ಕನ್ನಡ ಸುದ್ದಿ  /  Karnataka  /  Forest News Ifs Officer Prabhakaran Who Was Posted Director Bandipur Tiger Reserve Took Charge Of 6 Month Legal Battle

IFS Transfer: ಹಠ ಹಿಡಿದು ಬಂಡೀಪುರದಲ್ಲೇ ಅಧಿಕಾರ ಸ್ವೀಕರಿಸಿದ ಐಎಫ್‌ಎಸ್‌ ಅಧಿಕಾರಿ

ಬಂಡೀಪುರ ಹುಲಿ ಯೋಜನೆ ನಿರ್ದೇಶಕರ ಹುದ್ದೆಗೆ ಇಬ್ಬರು ಐಎಫ್‌ಎಸ್‌ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಿದೆ.

ಬಂಡೀಪುರದ ಈಗಿನ ನಿರ್ದೇಶಕ ಪ್ರಭಾಕರನ್‌ ಹಾಗೂ ನಿರ್ಗಮಿತ ನಿರ್ದೇಶಕ ಡಾ.ರಮೇಶ್‌ ಕುಮಾರ್‌
ಬಂಡೀಪುರದ ಈಗಿನ ನಿರ್ದೇಶಕ ಪ್ರಭಾಕರನ್‌ ಹಾಗೂ ನಿರ್ಗಮಿತ ನಿರ್ದೇಶಕ ಡಾ.ರಮೇಶ್‌ ಕುಮಾರ್‌

ಮೈಸೂರು: ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹಠ ಹಿಡಿದು ತಮಗೆ ತೋರಿಸಲಾಗಿದ್ದ ಹುದ್ದೆಯನ್ನೇ ಪಡೆದಿದ್ದಾರೆ. ಇದಕ್ಕಾಗಿ ಬೇರೆ ಹುದ್ದೆಗೆ ಹೋಗದೇ ಆರು ತಿಂಗಳಿನಿಂದ ಕಾದಿದ್ದಾರೆ. ಕಾದಿದದ್ದಕ್ಕೆ ಕೊನೆಗೂ ಅದೇ ಹುದ್ದೆಯೇ ದೊರೆತಿದೆ. ಈಗ ತಾವು ಬಯಸಿದ ಹುದ್ದೆಯೇ ಅವರನ್ನೇ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಕಾನೂನು ಹೋರಾಟವನ್ನೂ ಅವರು ಮಾಡಿದ್ದಾರೆ. ಇದು ಕರ್ನಾಟಕ ಕೇಡರ್‌ನ ಐಎಫ್‌ಎಸ್‌ ಅಧಿಕಾರಿಯೊಬ್ಬರ ಅನುಭವ. ಇಂತಹ ಅನುಭವ ದಾಖಲಾಗಿರುವುದು ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ನಿರ್ದೇಶಕರ ಹುದ್ದೆಯಲ್ಲಿ.

ಅವರ ಹೆಸರು ಪ್ರಭಾಕರನ್‌, ಮೂಲತಃ ತಮಿಳುನಾಡಿನವರು. 2011ನೇ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ. ಎವೆರೆಸ್ಟ್‌ ಏರಿದ ಕರ್ನಾಟಕದ ಮೊದಲ ಅಧಿಕಾರಿ ಎಂಬ ಹಿರಿಮೆಯೂ ಅವರದ್ದು. ಕರ್ನಾಟಕದಲ್ಲಿ ಹದಿಮೂರು ವರ್ಷ ಸೇವೆ ಸಲ್ಲಿಸಿರುವ ಪ್ರಭಾಕರನ್‌ ಈ ಹಿಂದೆ ವೀರಾಜಪೇಟೆಯಲ್ಲಿ ತರಬೇತಿ ಪಡೆದು ಧಾರವಾಡದಲ್ಲಿಎಸಿಎಫ್‌, ಕೊಪ್ಪಳ, ಕುಂದಾಪುರ, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಿದ್ದರು. ಕಳೆದ ಸೆಪ್ಟಂಬರ್‌ನಲ್ಲಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾಗಿ ಪ್ರಭಾಕರನ್‌ ಅವರನ್ನು ನೇಮಿಸಿತು. ಕರ್ನಾಟಕದಲ್ಲಿರುವ ಐದು ಹುಲಿ ಧಾಮಗಳಲ್ಲಿ ಅಣಶಿ-ದಾಂಡೇಲಿ, ಭದ್ರಾ, ನಾಗರಹೊಳೆ ಹಾಗೂ ಬಿಆರ್‌ಟಿಯಲ್ಲಿ ಡಿಸಿಎಫ್‌ ದರ್ಜೆಯ ಅಧಿಕಾರಿಯೇ ಇದ್ಧಾರೆ. ಆದರೆ ಬಂಡೀಪುರದಲ್ಲಿ ಮಾತ್ರ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆ ಅಧಿಕಾರಿ ಇದ್ದರು. ಈ ಕಾರಣದಿಂದ ಬಂಡೀಪುರದಲ್ಲಿದ್ದ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌ ಕುಮಾರ್‌ ಅವರನ್ನು ವರ್ಗಾಯಿಸಲಾಗಿತ್ತು.

