Nagarahole Lady Director: ನಾಗರಹೊಳೆ ಹುಲಿ ಯೋಜನೆಗೆ ಮೊದಲ ಮಹಿಳಾ ನಿರ್ದೇಶಕಿ, ಇತಿಹಾಸ ಬರೆದ ಐಎಫ್‌ಎಸ್‌ ಅಧಿಕಾರಿ ಸೀಮಾ-forest news indias oldest nagarahole tiger reserve gets first woman director seema took charge in hunsur kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Nagarahole Lady Director: ನಾಗರಹೊಳೆ ಹುಲಿ ಯೋಜನೆಗೆ ಮೊದಲ ಮಹಿಳಾ ನಿರ್ದೇಶಕಿ, ಇತಿಹಾಸ ಬರೆದ ಐಎಫ್‌ಎಸ್‌ ಅಧಿಕಾರಿ ಸೀಮಾ

Nagarahole Lady Director: ನಾಗರಹೊಳೆ ಹುಲಿ ಯೋಜನೆಗೆ ಮೊದಲ ಮಹಿಳಾ ನಿರ್ದೇಶಕಿ, ಇತಿಹಾಸ ಬರೆದ ಐಎಫ್‌ಎಸ್‌ ಅಧಿಕಾರಿ ಸೀಮಾ

Forest News ಕರ್ನಾಟಕದ ಪ್ರಮುಖ ಹುಲಿಧಾಮ ನಾಗರಹೊಳೆಯ( Nagarahole Tiger Reserve) ಮೊದಲ ಮಹಿಳಾ ನಿರ್ದೇಶಕರಾಗಿ ಪಿ.ಎ.ಸೀಮಾ( PA Seema) ಅಧಿಕಾರ ವಹಿಸಿಕೊಂಡಿದ್ದಾರೆ.

Lady In Forest ಐಎಫ್‌ಎಸ್‌ ಅಧಿಕಾರಿ ಪಿ.ಎ.ಸೀಮಾ ನಾಗರಹೊಳೆ ಮೊದಲ ಮಹಿಳಾ ನಿರ್ದೇಶಕಿ.
Lady In Forest ಐಎಫ್‌ಎಸ್‌ ಅಧಿಕಾರಿ ಪಿ.ಎ.ಸೀಮಾ ನಾಗರಹೊಳೆ ಮೊದಲ ಮಹಿಳಾ ನಿರ್ದೇಶಕಿ.

ಮೈಸೂರು: ಕಾಡುವ ಕಾಯುವ ಕೆಲಸವೆಂದರೆ ಅದು ಸುಲಭವಲ್ಲ. ದಟ್ಟಡವಿಯಲ್ಲಿ ಹೆಜ್ಜೆ ಹಾಕುತ್ತಾ ವನ್ಯಜೀವಿಗಳು, ಬೇಟೆಗಾರರ ಉಪಟಳನ್ನು ಎದುರಿಸಿ ಜಯಸಾಧಿಸುವುದು ಎನ್ನುವುದು ಸುಲಭದ ಮಾತೇನಲ್ಲ. ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಮೊದಲು ಶಿಕ್ಷಣದಿಂದ ವಂಚಿತರಾದರೂ ಈಗ ಎಲ್ಲಾ ಹುದ್ದೆಗಳನ್ನು ನಿಭಾಯಿಸಬಲ್ಲ ಛಾತಿ ತೋರಿದ್ದಾರೆ. ಅರಣ್ಯ ಇಲಾಖೆಯಲ್ಲೂ ಮುಖ್ಯ ಹಾಗೂ ಕೊಂಚ ಕಷ್ಟದ ಕೆಲಸ ಎನ್ನಿಸುವ ಹುಲಿಧಾಮಗಳ ನಿರ್ದೇಶಕರ ಹುದ್ದೆ. ಕರ್ನಾಟಕಲ್ಲಿ ಅತಿ ಹೆಚ್ಚು ಹುಲಿ, ಆನೆಗಳ ಪ್ರಮುಖ ವನ್ಯಜೀವಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ನಾಗರಹೊಳೆಗೂ ಮೊದಲ ಬಾರಿಗೆ ಮಹಿಳಾ ನಿರ್ದೇಶಕರ ನೇಮಕವಾಗಿದೆ. ಐಎಫ್‌ಎಸ್‌ ಅಧಿಕಾರಿ ಪಿ.ಎ.ಸೀಮಾ ಈ ಹೊಣೆಯನ್ನು ಹೊತ್ತುಕೊಂಡು ಇತಿಹಾಸ ಬರೆದಿದ್ಧಾರೆ.

