆ( Nagarhole) ಪ್ರವಾಸದಲ್ಲಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ( Karntaka Forest Minister Eshwar Khandre) ಹೇಳಿದ್ದಾರೆ.

ನಾಗರಹೊಳೆ ಪ್ರವಾಸಲ್ಲಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ
ನಾಗರಹೊಳೆ ಪ್ರವಾಸಲ್ಲಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ

ಮೈಸೂರು: ಭಾರತದ ಪ್ರಮುಖ ಹುಲಿಧಾಮಗಳಲ್ಲಿ ಒಂದಾದ ನಾಗರಹೊಳೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಅದರಂತೆ ಪ್ಲಾಸ್ಟಿಕ್‌ ಕಸವೂ ಮಿತಿ ಮೀರಿದೆ. ಇದನ್ನು ಖುದ್ದು ಕಂಡು ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ನಂತರ ಕುಟುಂಬದವರೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಎರಡು ದಿನದಿಂದ ತಂಗಿರುವ ಈಶ್ವರ ಖಂಡ್ರೆ ಅವರಿಗೆ ಮೊದಲ ದಿನ ಹುಲಿ ಕಂಡಿತ್ತು. ಎರಡನೇ ದಿನ ಸ್ಥಳ ಪರಿಶೀಲನೆಗೆ ಹೋದಾಗ ರಸ್ತೆಯ ಅಕ್ಕಪಕ್ಕಗಳಲ್ಲಿ ಪ್ಲಾಸ್ಟಿಕ್‌ ಇರುವುದು ಕಂಡು ಬಂದಿದೆ. ಕಬಿನಿ ಹಿನ್ನೀರು ಸೇರಿದಂತೆ ಹಲವು ಕಡೆ ಪ್ರವಾಸಿಗರ ಕಾರಣಕ್ಕೆ ಪ್ಲಾಸ್ಟಿಕ್‌ ಆಗಾಗ ತೆಗೆಯುತ್ತಲೇ ಇರಬೇಕಾಗುತ್ತದೆ. ಈ ಬಾರಿ ಬೇಸಿಗೆ ರಜೆ ಕಾರಣಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಪ್ಲಾಸ್ಟಿಕ್‌ ಕೂಡ ಅಲ್ಲಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡು ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಸಚಿವರ ತೀವ್ರ ಅಸಮಾಧಾನ

ನಾಗರಹೊಳೆ ಅಭಯಾರಣ್ಯದ ಸಫಾರಿ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಚಿಪ್ಸ್ ಇತ್ಯಾದಿ ಕುರುಕಲು ತಿಂಡಿಯ ಖಾಲಿ ಪೊಟ್ಟಣಗಳು, ಪ್ಲಾಸ್ಟಿಕ್‌ ಗಳು ಬಿದ್ದಿರುವುದನ್ನು ಗಮನಿಸಿದ ಸಚಿವ ಈಶ್ವರ ಖಂಡ್ರೆ ತೀವ್ರ ಬೇಸರ ವ್ಯಕ್ತಪಡಿಸಿದರು.

ನಾಗರಹೊಳೆ, ಬಂಡಿಪುರ ಸೇರಿದಂತೆ ಪ್ರಮುಖ ಹುಲಿಧಾಮಗಳು ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು, ಇಲ್ಲಿಗೆ ಬರುವ ವಿದ್ಯಾವಂತರೇ ಪ್ಲಾಸ್ಟಿಕ್ ತ್ಯಾಜ್ಯವನ್ನು ಅರಣ್ಯದೊಳಕ್ಕೆ ಎಸೆಯುವುದು ಅಕ್ಷಮ್ಯ. ವನ್ಯಜೀವಿಗಳು ಇವುಗಳನ್ನು ಸೇವಿಸಿದರೆ ಅವುಗಳ ಪ್ರಾಣಕ್ಕೆ ಸಂಚಕಾರ ಬರಲಿದೆ. ಪ್ರವಾಸಿಗರು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ವನ ಪ್ರದೇಶದಲ್ಲಿ ಎಸೆಯದಂತೆ ಗಟ್ಟಿ ಮನಸು ಮಾಡಿ ಅದನ್ನು ಪಾಲಿಸಬೇಕು. ಅಧಿಕಾರಿಗಳು ಇದನ್ನು ಗಮನಿಸಿ ತೆಗೆದು ಹಾಕಬೇಕು. ಹೀಗೆ ಹಾಕುವವರನ್ನು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ವನಧಾಮದ ಜಲಗುಂಡಿ ವೀಕ್ಷಣೆ

