ಕನ್ನಡ ಸುದ್ದಿ  /  ಕರ್ನಾಟಕ  /  Hassan News: ಹಾಸನದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ತೀವ್ರ, ಸೆರೆ ಸಿಕ್ಕ ಸೀಗೆ

Hassan News: ಹಾಸನದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ತೀವ್ರ, ಸೆರೆ ಸಿಕ್ಕ ಸೀಗೆ

Elephant Capture ಜನರಿಗೆ ತೊಂದರೆ ನೀಡುತ್ತಿದ್ದ ಪುಂಡಾನೆ ಸೆರೆ ಕಾರ್ಯಾಚರಣೆ ಹಾಸನ ಜಿಲ್ಲೆಯಲ್ಲಿ ಮುಂದುವರಿದಿದೆ. ಭಾನುವಾರ ಮತ್ತೊಂದು ಆನೆ ಸೆರೆ ಹಿಡಿಯಲಾಗಿದೆ.

ಹಾಸನದಲ್ಲಿ ಸೆರೆ ಹಿಡಿದ ಪುಂಡಾನೆ ಸೀಗೆಯನ್ನು ಕೊಡಗಿಗೆ ಸಾಗಿಸಲಾಯಿತು,
ಹಾಸನದಲ್ಲಿ ಸೆರೆ ಹಿಡಿದ ಪುಂಡಾನೆ ಸೀಗೆಯನ್ನು ಕೊಡಗಿಗೆ ಸಾಗಿಸಲಾಯಿತು,

ಹಾಸನ; ಆನೆ ಉಪಟಳದಿಂದ ಬೇಸತ್ತಿರುವ ಹಾಸನ ಜಿಲ್ಲೆಯ ಜನರಿಗೆ ಸಮಾಧಾನದ ಸುದ್ದಿಯಿದು. ಎರಡು ದಿನದ ಅಂತರದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಎರಡು ಪುಂಡಾನೆಗಳನ್ನು ಸೆರೆ ಹಿಡಿದಿದೆ. ಭಾನುವಾರ ಸೀಗೆ ಎನ್ನುವ ಸಲಗವನ್ನು ಆನೆಗಳ ಸಹಕಾರದಿಂದ ಅರಣ್ಯ ಇಲಾಖೆಯು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬೇಲೂರು, ಆಲೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಆನೆ ಸೆರೆ ಕಾರ್ಯಾಚರಣೆ ಈಗ ಶುರುವಾಗಿದೆ. ಶುಕ್ರವಾರವಿನ್ನೂ ಕರಡಿ ಎನ್ನುವ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಈಗ ಮತ್ತೊಂದು ಆನೆಯನ್ನು ಸೆರೆ ಹಿಡಿದು ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ಕಾಡಾನೆ ಹಾವಳಿಯಂತೂ ಹೆಚ್ಚಾಗಿದೆ. ಜನರೂ ಸಾಕಷ್ಟು ಸಂಖ್ಯೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. ದಶಕದ ಅವಧಿಯಲ್ಲಿ ಕೊಡಗು ಹಾಗೂ ಹಾಸನ ಗಡಿ ಭಾಗದಲ್ಲಿಯೇ 40 ಕ್ಕೂ ಅಧಿಕ ಆನೆಗಳನ್ನು ಹಿಡಿಯಲಾಗಿದೆ. ಆನೆ ಸೆರೆ ಕಾರ್ಯಾಚರಣೆ ವೇಳೆ ಹಾಸನ ಜಿಲ್ಲೆಯಲ್ಲಿ ದುರಂತಗಳೇ ನಡೆದು ಹೋಗಿದ್ದರಿಂದ ಕೆಲ ದಿನದಿಂದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.

ಅದರಲ್ಲೂ ಬೇಲೂರು ತಾಲ್ಲೂಕಿನಲ್ಲಿ ಆನೆಗಳಿಗೆ ಅರವಳಿಕೆ ನೀಡುವಲ್ಲಿ ಪರಿಣಿತರಾಗಿದ್ದ, ಅರಣ್ಯ ಇಲಾಖೆ ನಿವೃತ್ತ ಸಿಬ್ಬಂದಿ ವೆಂಕಟೇಶ್‌ ಆನೆ ದಾಳಿಗೆ ಬಲಿಯಾಗಿದ್ದರು. ಇದಾದ ನಂತರ ಯಸಳೂರು ಬಳಿ ಕಾಡಾನೆ ದಾಳಿಗೆ ಅಂಬಾರಿ ಹೊತ್ತ ಅರ್ಜುನ ಆನೆ ಜೀವ ಕಳೆದುಕೊಂಡಿತ್ತು. ಇದಾದ ಬಳಿಕ ಆನೆ ಸೆರೆಗಿಂತ ಪುಂಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ನಡೆದಿತ್ತು. ಕಳೆದ ವಾರ ಎರಡು ಸಲಗಗಳು ಮನೆಯೊಂದರ ಬಳಿಯೇ ಕದನಕ್ಕೆ ಬಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು. ಜನ ಕೂಡ ಆನೆ ಸೆರೆ ಮುಂದುವರೆಸುವಂತೆ ಆಗ್ರಹಿಸಿದ್ದರು.

