ಕನ್ನಡ ಸುದ್ದಿ  /  ಕರ್ನಾಟಕ  /  Forest News: ಕರ್ನಾಟಕದಲ್ಲಿ ಸಸಿ ರಕ್ಷಣೆ ಬೆಳವಣಿಗೆಗೆ ಜಿಯೋ ಟ್ಯಾಗಿಂಗ್, ಆಡಿಟ್‌ ಕಡ್ಡಾಯ

Forest News: ಕರ್ನಾಟಕದಲ್ಲಿ ಸಸಿ ರಕ್ಷಣೆ ಬೆಳವಣಿಗೆಗೆ ಜಿಯೋ ಟ್ಯಾಗಿಂಗ್, ಆಡಿಟ್‌ ಕಡ್ಡಾಯ

Save Tree ಕರ್ನಾಟಕ ಅರಣ್ಯ ಇಲಾಖೆಯು( Karnataka Forest Department) ಸಸಿಗಳ ರಕ್ಷಣೆಗೆ ತಂತ್ರಜ್ಞಾನದ ಮೊರೆ ಹೋಗಿದೆ.

ಕರ್ನಾಟಕದಲ್ಲಿ ಅರಣ್ಯ ಇಲಾಖೆ ನೆಡುವ ಸಸಿಗಳಿಗೆ ಜಿಯೋ ಟ್ಯಾಗಿಂಗ್‌ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ಅರಣ್ಯ ಇಲಾಖೆ ನೆಡುವ ಸಸಿಗಳಿಗೆ ಜಿಯೋ ಟ್ಯಾಗಿಂಗ್‌ ಮಾಡಲಾಗುತ್ತಿದೆ.

ಮೈಸೂರು: ಕರ್ನಾಟಕದಲ್ಲಿ ಅರಣ್ಯ ಇಲಾಖೆ ಬರೀ ಸಸಿ ನೆಟ್ಟು ಸುಮ್ಮನೇ ಕೂರುವ ಹಾಗಿಲ್ಲ.ಎಷ್ಟು ಪ್ರಮಾಣದಲ್ಲಿ ಸಸಿಗಳು ಬೆಳೆದವು. ಅವುಗಳ ನಿರ್ವಹಣೆ ಹೇಗಿದೆ. ಅರಣ್ಯ ಇಲಾಖೆ ಸಸಿ ನೆಟ್ಟು ಅದನ್ನು ಬೆಳೆಸುವ ಜವಾಬ್ದಾರಿ ಹೊತ್ತುಕೊಂಡಿದೆಯೋ ಇಲ್ಲವೋ ಎನ್ನುವ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ.ಅದರಲ್ಲೂ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕಿ ಉಳಿದಿವೆ ಎಂದು ತಿಳಿಯಲು ಜಿಯೋ ಟ್ಯಾಗಿಂಗ್ ಮತ್ತು ಆಡಿಟ್ ಮಾಡಲಾಗುತ್ತಿದೆ. ಈ ವರದಿಯನ್ನು 3 ತಿಂಗಳೊಳಗೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಕರ್ನಾಟಕ ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಈ ಗಾಗಲೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನಿಗದಿ ಮಾಡಲಾಗಿದ್ದು. ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನೈಜ ಕಾರ್ಯಕ್ಷಮತೆ ಅಳೆಯಲಾಗುತ್ತದೆ.

ಮೈಸೂರಿನ ಮುಕ್ತಗಂಗೋತ್ರೀಯ ಸಭಾಂಗಣದಲ್ಲಿ ಎಚ್‌.ವಿ. ರಾಜೀವ್ ಸ್ನೇಹ ಬಳಗ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲಕ್ಷ ವೃಕ್ಷ ಯೋಜನಾ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆ , ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಸಚಿವ ಈಶ್ವರ ಖಂಡ್ರೆ ಈ ವಿಷಯವನ್ನು ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಮರಗಿಡಗಳ ಮಹತ್ವವನ್ನು ರಾಜ್ಯ ಸರ್ಕಾರ ಮನಗಂಡಿದ್ದು, ಕಳೆದ ವರ್ಷ ತಾವು ಸಚಿವರಾದ ತರುವಾಯ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿ, 5 ಕೋಟಿ 40 ಲಕ್ಷಕ್ಕೂ ಅಧಿಕ ಸಸಿ ನೆಟ್ಟು ಗುರಿ ಮಾಡಿದ ಸಾಧನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಅವುಗಳ ಆಡಿಟಿಂಗ್‌ ಕೂಡ ನಡೆದಿದೆ. ಎಷ್ಟು ಸಸಿ ಬದುಕುಳಿದಿವೆ, ಸಿಬ್ಬಂದಿ ಶ್ರಮ ಏನು ಎನ್ನುವ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎನ್ನುವುದು ಸಚಿವರ ವಿವರಣೆ.

