ಕನ್ನಡ ಸುದ್ದಿ  /  ಕರ್ನಾಟಕ  /  Bamboo: ಬಿದಿರು ದಿನಕ್ಕೆ ಎಷ್ಟು ಉದ್ದ ಬೆಳೆಯಬಲ್ಲದು, ತಾಪಮಾನ ಏರಿಕೆ ತಡೆಗೆ ಬಿದಿರಿನ ಪಾತ್ರ ಗೊತ್ತೆ, ಇಲ್ಲಿದೆ ಆಸಕ್ತಿದಾಯಕ ಮಾಹಿತಿ

Bamboo: ಬಿದಿರು ದಿನಕ್ಕೆ ಎಷ್ಟು ಉದ್ದ ಬೆಳೆಯಬಲ್ಲದು, ತಾಪಮಾನ ಏರಿಕೆ ತಡೆಗೆ ಬಿದಿರಿನ ಪಾತ್ರ ಗೊತ್ತೆ, ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ಬಿದಿರಿಲ್ಲದೇ ಮನುಷ್ಯನಿಲ್ಲ. ಬಿದುರಿನಲ್ಲದೇ ಪ್ರಕೃತಿಯೂ ಇಲ್ಲ. ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಬಿದಿರು( Bamboo) ಕುರಿತ ಆಸಕ್ತಿದಾಯಕ ಅಂಶಗಳು ಇಲ್ಲಿವೆ

ಬಿದಿರು, ಮನುಷ್ಯ ಮತ್ತು ಪರಿಸರ
ಬಿದಿರು, ಮನುಷ್ಯ ಮತ್ತು ಪರಿಸರ

ಬೆಂಗಳೂರು: ಬಿದಿರು ನೀನಾರಿಗಲ್ಲದವಳು, ಹುಟ್ಟುತ್ತಾ ಹುಲ್ಲಾದೆ. ಬೆಳೆಯುತ್ತಾ ಮರವಾದೆ ಎನ್ನುವ ಹಾಡನ್ನು ನೀವು ಕೇಳಿರಬಹುದು. ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಬಿದಿರು ಇಲ್ಲದೇ ನಮ್ಮನ್ನು ಊಹಿಸಿಕೊಳ್ಳಲು ಆಗದು. ಮನುಷ್ಯದ ಹುಟ್ಟಿನಿಂದ ಸಾವಿನವರೆಗೂ ಬಿದಿರಿನ ನಂಟು ಇಲ್ಲದೇ ಇರಲಾರದು. ಬಿದಿರು(bamboo) ಬರೀ ಮನುಷ್ಯನಿಗೆ ಮಾತ್ರವಲ್ಲದೇ ಪರಿಸರಕ್ಕೂ ತನ್ನದೇ ಆದ ಕೊಡುಗೆ ನೀಡಿದೆ. ಬಿದಿರಿನಿಂದ ಜಾಗತಿಕ ತಾಪಮಾನದಂತಹ ಚಟುವಟಿಕೆಗಳನ್ನೂ ತಡೆಯಬಹುದು. ಬಿದಿರು ಹೇಗೆ ಬೆಳೆಯುತ್ತದೆ. ಒಂದು ದಿನಕ್ಕೆ ಎಷ್ಟು ಬೆಳೆಯಬಲ್ಲದು ಎನ್ನುವ ಅಂಶಗಳೂ ಕುತೂಹಲಕಾರಿಯಾಗಿದೆ. ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳಲ್ಲಿ ಬಿದಿರಿನ ಉದ್ಯಮವೂ ಲಕ್ಷಾಂತರ ಮಂದಿಗೆ ಬದುಕು ಕೂಡ ನೀಡಿದೆ. ಬಿದಿರಿನ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

1. ಕ್ಷಿಪ್ರ ಬೆಳವಣಿಗೆ: ಬಿದಿರು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವಾಗಿದೆ. ಇದು 24 ಗಂಟೆಗಳಲ್ಲಿ 47.6 ಇಂಚುಗಳಷ್ಟು ಬೆಳೆದ ದಾಖಲೆ ಇದೆ.