ಅವರು ತಮಿಳುನಾಡು ಮೂಲದವರೇ ಆದರೂ 2008 ನೇ ಬ್ಯಾಚ್‌ನ ಅಧಿಕಾರಿ. ಈ ಹಿಂದೆ ನಾಗರಹೊಳೆ, ಕುದುರೆಮುಖ, ಕಾವೇರಿ ವನ್ಯಧಾಮ, ಬಳ್ಳಾರಿ ವಿಭಾಗದಲ್ಲಿ ಕೆಲಸ ಮಾಡಿದ್ಧಾರೆ. ಒಂದೂವರೆ ವರ್ಷದಿಂದ ಬಂಡೀಪುರ ನಿರ್ದೇಶಕರಾಗಿದ್ದರು. ಪ್ರಭಾಕರನ್‌ ಅವರನ್ನು ನೇಮಿಸಿದ ತಕ್ಷಣವೇ ಕಳೆದ ಸೆಪ್ಟಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು.

ಆದರೆ ಯಾವುದೇ ಅಧಿಕಾರಿ ಎರಡು ವರ್ಷದ ಅವಧಿ ಮುಗಿಸುವ ಮುನ್ನ ವರ್ಗಾವಣೆ ಮಾಡುವ ಹಾಗಿಲ್ಲ ಎನ್ನುವ ನಿಯಮವೇ ಇದೆ. ಕೆಲವರು ವರ್ಗ ಮಾಡಿದರೆ ಹೋಗುವುದುಂಟು. ಮತ್ತೆ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತಂದು ಅದೇ ಹುದ್ದೆಯಲ್ಲಿಯೇ ಮುಂದುವರೆಯುವುದುಂಟು. ರಮೇಶ್‌ ಕುಮಾರ್‌ ಕೂಡ ಇದೇ ರೀತಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ( CAT)ಗೆ ಅರ್ಜಿ ಸಲ್ಲಿಸಿದ್ದರು.

]ಎರಡು ವರ್ಷದ ಅವಧಿ ಪೂರೈಸಲು ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕೆ ತಡೆಯಾಜ್ಞೆಯನ್ನು ನೀಡಿತ್ತು. ಅನಂತರ ರಮೇಶ್‌ ಕುಮಾರ್‌ ಮತ್ತೆ ಇಲ್ಲಿಯೇ ಅಧಿಕಾರ ವಹಿಸಿಕೊಂಡಿದ್ದರು. ಇದಾದ ನಂತರ ಪ್ರಭಾಕರನ್‌ ಅವರು ತಾವು ಹಿಂದೆ ಇದ್ದ ಹುದ್ದೆಗೆ ಹೋಗಲು ಆಗಲಿಲ್ಲ. ಏಕೆಂದರೆ ಅಲ್ಲಿಗೆ ಬೇರೆಯವರ ನೇಮಕವೂ ಆಗಿತ್ತು. ಇದರಿಂದ ಆರು ತಿಂಗಳು ಕೇಂದ್ರ ಕಚೇರಿಯಲ್ಲಿಯೇ ಕಳೆದರು.

ಕೊನೆಗೆ ಫೆಬ್ರವರಿ 19ಕ್ಕೆ ರಮೇಶ್‌ ಕುಮಾರ್‌ ಅವರ ಎರಡು ವರ್ಷದ ಅವಧಿ ಮುಕ್ತಾಯಗೊಂಡಿತು. ಅವರ ಅರ್ಜಿಯೂ ಸಿಎಟಿಯಲ್ಲಿ ತೆರವಾಗಿತ್ತು. ಇದರಿಂದ ಸರ್ಕಾರ ಹೊಸ ಆದೇಶವನ್ನು ಜಾರಿಗೊಳಿಸಿ ಪ್ರಭಾಕರನ್‌ ಅವರಿಗೆ ಬಂಡೀಪುರ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿದೆ. ರಮೇಶ್‌ ಕುಮಾರ್‌ ಅವರಿಗೆ ಬೆಂಗಳೂರು ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು.

ಆರು ತಿಂಗಳವರೆಗೂ ಕಾಯ್ದ ಪ್ರಭಾಕರನ್‌ ಅವರು ಆದೇಶ ಜಾರಿಯಾದ ತಕ್ಷಣವೇ ಬಂದು ಅಧಿಕಾರವನ್ನು ಬಂಡೀಪುರದಲ್ಲಿ ವಹಿಸಿಕೊಂಡರು.

ಈಗಾಗಲೇ ಅರಣ್ಯ ಭಾಗದಲ್ಲಿ ಕಾಡಿನ ಬೆಂಕಿ ಆತಂಕವಿದೆ. ಬೇಸಿಗೆಯಲ್ಲಿ ಕಾಡು ಕಾಯುವ ಕೆಲಸ ಸುಲಭವಲ್ಲ. ಇದರ ನಡುವೆ ಈ ಇಬ್ಬರು ಐಎಫ್‌ಎಸ್‌ ಅಧಿಕಾರಿಗಳ ಸಂಘರ್ಷದಿಂದ ಅರಣ್ಯಕ್ಕೆ ತೊಂದರೆಯಾಗಬಹುದಾ ಎನ್ನುವ ಆತಂಕಗಳಿದ್ದವು. ಸದ್ಯಕ್ಕೆ ಅಧಿಕಾರ ಹಸ್ತಾಂತರದಿಂದ ಈಗ ಎಲ್ಲವೂ ಬಗೆಹರಿದಿದೆ ಎಂದೇ ಹೇಳಲಾಗುತ್ತಿದೆ.

IPL_Entry_Point

ವಿಭಾಗ