ಈ ಬಾರಿಯೂ 5 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಪರಿಸರ ಪ್ರೇಮಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನಲ್ಲಿ ಸಸಿ ನೆಡಲು 100 ಕೋಟಿ ರೂ. ಹೆಚ್ಚುವರಿಯಾಗಿ ನೀಡಿದ್ದಾರೆ. ಇರುವುದು ಇದೊಂದೇ ಭೂಮಿ, ಈ ಭೂಮಿಯನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಪರಿಸರ, ಪ್ರಕೃತಿ ಉಳಿಸಬೇಕು. ಮನೆಯ ಮುಂದೆ ಒಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದರು.

ಪ್ರಕೃತಿ ಪರಿಸರ ಉಳಿದರೆ ಮಾತ್ರ ಮಾನವ ಕುಲ ಉಳಿಯಲು ಸಾಧ್ಯ. ಈ ನಿಟ್ಟನಲ್ಲಿ ನೈಸರ್ಗಿಕ ಸಂಪನ್ಮೂಲದ ಹಿತಮಿತ ಬಳಕೆ ಇಂದಿನ ಅಗತ್ಯವಾಗಿದೆ. ನಮ್ಮ ಪೂರ್ವಿಕರು ಗಿಡ, ಮರ, ಬೆಟ್ಟ, ಗುಡ್ಡ, ನದಿಗಳನ್ನು ಪೂಜಿಸುತ್ತಿದ್ದರು. ಬೆಟ್ಟದ ಮೇಲೆ ದೇವಾಲಯ ಕಟ್ಟಿ ಬೆಟ್ಟ ನಾಶವಾಗದಂತೆ ತಡೆದಿದ್ದಾರೆ. ಪ್ರಕೃತಿ ಸಮತೋಲನ ಕಾಪಾಡಿದ್ದಾರೆ. ಪ್ರಕೃತಿ, ಪರಿಸರವನ್ನು ನಾವು ರಕ್ಷಿಸಿದರೆ, ಪ್ರಕೃತಿ, ಪರಿಸರ ನಮ್ಮನ್ನು ರಕ್ಷಿಸುತ್ತದೆ.ಇಂದು ಜಗತ್ತಿನ ಮುಂದಿರುವ ಅತಿ ದೊಡ್ಡ ಸವಾಲು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಾಗಿದೆ. ಹವಾಮಾನ ಬದಲಾವಣೆಯಿಂದ ಋತುಮಾನಗಳಲ್ಲಿ ಬದಲಾವಣೆ ಆಗುತ್ತಿದೆ. ಮಳೆಗಾಲದಲ್ಲಿ ಮಳೆಯಾಗುತ್ತಿಲ್ಲ, ಒಂದೇ ದಿನದಲ್ಲಿ ಒಂದು ತಿಂಗಳ ಪೂರ್ತಿ ಮಳೆ ಸುರಿದು ಅನಾಹುತ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಪರಿಸರದ ಮೇಲಿನ ದೌರ್ಜನ್ಯವನ್ನು ಸ್ವಯಂ ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು.

ಜಾಗತಿಕ ತಾಪಮಾನ ಏರಿಕೆಗೆ ಇಂಗಾಲದ ಡೈಆಕ್ಸೈಡ್, ಹಸಿರು ಮನೆ ಅನಿಲಗಳು ಕಾರಣ. ನಾವು ಹೆಚ್ಚು ಹೆಚ್ಚು ಗಿಡ, ಮರ ಬೆಳೆಸಿದರೆ ಮಾತ್ರವೇ ತಾಪಮಾನ ಏರಿಕೆ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮೈಸೂರಿನ ರಾಜೀವ್ ಸ್ನೇಹ ಬಳಗ ಮಾಡುತ್ತಿರುವ ಕಾರ್ಯ ಅಭಿನಂದನಾರ್ಹ ಮತ್ತು ಅನುಕರಣೀಯ ಎಂಬುದು ಖಂಡ್ರೆ ಅಭಿಮತ.

ಮುಖ್ಯಮಂತ್ರಿಯವರು ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಿದ್ದಾರೆ. ನಮ್ಮ ಪರಿಸರ ಇಲಾಖೆ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ. ಇದಕ್ಕೆ ಜನರೂ ಕೈಜೋಡಿಸಬೇಕು ಮತ್ತು ತಾವು ಏಕ ಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಶಪಥ ಮಾಡಿ ಎಂದು ಹೇಳಿದರು.