Forest News: ಕರ್ನಾಟಕದಲ್ಲಿ ಶ್ರೀಗಂಧ ಬೆಳೆಯಲು ಮತ್ತಷ್ಟು ಉತ್ತೇಜನ, ಶ್ರೀಗಂಧ ವೃಕ್ಷ ಸಂರಕ್ಷಣೆಗೆ ಕಾರ್ಯ ಯೋಜನೆ
Sandalwood ಕರ್ನಾಟಕ ಅರಣ್ಯ ಇಲಾಖೆಯು ಶ್ರೀಗಂಧ ಬೆಳೆಗಾರರಿಗೆ ಹೆಚ್ಚು ಬೆಳೆಯಲು ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಸಂಸ್ಥೆ ಸಹಕಾರದೊಂದಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.
ಬೆಂಗಳೂರು: ಕರ್ನಾಟಕವನ್ನು ಶ್ರೀಗಂಧದ ಬೀಡು ಎಂದೇ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಅನಾದಿ ಕಾಲದಿಂದಲೂ ಬೆಳೆಯುತ್ತಿರುವ ಶ್ರೀಗಂಧ ಶ್ರೇಷ್ಠವಾದದ್ದು. ಭಾರತ ಮಾತ್ರವಲ್ಲದೇ ಹೊರ ದೇಶಗಳಿಗೂ ಶ್ರೀಗಂಧದ ಬೇಡಿಕೆ ಇದೆ. ಇದರ ನಡುವೆ ಕರ್ನಾಟಕವು ಈ ಹಿಂದೆ ಶ್ರೀಗಂಧ ಬೆಳೆಯಲು ಇದ್ದ ನೀತಿಗಳನ್ನು ಸರಳಗೊಳಿಸಿದ್ದು ಈಗಲೂ ಅದು ಮುಂದುವರೆದಿದೆ. ಇದರಿಂದ ಶ್ರೀಗಂಧ ಬೆಳೆಯುವ ಪ್ರಮಾಣ ಅಧಿಕವಾಗಿದೆ. ಕರ್ನಾಟಕ ಅರಣ್ಯ ಇಲಾಖೆ ಇನ್ನಷ್ಟು ಶ್ರೀಗಂಧ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಟ್ಟು ಬೆಳೆಸುತ್ತಿರುವ ಶ್ರೀಗಂಧ ಮತ್ತು ಅರಣ್ಯದಲ್ಲಿನ ಶ್ರೀಗಂಧ ಮರಗಳ ಸಂರಕ್ಷಣೆಗೆ ಕಾರ್ಯ ಯೋಜನೆ ರೂಪಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಅಧ್ಯಕ್ಷರೂ ಆಗಿರುವ ಮುದ್ದೆಬಿಹಾಳದ ಶಾಸಕ ಸಿ.ಎಸ್. ಅಪ್ಪಾಜಿ ನಾಡಗೌಡರೊಂದಿಗೆ ಬುಧವಾರ ನಡೆದ ಸಭೆಯ ಸಂದರ್ಭದಲ್ಲಿ ಸಚಿವರು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಕೆ.ಎಸ್.ಡಿ.ಎಲ್.ಗೆ ಶ್ರೀಗಂಧವೇ ಮೂಲಾಧಾರವಾಗಿದ್ದು, ತನ್ನ ಲಾಭದ ಅನುದಾನದ ಅಡಿಯಲ್ಲಿ ಪ್ರತಿ ವರ್ಷ 1 ಲಕ್ಷ ಶ್ರೀಗಂಧ ಸಸಿ ನೆಡಲು ಅರಣ್ಯ ಇಲಾಖೆಗೆ 50 ಲಕ್ಷ ರೂಪಾಯಿ ನೀಡಲಿದೆ ಎಂದು ಕೆ.ಎಸ್.ಡಿ.ಎಲ್. ಅಧ್ಯಕ್ಷರು ಮಾಹಿತಿ ನೀಡಿದರು.
