ಕಾಡಿನ ಕಥೆಗಳು: ಕರ್ನಾಟಕದ ಅರಣ್ಯದಲ್ಲಿವೆ ಶತಮಾನ ಕಂಡ 50ಕ್ಕೂ ಅಧಿಕ ಅತಿಥಿಗೃಹ; ಇಲಾಖೆಯ ಆತಿಥ್ಯದೊಂದಿಗೆ ಕರುನಾಡ ಕಾಡು ನೋಡ ಬನ್ನಿ-forest news karnataka forest department centenary rest houses in karwar shimoga mysore tumkur mangalore sweet memory kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಕರ್ನಾಟಕದ ಅರಣ್ಯದಲ್ಲಿವೆ ಶತಮಾನ ಕಂಡ 50ಕ್ಕೂ ಅಧಿಕ ಅತಿಥಿಗೃಹ; ಇಲಾಖೆಯ ಆತಿಥ್ಯದೊಂದಿಗೆ ಕರುನಾಡ ಕಾಡು ನೋಡ ಬನ್ನಿ

ಕಾಡಿನ ಕಥೆಗಳು: ಕರ್ನಾಟಕದ ಅರಣ್ಯದಲ್ಲಿವೆ ಶತಮಾನ ಕಂಡ 50ಕ್ಕೂ ಅಧಿಕ ಅತಿಥಿಗೃಹ; ಇಲಾಖೆಯ ಆತಿಥ್ಯದೊಂದಿಗೆ ಕರುನಾಡ ಕಾಡು ನೋಡ ಬನ್ನಿ

ಕರ್ನಾಟಕದ ಅರಣ್ಯಗಳು ಮಾತ್ರವಲ್ಲ. ಅಲ್ಲಿನ ಶತಮಾನದ ಹಿನ್ನೆಲೆಯ ಅದೆಷ್ಟೋ ಅತಿಥಿಗಳು ನೂರಾರು ಕಥೆಗಳನ್ನು ಹೇಳುತ್ತವೆ. ಕಾಡಿನ ಅನುಭವದ ಖುಷಿಯೊಂದಿಗೆ ಹೋಗುವ ಅದೆಷ್ಟೋ ಜನರ ಬದುಕಿಗೂ ಪ್ರೇರಣೆಯನ್ನೂ ನೀಡಿವೆ.

ನಾಗರಹೊಳೆ ಕಲ್ಲಹಳ್ಳದ ಸಂಪೂರ್ಣ ಮರದ ಅತಿಥಿಗೃಹ ಶತಮಾನದ ಹೊಸ್ತಿಲಿನಲ್ಲಿದೆ.
ನಾಗರಹೊಳೆ ಕಲ್ಲಹಳ್ಳದ ಸಂಪೂರ್ಣ ಮರದ ಅತಿಥಿಗೃಹ ಶತಮಾನದ ಹೊಸ್ತಿಲಿನಲ್ಲಿದೆ.

ಅರಣ್ಯದ ಪ್ರವಾಸವೇ ಒಂದು ವಿಭಿನ್ನ ಅನುಭೂತಿ.ಕಾಡು ಪ್ರವೇಶ, ಅಲ್ಲಿನ ಸುಂದರ ಪರಿಸರ, ಹಸಿರ ಕ್ಷಣಗಳು ಎಂಥವರಲ್ಲೂ ನಿರಾಳ ಭಾವಗಳನ್ನು ಹುಟ್ಟು ಹಾಕುತ್ತವೆ. ಅಲ್ಲಿ ವಾಸ್ತವ್ಯ ಹೂಡುವುದು. ಒಂದೆರಡು ದಿನ ಕಳೆದು ಬರುವುದು ಎಂದರೆ ಮೈಮನಗಳ ಪುಳಕವೇ ಸರಿ. ಪರಿಸರ ಪ್ರವಾಸೋದ್ಯಮ ಎನ್ನುವುದು ಈಗ ವಿಶಾಲವಾಗಿ ಬೆಳೆದಿದೆ. ಎಲ್ಲೆಡೆ ಕನಿಷ್ಠ ಸೌಲಭ್ಯಗಳೊಂದಿಗೆ ಕಾಡಿಗೆ ಹೋಗುವ ಅವಕಾಶಗಳು ಆಗಿವೆ. ಉಳ್ಳವರ ಲೆಕ್ಕದಲ್ಲಿ ರೆಸಾರ್ಟ್‌ಗಳೂ ರೂಪುಗೊಂಡಿವೆ. ಹೋಂಸ್ಟೇಗಳು ಬಂದಿವೆ. ಅಂದರೆ ಕಾಡು ನಮ್ಮನ್ನು ಪ್ರೀತಿಯಿಂದಲೇ ಕರೆಯುವಷ್ಟರ ಮಟ್ಟಿಗೆ ಅಲ್ಲಲ್ಲಿ ಸೌಲತ್ತುಗಳು ಕಾಡಿನ ಒಳಗೆ, ಕಾಡಿನಂಚಿನಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತಳೆದಿವೆ. ಎಲ್ಲವೂ ಒಂದು ಮಿತಿಯೊಳಗೆ ಮನುಷ್ಯನಿಗೆ ಬೇಕೇ ಬೇಕು.