ನಾಗರಹೊಳೆ ಅರಣ್ಯದೊಳಗಿರುವ ಜಲ ಗುಂಡಿಗಳಲ್ಲಿರುವ ನೀರಿನ ಪ್ರಮಾಣ, ಮೇವಿನ ಲಭ್ಯತೆಯ ಬಗ್ಗೆಯೂ ಖುದ್ದು ಪರಿಶೀಲನೆ ನಡೆಸಿದ ಈಶ್ವರ ಖಂಡ್ರೆ, ಈ ಬಾರಿ ಮುಂಗಾರು ಆಶಾದಾಯಕವಾಗಿದೆ ಎಂಬ ವರದಿ ಇದೆ. ಆದಾಗ್ಯೂ ಮುಂಗಾರು ವಿಳಂಬವಾದರೆ ನೀರಿನ ಕೊರತೆ ಬಾರದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.

ಇದೇ ವೇಳೆ ಹುಣಸೂರು ತಾಲೂಕು ಹನಗೋಡು ಹೋಬಳಿ ವೀರನ ಹೊಸಹಳ್ಳಿ ಸಮೀಪದ ರೇಸಾರ್ಟ್ ನಲ್ಲಿ ತಮ್ಮನ್ನು ಭೇಟಿ ಮಾಡಿದ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು ಕಾಡಿನಂಚಿನಲ್ಲಿರುವ ಗ್ರಾಮಗಳಿಗೆ ಪದೇ ಪದೇ ಆನೆಗಳು ಬಾರದಂತೆ ತಡೆಯಲು ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಲಾಖೆ ಕಾಡಾನೆಗಳು ನಾಡಿಗೆ ಬರುವುದನ್ನು ನಿಯಂತ್ರಿಸಲು ಸೌರ ತಂತಿ ಬೇಲಿ, ತೂಗಾಡುವ ವಿದ್ಯುತ್ ತಂತಿ, ಆನೆ ಕಂದಕ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯ ಮಾಡುತ್ತಿದೆ. ರಾಜ್ಯದ ಯಾವ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇದೆಯೋ ಅಲ್ಲಿ ತ್ವರಿತವಾಗಿ ತಡೆಗೋಡೆ ನಿರ್ಮಾಣಕ್ಕೆ ಗಮನ ಹರಿಸಲಾಗುವುದು ಎಂದು ಹೇಳಿದರು.

ವನ್ಯಜೀವಿ ಸಾವಿಗೆ ಅವಕಾಶ ಕೊಡಬೇಡಿ

ಕಾಡಿನಂಚಿನ ಜನರು, ಕೃಷಿಕರು, ತೋಟದ ಮಾಲೀಕರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು. ಅವೈಜ್ಞಾನಿಕ ವಿದ್ಯುತ್ ಬೇಲಿ ಅಥವಾ ಕುಣಿಕೆ ಅಳವಡಿಸಿ ವನ್ಯಜೀವಿಗಳ ಸಾವಿಗೆ ಕಾರಣರಾಗಬಾರದು ಎಂದು ಸಚಿವರು ತಿಳಿಸಿದರು.

ವನ್ಯಜೀವಿಗಳ ಹಾವಳಿಯಿಂದ ಮೈಸೂರು ಮತ್ತು ಕೊಡಗು ಭಾಗದಲ್ಲಿ ಬೆಳೆ ನಾಶ ಆಗುತ್ತಿದೆ. ಅಮೂಲ್ಯ ಜೀವಹಾನಿ ಆಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದರ ನಿಯಂತ್ರಣಕ್ಕೆ ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ಬಜೆಟ್ ನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಹಣ ಹಂಚಿಕೆಯೂ ಆಗಿದೆ ಎಂದು ಖಂಡ್ರೆ ಮಾಹಿತಿ ನೀಡಿದರು.

ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್‌ ಚಿಕ್ಕನರಗುಂದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ, ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ಅಭಿಷೇಕ್ ಉಪಸ್ಥಿತರಿದ್ದರು.

IPL_Entry_Point