ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ಮಳೆಗಾಲ ಬಂತು ಒಂದಾದರೂ ಸಸಿ ನೆಡೋಣ, ಬಿಸಿಲು ಬರದ ಬವಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸೋಣ ಬನ್ನಿ

Forest Tales: ಮಳೆಗಾಲ ಬಂತು ಒಂದಾದರೂ ಸಸಿ ನೆಡೋಣ, ಬಿಸಿಲು ಬರದ ಬವಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸೋಣ ಬನ್ನಿ

Green Intiative ಬೇಸಿಗೆ ಮುಗಿಯಿತು. ಮಳೆಗಾಲ ಬಂತು. ಗಿಡ ನೆಡೋದು ಬರೀ ಅರಣ್ಯ ಇಲಾಖೆ ಕಾಯಕ ಒಂದೇ ಅಲ್ಲ. ನಾವು ಕೈ ಜೋಡಿಸಿದರೆ ನಮಗೂ ನಿರಾಳತೆ. ಪ್ರಕೃತಿಗೆ, ಅರಣ್ಯಕ್ಕೆ ನೀಡುವ ಕೊಡುಗೆಯೂ ಆಗಬಹುದು.

ಹಸಿರನ ಬಲಕ್ಕೆ ನಮ್ಮದು ಜತೆ ಇರಲಿ...
ಹಸಿರನ ಬಲಕ್ಕೆ ನಮ್ಮದು ಜತೆ ಇರಲಿ...

ಈಗ ಕರ್ನಾಟಕದ ಅರಣ್ಯ ಇಲಾಖೆ ಕಚೇರಿಗಳು ಹಾಗೂ ನರ್ಸರಿಗಳ ಕಡೆಗೆ ಹೋದರೆ ಸಸಿ ಕೊಡತೀರೇನ್ರಿ. ನಿಮಗೆ ಎಷ್ಟು ಸಸಿ ಬೇಕ್ರಿ ಎನ್ನುವ ಮಾತುಗಳನ್ನು ಕೇಳುವ ಸಮಯ. ಬರೀ ರೈತರು ಮಾತ್ರವಲ್ಲ,ಮನೆ ಮುಂದೆ ಸಸಿ ನೆಡುವವರೂ ಬರುವುದುಂಟು. ಏಕೆಂದರೆ ಅರಣ್ಯ ಇಲಾಖೆಗೆ ವರ್ಷದಲ್ಲಿ ಆರೇಳು ತಿಂಗಳು ಒಂದು ರೀತಿಯಾದರೆ ಮತ್ತೆ ಆರೇಳು ತಿಂಗಳು ಅರಣ್ಯ ಬೆಳೆಸುವ ಕಾಯಕ. ಅದು ಕಾಡಲ್ಲೇ ಇರಬಹುದು. ಕಾಡಿನಂಚಿನಲ್ಲಿಯೇ ಆಗಬಹುದು. ಇಲ್ಲವೇ ನಗರ ಪ್ರದೇಶ ಇಲ್ಲವೇ ಗ್ರಾಮಾಂತರ ಪ್ರದೇಶವೇ ಇದ್ದಿರಬಹುದು. ಗಿಡ ನೆಡಿ, ಹಸಿರು ಹೆಚ್ಚಿಸಿ. ಅರಣ್ಯ ಉಳಿಸಿ ಎನ್ನುವ ಘೋಷಣೆಗಳೂ ಬರೀ ಮಾತಿನಲ್ಲಿ ಮಾತ್ರವಲ್ಲ ಅಕ್ಷರ ರೂಪದಲ್ಲಿ ಗೋಡೆಗಳಲ್ಲೂ ಕಾಣಸಿಗುತ್ತವೆ. ಏಕೆಂದರೆ ಅರಣ್ಯ ಇಲಾಖೆಯ ಮುಖ್ಯ ಉದ್ದೇಶವೇ ಸಸಿ ನೆಡುವುದು, ಮರ ಬೆಳೆಸುವುದು, ಅರಣ್ಯ ಉಳಿಸುವುದು.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ,ಯಲ್ಲಾಪುರ, ಹೊನ್ನಾವರ, ಕೊಡಗಿನ ವೀರಾಜಪೇಟೆ, ಮೈಸೂರಿನ ಹುಣಸೂರು, ಶಿವಮೊಗ್ಗದ ಸಾಗರ, ಹಾಸನ, ಬೆಂಗಳೂರು ನಗರ ಹೀಗೆ ಯಾವ ವಿಭಾಗಕ್ಕೆ ಹೋದರೂ ಆಯಾ ಪ್ರದೇಶಕ್ಕೆ ಅನುಗುಣವಾಗಿ ಬೆಳೆಯುವ ಸಸ್ಯಗಳ ರಾಶಿಯನ್ನೇ ಕಾಣಬಹುದು. ನರ್ಸರಿಗಳಲ್ಲಿ ಬಗಬಗೆಯ ಸಸಿಗಳು ನಳನಳಿಸುತ್ತಿವೆ. ಸಿಗುವ ಕಡಿಮೆ ಅನುದಾನದಲ್ಲಿಯೇ ನಸರ್ರಿಗಳಲ್ಲಿ ಸಸಿಗಳನ್ನು ಬೆಳೆಸಿ ವಿತರಣೆ ಮಾಡಲಾಗುತ್ತದೆ.