ಶ್ರೀಗಂಧ ಕಳವಾಗದಂತೆ ನಿಯಂತ್ರಿಸುವ ಅಗತ್ಯ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ನೆಟ್ಟಿರುವ ಮತ್ತು ಅರಣ್ಯದೊಳಗೆ ಬೆಳೆದಿರುವ ಕಟಾವು ಮಾಡಬಹುದಾದ ಬಲಿತ ಮರಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲು ಸಿದ್ಧ ಎಂದು ಅಧ್ಯಕ್ಷರು ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಶ್ರೀಗಂಧ ಕಳುವಾಗದಂತೆ ತಡೆಯಬಹುದು. ಈಗಾಗಲೇ ಅರಣ್ಯ ಇಲಾಖೆ ಇಂತಹ ಪ್ರಯೋಗ ಮಾಡಿದ್ದು ಯಶಸ್ಸು ಲಭಿಸಿದೆ. ಬಾರ್ ಕೋಡ್ ಅಳವಡಿಸಿ ಶ್ರೀಗಂಧ ಕಳವು ತಡೆಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ರೈತರಿಗೆ ಶ್ರೀಗಂಧ ಬೆಳೆಯುವ ಕುರಿತಂತೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಬೆಳೆಯುವ ವಿಧಾನದ ಕುರಿತಂತೆ ತಿಳಿಯಪಡಿಸಲು ಕೃಷಿ ಇಲಾಖೆ, ಧಾರವಾಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕಾರ್ಯಾಗಾರ ಏರ್ಪಡಿಸಲೂ ನಿರ್ಧರಿಸಲಾಯಿತು.
ಕರ್ನಾಟಕದಲ್ಲಿ ಶಿವಮೊಗ್ಗ, ಚಾಮರಾಜನಗರ, ಹಾಸನ, ಮೈಸೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಶ್ರೀಗಂಧ ಬೆಳೆಯಲಾಗುತ್ತಿದೆ. ಗುಜರಾತ್ ಸೇರಿದಂತೆ ನಾನಾ ರಾಜ್ಯಗಳಿಗೆ ಶ್ರೀಗಂಧ ಸರಬರಾಜು ಆಗುತ್ತಿದೆ. ಕರ್ನಾಟಕದಲ್ಲಿ ಶ್ರೀಗಂಧದ ಎಣ್ಣೆ ಕಾರ್ಖಾನೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ ಗುಣಮಟ್ಟದ ಶ್ರೀಗಂಧ ನೀಡಲಾಗುತ್ತಿದೆ. ಇದನ್ನು ಇನ್ನಷ್ಟು ಹೆಚ್ಚಿಸಿ ಉದ್ಯಮ ಹಾಗೂ ರೈತರಿಗೆ ಒಳಿತು ಮಾಡುವ ಉದ್ದೇಶದಿಂದ ವಿಸ್ತರಣೆ ಗುರಿ ಹೊಂದಲಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಕರ್ನಾಟಕದಲ್ಲಿ ತೊಂಬತ್ತರ ದಶಕದಲ್ಲಿ ಅರಣ್ಯ ಹಾಗೂ ಪರಿಸರ ಇಲಾಖೆ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಫ್‌ಎಸ್ ಅಧಿಕಾರಿ ಎ.ಸಿ.ಲಕ್ಷ್ಮಣ ಅವರು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರೊಂದಿಗೆ ಚರ್ಚಿಸಿ ಶ್ರೀಗಂಧ ಬೆಳೆಯಲು ಇದ್ದ ನಿಯಮಾವಳಿಗಳನ್ನು ಸರಳೀಕರಿಸಲು ಶ್ರಮಿಸಿದ್ದರು. ಈಗಲೂ ಉದ್ಯಮ, ಬೆಳೆಗಾರರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಗಂಧ ಬೆಳೆಗಾರರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಮರ ತಂತ್ರಜ್ಞಾನ ಸಂಸ್ಥೆ ಚಿಪ್ ತಯಾರಿಸಲು ಕೂಡ ಅವರ ಸಹಕಾರವಿದೆ.