ಕರ್ನಾಟಕದ ಅರಣ್ಯ ಮಹತ್ವ

ಇಡೀ ದೇಶದಲ್ಲಿ ಅರಣ್ಯ ಹಾಗೂ ಅರಣ್ಯ ಇಲಾಖೆ ಹಲವಾರು ಕಾರಣಗಳಿಂದ ಮಹತ್ವ ಪಡೆದಿದೆ. ಒಂದು ಪಶ್ಚಿಮ ಘಟ್ಟಗಳ ಪ್ರಮುಖ ಭಾಗವಾದ ಅರಣ್ಯ, ಇಲ್ಲಿನ ಅರಣ್ಯ ಸಂಪತ್ತಿನ ಮಹತ್ವ, ವನ್ಯಜೀವಿಗಳು, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ ಸಹಿ ಪ್ರಮುಖ ಕಾರಣ. ಇದರಿಂದಾಗಿ ಇಡೀ ಭಾರತದಲ್ಲೇ ಕರ್ನಾಟಕದ ಅರಣ್ಯಕ್ಕೆ ಎಲ್ಲಿಲ್ಲದ ಮಹತ್ವ ಹಾಗೂ ಇಲಾಖೆಗೂ ಗೌರವ. 

ಕರ್ನಾಟಕದಲ್ಲಿ ಬಂಡೀಪುರ ನಂತರ ನಾಗರಹೊಳೆ,ಭದ್ರಾ, ಬಿಆರ್‌ಟಿ ಹಾಗೂ ಅಣಶಿ ರಾಷ್ಟ್ರೀಯ ಉದ್ಯಾನಗಳು ಹುಲಿ ಯೋಜನೆಗಳಾಗಿ ಮಾರ್ಪಟ್ಟಿವೆ. ಇನ್ನೂ ಎರಡು ಕಡೆ ಪ್ರಸ್ತಾವನೆಯಿದೆ. ಕರ್ನಾಟದಲ್ಲೂ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ಹಲವಾರು ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದಿದ್ದಾರೆ. 

ಐಎಫ್‌ಎಸ್‌ ಅಧಿಕಾರಿಗಳೂ ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ರಾಜ್ಯ ಅರಣ್ಯ ಸೇವೆಯಿಂದ ಐಎಫ್‌ಎಸ್‌ ಬಡ್ತಿ ಪಡೆದವರೂ ಹಲವರು. ಮಹಿಳೆಯರಿಗೆಲ್ಲಾ ಸಾಮಾನ್ಯ ವಿಭಾಗಗಳು ಇಲ್ಲವೇ ಸಾಮಾಜಿಕ ಅರಣ್ಯಕ್ಕೆ ಮಾತ್ರ ನಿಯೋಜನೆ ಮಾಡಲಾಗುತ್ತಿತ್ತು. ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆಗಳ ನಿರ್ದೇಶಕರು ಹಾಗೂ ಮುಖ್ಯಸ್ಥರ ಹುದ್ದೆ ಪುರುಷ ಅಧಿಕಾರಿಗಳಿಗೆ ಮೀಸಲಾಗಿದ್ದವು. ಆ ಕೆಲಸ ನಮಗೂ ಕೊಡಿ. ಮಾಡಿ ತೋರಿಸುತ್ತೇವೆ ಎಂದು ಮಹಿಳಾ ಅಧಿಕಾರಿಗಳು ಮುಂದೆ ಬರುತ್ತಿದ್ದಾರೆ.

ಗೀತಾಂಜಲಿ, ದೀಪ್‌ ಕಂಟ್ರಾಕ್ಟರ್‌

ಕರ್ನಾಟಕದ ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಯ ಭದ್ರಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಯೋಜನೆ ಜಾರಿಗೂ ಮುನ್ನ ಐಎಫ್‌ಎಸ್‌ ಅಧಿಕಾರಿ ಗೀತಾಂಜಲಿ ಅವರು ಡಿಸಿಎಫ್‌ ಆಗಿದ್ದರು. ಎರಡು ವರ್ಷದ ಹಿಂದೆ ಹುಲಿ ಯೋಜನೆಗೆ ಮೊದಲ ನಿರ್ದೇಶಕರಾಗಿ ಬಿಳಿಗಿರಿರಂಗನಬೆಟ್ಟ ಹುಲಿಧಾಮಕ್ಕೆ ಬಂದವರು ಗಟ್ಟಿಗಿತ್ತಿ ಅಧಿಕಾರಿ ದೀಪ್‌ ಜೆ ಕಂಟ್ರಾಕ್ಟರ್‌. ಈಗಲೂ ಅವರು ಬಿಆರ್‌ಟಿಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಅಂತರ ರಾಜ್ಯದ ವನ್ಯಬೇಟೆ, ಕಾಡಿನ ಬೆಂಕಿ, ಅರಣ್ಯ ಸಂರಕ್ಷಣೆ, ಸಿಬ್ಬಂದಿ ನಿರ್ವಹಣೆಯನ್ನು ಅವರು ಚೆನ್ನಾಗಿಯೇ ಮಾಡುತ್ತಿದ್ದಾರೆ.