ನಗರ, ಗ್ರಾಮಾಂತರ ಭಾಗಗಳು, ಹೆದ್ದಾರಿಗಳ ಭಾಗದಲ್ಲಿ ಗಿಡ ನೆಡುವ ಕೆಲಸ ಮಾಡಲಿದೆ. ಅದರಲ್ಲಿ ಹಣ್ಣು. ಹೂವು ಬಿಡುವ ಹೂವುಗಳೇ ಹೆಚ್ಚು ರೈತರಿಗೂ ಕೃಷಿ ಪ್ರೋತ್ಸಾಹಕ ಯೋಜನೆ ಕುರಿತು ಮಾಹಿತಿ ನೀಡಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಅರಣ್ಯ ಇಲಾಖೆ ಹಸಿರು ಹಾದಿ

ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಮತ್ತು ಯೋಜನೆಗಳು ಘಟಕವು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುವ 30 ಸಾಮಾಜಿಕ ಅರಣ್ಯ ವಿಭಾಗಗಳನ್ನು ಒಳಗೊಂಡಿದೆ. ಈ ವಿಭಾಗಗಳು ರಾಜ್ಯದಾದ್ಯಂತ ಅರಣ್ಯೇತರ ಭೂಮಿಯನ್ನು ಹಸಿರಾಗಿಸುವ ಗುರಿಯನ್ನು ಹೊಂದಿರುವ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳುತ್ತವೆ.

ಕರ್ನಾಟಕ ಅರಣ್ಯ ಇಲಾಖೆಯು ಸಾಮಾಜಿಕ ಅರಣ್ಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ, ಸಣ್ಣಪುಟ್ಟ ಬೆಟ್ಟಗುಡ್ಡಗಳು, ಗೋಮಾಳಗಳು ಮತ್ತು ಕೆರೆಗಳ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾದ ಸ್ಥಳೀಯ ಜಾತಿಯ ಮರಗಿಡಗಳನ್ನು ವ್ಯಾಪಕವಾಗಿ ಬೆಳೆಸುವುದು ಯೋಜನೆ ಮುಖ್ಯ ಉದ್ದೇಶ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಪರಿಸರ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ, ಮತ್ತು ಜಿಲ್ಲೆಗೊಂದು ಕಾಡು ಬೆಳೆಸುವ ಗುರಿಯೊಂದಿಗೆ 2018-19ನೇ ಸಾಲಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈಗಲೂ ಅದು ಬೇರೆ ಬೇರೆ ರೂಪದಲ್ಲಿ ಮುಂದುವರಿದಿದೆ.

