Forest News: ಕಸದಿಂದ ರಸ, ಆದಿವಾಸಿಗಳು ತಯಾರಿಸುವ ಲಂಟಾನ ಉತ್ಪನ್ನಗಳಿಗೆ ಅರಣ್ಯಇಲಾಖೆ ಆರ್ಥಿಕ ನೆರವು
ಕನ್ನಡ ಸುದ್ದಿ  /  ಕರ್ನಾಟಕ  /  Forest News: ಕಸದಿಂದ ರಸ, ಆದಿವಾಸಿಗಳು ತಯಾರಿಸುವ ಲಂಟಾನ ಉತ್ಪನ್ನಗಳಿಗೆ ಅರಣ್ಯಇಲಾಖೆ ಆರ್ಥಿಕ ನೆರವು

Forest News: ಕಸದಿಂದ ರಸ, ಆದಿವಾಸಿಗಳು ತಯಾರಿಸುವ ಲಂಟಾನ ಉತ್ಪನ್ನಗಳಿಗೆ ಅರಣ್ಯಇಲಾಖೆ ಆರ್ಥಿಕ ನೆರವು

Tribal Talent ಕರ್ನಾಟಕದ ಅರಣ್ಯದಲ್ಲಿ ವನ್ಯಜೀವಿಗಳಿಗೆ ಕಂಟಕವಾಗಿರುವ ಲಂಟಾನ ಕಳೆ ಬಳಸಿ ಆದಿವಾಸಿಗಳು ರೂಪಿಸಿರುವ ಆನೆ, ಕಾಡೆಮ್ಮೆ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದಿದೆ.

ಆದಿವಾಸಿ ಯುವಕರು ಲಂಟಾನದಿಂದ ತಯಾರಿಸಿದ ಕಾಡೆಮ್ಮೆ, ಆನೆಗಳ ಕಲಾಕೃತಿಗಳನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಚಿವ ಈಶ್ವರ ಖಂಡ್ರೆ ವೀಕ್ಷಿಸಿದರು.
ಆದಿವಾಸಿ ಯುವಕರು ಲಂಟಾನದಿಂದ ತಯಾರಿಸಿದ ಕಾಡೆಮ್ಮೆ, ಆನೆಗಳ ಕಲಾಕೃತಿಗಳನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಚಿವ ಈಶ್ವರ ಖಂಡ್ರೆ ವೀಕ್ಷಿಸಿದರು.

ಬೆಂಗಳೂರು: ಬಂಡೀಪುರ, ಬಿಳಿಗಿರಿರಂಗನಬೆಟ್ಟ ಸೇರಿ ಕರ್ನಾಟಕದ ಅರಣ್ಯದೊಳಗೆ ಅಗಾಧವಾಗಿ ಬೆಳೆದಿರುವ ಲಂಟಾನದಿಂದ ಕರಕುಶಲ ವಸ್ತುಗಳ ತಯಾರಿ ಮಾಡಲಾಗುತ್ತಿದೆ. ಅದರಲ್ಲೂ ಅರಣ್ಯ ಇಲಾಖೆಯು ಸ್ಥಳೀಯ ಗಿರಿಜನರ ಕೌಶಲ್ಯಗಳನ್ನು ಬಳಸಿಕೊಂಡು ಆನೆ, ಕಾಡೆಮ್ಮೆ, ಪೀಠೋಪಕರಣಗಳನ್ನು ನಿರ್ಮಿಸುತ್ತಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಕಸವನ್ನು ರಸವಾಗಿಸಿ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರೂಪಿಸಿರುವ ಈ ಯೋಜನೆಗೆ ಆರ್ಥಿಕ ನೆರವು ಕರ್ನಾಟಕ ಇಲಾಖೆಯೇ ಮುಂದೆ ಬಂದಿದೆ. ಇದಕ್ಕಾಗಿ ಒಂದು ಕೋಟಿ ರೂ.ವರೆಗೂ ಆರ್ಥಿಕ ನೆರವನ್ನು ಇಲಾಖೆ ಇಂತಹ ಪ್ರಯೋಗ ಮಾಡುತ್ತಿರುವ ಅರಣ್ಯ ವಿಭಾಗಗಳಿಗೆ ಹಂಚಿಕೆ ಮಾಡಲಿದೆ.

ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಗುರುವಾರ ಲಂಟಾನ ಕಡ್ಡಿಗಳಿಂದ ತಯಾರಿಸಿದ ಕಾಡೆಮ್ಮೆ ಮತ್ತು ಆನೆಯ ಆಕೃತಿಗಳನ್ನು ಅನಾವರಣ ಮಾಡಲಾಯಿತು. ಕಳೆದ ಇಪ್ಪತ್ತು ದಿನಗಳಿಂದ ಬೆಂಗಳೂರಿನ ಲಾಲ್‌ಬಾಗ್‌ ನಲ್ಲಿ ಪ್ರದರ್ಶನ ನಡೆಯುತ್ತಿದ್ದು. ಮಾರ್ಚ್‌3ರವರೆಗೂ ಇರಲಿದೆ.

ಈ ವಿಶೇಷ ಆಕೃತಿಗಳನ್ನು ಕಂಡು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ಖುಷಿಯಾದರು. ಅಲ್ಲದೇ ಅಲ್ಲಿಗೆ ಬಂದಿದ್ದ ಆದಿವಾಸಿ ಕಲಾವಿದರು, ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಯಾವ ರೀತಿಯಲ್ಲಿ ತಯಾರಿಸುತ್ತಾರೆ ಎನ್ನುವ ಮಾಹಿತಿಯನ್ನೂ ಸಚಿವರು ಪಡೆದುಕೊಂಡರು.

