Forest Tales: ಅರಣ್ಯ ಪ್ರದೇಶದಲ್ಲಿಯೇ ಗಣ್ಯರ ವಿಮಾನ, ಹೆಲಿಕಾಪ್ಟರ್ ಪತನ ಹೆಚ್ಚು ಏಕೆ?
Air Tragedy in Forests ವಿಮಾನ ಇಲ್ಲವೇ ಹೆಲಿಕಾಪ್ಟರ್ ಪತನ(Airplane/Helicopter) ಗೊತ್ತೇ ಇದೆ. ಇವುಗಳು ಅರಣ್ಯ ಭಾಗದಲ್ಲಿ ಅದರಲ್ಲೂ ದಟ್ಟಡವಿಯಲ್ಲಿ ಪತನವಾಗುವುದರೂ ಏಕೆ? ಇಲ್ಲಿದೆ ಈ ವಾರದ ಕಾಡಿನ ಕಥನದಲ್ಲಿ ಉತ್ತರ.
ಮೂರು ದಿನದ ಹಿಂದೆ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ(Ebrahim Raisi) ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದರು. ಅವರೊಂದಿಗೆ ವಿದೇಶಾಂಗ ಸಚಿವರು, ಅಧಿಕಾರಿಗಳು, ಆಪ್ತ ಸಹಾಯಕರೂ ಇದ್ದರು. ಇರಾನ್‌ನ ದಟ್ಟ ಮಂಜು ಆವರಿಸಿದ್ದ ಕಣಿವೆಯಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಒಂದು ದಿನದ ನಂತರ ಹೆಲಿಕಾಪ್ಟರ್ ಅವಶೇಷಗಳು ಸಿಕ್ಕಿದವು, ದಟ್ಟ ಅರಣ್ಯ ಪ್ರದೇಶ ತಲುಪಲು ಇರಾನ್ ಸಿಬ್ಬಂದಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಮೂರು ವರ್ಷದ ಮೊದಲು ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್(B ipin Rawat) ಅವರು ಪತ್ನಿ ಹಾಗೂ ರಕ್ಷಣಾ ಪಡೆಗಳ ಅಧಿಕಾರಿಗಳ ತಂಡದೊಂದಿಗೆ ಊಟಿಯಲ್ಲಿರುವ ರಕ್ಷಣಾ ಪಡೆಯ ಕಚೇರಿಗೆ ಹೊರಟಿದ್ದರು. ಇನ್ನೇನು ಊಟಿ ಮುಟ್ಟಬೇಕು ಎನ್ನುವ ಮೊದಲೇ ಪಶ್ಚಿಮ ಘಟ್ಟಗಳ ಅರಣ್ಯದಲ್ಲಿ ಹೆಲಿಕಾಪ್ಟರ್ ಪತನಗೊಂಡು ಎಲ್ಲರೂ ಕ್ಷಣ ಮಾತ್ರದಲ್ಲಿ ಸುಟ್ಟು ಹೋದರು. ಮರು ದಿನ ಅವರ ದೇಹ ಕಾಡಿನ ನಡುವೆ ದೊರೆತಿತ್ತು.
ಒಂದೂವರೆ ದಶಕದ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ(YS Rajshekhar Reddy) ಅವರು ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದರು. ಅದೇನಾಯಿತೋ. ಆಂಧ್ರಪ್ರದೇಶ ದ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ರೆಡ್ಡಿ ಅವರು ತೀರಿಕೊಂಡ ಸುದ್ದಿ ಬಂದಿತು. ಅವರ ಸಾವಿನ ಆಘಾತಕ್ಕೆ ಬಲಿಯಾದ ಅಭಿಮಾನಿಗಳು ಅದೆಷ್ಟೋ. ಆಂಧ್ರದ ಪ್ರಮುಖ ಅರಣ್ಯವಾದ ನಲ್ಲಮಲ್ಲ ಪ್ರದೇಶ ಅವರ ಸಾವಿಗೆ ದಾರಿ ಮಾಡಿಕೊಟ್ಟಿತ್ತು.