ಕರ್ನಾಟಕದಲ್ಲೂ ಅರಣ್ಯ ಇಲಾಖೆ ಇಂತಹದೇ ಉದ್ದೇಶ ಇಟ್ಟುಕೊಂಡು ಶತಮಾನದ ಹಿಂದೆಯೇ ಆತಿಥ್ಯದ ಪರಿಕಲ್ಪನೆ ಜಾರಿಗೆ ತಂದಿದೆ. ಅಂದರೆ ಕಾಡಿಗೆ ಬರುವವರು ಒಂದು ದಿನದ ಮಟ್ಟಿಗಾದರೂ ಉಳಿದು ಹೋದರೆ ಅವರಲ್ಲೂ ಚೈತನ್ಯ ತುಂಬಬಹುದು ಎನ್ನುವುದು ಇಲಾಖೆಯ ಆಗಿನ ಅಧಿಕಾರಿಗಳ ನಂಬಿಕೆ.

ಒಂದು ಕಡೆ ಬ್ರಿಟೀಷ್‌ ಆಡಳಿತ, ಅಲ್ಲಿಂದ ಬರುವ ಅತಿಥಿಗಳಿಗೆ ಇಲ್ಲಿ ಸೇವೆ, ನಮ್ಮವರಿಗೂ ಒಂದಷ್ಟು ಖುಷಿ ಪಡಿಸುವ ವಿಶಾಲ ನೋಟದೊಂದಿಗೆ ಅರಣ್ಯ ಇಲಾಖೆ ಶತಮಾನದ ಹಿಂದೆಯೇ ಕರ್ನಾಟಕದ ಹಲವಾರು ಮಹತ್ವ ಕಾಡುಗಳಲ್ಲಿ ಅತಿಥಿಗೃಹಗಳನ್ನು ನಿರ್ಮಿಸಿತು. ಅವುಗಳಲ್ಲಿ ಬಹುತೇಕ ಈಗಲೂ ಅತ್ಯುತ್ತಮ ನಿರ್ವಹಣೆಯಲ್ಲಿವೆ. ಬಳಕೆಯಲ್ಲೂ ಇವೆ. ನಾಗರಹೊಳೆಯ ಅತಿಥಿಗೃಹದಲ್ಲಿ ಇಂದಿರಾಗಾಂಧಿ, ರಾಜೀವ್‌ ಗಾಂಧಿ ನಂತರ ರಾಹುಲ್‌ ಗಾಂಧಿ ಕೂಡ ವಾಸ್ತವ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಅದು ಜನಪ್ರಿಯ.

ಆಯಾ ಅರಣ್ಯದ ಮಹತ್ವ, ವಿಶೇಷದೊಂದಿಗೆ ವಾಸ್ತವ್ಯಕ್ಕೆ ಈ ಅತಿಥಿ ಗೃಹಗಳು ಕೈ ಬೀಸಿ ಕರೆಯುತ್ತಲೇ ಇರುತ್ತವೆ. ಒಂದಷ್ಟು ಸಮಯ ಮಾಡಿಕೊಂಡು ಹೋಗಿ ಬರಬೇಕಷ್ಟೇ.

ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಅಂತರ ಸಂತೆಯಿಂದ ಅನತಿ ದೂರದಲ್ಲಿಯೇ ಇದೆ ಸುಂಕದಕಟ್ಟೆ ಅತಿಥಿಗೃಹ. ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಅತಿಥಿ ಗೃಹ 1906ರಲ್ಲಿ ಶತಮಾನದ ಹಿಂದೆಯೇ ರೂಪಿಸಿದ್ದು. ಈಗಲೂ ಅತ್ಯುತ್ತಮ ನಿರ್ವಹಣೆಯಲ್ಲಿದೆ. ಮೂರು ಕೊಠಡಿಗಳಿರುವ ಇದು ಅರಣ್ಯದಿಂದ ಸುತ್ತುವರೆದಿದೆ. ಮುಖ್ಯ ರಸ್ತೆಯಿಂದ ಆರೇಳು ಕಿ.ಮಿ ದೂರದಲ್ಲಿದೆ. ಅದೇ ರೀತಿ ಪಕ್ಕದ ಮೇಟಿಕುಪ್ಪೆಯೂ ಎರಡು ವರ್ಷದ ನಂತರ ಅಂದರೆ 1908ರಲ್ಲಿ ಕಟ್ಟಿದ ಅತಿಥಿಗೃಹ ಈಗಲೂ ಸುಸ್ಥಿತಿಯಲ್ಲಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿಯೊಂದಿಗೆ ಇಲ್ಲಿ ವಾಸ್ತವ್ಯ ಹೂಡಬಹುದು. ಮೈಸೂರು ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿಯೇ ಇರುವ ವಿಭಿನ್ನ ಶೈಲಿಯ ಅತಿಥಿಗೃಹವೂ 1908ರಲ್ಲಿ ನಿರ್ಮಾಣಗೊಂಡಿದೆ.

ಕೊಡಗು ಜಿಲ್ಲೆಯ ಕಲ್ಲಹಳ್ಳದಲ್ಲಿರುವ ಮರದ ಅತಿಥಿಗೃಹವಂತೂ ನಿಜಕ್ಕೂ ಸುಂದರ. ನಾಗರಹೊಳೆಗೆ ಸೇರಿದ ಈ ಅತಿಥಿಗೃಹವನ್ನೂ ಕೂಡ1929 ರಲ್ಲೇ ಸಂಪೂರ್ಣ ಮರದಲ್ಲಿಯೇ ನಿರ್ಮಿಸಿದ್ದು. ಈಗಲೂ ಅತ್ಯುತ್ತಮ ನಿರ್ವಹಣೆಯಿಂದ ಸೆಳೆಯುತ್ತದೆ. ಮೇಲ್ಭಾಗದಲ್ಲಿರುವ ಎರಡು ಕೊಠಡಿಗಳಲ್ಲಿ ನಿಂತು ಅಲ್ಲಿನ ಇಡೀ ಚಿತ್ರಣವನ್ನೂ ಸವಿಯಬಹುದು. ಕೊಡಗಿನಲ್ಲೂ ಇಂತಹ ಹಲವು ಪುರಾತನ ಅತಿಥಿಗೃಹಗಳಿವೆ. ತಿತಿಮತಿ, ಮಾಕುಟ್ಟ, ಮಂಡ್ರೋಟು ಅತಿಥಿಗೃಹ ಹಳೆಯವೇ. ಕೊಡಗು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಅರಣ್ಯ ವ್ಯಾಪ್ತಿಯ ಅರೆಕೇರಿಯಲ್ಲಿ ಪಾರಂಪರಿಕ ಅರಣ್ಯ ವಿಶ್ರಾಂತಿ ಗೃಹ. ಮನೆಯನ್ನು 1923-24ರಲ್ಲಿ ನಿರ್ಮಿಸಲಾಯಿತು.

ಕಲಬುರಗಿ ಜಿಲ್ಲೆಯ ತೆಲಂಗಾಣಕ್ಕೆ ಹೊಂದಿಕೊಂಡ ಚಿಂಚೋಳಿ ಸಮೀಪದ ಚಂದ್ರಂಪಳ್ಳಿ ಅರಣ್ಯ ಅತಿಥಿಗೃಹವೂ ಶತಮಾನ ಪೂರೈಸಿದೆ. ಕೋಲಾರದ ತಿಪ್ಪನಹಳ್ಳಿ ಅತಿಥಿಗೃಹವೂ ನೂರು ವರ್ಷ ತುಂಬಿ ದಶಕವೇ ಆಗಿದೆ.

ಬೆಳಗಾವಿ ಜಿಲ್ಲೆಯೂ ಅರಣ್ಯಕ್ಕೆ ಹೆಸರುವಾಸಿ. ಶಿರೋಲಿ, ಲೋಂಡಾ, ಖಾನಾಪುರದಲ್ಲಿ 1914ರಲ್ಲಿ ಕಟ್ಟಿದ ಅತಿಥಿಗೃಹಗಳಿವೆ. ನಾಗರಗಾಳಿಯಲ್ಲೂ ಮೂರು ವರ್ಷ ನಂತರ ಕಟ್ಟಲಾಗಿದೆ. ಜಾಂಬೋಟಿ ಅತಿಥಿಗೃಹವೂ ಶತಮಾನ ಕಂಡಿದೆ. ಚಿತ್ರದುರ್ಗ ಜೋಗಿಮಟ್ಟಿಯಲ್ಲೂ ಇಂತಹದೇ ಪುರಾತನ ಅತಿಥಿಗೃಹವಿದೆ. ಬಳ್ಳಾರಿ ಸಂಡೂರು, ಗುಂಡಾ ಅತಿಥಿಗೃಹಗಳಿಗೂ ಅರ್ಧ ಶತಮಾನದ ಇತಿಹಾಸವಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ಬಳಿಯ ಗುಡ್ಡದ ಮೇಲೆ ಅರಣ್ಯ ಇಲಾಖೆ ಅತಿಥಿಗೃಹ, ಇದರ ಹೆಸರು ಭೂಕೈಲಾಸ. ಈ ಅತಿಥಿಗೃಹದಿಂದ ನಿಂತು ನೋಡಿದರೆ ಇಡೀ ತುಂಗಭದ್ರಾ ಜಲಾಶಯದ ಸಂಪೂರ್ಣ ಚಿತ್ರಣ ಕಾಣಲಿದೆ. ಇದೂ ಮೂರು ದಶಕದ ಅಂದರೆ 1996 ರಲ್ಲಿ ನಿರ್ಮಾಣಗೊಂಡಿದೆ. 5 ಕೊಠಡಿಗಳು ಅಲ್ಲಿವೆ.

ಮಂಗಳೂರಿನಿಂದ ಸುಮಾರು ಏಳು ಕಿ.ಮಿ ದೂರದಲ್ಲಿರುವ ಬೆಂಗ್ರೇ ತಣ್ಣೀರು ಬಾವಿ(Bengre Tannirbavi)ಅತಿಥಿಗೃಹವೂ ಹಳೆಯದೇ. ಸಮುದ್ರ ತೀರ ಸಮೀಪದಲ್ಲಿರುವ ಇರುವ ಇದನ್ನೂ ಅರಣ್ಯ ಇಲಾಖೆ ಶತಮಾನದ ಹಿಂದೆಯೇ ನಿರ್ಮಿಸಿತ್ತು. ಈಗ ಇಡೀ ಕಟ್ಟಡವನ್ನು ದಶಕದ ಹಿಂದೆ ಮರು ರೂಪಿಸಲಾಗಿದೆ. ಇದೂ ಕೂಡ ವಿಭಿನ್ನ ಅನುಭವ ನೀಡುತ್ತದೆ. ಉಡುಪಿ ಕುಂದಾಪುರ ಸಮೀಪದ ನಾರಾವಿ ಅತಿಥಿಗೃಹವೂ 1917ರಲ್ಲಿ ನಿರ್ಮಿಸಿದ್ದು.

