ಮೈಸೂರು ಜಂಬೂ ಸವಾರಿ ಹಳೆಯ ಆನೆಗಳ ಕೊನೆಯ ಕೊಂಡಿ ಅಭಿಮನ್ಯು; ಮುಂದಿನ ವರ್ಷ ಅಂಬಾರಿ ಹೊತ್ತರೆ ಮುಗಿಯಿತು, ಇನ್ನು ಹೊಸ ಆನೆಗಳದ್ದೇ ಜಮಾನ
ದಸರಾಕ್ಕೂ ಆನೆಗಳಿಗೂ ಶತಮಾನದ ನಂಟು. ಎಲ್ಲೆಡೆ ಹೊಸ ಪೀಳಿಗೆ ಪ್ರವೇಶಿಸಿದಂತೆ ಮೈಸೂರು ದಸರಾ ಆನೆಗಳಲ್ಲೂ ಬದಲಾವಣೆ ಆಗುತ್ತಿದೆ. ಅಭಿಮನ್ಯು ಮುಂದಿನ ಒಂದೆರಡು ವರ್ಷ ಅಂಬಾರಿ ಹೊತ್ತರೆ ಆನಂತರ ಹೊಸ ಜಮಾನದ ಆನೆಗಳ ಕಾಲ. ಇದರ ಆಸಕ್ತಿದಾಯಕ ಹಾದಿ ಹೀಗಿದೆ.
ಮೈಸೂರು ದಸರಾವನ್ನು ಜಂಬೂ ಸವಾರಿ ಇಲ್ಲದೇ ಊಹಿಸಿಕೊಳ್ಳಲು ಆಗದು. ಅದೇ ರೀತಿ ಜಂಬೂ ಸವಾರಿ ಎಂದರೆ ಆನೆಗಳೇ. ಇದಕ್ಕೆ ಶತಮಾನದ ಇತಿಹಾಸವಿದೆ. ಮಹಾರಾಜರ ನಂತರವೂ ಪ್ರಜಾಡಳಿತದಲ್ಲಿ ಆನೆ ಸವಾರಿ, ಅಂಬಾರಿ ಪರಂಪರೆ ಮುಂದುವರಿದಿದೆ. ಹದಿನೈದು ಆನೆಗಳಿದ್ದರೂ ಒಂದಕ್ಕೆ ಮಾತ್ರ ಅಂಬಾರಿ ಹೊರುವ ಹೊಣೆ. ಮೈಸೂರು ದಸರಾದಲ್ಲಿ ಹೀಗೆ ನಾಡಹಬ್ಬಕ್ಕೆ ಬಂದ, ಅಂಬಾರಿ ಹೊತ್ತ ಆನೆಗಳ ಇತಿಹಾಸವೂ ಆಸಕ್ತಿದಾಯಕವೂ ಇದೆ. ಹೀಗೆ ಇತಿಹಾಸ ನಿರ್ಮಿಸಿದ ಹೋದ ಹಳೆಯ ಸಾಲಿನ ಆನೆಗಳಲ್ಲಿ ಈಗ ಅಭಿಮನ್ಯುವೇ ಕೊನೆಯವನು. ಆನಂತರ ದಶಕದ ಇತ್ತೀಚಿಗೆ ಬಂದ ಆನೆಗಳಿಗೆ ಹೊಣೆ ಬಿಟ್ಟು ಕೊಡುವ ಕಾಲ ಬಂದೇ ಬಿಡಲಿದೆ.
ಎಂತೆಂಥಾ ಆನೆಗಳಿದ್ದವು ನೋಡಿ
ಮೈಸೂರು ದಸರಾದಲ್ಲಿ ಹಲವು ಆನೆಗಳು ಭಾಗಿಯಾಗಿವೆ. ಇಂತ ಆನೆಗಳ ಪಟ್ಟಿ ನೂರಕ್ಕೂ ಅಧಿಕ. ಆದರೆ ಅಂಬಾರಿ ಹೊತ್ತ ಆನೆಗಳ ಸಂಖ್ಯೆ ಕಡಿಮೆ. ಇದರಲ್ಲಿ ಶತಮಾನದಷ್ಟು ಹಳೆಯಾದ ಜಯಮಾರ್ತಾಂಡನೇ ಅತ್ಯಂತ ಹಳಬ. ಈತನೇ ಅಂಬಾರಿ ಹೊತ್ತ ಮೊದಲಿಗ. ಹಲವಾರು ವರ್ಷ ಈತ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮಹಾರಾಜರ ಪ್ರೀತಿಗೂ ಪಾತ್ರನಾಗಿ ಈಗಲೂ ಅರಮನೆಯ ದೊಡ್ಡ ದ್ವಾರದ ರೂಪದಲ್ಲಿ ಅಜರಾಮನಾಗಿದ್ದಾನೆ. ಆನಂತರ ವಿಜಯಬಹದ್ದೂರ್, ರಾಮಪ್ರಸಾದ್., ನಂಜುಂಡ, ಐರಾವತ, ಮೋತಿಲಾಲ್, ರಾಜೇಂದ್ರ, ಬಿಳಿಗಿರಿ, ದ್ರೋಣ, ಬಲರಾಮ, ಅರ್ಜುನ( ಎರಡು ಅವಧಿ)ನ ನಂತರ ಅಭಿಮನ್ಯು ಈ ಸ್ಥಾನ ಅಲಂಕರಿಸಿದ್ದಾನೆ.