ನಾಲಾ-ಬಂಡ್.ಗಳು, ನದಿ ಪಾತ್ರಗಳು, ಶಾಲೆ / ಕಾಲೇಜು ಕಾಂಪೌಂಡ್.ಗಳು, ಸಾಂಸ್ಥಿಕ ಭೂಮಿಗಳು, ಗೋಮಾಳ ಭೂಮಿಗಳು ಮುಂತಾದ ಖಾಲಿ ಭೂಮಿಗಳಲ್ಲಿ ನೆಡುತೋಪುಗಳನ್ನು ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಅಂತಹ ಕೆಲಸಗಳ ಮೂಲಕ, ಸಾಮಾಜಿಕ ಅರಣ್ಯ ಘಟಕವು ನಿರುದ್ಯೋಗಿಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಘಟಕವು ರಾಜ್ಯದ ಎಲ್ಲಾ ಪ್ರಾದೇಶಿಕ ವಿಭಾಗಗಳಲ್ಲಿ ಹಲವಾರು ಅರಣ್ಯೀಕರಣ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ಹೊಂದಿದೆ ಎನ್ನುವುದು ಮೈಸೂರಿನ ಹಿರಿಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್‌ ಅವರು ನೀಡುವ ವಿವರಣೆ.

ಪರಿಸರ ಯೋಜನೆಯ ಫಲಾಫಲ

ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಭಾರತ ಸರ್ಕಾರದ ಅರಣ್ಯ, ಪರಿಸರ ಹಾಗು ಹವಮಾನ ಇಲಾಖೆ ರಾಷ್ಟ್ರೀಯ ಹವಾಮಾನ ಬದಲಾವಣೆ ಕಾರ್ಯಯೋಜನೆಯಲ್ಲಿ ಪ್ರಾರಂಭಿಸಿದ ಎಂಟು ಅಭಿಯಾನಗಳಲ್ಲಿ ಹಸಿರು ಭಾರತ ಅಭಿಯಾನ ಒಂದಾಗಿದೆ. ಈ ಅಭಿಯಾನವನ್ನು ದಶಕದ ಹಿಂದೆಯೇ ಕ್ಷೀಣಿಸುತ್ತಿರುವ ಅರಣ್ಯಗಳ ರಕ್ಷಣೆ, ಪುನರ್ ಉತ್ಪತ್ತಿ, ಹಾಗೂ ಉಪಶಮನ ಕ್ರಮಗಳ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸಲು ಉದ್ದೇಶಿಸಿ ಆರಂಭಿಸಲಾಗಿದೆ. ಈ ಯೋಜನೆ 10 ವರ್ಷಗಳ ಅವಧಿಯಲ್ಲಿ ಐದು ದಶ ಲಕ್ಷ ಹೆಕ್ಟರ್ ಅರಣ್ಯ/ಅರಣ್ಯೇತರ ಭೂಮಿಯಲ್ಲಿ ಅರಣ್ಯ/ವೃಕ್ಷಗಳ ಹೊದಿಕೆಯ ಹೆಚ್ಚಳ ಮತ್ತು ಐದು ದಶ ಲಕ್ಷ ಹೆಕ್ಟರ್ ಅರಣ್ಯ/ಅರಣ್ಯೇತರ ಭೂಮಿಯಲ್ಲಿ ಅರಣ್ಯ ಹೊದಿಕೆಯ ಗುಣಮಟ್ಟವನ್ನು ಸುಧಾರಿಸುವ ವಿಶಾಲ ಗುರಿಯನ್ನು ಹೊಂದಿದೆ. ಈ ಅಭಿಯಾನ ಹಸರೀಕರಣವನ್ನು ಸಮಗ್ರ ದೃಷ್ಟಿಯಿಂದ ಕಾಣುವುದನ್ನು ಪ್ರತಿಪಾದಿಸುತ್ತದೆ. ಇಂಗಾಲವನ್ನು ಇಂಗಿಸುವ ಗುರಿಗಳಲ್ಲದೇ ಇತರೆ ಸೇವೆಗಳ ಮುಖಾಂತರ ಮುಖ್ಯವಾಗಿ ಜೀವವೈವಿಧ್ಯತೆ, ಜಲ ಸಂರಕ್ಷಣಾ ಸೇವೆಗಳೊಂದಿಗೆ ಮೇವು, ಉರವಲು, ನಾಟ, ನಾಟವಲ್ಲದ ಉತ್ಪನ್ನ ಗಳ ಸುಧಾರಣೆಯೊಂದಿಗೆ ಹಸರೀಕರಣ ಗುರಿ ಸಾಧಿಸುವುದ ಗುರಿಯೊಂದಿಗೆ ಕೆಲಸ ಮಾಡಿದೆ. ಇನ್ನೂ ಕೆಲವೆಡೆ ಕೆಲಸಗಳು ಆಗುತ್ತಿವೆ.