ಚಾಮರಾಜನಗರ ಜಿಲ್ಲೆಯ ಬೂದಿಪಡಗ ಒಂದು ಕಾಲಕ್ಕೆ ವೀರಪ್ಪನ್‌ ಕಾರ್ಯಕ್ಷೇತ್ರದ ಅರಣ್ಯ. ತಮಿಳುನಾಡಿ ಗಡಿ. ಅಲ್ಲಿಯೂ ಶತಮಾನದ ಹಳೆಯದಾದ ಅತಿಥಿಗೃಹವಿದೆ. ನಿರ್ವಹಣೆಯಿಂದ ಈಗಲೂ ಬಳಕೆಯಲ್ಲಿದೆ. ಇದೇ ರೀತಿ ತಮಿಳುನಾಡು ಗಡಿ ಭಾಗದ ಪೊನ್ನಾಚಿ, ಗೋಪಿನಾಥಂ, ಕೌದಳ್ಳಿ, ಬೈಲೂರು ಅತಿಥಿಗೃಹವೂ ಚೆನ್ನಾಗಿವೆ. ಯಳಂದೂರು ತಾಲ್ಲೂಕಿನ ಕ್ಯಾತೇ ದೇವರಗುಡಿಯ ಅತಿಥಿಗೃಹವೂ ಬೆಸ್ಟ್.‌

ಉತ್ತರ ಕನ್ನಡದ ಕೆನರಾ ಅರಣ್ಯವೂ ಬಲು ಅಚ್ಚುಮೆಚ್ಚಿನ ತಾಣವೇ. ಯಲ್ಲಾಪುರದ ಅತಿಥಿಗೃಹ 1878ರಲ್ಲಿ ನಿರ್ಮಾಣಗೊಂಡು ಒಂದೂವರೆ ಶತಮಾನವನ್ನು ಸಮೀಪಿಸಿದೆ, ಕಾರವಾರದ ಕೋಡಿಬಾಗ, ಕದ್ರಾದ ಅತಿಥಿಗೃಹಗಳು ಅತೀ ಹಳೆಯವು.1899 ರಲ್ಲಿ ನಿರ್ಮಾಣಗೊಂಡ ಅತಿಥಿಗೃಹಗಳಿವು. ಇಲ್ಲಿಯೂ ಹಲವಾರು ಅತಿಥಿಗಳು ಈಗಲೂ ಶತಮಾನವನ್ನೂ ಪೂರೈಸಿ ಸೇವೆ ನೀಡುತ್ತಿವೆ. ದಾಂಡೇಲಿ ಸಮೀಪವೇ ಇರುವ ಕುಳಗಿ ಶಿಬಿರಕ್ಕೂ ಹೀಗೆಯೇ ದೀರ್ಘ ಇತಿಹಾಸವಿದೆ. ಮಂಡುರ್ಲಿ, ದಾಂಡೇಲಿ, ಹೊಸಕಂಬಿ, ಹಲಗುಂದ, ದೇವಲಮಕ್ಕಿ. ರಾಮನಗುಳಿ, ಚಿಪಗೇರಿ, ಕಾಟೂರು, ಕಿರವತ್ತಿ, ಗುಂಜಾವತಿ, ಗಣೇಶಗುಡಿ ಕೂಡ ಹಳೆಯವು.

ತುಮಕೂರಿನ ನಮದಚಿಲಮೆ, ಬಳ್ಳಾರ, ತಿಮ್ಮಾಪುರ ಅತಿಥಿಗೃಹಗಳು ಈಗಲೂ ಚೆನ್ನಾಗಿವೆ. ಹಾವೇರಿ ಜಿಲ್ಲೆಯ ಹಣಕೋಣ ಅತಿಥಿಗೃಹ ಶತಮಾನ ದಾಟಿದೆ. ಧಾರವಾಡದ ಕಲಕೇರಿ, ಸಂಗಮೇಶ್ವರ ಪೇಟೆ ಅತಿಥಿಗೃಹ ಶತಮಾನ ಪೂರೈಸಿದೆ. ಕಲಘಟಗಿ ದೇವಿಕೊಪ್ಪ ಅತಿಥಿಗೃಹ 1884ರಲ್ಲಿ ನಿರ್ಮಿಸಿದ್ದು ಈಗಲೂ ಬಳಕೆಯಲ್ಲಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಂಸೆ ಪ್ರಿಯದರ್ಶಿನಿ ಅತಿಥಿಗೃಹ, ನರಸಿಂಹರಾಜ ಪುರ ಅತಿಥಿಗೃಹ, ಮಾಗುಂಡಿ, ಚಿಕ್ಕ ಅಗ್ರಹಾರ, ಕೆಸವೆ, ಸುಕಾಲಟ್ಟಿ ಕೂಡ ಶತಮಾನ ಪೂರೈಸಿವೆ.