ಎರಡು ದಶಕಗಳ ಹಿಂದಿನ ಮಾತು. ಕ್ರಿಕೆಟ್ ಅಂಗಳದಲ್ಲಿ ಸದ್ದು ಮಾಡಿದ್ದ ಆಗಿನ ದಕ್ಷಿಣ ಆಫ್ರಿಕಾ ತಂಡದ ನಾಯಕ ಹ್ಯಾನ್ಸಿ ಕ್ರೋನಿಯೇ(hansie cronje) ಮೃತಪಟ್ಟಿದ್ದು ಹೀಗೆಯೇ. ಅವರು ಸಂಚರಿಸುತ್ತಿದ್ದ ವಿಮಾನ ಅರಣ್ಯ ಪ್ರದೇಶದಲ್ಲಿಯೇ ಪತನಗೊಂಡು ಸಣ್ಣ ವಯಸ್ಸಿನಲ್ಲಿಯೇ ಮೃತಪಟ್ಟಿದ್ದರು ಕ್ರೋನಿಯೇ.
ಇದೇ ರೀತಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು(Dorjee Khandu) ಅವರು 2011ರಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದ್ದರು. ಭಾರತದ ಲೋಕಸಭೆಯ ಸ್ಪೀಕರ್ ಆಗಿದ್ದ ಆಂಧ್ರಪ್ರದೇಶ ಮೂಲದ ಟಿ.ಎಂ.ಸಿ. ಬಾಲಯೋಗಿ( TMC Balayogi) ಅವರು 2002ರಲ್ಲಿ ಬೆಲ್ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದಾಗ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿಯೇ ಸಾವನ್ನಪ್ಪಿದ್ದರು.
ಕಾಡಿನ ಹಾದಿಯಲ್ಲಿ ದುರಂತಗಾಥೆ
ಇವು ಇತ್ತೀಚಿನ ಪ್ರಮುಖ ಹೆಲಿಕಾಪ್ಟರ್ ಇಲ್ಲವೇ ವಿಮಾನ ಪತನದ ದುರಂತದ ಉದಾಹರಣೆಗಳು. ಇದೇನೂ ವಿಮಾನ, ಹೆಲಿಕಾಪ್ಟರ್‌ಗಳ ಪತನಕ್ಕೂ ಅರಣ್ಯಕ್ಕೂ ಏನಾದರು ನಂಟು ಇದೆಯಾ ಎಂದು ಯೋಚಿಸಬಹುದು. ಅದು ನೇರವಾದ ನಂಟು ಇಲ್ಲದೇ ಇದ್ದರೆ ಹಲವಾರು ಗಣ್ಯರು, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನಗಳು, ತರಬೇತಿ ಹಂತದಲ್ಲಿದ್ದ ವಾಯುಪಡೆ ವಾಹನಗಳು ಅರಣ್ಯ ಪ್ರದೇಶದಲ್ಲಿಯೇ ಹೆಚ್ಚು ಪತನವಾಗಿವೆ. ಈಗಲೂ ಪತನವಾಗುತ್ತಲೇ ಇವೆ. ಇಡೀ ವಿಶ್ವದಲ್ಲಿ ಸಂಭವಿಸುವ ಇಂತಹ ದುರಂತಗಳಲ್ಲಿ ಅರಣ್ಯ ಪ್ರದೇಶದ ಪ್ರಮಾಣವೂ ಗಣನೀಯವಾಗಿದೆ. ಶತಮಾನಗಳಿಂದ ಇಂತಹ ಹಲವಾರು ಘಟನೆಗಳು ಆಗಿವೆ. ಇತ್ತೀಚಿನ ದಶಕಗಳಲ್ಲಿ ಇದು ಹೆಚ್ಚಿದೆ ಕೂಡ. ಅತಿ ಗಣ್ಯರು ಸಂಚರಿಸುವ ವಿಮಾನ ಹೆಲಿಕಾಪ್ಟರ್ ದುರಂತಕ್ಕೆ ಈಡಾಗಿ ಅರಣ್ಯಪ್ರದೇಶದಲ್ಲಿ ಸಾವು ಸಂಭವಿಸಿದ್ದು ಹೆಚ್ಚು ಚರ್ಚೆಯನ್ನು ಹುಟ್ಟು ಹಾಕಿದೆ.
ಅರಣ್ಯ ಎಂದರೆ ಅದು ದಟ್ಟ ಕಾಡು. ಹೆಕ್ಟೇರ್‌ಗಟ್ಟಲೇ ಮರಗಳಿಂದ ಕೂಡಿದ ಮಾನವ ಸಂಪರ್ಕವೇ ಕಡಿಮೆ ಇರುವ ಪ್ರದೇಶ. ಮನುಷ್ಯ ಈವರೆಗೂ ತಲುಪಲು ಆಗದೇ ಇರುವ ದಟ್ಟಡವಿಗಳೂ ಇವೆ. ಇವುಗಳಲ್ಲಿಯೇ ಹೆಚ್ಚಿನ ಪ್ರಮಾಣದ ದುರಂತಗಳು ಆಗಿವೆ.
