Water crisis: ಕರ್ನಾಟಕದಲ್ಲಿ ನೀರಿನ ಪರಿಸ್ಥಿತಿ ಹದಗೆಡಲು ಅರಣ್ಯ ಇಲಾಖೆ ನೀತಿ ಕಾರಣವೇ, ತಜ್ಞರು ಹೇಳೋದೇನು?
ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ನೀತಿಯಿಂದಾಗಿ ಅಂತರ್ಜಲ ಕುಸಿದಿದೆಯೇ, ಈ ಕುರಿತು ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ.

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆ ಮುಂಚೆಯೇ ಜಲ ಕಂಟಕ ಕಾಡುತ್ತಿದೆ. ಅದರಲ್ಲೂ ಬೆಂಗಳೂರು ಮಹಾನಗರದಲ್ಲಂತೂ ನೀರಿನ ಬವಣೆ ಅತಿಯಾಗಿದೆ. ಉತ್ತರ ಕರ್ನಾಟಕ ಮಾತ್ರವಲ್ಲದೇ ಮಲೆನಾಡು, ಕರಾವಳಿ, ಹಳೆ ಮೈಸೂರು ಭಾಗದಲ್ಲೂ ಬರದ ವಾತಾವರಣವಿದ್ದು, ನೀರಿನ ಸಮಸ್ಯೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣರು ಯಾರು, ಇದರಲ್ಲಿ ಕರ್ನಾಟಕದ ಅರಣ್ಯ ಇಲಾಖೆಯ ಪಾತ್ರವೂ ಇದೆಯಾ ಎನ್ನುವ ಕುರಿತಾದ ಚರ್ಚೆ ಜೋರಾಗಿದೆ. ನಡೆದಿದೆ. ಬಹುತೇಕರು ಅರಣ್ಯ ಇಲಾಖೆ ಗಿಡ ನೆಡುವ ವಿಚಾರದಲ್ಲಿ ಕಾಳಜಿ ತೋರಿದ್ದರೆ ಅಂತರ್ಜಲದ ಸ್ಥಿತಿ ಈ ಮಟ್ಟಿಗೆ ಆಗುತ್ತಿರಲಿಲ್ಲ ಎನ್ನುವುದು ಚರ್ಚೆಯ ಮುಖ್ಯಾಂಶ.
ಕರ್ನಾಟಕದ ಬರಹಗಾರ ಹಾಗೂ ಚಿತ್ರ ನಿರ್ದೇಶಕ ಕೇಸರಿ ಹರವರು ಅವರು ಫೇಸ್‌ಬುಕ್‌ನಲ್ಲಿ " ಮೂರು ಅಡಿ ಅಗೆದು ಗಿಡ ನೆಟ್ಟಿದ್ದರೆ ಇವಾಗ ಒಂದು ಸಾವಿರ ಅಡಿ ತೆಗೆದು ಬೋರ್‌ವೆಲ್ ಹಾಕುವ ಅವಶ್ಯಕತೆ ಬರುತ್ತಿಲಿಲ್ಲ" ಎನ್ನುವ ಪೋಸ್ಟರ್ ಒಂದನ್ನು ಹಾಕಿದ್ದಾರೆ. ಯಾದಗಿರಿ ಜಿಲ್ಲೆ ಶಹಾಪುರ ವಲಯ ವ್ಯಾಪ್ತಿಯಲ್ಲಿ ಇಂತಹದೊಂದುಗೆ ಫಲಕ ಹಾಕಲಾಗಿದೆ.
ಇದು ಅರಣ್ಯ ಇಲಾಖೆಯ ಎಷ್ಟು ಬೇಜವಾಬ್ದಾರಿ ಮಾತ್ರವಲ್ಲ, ದಗಲುಬಾಜಿ ಹೇಳಿಕೆ ಎಂದರೆ, ಎಲ್ಲ ತಪ್ಪು, ಹೊಣೆಗಳನ್ನು ಜನಸಾಮಾನ್ಯರ ಮೇಲೆ ಹೇರುತ್ತಿದೆ. ಅತಿ ವಾಣಿಜ್ಯದ, ಅದಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರಗಳ ಪಾತ್ರ, ಜವಾಬ್ದಾರಿ ಏನೂ ಇಲ್ಲ ಎನ್ನುವಂತೆ. ಇದು ಇತ್ತೀಚಿನ ಟ್ರೆಂಡ್, ಗಮನಿಸಿ ಎಂದು ಕೇಸರಿ ಹರವು ಅದಕ್ಕೆ ಟಿಪ್ಪಣಿ ಬರೆದಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಿರಿಧಾನ್ಯ ತಜ್ಞ ಜಿ.ಕೃಷ್ಣಪ್ರಸಾದ್, ಅರಣ್ಯ ಇಲಾಖೆ ತನ್ನ ಜವಾಬ್ದಾರಿ ಮರೆತಿದೆ ಎಂಬುದು ನಿಜ. ಆದರೆ ಈ ಗೋಡೆ ಬರಹ ಬರೆಸಿದ ಅಧಿಕಾರಿ ಜನಪರ ಇದ್ದಂತೆ ಕಾಣುತ್ತದೆ. ಸಾಮಾನ್ಯ ಅರಣ್ಯಾಧಿಕಾರಿಗೆ ಇಂಥ ಬರಹ ಕೂಡ ತಲೆಗೆ ಬರದು ಎಂದು ಹೇಳಿದ್ದಾರೆ.
ವಿನಾಶದತ್ತ ನಮ್ಮ ನಡಿಗೆ
ಇದಕ್ಕೆ ಉತ್ತರಿಸಿರುವ ಡಾ. ಕೆ.ಎಸ್.ಜನಾರ್ದನ, ಪರಿಸರದ ವಿಷಯದಲ್ಲಿ ನಮ್ಮೆಲ್ಲರದು ತಪ್ಪಿದೆ. (ಪ್ರಾಮಾಣಿಕ ಕಾಳಜಿ ಇರುವವರನ್ನು ಹೊರತುಪಡಿಸಿ) ನಮ್ಮ ಕಲ್ಯಾಣ ಕರ್ನಾಟಕ ಕಾಡಿಲ್ಲದ ಇಲ್ಲದ ನಾಡು. ಬರದ ನಾಡು. ನಾನು ಕಂಡ ಹಾಗೆ ರಸ್ತೆ ಬದಿಗಳಲ್ಲಿ ಕೆಲವು ವರ್ಷಗಳಿಂದ ಅರಣ್ಯ ಇಲಾಖೆಯವರು ಗಳನ್ನು ಸಸಿ ನೆಡುತ್ತಲೆ ಬಂದಿದ್ದಾರೆ. ಆದರೆ ರಸ್ತೆ ಪಕ್ಕದಲ್ಲಿ ಇರತಕ್ಕಂತ ರೈತರು ತಮ್ಮ ಹೊಲದಲ್ಲಿ ಮರ ಬೆಳೆಯಬಾರದೆಂದು ಮರದ ಕೆಳಗೆ ಬೆಳೆ ಬರುವುದಿಲ್ಲವೆಂದು ಹಚ್ಚಿದ ಕೆಲವೇ ದಿನಗಳಲ್ಲಿ ಮರಗಳನ್ನು ಕಿತ್ತು ಹಾಕುವ ಕೆಲಸ ಮಾಡುತ್ತಿದ್ದರು. ಅರಣ್ಯ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದಾಗ, ಮರಗಳನ್ನು ಕಿತ್ತು ಹಾಕುವುದಿಲ್ಲ ಹಚ್ಚಿದ ಸಸಿಗಳನ್ನು ಇದ್ದಹಾಗೆ ಇರುತ್ತವೆ ಸಸಿಗಳು ನಾಟಿಯಾಗುವುದಿಲ್ಲ ಒಂದು ವಾರದಲ್ಲಿ ಒಣಗಿ ಹೋಗುತ್ತವೆ. ಕಾರಣ ಇಷ್ಟೇ ಸಸಿಗಳನ್ನು ಹಚ್ಚಿದ ತಕ್ಷಣ ಹಚ್ಚಿದ ಜಾಗದಲ್ಲಿಯೇ ಸಸಿಗಳನ್ನು ಕಿತ್ತು ಮತ್ತೆ ಹಾಗೆ ಇಡುವುದರಿಂದ ನೋಡಲು ಸಸಿಗಳು ಕಾಣುತ್ತವೆ. ಆದರೆ ನಾಟಿ ಆಗಿರುವುದಿಲ್ಲ. ಇನ್ನು ಕಾಡು ಕಡಿದವರು ಯಾರು, ಕಾಡನ್ನು ನುಂಗಿದವರು ಯಾರು, ರಸ್ತೆ ಅಗಲೀಕರಣಕ್ಕೆ, ಕಾರಿಡಾರುಗಳನ್ನು ನಿರ್ಮಿಸುವುದಕ್ಕೆ, ಯಾವ್ಯಾವುದೋ ಕಾರಣಕ್ಕೆ ಕಾಡು ಕಡಿಯುತ್ತ ನಡೆದಿದ್ದೇವೆ. ವಿನಾಶದತ್ತ ನಮ್ಮ ನಡಿಗೆ. ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಾಡು ಕಾಯುವ ಕೆಲಸ ಸುಲಭವೇ
ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯರಾಗಿದ್ದ ವಿನೋದ್ ಕುಮಾರ್ ನಾಯಕ್, ಈ ವಿಚಾರದಲ್ಲಿ ಇಡೀ ಅರಣ್ಯ ಇಲಾಖೆಯನ್ನು ದೂಷಿಸುವುದು ಖಂಡಿತಾ ತಪ್ಪು. ಇಲಾಖೆ ಇರೋದ್ರಲ್ಲಿ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಎಲ್ಲಾ ಕಡೆ ಇದ್ದ ಹಾಗೆ ಅಲ್ಲೂ ಕೆಲ ಭ್ರಷ್ಟರು, ಸುಳ್ಳರು ಇದ್ದಾರೆ. ಕಾಡು ಕಾಯುವ ಕೆಲಸ ಅಷ್ಟು ಸುಲಭವಲ್ಲ ಅಂತ ನಿಮಗೂ ಗೊತ್ತಿದೆ ಅಲ್ಲವಾ ಎಂದು ಕೇಸರ ಹರವು ಅವರನ್ನು ಪ್ರಶ್ನಿಸಿದ್ದಾರೆ.
ಕಳವೆ ಕಳವಳ
ಪರಿಸರ ಬರಹಗಾರ ಹಾಗೂ ತಜ್ಞ ಶಿವಾನಂದ ಕಳವೆ ಅವರು, 1994ರಿಂದ ಇಲಾಖೆಯ ವಿವಿಧ ಅಧಿಕಾರಿಗಳಿಗೆ ನಾನು ಬರೆದ ಪತ್ರ, ಅವರ ಉತ್ತರದ ಸಂಗ್ರಹ ಇದೆ. ಪತ್ರ ಹರಿತ್ತು ಅದು! ಆ ಕಾಲದ ಉತ್ತರ, ಸ್ಪಂದನೆ ಈಗಿಲ್ಲ.ಅರಣ್ಯ ಭವನದ ಹಿರಿಯ ಅಧಿಕಾರಿ ದಂಡಿಗೆ ನಿಜವಾದ ಸಮಸ್ಯೆ ಅರಿವಿಲ್ಲ. ಎರಡು ವರ್ಷಗಳ ಹಿಂದೆ ತಂತಿ ಬೇಲಿ ಕಾಂಕ್ರಿಟ್ ಕಂಬದಲ್ಲಿ ಕಾಡು ಬೆಳೆಸಲು ಕೋಟಿ ಕೋಟಿ ಖಾಲಿ ಆಗಿದೆ.ಅನುಭವದಿಂದ ಪಾಠ ಕಲಿಯದ ಇಲಾಖೆ ಜನಿಸಿ ಹತ್ತಿರ ಹತ್ತಿರ 180ವರ್ಷಗಳು ಆಗುತ್ತಿವೆ. ಹಳೆಯ ದಾಖಲೆ, ಸಂಗ್ರಹದ ಆಧಾರದಲ್ಲಿ ಹೇಳುವುದಾದರೆ ಇಲಾಖೆ ಪ್ರಜ್ಞೆ ತಪ್ಪಿದೆ.ಕಾನೂನು. ಬಿಗಿ ಆಗುತ್ತಿದೆ, ಕಾಡು ಖಾಲಿ ಆಗಿದೆ, ವನ್ಯ ಜೀವಿಗಳ ಆವಾಸ, ಆಹಾರದ ಸಮಸ್ಯೆ ಬೆಳೆದಿದೆ. ಸಸಿ ಬೆಳೆಸುವ ನರ್ಸರಿಯವರ ಜ್ಞಾನ, ಕಾಳಜಿ ನಂತರದ ಅಧಿಕಾರಿ ವರ್ಗಕ್ಕೆ ಕಡಿಮೆ. ಅಲ್ಲೊಬ್ಬರು ಇಲ್ಲೊಬ್ಬರು ಉತ್ತಮ ಅಧಿಕಾರಿಗಳು ಇದ್ದಾರೆ, ಹೆಚ್ಚಿನವರು ಕರ್ತವ್ಯ ಮರೆತಿದ್ದಾರೆ.
ಇಲಾಖೆ ತನ್ನ ಕಾರ್ಯ ವೈಖರಿ ಮರೆತಿದೆ, ಖುರ್ಚಿ ಹರಾಜಿಗೆ ಇಟ್ಟಂತೆ ಕಾಣಿಸುತ್ತಿದೆ. ಹತ್ತು ಸಸಿ ಹೆಸರು ಗೊತ್ತಿಲ್ಲದವರು ಅಧಿಕಾರಿಗಳಾಗಿ ನಿಲ್ಲುವುದು, ಕಾಡು ನೋಡದೇ ನೌಕರಿ ಮಾಡುವ ಕರ್ಮ. ಇಲಾಖೆ ಇದ್ದೂ ಹಲವೆಡೆ ಇಲ್ಲದಂತಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಹರಿಹರ ನೀಲಗಿರಿ
ಇದೇ ವಿಚಾರದಲ್ಲಿ ನಾರಾಯಣ ಕೆಂಪಯ್ಯ ಅವರು, ಹರಿಹರ ಪಾಲಿ ಫೈಬರ್ಸ್ ಗೆ ಪಲ್ಪ್ ಸಪ್ಲೈ ಮಾಡಲು 70ರ ದಶಕದಲ್ಲಿ ನೀಲಗಿರಿ ಸಸ್ಯಗಳನ್ನು ಇದೇ ಇಲಾಖೆಯೇ ಉಚಿತವಾಗಿ ಸಸಿಗಳನ್ನು ಹಂಚಿ ಕೋಲಾರ ಜಿಲ್ಲೆಯ ಅಂತರ್ಜಲ ಕುಸಿಯಲು ಕಾರಣವಾಯಿತು. ಇದೇ ಪರಿಸ್ಥಿತಿ ರಾಜ್ಯದ ಅನೇಕ ಕಡೆಗಳಲ್ಲಿ ಆಗಿದೆ. ಸೋಷಿಯಲ್ ಫಾರೆಸ್ಟ್ರಿ ಹೆಸರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಗಳಿಸಿದ್ದು ಬಿಟ್ಟರೆ ಬೇರೇನೂ ಪರಿಸರ ಸ್ನೇಹಿ ಕಾರ್ಯಗಳನ್ನು ಮಾಡಲಿಲ್ಲ. ಅಭಿವೃದ್ಧಿ ಹೆಸರಲ್ಲಿ ರಸ್ತೆ ಅಗಲೀಕರಣ ಮಾಡಲು ಹೋಗಿ ಮೈಸೂರು ಬೆಂಗಳೂರು ರಸ್ತೆಯಲ್ಲಿದ್ದ ಸೊಗಸಾದ ಆಲದ ಮರಗಳನ್ನು ಕತ್ತರಿಸಲಾಯಿತು. ತುಮಕೂರು ಕೋಲಾರ ಭಾಗಗಳಲ್ಲಿದ್ದ ಹುಣಸೆ ಮರಗಳನ್ನು ಕತ್ತರಿಸಲಾಯಿತು. ಇಂತಹ ಭಾನಗಡಿಗಳು ಒಂದೇ ಎರಡೇ! ಸಾವಿರಾರು! ಎಂದು ಟೀಕಿಸಿದ್ದಾರೆ.
ಡಿ.ಶ್ರೀಧರ ಸುಸಾಲಕುಂಟೆ ಅವರು, ಸಾಕಷ್ಟು ಗಿಡ ನೆಡಲಾಗಿದೆ. ಆದರೆ ಪೋಷಣೆ ಇಲ್ಲದೆ ಒಣಗಿ ಹೋಗಿವೆ. ಇದ್ದ ಮರಗಳಲ್ಲಿ ಬಹಳಷ್ಟು ಮರಗಳು ರಸ್ತೆ ಅಗಲೀಕರಣದಲ್ಲಿ ನಾಶವಾಗಿವೆ ಎಂದು ಅಭಿಪ್ರಾಯಿಸಿದ್ದಾರೆ.

ವಿಭಾಗ