ಈ ವೇಳೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಅರಣ್ಯದಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಮಾರಕವಾಗಿರುವ ಲಂಟಾನ ಕಳೆಯಿಂದ ಆನೆ, ಕಾಡೆಮ್ಮೆ, ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಆದಿವಾಸಿ ಸಮುದಾಯದವರಿಗೆ ತರಬೇತಿ ಮತ್ತು ಪೋತ್ಸಾಹ ನೀಡಲು 1 ಕೋಟಿ ರೂ. ನೆರವು ನೀಡುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಮುಳ್ಳಿನಿಂದ ಕೂಡಿದ ಲಾಂಟನಾ ರಾಜ್ಯದ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟ ಮೊದಲಾದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ವ್ಯಾಪಿಸಿದ್ದು, ಇದರಿಂದ ಆನೆ, ಜಿಂಕೆ ಇತ್ಯಾದಿ ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲೂ ಸಿಗದಂತಾಗಿದೆ. ಹೀಗಾಗಿ ಈ ಕಳೆಯನ್ನು ತೆಗೆಯುವುದು ಅನಿವಾರ್ಯವಾಗಿದ್ದು, ಆದಿವಾಸಿಗಳ ನೆರವಿನಿಂದ ಈ ಕಳೆ ತೆಗೆಸಿ, ಅಲಂಕಾರಿಕ ವಸ್ತು ತಯಾರಿಸಿದರೆ ಅದರಿಂದ ಜೀವನೋಪಾಯವೂ ಆಗುತ್ತದೆ, ಕಾಡಿನ ಕಳೆಯ ಸಮಸ್ಯೆಗೂ ಪರಿಹಾರ ಲಭಿಸುತ್ತದೆ ಎನ್ನುವುದು ಅವರ ಸಲಹೆ.

ಲಂಟಾನಾದಿಂದ ತಯಾರಿಸಿದ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಮತ್ತು ವನ್ಯಜೀವಿ ಆಕೃತಿಗಳಿಗೆ ದೇಶದಾದ್ಯಂತ ಅಷ್ಟೇ ಅಲ್ಲ ವಿದೇಶದಲ್ಲಿಯೂ ಬೇಡಿಕೆ ಸೃಷ್ಟಿಸಲು ವ್ಯಾಪಕ ಪ್ರಚಾರ ನೀಡುವ ಮತ್ತು ಆನ್ ಲೈನ್ ಮೂಲಕ ಮಾರಾಟ ಮಾಡಲು ವೇದಿಕೆ ಕಲ್ಪಿಸಲು ಕ್ರಮ ವಹಿಸುವ ಸಾಧ್ಯತೆಗಳ ಕುರಿತಂತೆ ವರದಿ ಸಲ್ಲಿಸಲು ಸ್ಥಳದಲ್ಲಿ ಹಾಜರಿದ್ದ ವನ್ಯಜೀವಿ ವಿಭಾಗದ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರಿಗೆ ಸೂಚನೆ ನೀಡಿದರು.

ಲಂಟಾನ ವಿದೇಶದಿಂದ ನಮ್ಮ ದೇಶಕ್ಕೆ ಆಗಮಿಸಿದ ಕಳೆಯಾಗಿದೆ. ಇದು ಕಾಡನ್ನು ರಕ್ತ ಬೀಜಾಸುರನಂತೆ ಆವರಿಸುತ್ತಿದ್ದು ಇದನ್ನು ವೈಜ್ಞಾನಿಕವಾಗಿ ನಿರ್ಮೂಲನೆ ಮಾಡುವ ಅಗತ್ಯವಿದೆ. ಲಂಟಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬುಡಸಮೇತ ತೆಗೆದು ಕಲಾಕೃತಿ ರಚಿಸಲು ಬುಡಕಟ್ಟು ಮತ್ತು ಆದಿವಾಸಿಗಳಿಗೆ ಸೂಕ್ತ ತರಬೇತಿ ನೀಡಿದರೆ ಸಾವಿರಾರು ಜನರಿಗೆ ಉದ್ಯೋಗಾವಕಾಶ ಲಭಿಸುತ್ತದೆ. ಲಂಟಾನ ಸಮಸ್ಯೆಯೂ ಪರಿಹಾರವಾಗುತ್ತದೆ ಎಂದು ಹೇಳಿದರು.

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಮನುಷ್ಯನಂತೆಯೇ ಬದುಕುವ ಹಕ್ಕಿದೆ. ಕಾಡಿನಂಚಿನಲ್ಲಿದ್ದ ನಮ್ಮ ಪೂರ್ವಿಕರು ಸೂಕ್ಷ್ಮ ಸಂವೇದಿಗಳಾಗಿದ್ದರು. ಅವರು ವನ್ಯಜೀವಿಗಳೊಂದಿಗೆ ಸಹಬಾಳ್ವೆಯಿಂದ ಬದುಕುವುದನ್ನು ಅರಿತಿದ್ದರು. ಇಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ . ಅವರ ಬದುಕಿಗೆ ಸರ್ಕಾರ ಎಲ್ಲ ರೀತಿಯಲ್ಲೂ ನೆರವು ನೀಡಲಿದೆ ಎನ್ನುವುದು ಸಚಿವ ಅಭಯ.

Whats_app_banner