ಅರಣ್ಯದ ಮೇಲೆ ಹಾರಾಟದ ಸುತ್ತಾ
ವಿಮಾನ ಇಲ್ಲವೇ ಹೆಲಿಕಾಪ್ಟರ್ ಹಾರಾಟ ಎನ್ನುವುದು ಸುಲಭದ ಕೆಲಸವೇನೂ ಅಲ್ಲ. ಪೈಲಟ್‌ಗಳು ಜೀವವನ್ನು ಕೈಯಲ್ಲಿ ಹಿಡಿದು ವಿಮಾನ ಇಲ್ಲವ ಹೆಲಿಕಾಪ್ಟರ್ ಚಾಲನೆ ಮಾಡುವುದು ಇದೆ. ಹೆಲಿಕಾಪ್ಟರ್ 15000 ಅಡಿವರೆಗೆ ಮೇಲೆ ಹಾರಬಲ್ಲವು. ಅತಿ ಹೆಚ್ಚು ಎಂದರೆ 18000 ಅಡಿವರಗೂ ಹಾರಬಲ್ಲವು. ಅದೇ ರೀತಿ ಜನ ಬಳಕೆಯ ವಿಮಾನಗಳು 35000 ಅಡಿವರೆಗೂ ಹಾರಬಲ್ಲವು. ಮಿಲಟರಿ ವಿಮಾನಗಳು 60000 ರಿಂದ 75000 ಅಡಿವರೆಗೂ ಹಾರಬಲ್ಲ ಸಾಮರ್ಥ್ಯ ಹೊಂದಿವೆ.
ಇದು ಒಂದು ಕಡೆಯಾದರೂ ಬೆಟ್ಟ ಗುಡ್ಡ, ಪರ್ವತ, ಘಟ್ಟ ಶ್ರೇಣಿಯ ಪ್ರದೇಶಗಳಲ್ಲಿ ಏರಿಳಿತವೂ ಇದ್ದೇ ಇರುತ್ತದೆ. ಅವು ದಟ್ಟವಾದ ಹಿಮಚ್ಛಾದಿತ ಪ್ರದೇಶಗಳು ಹೌದು. ಐದು ನಿಮಿಷದಲ್ಲಿ ಇದ್ದಂತಹ ದಟ್ಟ ಮಂಜಿನ ಕ್ಷಣ ಮತ್ತೆ ಐದು ನಿಮಿಷಕ್ಕೆ ಇರುವುದಿಲ್ಲ.ಭಾರೀ ಮಳೆಯ ಸನ್ನಿವೇಶ ಎದುರಾದರೆ ಕೆಲವೇ ಕ್ಷಣದಲ್ಲಿ ಅದು ಬದಲಾಗಿ ಬಿಡುತ್ತದೆ.
ಉದಾಹರಣೆಗೆ ಮೈಸೂರಿನಿಂದ ಹೊರಟು ಮುಂದೆ ಪಶ್ಚಿಮ ಘಟ್ಟದಲ್ಲಿ ಸಂಚರಿಸಿ ಊಟಿ ತಲುಪುವಾಗ ಅಲ್ಲಿನ ಪ್ರಾಕೃತಿಕ ಸನ್ನಿವೇಶವೇ ಬೇರೆಯಾಗಿರುತ್ತದೆ. ಅದೇ ರೀತಿ ಲಡಾಕ್‌ನಂತಹ ಪ್ರದೇಶ 10000 ಅಡಿಗೂ ಎತ್ತರದಲ್ಲಿದೆ. ಅಂತಹ ಸನ್ನಿವೇಶದಲ್ಲಿ ಎತ್ತರ, ಅಲ್ಲಿನ ಗಾಳಿಯ ವೇಗ, ಅಲ್ಲಿನ ಹವಾಮಾನ ಸ್ಥಿತಿಗತಿ ಇವೆಲ್ಲವೂ ಪ್ರಮುಖವಾಗುತ್ತವೆ. ಅರಣ್ಯ ಪ್ರದೇಶ ಇಲ್ಲವೇ ದಟ್ಟಡವಿ ಬಂದಂರಂತೂ ಅಲ್ಲಿನ ಎತ್ತರದ ಪ್ರದೇಶ, ಹವಾಮಾನದ ಸ್ಥಿತಿಗತಿಗಳು ಅಪಘಾತಗಳನ್ನು ದಿಢೀರ್ ತಂದೊಡ್ಡಿಬಿಡುತ್ತವೆ.
ವಿಮಾನ ಇಲ್ಲವೇ ಹೆಲಿಕಾಪ್ಟರ್ ಸಂಚರಿಸುವಾಗ ಏಕಾಏಕಿ ಬದಲಾಗುವ ಹವಾಮಾನದ ಸನ್ನಿವೇಶ ವಿಮಾನ, ಹೆಲಿಕಾಪ್ಟರ್ ಓಡಿಸುವುದು ಇಂತಹ ಸನ್ನಿವೇಶದಲ್ಲಿ ಸವಾಲೇ ಸರಿ. ಅದರಲ್ಲೂ ಹೆಲಿಕಾಪ್ಟರ್ ಸವಾರಿ ಇನ್ನೂ ಸವಾಲಿನ ಕೆಲಸವೂ ಹೌದು. ಕಠಿಣ ಹಾಗೂ ಭಿನ್ನ ಹವಾಮಾನ, ಪ್ರದೇಶಗಳಲ್ಲಿ ಹೇಗೆ ಓಡಿಸಬೇಕು ಎನ್ನುವುದನ್ನೆಲ್ಲಾ ಪೈಲಟ್‌ಗಳಿಗೆ ತರಬೇತಿ ವೇಳೆ ಹೇಳಿಕೊಡಲಾಗುತ್ತದೆ ಕೂಡ. ಇದನ್ನು ಮೀರಿಯೂ ಅಲ್ಲಿ ಎದುರಾಗುವ ಪರಿಸ್ಥಿತಿ ಎಂತವರನ್ನೂ ಅಧೀರರನ್ನಾಗಿ ಮಾಡುವ ಸಾಧ್ಯತೆ ಇದ್ದೇ ಇರುತ್ತದೆ. ಏರಿಳಿತದ ಸಾಮಥ್ಯ ಮೀರಿ ಪೈಲೆಟ್ ಕೈ ಮೀರಿ ಹೋಗುವ ಸಂದರ್ಭಗಳು ಬರಬಹುದು.
ಅಮೆಜಾನ್ ಕಾಡಿನ ಕಥೆ
ಬ್ರೆಜಿಲ್‌ನಿಂದ ದಕ್ಷಿಣ ಅಮೆರಿಕಾವರೆಗೆ ಹರಡಿರುವ ಅಮೆಜಾನ್ ಕಾಡು(Amazon Rainforest) ಈಗಲೂ ಮನುಷ್ಯ ಬೇಧಿಸಲಾಗದ ಅರಣ್ಯ ಪ್ರದೇಶಗಳಲ್ಲಿ ಒಂದು. ಆರೇಳು ತಿಂಗಳ ಹಿಂದೆ ತರಬೇತಿ ವಿಮಾನವೊಂದು ಅಮೆಜಾನ್ ಕಾಡಿನಲ್ಲಿ ಪತನವಾಗಿ ಅದರಲ್ಲಿದ್ದ ಮಕ್ಕಳು ಸಿಲುಕಿ ತಿಂಗಳವರೆಗೂ ಬದುಕುಳಿದಿದ್ದರು. ತಂತ್ರಜ್ಞಾನಗಳನ್ನು ಬಳಸಿಕೊಂಡಿಯೇ ಅವರನ್ನು ರಕ್ಷಿಸಲಾಗಿತ್ತು. ಆದರೂ ಅಮೆಜಾನ್‌ನಂತನ ಕಾಡಿನಲ್ಲಿ ವಿಮಾನ, ಹೆಲಿಕಾಪ್ಟರ್ ಪತನವಾದರೆ ಅಳಿದುಳಿದ ಭಾಗ ಸಿಗುವುದು ಕಷ್ಟವೇ.
ಭಾರತದ ಅರಣ್ಯ ಹೇಗಿದೆ?