ಮೂರು ಆನೆಗಳಿಗೆ ಉಂಟು ಸಿನಿಮಾ ನಂಟು
ಹಲವು ಆನೆಗಳು ಅಂಬಾರಿ ಹೊತ್ತು ಹೆಸರುವಾಸಿಯಾಗಿವೆ. ಇದರಲ್ಲಿ ಐರಾವತ, ರಾಜೇಂದ್ರ ಹಾಗೂ ಅಭಿಮನ್ಯು ಸಿನೆಮಾ ನಂಟು ಹೊಂದಿವೆ. ಐರಾವತ ಆನೆಯಂತೂ ಹಾಲಿವುಡ್ ಸಿನೆಮಾದಲ್ಲಿ ಕಾಣಿಸಿಕೊಂಡಿದೆ. ಎಚ್‌ಟಿಕೋಟೆಯಲ್ಲಿಯೇ ಇದ್ದ ಸಾಬು ಎನ್ನುವ ಬಾಲಕ ಮುಂದೆ ಹಾಲಿವುಡ್‌ನಲ್ಲಿ ಬೆಳೆದದ್ದು ಇತಿಹಾಸ. ಆತ ಅಭಿನಯಿಸಿದ ದಿ ಎಲಿಫೆಂಟ್ ಬಾಯ್ ಎನ್ನುವ ಚಿತ್ರದಲ್ಲಿ ಐರಾವತ ಕಾಣಿಸಿಕೊಂಡಿದ್ದ. ಇದು ಒಂಬತ್ತು ದಶಕದ ಹಿಂದೆ ಅಂದರೆ 1935 ರಲ್ಲಿ ಬಿಡುಗಡೆಯಾಗಿದ್ದ ಚಿತ್ರ. ಸಾಬು ತಂದೆ ಇದೇ ಆನೆ ಮಾವುತರೂ ಆಗಿದ್ದರು. ದಶಕದ ಹಿಂದೆ ದರ್ಶನ್ ನೇತೃತ್ವದಲ್ಲಿ ಐರಾವತ ಎನ್ನುವ ಚಿತ್ರ ಬಂದಿತ್ತು. ಹಿರಿಯ ನಟರ ಮಕ್ಕಳು ಅಭಿನಯಿಸಿದ್ದ ಈ ಚಿತ್ರ ಇದೇ ಆನೆಯ ಹಿನ್ನೆಲೆಯ ಹೆಸರನ್ನು ಹೊಂದಿದ್ದು ವಿಶೇಷ.
ಆನಂತರ ಕನ್ನಡದ ಸೂಪರ್ ಹಿಟ್ ಚಿತ್ರ ಗಂಧದ ಗುಡಿಯಲ್ಲಿ ಕಾಣಿಸಿಕೊಂಡಿದ್ದ ರಾಜೇಂದ್ರ ಎಂಬ ಆನೆ. ಅಣ್ಣಾವ್ರ ಹಾಡು ನಾವಾಡುವ ನುಡಿಯೇ ಎನ್ನುವ ಗೀತೆಯಲ್ಲಿ ರಾಜೇಂದ್ರನನ್ನೂ ಚಿತ್ರೀಕರಿಸಲಾಗಿತ್ತು. ಗಂಧದ ಗುಡಿ 1973ರಲ್ಲಿ ಬಿಡುಗಡೆಯಾಗಿದ್ದ ಚಿತ್ರ . ಈಗಲೂ ಗಂಧದ ಗುಡಿ ಹಾಡು ