Snake Tagging: ಹುಲಿ, ಆನೆಗಳಿಗೆ ರೇಡಿಯೋ ಕಾಲರ್ ಆಯ್ತು, ಈಗ ಹಾವುಗಳಿಗೂ ಟ್ಯಾಗ್ ಅಳವಡಿಕೆ: ಕರ್ನಾಟಕದಲ್ಲಿ ಹೊಸ ಅಧ್ಯಯನ
Snakes research ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕಾಳಿ ಅರಣ್ಯ ಹುಲಿ ಯೋಜನೆಯಡಿ ( Kali Tiger Reserve) ವಿಭಾಗದಲ್ಲಿ ಹಾವುಗಳಿಗೆ ಟ್ಯಾಗಿಂಗ್( Snakes Tagging) ಮಾಡಿ ಅಧ್ಯಯನ ಚಟುವಟಿಕೆಗಳು ಶುರುವಾಗಲಿವೆ. ಕರ್ನಾಟಕ ಅರಣ್ಯ ಇಲಾಖೆಯಡಿ( Karnataka Forest Department) ಇದು ನಡೆಯಲಿದೆ.

ಬೆಂಗಳೂರು: ಹುಲಿ, ಆನೆ, ಚಿರತೆಗಳಿಗೆ ರೇಡಿಯೋ ಕಾಲರ್ ಹಾಕಿ ಸಂಶೋಧನೆ ಮಾಡುವುದು ಗೊತ್ತು, ಅದೇ ರೀತಿ ಹಾವುಗಳಿಗೂ ಟ್ಯಾಗ್ ಅಳವಡಿಸಿ ಸಂಶೋಧನೆ ನಡೆಸುವ ಚಟುವಟಿಕೆ ಕರ್ನಾಟಕದಲ್ಲಿ ಆರಂಭವಾಗಲಿದೆ.
ಇತ್ತೀಚಿನ ವರ್ಷಗಳಲ್ಲಿ ಮಾನವ ಹಾವುಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಹಾವು ಕಡಿತದಿಂದ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಮೃತಪಡುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಈ ಹಿನ್ನೆಲೆಯಲ್ಲಿ ಹಾವುಗಳ ಚಲನವನ್ನು ಪತ್ತೆ ಹಚ್ಚಿ ಮಾನವು ಹಾವುಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಅರಣ್ಯ ಇಲಾಖೆ ಹಾವುಗಳಿಗೆ ನಿಷ್ಕ್ರಿಯ ಇಂಟಿಗ್ರೆಟೆಡ್ ಟ್ರಾನ್ಸ್ ಪಾಂಡರ್(ಪಿಐಟಿ) ಟ್ಯಾಗ್ ಗಳನ್ನು ಅಳವಡಿಸಲು ಅನುಮತಿ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಹಾವುಗಳ ಅಧ್ಯಯನಕ್ಕೆ ಮುಂದಾಗಿದೆ.
ಕಾಳಿ ವಿಭಾಗ ಆಯ್ಕೆ
ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾವುಗಳಿಗೆ ಪಿಐಟಿ ಟ್ಯಾಗ್ ಅಳವಡಿಸಲು ಅನುಮತಿ ಸಿಕ್ಕಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ತರಬೇತಿ ಪಡೆದ ತಜ್ಞರು ತಾವು ರಕ್ಷಿಸಿದ ವಿಷಪೂರಿತ ಮತ್ತು ವಿಷ ರಹಿತ ಸೇರಿದಂತೆ ಎಲ್ಲಾ ರೀತಿಯ ಹಾವುಗಳ ದೇಹದಲ್ಲಿ ಈ ಪಿಐಟಿ ಚಿಪ್ ಗಳನ್ನು ಅಳವಡಿಸಲಿದ್ದಾರೆ.