ಭಾರತದಲ್ಲೂ ಈಶಾನ್ಯ ರಾಜ್ಯಗಳಲ್ಲಿ ಇರುವ ಅರಣ್ಯ ನಿಜಕ್ಕೂ ದಟ್ಟಡವಿಯೇ. ಅಲ್ಲಿ ಮಾನವ ಪ್ರವೇಶಿಸದ ಅರಣ್ಯ ಪ್ರದೇಶವೂ ಇದೆ. ಅರುಣಾಚಲ ಪ್ರದೇಶದಲ್ಲಿ ದಟ್ಟಾರಣ್ಯದ ಪ್ರಮಾಣ ಅಧಿಕ. ಇಲ್ಲಿಯೇ ಹೆಚ್ಚು ಹೆಲಿಕಾಪ್ಟರ್ ಪತನ ಪ್ರಕರಣ ನಡೆದಿರುವುದು. ಇತರೆ ರಾಜ್ಯಗಳಲ್ಲಿ ಅರಣ್ಯವಿದ್ದರೂ ಮನುಷ್ಯ ಸಂಪರ್ಕವಿಲ್ಲದ ಪ್ರದೇಶ ಕಡಿಮೆಯೇ. ಕರ್ನಾಟಕದಲ್ಲಿಯೂ ಶೇ. 22 ರಷ್ಟು ಭೂ ಪ್ರದೇಶ ಅರಣ್ಯವಾಗಿದ್ದರೂ ಇಲ್ಲಿಯೂ ಆ ರೀತಿ ಮಾನವ ಸಂಪರ್ಕ ಇರುವ ಅರಣ್ಯ ಕಡಿಮೆ. ಅದೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಅಣಶಿ ಪ್ರದೇಶದಲ್ಲಿದೆ ಎನ್ನುವುದು ಉಲ್ಲೇಖಾರ್ಹ. ಸುಮಾರು 5 ಹೆಕ್ಟೇರ್ ಪ್ರದೇಶ ದಟ್ಟಡವಿಯನ್ನು ಜಿಐಎಸ್ ಆಧರಿತ ತಂತ್ರಜ್ಞಾನದ ಮೂಲಕ ಪತ್ತೆ ಮಾಡಲಾಗಿತ್ತು.
ಢ್ರೋಣ್ ತಂತ್ರಜ್ಞಾನ ಬಂದ ಮೇಲೆ
ಹಿಂದೆಲ್ಲಾ ಕೆಲವು ಅರಣ್ಯದಲ್ಲಿ ಹೀಗೆ ವಿಮಾನ, ಹೆಲಿಕಾಪ್ಟರ್ ಪತನವಾದರೆ ರಕ್ಷಿಸುವುದು ಇರಲಿ ಹುಡುಕುವುದೂ ಕಷ್ಟವಾಗುತ್ತಿತ್ತು. ಈಗ ಢ್ರೋಣ್ ತಂತ್ರಜ್ಞಾನ ಅದನ್ನೂ ಸುಲಭವಾಗಿಸಿದೆ. ಢ್ರೋಣ್‌ಗಳು ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಹಾರಾಟ ನಡೆಸಿ ನಿಖರ ಮಾಹಿತಿ ಕೊಡಬಲ್ಲವೂ. ಆಹಾರವನ್ನೂ ತಲುಪಿಸಬಲ್ಲ ಉಪಕರಣಗಳಾಗಿಯೂ ಮಾರ್ಪಟ್ಟಿರುವುದನ್ನೂ ಗಮನಿಸಿದ್ದೇವೆ. ಇದು ಅರಣ್ಯ ಪ್ರದೇಶಗಳಲ್ಲಿನ ದುರಂತಗಳ ಪತ್ತೆ ಇಲ್ಲವೇ ಪರಿಹಾರ ಕಾರ್ಯಾಚರಣೆಗೆ ತಂತ್ರಜ್ಞಾನ ನೀಡಿರುವ ಕೊಡುಗೆ. ಆದರೂ ಅರಣ್ಯ ಇಲ್ಲವೇ ಕಣಿವೆ ಪ್ರದೇಶಗಳಲ್ಲಿನ ದುರಂತಗಳು ತಪ್ಪಿಸಲು ಮಾತ್ರ ಆಗಿಲ್ಲ.
ಅರಣ್ಯ ಪ್ರದೇಶದಲ್ಲಿಯೇ ವಿಮಾನ, ಹೆಲಿಕಾಪ್ಟರ್‌ಗಳ ಪತನದಿಂದ ಗಣ್ಯರ ದುರಂತಗಳು ಸಂಭವಿಸಿದ ವಿಧ್ವಂಸಕ ಕೃತ್ಯದ ಅನುಮಾನಗಳೂ ಬರುತ್ತವೆ. ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ದಟ್ಟರಣ್ಯಗಳೇ ಸೂಕ್ತ ಸ್ಥಳ ಎನ್ನುವ ಚರ್ಚೆಗಳಿಗೇನೂ ಕೊನೆಯಿಲ್ಲ.
- ಕುಂದೂರು ಉಮೇಶಭಟ್ಟ, ಮೈಸೂರು
( ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