ಪರಿಸರ ಬಳಗದ ಎಂಟಂಶದ ಎಚ್ಚರಿಕೆ

ಪರಿಸರ ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗಕ್ಕೆ ಹೇಗೆ ಸಮತೋಲಿತ ಆಹಾರ, ವ್ಯಾಯಾಮ, ವಿಶ್ರಾಂತಿ ಅಗತ್ಯವೊ, ಪರಿಸರದ ಸ್ವಾಸ್ಥ್ಯಕ್ಕೆ ಗಿಡ- ಮರ, ಅರಣ್ಯ, ವನ್ಯಜೀವಿಗಳನ್ನೊಳಗೊಂಡ ಜೀವವೈವಿಧ್ಯ ಅಗತ್ಯ ಎನ್ನುವುದು ಈ ಕುರಿತು ಜಾಗೃತಿ ಮೂಡಿಸುತ್ತಿರುವ ಪರಿಸರ ಪರಿವಾರದ ವಾದವೂ ಹೌದು.

ನಾವು ಹೆಚ್ಚು ಗಿಡ- ಮರಗಳನ್ನು ನೆಟ್ಟು ಬೆಳಸಬೇಕು ಎನ್ನುವ ಎಂಟು ಅಂಶಗಳನ್ನು ಪರಿಸರ ಪರವಾರ ಬಳಗವು ಪಟ್ಟಿ ಮಾಡಿದೆ.

1. ಹವಾಮಾನ ಬದಲಾವಣೆಯನ್ನು ಎದುರಿಸಲು: ಮರಗಳು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ.

2. ಗಾಳಿಯ ಗುಣಮಟ್ಟವನ್ನು ಸುಧಾರಿಸಲು: ಮರಗಳು ವಾತಾವರಣದ ಇಂಗಾಲವನ್ನು ಹೀರುವ ಮೂಲಕ ಹೀರಿಕೊಳ್ಳುತ್ತವೆ. ಈ ಮೂಲಕ ನಾವು ಸೇವಿಸುವ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಉಸಿರಾಟದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

3. ಮಣ್ಣಿನ ಸವಕಳಿಯನ್ನು ತಡೆಗಟ್ಟಲು: ಮರಗಳು ಮಣ್ಣನ್ನು ಸ್ಥಿರಗೊಳಿಸಲು ಮತ್ತು ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಭೂಕುಸಿತ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ರಕ್ಷಿಸುತ್ತದೆ.

4. ವನ್ಯಜೀವಿಗಳಿಗೆ ಆವಾಸಸ್ಥಾನವನ್ನು ಒದಗಿಸಲು: ಮರಗಳು ಪಕ್ಷಿಗಳು, ಕೀಟಗಳು ಮತ್ತು ಇತರ ವನ್ಯಜೀವಿಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತವೆ. ಕಾಡಿನಲ್ಲಿ ಸಹಜವಾಗಿ ಹೊಅ ಗಿಡಗಳು ಹುಟ್ಟಿ ಬೆಳದರೂ, ಕಾಎಇನ ಹೊರಗಿನ ಪರಿಸರದಲ್ಲಿ ಇದನ್ನು ನಾವು ಮಾಡಬೇಕಾಗುತ್ತದೆ. ಆ ಮೂಲಕ ಕಾಡಿನ ಹೊರಗಿನ ಪರಿಸರದಲ್ಲ ಜೀವವೈವಿಧ್ಯವನ್ನು ಪೋಸಿಸುವ, ವನ್ಯಜೀವಿಗಳಿಗೆ ಬೇಕಾದ ಆವಾಸಸ್ಥಾನ ನಿರ್ಮಾಣ ಸಾಧ್ಯವಾಗುತ್ತದೆ‌.