ಇದರಿಂದ ಹಾವುಗಳು ಮನುಷ್ಯರ ಜೊತೆ ಏಕೆ ಸಂಘರ್ಷಕ್ಕಿಳಿಯುತ್ತದೆ ಎಂದು ಅಧ್ಯಯನ ನಡೆಸಲು ಸಹಾಯಕವಾಗುತ್ತದೆ. ಪ್ರಸ್ತುತ ಮೂರು ಖಾಸಗಿ ಸಂಸ್ಥೆಗಳು ಕಿಂಗ್ ಕೋಬ್ರಾ, ರಸೆಲ್ಸ್ ವೈಪರ್ ಮತ್ತು ಪಿಟ್ ವೈಪರ್ಸ್ ಹಾವುಗಳನ್ನು ಕುರಿತು ಅಧ್ಯಯನ ನಡೆಸುತ್ತಿವೆ.
ಹೆಚ್ಚುತ್ತಿರುವ ಹಾವು ಕಡಿತದ ಸಂಖ್ಯೆ
ಮಾನವ-ವನ್ಯಜೀವಿ ಸಂಘರ್ಷದಲ್ಲಿ ಅತಿ ಹೆಚ್ಚು ಮಾನವರು ಮರಣವನ್ನಪ್ಪುತ್ತಿರುವುದು ಹಾವು ಕಡಿತದಿಂದ ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ 5 ಮಿಲಿಯನ್ ಹಾವು ಕಡಿತದ ವರದಿಗಳಾಗುತ್ತಿದ್ದು, 81,000 ದಿಂದ 1.38 ಲಕ್ಷ ಜನ ಮೃತಪಡುತ್ತಿದ್ದಾರೆ. ಸುಮಾರು 4 ಲಕ್ಷ ಜನರ ಅಂಗಾಂಗಗಳನ್ನು ಕತ್ತರಿಸಿ ಹಾಕಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ದಟ್ಟವಾದ ಅರಣ್ಯವಿದ್ದು, ಅಧ್ಯಯನ ನಡೆಸಲು ಪೂರಕವಾಗಿದೆ ಎಂದು ಭಾವಿಸಲಾಗಿದೆ. ಮಾನವರು ಮತ್ತು ಹಾವುಗಳು ಹೇಗೆ ಜೊತೆಯಾಗಿ ಬದುಕಬಹುದು ಎನ್ನುವುದನ್ನು ಕುರಿತು ಅಧ್ಯಯನ ನಡೆಯಲಿದೆ. ಇಲ್ಲಿ ಬೇಸಿಗೆಯ ಅವಧಿಯಲ್ಲಿ ಪ್ರತಿದಿನ 5-8 ಹಾವುಗಳನ್ನು ರಕ್ಷಿಸಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.
ಸಂಶೋಧನೆ ಹೇಗೆ
ಈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಿಂಗ್ ಕೋಬ್ರಾ ನಾಗರಹಾವು, ಸ್ಪೆಕ್ಟ ಕಲ್ಡ್ ಕೋಬ್ರಾ, ರಸೆಲ್ಸ್ ವೈಪರ್, ಸ್ಕೇಲ್ಡ್ ವೈಪರ್, ವೈನ್ ಹಾವು, ಹಸಿರು ಅಥವಾ ಬಿದಿರು ಹಾವು, ಪೈಥಾನ್, ಇಲಿ ಹಾವು ಸೇರಿದಂತೆ 40 ಬಗೆಯ ಹಾವುಗಳಿವೆ. ಅರಣ್ಯ ಇಲಾಖೆ ಪಿಐಟಿ ಟ್ಯಾಗ್ ಅಳವಡಿಕೆ ಕುರಿತು ಲಿಖಿತ ಆದೇಶ ಲಭ್ಯವಾಗುತ್ತಿದ್ದಂತೆ ವೈಜ್ಞಾನಿಕ ಅಧ್ಯಯನ ಆರಂಭವಾಗಲಿದೆ ಎಂದು ಈ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ್ ಶಿಂಧೆ ತಿಳಿಸಿದ್ದಾರೆ.
ಪಿಐಟಿ ಟ್ಯಾಗ್ ಗಳಿಂದ ಪ್ರತಿಯೊಂದು ಹಾವಿನ ಚಲನೆ ಮತ್ತು ಘರ್ಷಣೆ ತಿಳಿದು ಬರಲಿದೆ. ಜೊತೆಗೆ ಈ ಮಾಹಿತಿ ಆಧಾರದ ಮೇಲೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಹಾವುಗಳಿರಬಹುದು ಎಂಬ ಮಾಹಿತಿ ಲಭ್ಯವಾಗಲಿದೆ. ಹಾವುಗಳ ಗಣತಿ ಆಧಾರದ ಮೆಲೆ ಪರಿಸರದ ಅಧ್ಯಯನಕ್ಕೂ ಸಹಾಯಕವಾಗುತ್ತದೆ. ಪಿಐಟಿ ಟ್ಯಾಗ್ ಗಳು ಸೆರೆ ಹಿಡಿಯುವ ಡಾಟಾ ಆಧರಿಸಿ ಅಧ್ಯಯನ ನಡೆಸಲಾಗುತ್ತದೆ. ಒಟ್ಟಾರೆ ಹಾವುಗಳ ಸಂರಕ್ಷಣೆಯೇ ಇದರ ಮೂಲ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ತಜ್ಞರ ಸಹಕಾರ
ಟೆಲಿಮೆಟ್ರಿಕ್ ಸಂಶೋಧನೆ ಮೂಲಕ ಹಾವುಗಳ ಅಧ್ಯಯನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಅಧ್ಯಯನದ ಮೂಲಕ ಆಗುಂಬೆ ಮಳೆ ಅರಣ್ಯ ಸಂಶೋಧನಾ ಕೇಂದ್ರವು ಕೋಬ್ರಾ ಹಾವನ್ನು ಕುರಿತು ಅನೇಕ ಆಸಕ್ತಿದಾಯಕ ಮಾಹಿತಿಗಳನ್ನು ಕಲೆ ಹಾಕಿದೆ.
ಹುಣಸೂರು ಮೂಲದ ಉರಗ ತಜ್ಞ ಗರ‍್ರಿ ಮಾರ್ಟಿನ್ ಅವರು ವೈಪರ್ ಹಾವಿನ ಅಧ್ಯಯನ ನಡೆಸಿದ್ದು, ಅನೇಕ ರೈತರ ಹಾವಿಗೆ ಈ ಹಾವು ಹೇಗೆ ಕಾರಣವಾಗಿದೆ ಎನ್ನುವುದನ್ನು ಸಂಶೋಧನೆ ನಡೆಸಿದ್ದಾರೆ.
ಗರ‍್ರಿ ಅವರ ಪ್ರಕಾರ ಪಿಐಟಿ ಟ್ಯಾಗ್ ಗಳ ಮೂಲಕ ಪರಿಸರ ಮತ್ತು ಹಾವುಗಳು ಹೇಗೆ ಒಂದು ಪ್ರದೇಶದಲ್ಲಿ ನೆಲೆಗೊಂಡಿರುತ್ತವೆ ಎನ್ನುವುದನ್ನು ತಿಳಿಯಲು ಸಹಾಯಕವಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹಾವುಗಳು ಎಷ್ಟಿರಬಹುದು ಮತ್ತು ಸಾರ್ವಜನಿಕರು ಹೇಗೆ ಎಚ್ಚರದಿಂದಇರಬೇಕು ಎಂದು ತಿಳಿಸಲು ನೆರವಿಗೆ ಬರುತ್ತದೆ ಎನ್ನುತ್ತಾರೆ.
(ವಿಶೇಷ ವರದಿ: ಎಚ್. ಮಾರುತಿ, ಬೆಂಗಳೂರು)