ಧೈರ್ಯವಂತೆ ಸೀಮಾ

ಈ ಸಾಲಿಗೆ ಸೇರಿದವರು ಐಎಫ್‌ಎಸ್‌ ಅಧಿಕಾರಿ ಪಿ.ಎ.ಸೀಮಾ. ಕೊಡಗಿನವರಾದ ಸೀಮಾ ಒಂದೂವರೆ ದಶಕದಿಂದ ಅರಣ್ಯ ಇಲಾಖೆಯ ಮಂಡ್ಯ. ಮೈಸೂರು, ಹುಣಸೂರಿನಲ್ಲಿ ಕೆಲಸ ಮಾಡಿದ್ದಾರೆ. ಆನೆ ಸೆರೆ, ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅವರು ತೋರಿದ ಧೈರ್ಯ, ಚಾಕಚಕ್ಯತೆ, ಎಲ್ಲಿಯೂ ಗೊಂದಲ ಆಗದ ರೀತಿ ನಿಭಾಯಿಸಿದ ಶೈಲಿಯ ಕಾರಣಕ್ಕೆ ಸೀಮಾ ಅವರಿಗೂ ಇಲಾಖೆಯಲ್ಲಿ ಒಳ್ಳೆಯ ಹೆಸರಿದೆ. 

ಹುಣಸೂರಿನಲ್ಲಿ ಆರಂಭಿಸಿದ ಮೊದಲ ಆನೆ ಕಾರ್ಯಪಡೆ್ ಮುಖ್ಯಸ್ಥರಾಗಿಯೂ ಸೀಮಾ ಸೇವೆ ಸಲ್ಲಿಸಿದ್ದಾರೆ. ಕಾರಣದಿಂದಲೇ ಸರ್ಕಾರ ಅವರನ್ನು ನಾಗರಹೊಳೆ ಹುಲಿಧಾಮಕ್ಕೆ ನೇಮಿಸಿದೆ. 

ಸವಾಲುಗಳು ಹತ್ತು ಹಲವು

ನಾಗರಹೊಳೆ ಕೂಡ ಸಾಕಷ್ಟು ಸವಾಲುಗಳಿರುವ ಹುಲಿಧಾಮವೇ. ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಹಂಚಿರುವ ಹುಲಿಧಾಮ ಕೇರಳದವರೆಗೂ ಚಾಚಿಕೊಂಡಿದೆ. ಇಲ್ಲಿಯೂ ಬೇಟೆಯ ಭಯ ಇದ್ದೇ. ಇದೆ. ಹುಲಿ, ಆನೆಗಳು ಕಾಡಿನಿಂದ ಹೊರ ಬಂದು ಸಂಘರ್ಷಕ್ಕೆ ಸಿಲುಕಿಸುವ ಸವಾಲುಗಳೂ ಇವೆ. ಅರಣ್ಯದಂಚಿನಲ್ಲೇ ಹಲವಾರು ಹಳ್ಳಿಗಳಿದ್ದು, ಕೃಷಿ ನಂಬಿದವರೇ ಇರುವುರಿಂದ ಜನರ ನಿಭಾವಣೆ ಸುಲಭವಲ್ಲ. 

ಅದೇ ರೀತಿ ಗಿರಿಜನರ ಪುನರ್ವಸತಿ ಕೂಡ ಮುಗಿಯದ ಕಥೆ. ಆನೆ ಶಿಬಿರಗಳಲ್ಲಿ ಸಾಕಷ್ಟು ಆನೆ ಮೃತಪಟ್ಟು ವಿವಾದವೂ ಆಗಿದೆ. ಈ ಎಲ್ಲಾ ಕಾರಣಗಳಿಂದ ನಾಗರಹೊಳೆಯ ಸವಾಲಿನ ನಡುವೆ ಸೀಮಾ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದೆ ನಾಗರಹೊಳೆಯಲ್ಲಿ ಮಾಲತಿಪ್ರಿಯಾ, ಅನುಷಾ ಮತ್ತಿತರರು ಎಸಿಎಫ್‌ಗಳಾಗಿ ಕೆಲಸ ಮಾಡಿದ್ದರೆ, ಗಾನಶ್ರೀ ಮಧುಸೂಧನ್‌ ಆರ್‌ಎಫ್‌ಒ ಆಗಿದ್ದರು. ಆದರೆ ನಿರ್ದೇಶಕರು ಮಹಿಳೆ ಆಗಿರಲಿಲ್ಲ.

ಇಲಾಖೆಗೆ ಸೇರುವಾಗಲೇ ಇಂತದ್ದೇ ಕೆಲಸ ಎಂದು ಬಂದಿರುವುದಿಲ್ಲ. ಎಲ್ಲಾ ಕೆಲಸ ನಿಭಾಯಿಸಲೇಬೇಕು. ಇಲಾಖೆ ದೊಡ್ಡ ಜವಾಬ್ದಾರಿ ನೀಡಿದೆ. ಅದನ್ನು ನಿಭಾಯಿಸುವೆ ಎನ್ನುವ ವಿಶ್ವಾಸವಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ನಾಗರಹೊಳೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಜನರ ಸಹಕಾರದೊಂದಿಗೆ ಮುಂದಡಿ ಇಡುವೆ ಎನ್ನುತ್ತಾರೆ ಸೀಮಾ.