ಈಗ ಮತ್ತೆ ಆನೆಗಳ ಉಪಟಳ ಹೆಚ್ಚಾಗಿರುವ ಮಾಹಿತಿ ಇರುವುದರಿಂದ ಅರಣ್ಯ ಇಲಾಖೆ ಕಾಡಾನೆಗಳ ಸೆರೆ ಅನುಮತಿ ನೀಡಿತ್ತು. ಹಾಸನ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್‌ ನೇತೃತ್ವದಲ್ಲಿ ಡಿಸಿಎಫ್‌ ಸೌರಭ್‌ ಕುಮಾರ್‌ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಂಡವನ್ನು ರಚಿಸಲಾಗಿದೆ. ದಸರಾ ಅಂಬಾರಿ ಹೊರುವ ಅಭಿಮನ್ಯು ಸಹಿತ ಹಲವು ಸಾಕಾನೆಗಳನ್ನೂ ಸೆರೆ ಕಾರ್ಯಾಚರಣೆಗೆ ಸೇರಿಸಿಕೊಳ್ಳಲಾಗಿದೆ.

ಶುಕ್ರವಾರ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಎನ್ನುವ ಹೆಸರಿನ ಆನೆಯನ್ನು ಸೆರೆ ಹಿಡಿದ್ದರು. ಅದನ್ನು ಕೊಡಗಿನ ಆನೆ ಶಿಬಿರಕ್ಕೆ ರವಾನಿಸಲಾಗಿದೆ. ಇನ್ನೊಂದು ಆನೆ ಯಸಳೂರು ಸಮೀಪದ ನಿಡಿಗೆರೆ ಬಳಿ ಉಪಟಳ ನೀಡುತ್ತಿದ್ದ ಮಾಹಿತಿ ಆಧರಿಸಿ ಭಾನುವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಲಾಯಿತು. ಸುಮಾರು 30 ವರ್ಷದ ಸಲಗವನ್ನು ಆನೆಗಳ ಸಹಕಾರದಿಂದ ಸೆರೆ ಹಿಡಿಯಲಾಯಿತು. ಹಾಸನ ಜಿಲ್ಲೆಯ ಬೇಲೂರು ಸಮೀಪದಲ್ಲಿ ಸೀಗೆ ಗುಡ್ಡ ಪ್ರದೇಶದಲ್ಲಿ ಭಾರೀ ಉಪಟಳ ನೀಡುತ್ತಿದ್ದ ಈ ಆನೆಗೆ ಸ್ಥಳೀಯರು ಸೀಗೆ ಎಂದು ಹೆಸರಿಟ್ಟಿದ್ದರು.

ಈ ಭಾಗದಲ್ಲಿ ಇನ್ನೂ 25 ಕ್ಕೂ ಅಧಿಕ ಪುಂಡಾನೆಗಳಿರುವ ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಅವುಗಳನ್ನು ಹಂತ ಹಂತವಾಗಿ ಸೆರೆ ಹಿಡಿಯುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿಕೊಂಡಿದೆ. ಈಗ ಆರಂಭಗೊಂಡಿರುವ ಸೆರೆ ಕಾರ್ಯಾಚರಣೆ ಇನ್ನೂ ಕೆಲವು ದಿನ ಮುಂದುವರೆಯಲಿದೆ.

ಹಾಸನ ಜಿಲ್ಲೆಯಲ್ಲಿ ಆನೆ ಉಪಟಳ ಹೆಚ್ಚಾಗಿರುವುದು ನಿಜ. ನಾವು ಕಾರ್ಯಾಚರಣೆಯನ್ನು ಪುನಾರಂಭಿಸಿ ಈಗ ಎರಡು ಆನೆ ಸೆರೆ ಹಿಡಿದಿದ್ದೇವೆ. ಭಾನುವಾರವೂ ಸೀಗೆ ಎನ್ನುವ ಆನೆ ಸೆರೆಯಾಗಿದೆ. ಈ ವಾರ ಇನ್ನಷ್ಟು ಆನೆಗಳನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತೇವೆ ಎನ್ನುವುದು ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್‌.ರವಿಶಂಕರ್‌ ವಿವರಣೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point