2. ಅಧಿಕ ಆಮ್ಲಜನಕ ಬಿಡುಗಡೆ: ಬಿದಿರಿನ ಮರವು ಇತರ ಮರಗಳಿಗಿಂತ 35% ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

3. ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುವಿಕೆ: ಬಿದಿರು ಪ್ರತಿ ವರ್ಷ ಹೆಕ್ಟೇರಿಗೆ 17 ಟನ್ಗಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇಂಗಾಲದ ಪ್ರಮಾಣ ಅಧಿಕವಾಗಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಂತಹ ಗಂಭೀರ ಸಮಸ್ಯೆಗಳಿಗೆ ಅದು ಅತಿ ಪ್ರಮುಖ ಕಾರಣವಾಗುತ್ತಿರುವಾಗ ಸಾಕಷ್ಟು ಪ್ರಮಾಣದ ಕಾರ್ಬನ್ ಹೀರುವ ಬಿದಿರು ಮಹತ್ವದ ಸಸ್ಯವೆನಿಸುತ್ತದೆ.

4. ಹೆಚ್ಚು ಗೊಬ್ಬರದ ಅಗತ್ಯವಿಲ್ಲ: ಬಿದಿರು ಬೆಳೆಯಲು ಅಧಿಕ ಗೊಬ್ಬರ, ಪೋಷಕಾಂಶಗಳ ಅಗತ್ಯವಿಲ್ಲ. ಇದು ತನ್ನ ಎಲೆಗಳನ್ನು ಬೀಳಿಸುವ ಮೂಲಕ ಸ್ವಯಂ ಮಲ್ಚ್ ಮಾಡಿಕೊಳ್ಳುತ್ತದೆ. ಅವೇ ಮುಂದೆ ಗೊಬ್ಬರವಾಗಿಯೂ ಕಾರ್ಯ ನಿರ್ವಹಿಸುತ್ತವೆ.

5. ಬರ ಸಹಿಷ್ಣು‌ ಸಸ್ಯ: ಬಿದಿರು ಒಣ ಪ್ರದೇಶದಲ್ಲೂ ಹುಲುಸಾಗಿ ಬೆಳೆಯುತ್ತದೆ. ಬರ ಸಹಿಷ್ಣು ಸಸ್ಯಗಳಾಗಿವೆ.

6. ವಾಣಿಜ್ಯ ಉದ್ದೇಶದ ಮೃದು ಪ್ರಭೇಧದ ಮರಗಳಿಗೆ ಸೂಕ್ತ ಪರ್ಯಾಯ: 20-30 ವರ್ಷಗಳನ್ನು ತೆಗೆದುಕೊಳ್ಳುವ ಮೃದುವಾದ ಮರಗಳಿಗೆ ಹೋಲಿಸಿದರೆ 3-5 ವರ್ಷಗಳಲ್ಲಿ ಕೊಯ್ಲಿಗೆ ಬರುವ ಸಾಮರ್ಥ್ಯವಿರುವ ಬಿದಿರು ಲಾಭದಾಯಕ.

7. ನಿರ್ಮಾಣ ವಸ್ತು: ಬಿದಿರು ಅತ್ಯಂತ ಬಲವಾಗಿದ್ದು, ಕುಟ್ಟು ಹೊಡಿಯದ ಮರವಾಗಿದೆ. ಹಾಗಾಗಿ ಇದನ್ನು ಮನೆ, ಬೇಲಿ ಸೇರಿ‌ ವಿವಿಧ ನಿರ್ಮಾಣ ಕಾರ್ಯಗಳಲ್ಲಿ ಬಳಸಿಕೊಳ್ಳಬಹುದು.