5. ನಮ್ಮ ಸುತ್ತಮುತ್ತಲಿನ ಸೌಂದರ್ಯವನ್ನು ಹೆಚ್ಚಿಸಲು: ಗಿಡಮರಗಳ ಪ್ರಕೃತಿಗೆ ಕಳೆ ನೀಡುತ್ತವೆ. ಈ ಹಸಿರ ಕಳೆ ಗಿಡ- ಮರ ಬಿಟ್ಟು ಬೇರೆ ಯಾವುದರಿಂದಲೂ ಸಾಧ್ಯವಾಗುವುದಿಲ್ಲ.

6. ಆಸ್ತಿ ಮೌಲ್ಯವನ್ನು ಹೆಚ್ಚಿಸುತ್ತವೆ. ಹೊಲಗದ್ದೆಗಳಲ್ಲಿ, ನಿವೇಶನಗಳಲ್ಲಿ ಕೃಷಿ ಅರಣ್ಯ ಹಿನ್ನಲೆಯ ನಾಟ, ಫಲ ನೀಡುವ ಮರಗಳನ್ನು ಬೆಳಸುವುದರಿಂದ ಅವುಗಳ ಮೌಲ್ಯ ಸಹಜವಾಗೆ ವೃದ್ಧಿಸುತ್ತದೆ.

7. ನೆರಳು ಮತ್ತು ತಂಪನ್ನು ಒದಗಿಸಲು: ಗಿಡ- ಮರಗಳು ನೆರಳು ಮತ್ತು ತಂಪಿನ ವಾತಾವರಣಕ್ಕೆ‌ ಮೂಲ. ಪ್ರತಿ ವರ್ಷದ ಬೇಸಿಗೆಯಲ್ಲಿ ವಾತಾವರಣದ ಉಷ್ಣಾಂಶ ವ್ಯಾಪಕವಾಗಿ ವೃದ್ಧಿಯಾಗುತ್ತಿತುವಾಗ ಗಿಡಮರಗಳ ಬೆಳೆಸುವಿಕೆ ಹೆಚ್ಚಾಗಬೇಕಿದೆ.

8. ಉತ್ತಮ ಹವ್ಯಾಸಕ್ಕೊಂದು ಮಾರ್ಗ: ಗಿಡ- ಮರಗಳನ್ನು ನೆಟ್ಟು ಪೋಷಿಸುವುದು ಜಗತ್ತಿನ ಶ್ರೇಷ್ಠ ಹವ್ಯಾಸಗಳಲ್ಲೊಂದು. ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಅತ್ಯಂತ ಪೂರಕ.

ಭಾರತದಲ್ಲಿ ಸಸ್ಯ ಯೋಜನೆಗಳೇನೂ ವಿಶಾಲ ಆಶಯಗಳೊಂದಿಗೆ ಜಾರಿಯಾಗುತ್ತದೆ. ಫಲಿತಾಂಶ ಶೇ. 25 ರಷ್ಟು ಜಾರಿಗೊಂಡರೆ ಅದೇ ಹೆಚ್ಚು.ಈ ವರ್ಷದ ಸಸ್ಯ ಯಜ್ಞವೂ ಆರಂಭವಾಗುವ ಸಮಯವಿದು. ಈ ಬಾರಿಯಂತೂ ಭೀಕರ ಬರಗಾಲದ ಸನ್ನಿವೇಶ, ಇದರಿಂದಾದ ತೊಂದರೆಗಳು, ಬೆಂಕಿಯಿಂದ ಆದ ಅರಣ್ಯನಾಶದಂತಹ ಬೆಳವಣಿಗೆಗಳನ್ನು ಗಮನಿಸಿದ್ದೇವೆ. ಈಗಾಗಲೇ ಕನಿಷ್ಠ ಒಂದು ಸಸಿಯನ್ನಾದರೂ ಬೆಳೆಸಿ ಪೋಷಿಸೋಣ ಎನ್ನುವ ಭಾವನೆ ಮೂಡಿದರೆ ಅದೇ ನಿಜವಾದ ಅರಣ್ಯೀಕರಣ. ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯಗಳಿಗೆ ನಾವು ನೀಡುವ ಉತ್ತರ.

-ಕುಂದೂರು ಉಮೇಶಭಟ್ಟ, ಮೈಸೂರು

 

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)