ಶಿವಮೊಗ್ಗದ ಅರಸಾಳು, ಶೆಟ್ಟಿಹಳ್ಳಿ, ನಾಗವಲ್ಲಿ, ಜೋಳದಾಳ, ಹುಲಿಕಲ್‌, ಉಂಬ್ಳೇಬೈಲ್‌, ಕೂಡಿಗೆರೆ, ಅತಿಥಿ ಗೃಹಗಳು ಪುರಾತನವಾದವು.ಇಲ್ಲಿಯೂ ತಂಗಲು ಅವಕಾಶವಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವೂ ಹಳೆಯದು. ಇಲ್ಲಿನ ಹರಿಣಿ, ಚೀತಾಲ್‌, ಕೋಕಿಲಾ, ಪಪಿಯಾ ಸಹಿತ ಹಲವು ಅತಿಥಿಗೃಹಗಳು ಅರ್ಧಶತಮಾನ ಪೂರೈಸಿವೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಒಂದಿಲ್ಲೊಂದು ವಿಭಿನ್ನ ಹಿನ್ನೆಲೆಯ ಅರಣ್ಯದ ನಂಟಿನೊಂದಿಗೆ ನಿಂತ ಕಟ್ಟಡಗಳು ಅದೆಷ್ಟೋ ಜನರಿಗೆ ಹಸಿರು ಅನುಭವವನ್ನು ನೀಡಿವೆ. ಈಗಲೂ ನೀಡುತ್ತಲೇ ಇವೆ.

ಪರಿಸರ ಪ್ರವಾಸೋದ್ಯಮ ಬೆಳೆಯುವ ಭರದಲ್ಲಿ ಇವುಗಳೆಲ್ಲಾ ಉಳ್ಳವರಿಗೆ, ಅಧಿಕಾರ ಇದ್ದವರಿಗೆ ಮಾತ್ರ ಸಿಗುವಂತಹ ಸನ್ನಿವೇಶ ಎದುರಾಗಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಅರಣ್ಯ ಇಲಾಖೆ ಸೇರಿದ ಅತಿಥಿಗೃಹಗಳನ್ನು ವಾಣಿಜ್ಯ ಉದ್ದೇಶಕ್ಕೆ ಹಸ್ತಾಂತರಿಸಬಾರದು. ಅಲ್ಲಿ ಸೀಮಿತ ಚಟುವಟಿಕೆಯೊಂದಿಗೆ ಎಲ್ಲರಿಗೂ ಅವಕಾಶ ಕೊಡಬೇಕು ಎಂದು ಸೂಚಿಸಿದೆ. ಅದು ಪಾಲನೆಯೂ ಆಗುತ್ತಿದೆ. 189 ಅರಣ್ಯ ಇಲಾಖೆ ಅತಿಥಿಗೃಹಗಳಲ್ಲಿ ಕಡಿಮೆ ಖರ್ಚಿನಲ್ಲಿ ಉಳಿಯಲು ಈಗಲೂ ಅವಕಾಶವಿದೆ.

ಕಾಡು ನೋಡ ಹೋದೆ, ಕವಿತೆಯೊಡನೆ ಬಂದೆ ಎನ್ನುವಂತೆ ಕಾಡಿನ ಅನುಭವ ಮುದ ನೀಡಲು ಶತಮಾನದ ಇತಿಹಾಸ ಇರುವ ಅತಿಥಿಗಳೂ ಪ್ರೇರಣೆಯಂತೂ ಆಗಲಿವೆ.

mysore-dasara_Entry_Point