8. ಮಣ್ಣಿನ ಸವೆತಕ್ಕೆ ಪರಿಹಾರ: ಬಿದಿರಿನ ಅಸಂಖ್ಯಾತ ಬೇರುಗಳು, ಪ್ರತಿ ವರ್ಷ ವಿಸ್ತರಿಸುವ ಹೊಸ ಹೊಸ ರೈಜೋಮ್‌ಗಳು ವ್ಯಾಪಕ ಜಾಲವನ್ನು ಆವರಿಸಿಕೊಂಡು ಮಣ್ಣಿನ ಸವೆತವನ್ನು ತಡೆಯಲು ಅತ್ಯಂತ ಪರಿಣಾಮಕಾರಿಯಾಗಿವೆ.

9. ನೈಸರ್ಗಿಕ ಹವಾನಿಯಂತ್ರಕ: ಬಿದಿರು ಬೇಸಿಗೆಯಲ್ಲಿ ತನ್ನ ಸುತ್ತಲಿನ ಗಾಳಿಯನ್ನು ಸಾಕಷ್ಟು ತಂಪಾಗಿಸುತ್ತದೆ.

10. ಮರ ರೂಪಿ ಹುಲ್ಲು: ಬಿದಿರು ಒಂದು ಹುಲ್ಲಿನ ಜಾತಿ ಸಸ್ಯ. ಆದರೂ ಕೂಡ ಇದು ನೋಡಲು ಮರದಂತೆ ಕಾಣುತ್ತದೆ.

11. 40- 50 ವರ್ಷಕ್ಕೆ ಒಮ್ಮೆ ಹೂ- ಕಾಯಿ (ಧಾನ್ಯ): ಬಿದಿರು ಸಾಮೂಹಿಕವಾಗಿ 40- 50 ವರ್ಷಕ್ಕೆ ಒಮ್ಮೆ ಹೂ ಕಾಯಿ ಬಿಡುತ್ತದೆ. ಇದು ಧಾನ್ಯವಾಗಿ (ಬಿದಿರಕ್ಕಿ) ಉದುರಿದಾಗ ಬಿದಿರು ಕೂಡ ಸಾಮೂಹಿಕವಾಗಿ ಸಾಯುತ್ತದೆ. ಇದು ನಮ್ಮ ನಾಗರಹೊಳೆ, ಬಂಡೀಪುರ ಅರಣ್ಯದಲ್ಲೂ ಆಗಿದೆ.

12. ಬಿದಿರಿನ ಕುಲಕಸುಬಿನ ಮೇದರ ಜನಾಂಗ: ಕರ್ನಾಟಕದ ವಿವಿಧ ಪ್ರದೇಶಗಳಲ್ಲಿರುವ ಮೇದರ ಜನಾಂಗ ಹಿಂದೆ ಬಿದಿರಿನ ಕರಕುಶಲ ವಸ್ತುಗಳನ್ನು ತಯಾರು ಮಾಡುವ ಕುಲಕಸುಬನ್ನು ಮಾಡುತ್ತಿದ್ದರು. ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಹಾವಳಿಯಲ್ಲಿ ಬಿದಿರಿನ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಇವರಲ್ಲಿ ಬಹಳಷ್ಟು ಜನ ಬೇರೆ ವೃತ್ತಿಯತ್ತ ಚಿತ್ತ ಹರಿಸಿದ್ದಾರೆ.

( ಪೂರಕ ಮಾಹಿತಿ: ಪರಿಸರ ಪರಿವಾರ)

ಬಿದಿರ ಕುರಿತು ಮಾಹಿತಿಗೆ ಸಂಪರ್ಕಿಸಿ

ಕರ್ನಾಟಕ ಬ್ಯಾಂಬು ಮಿಷನ್‌

080-23563932/31

email apccfnfap@gmail.com

ಬ್ಯಾಂಬು ಸೊಸೈಟಿ ಆಫ್‌ ಇಂಡಿಯಾ

080-23469153

email: bamboosocietyofindia@gmail.com

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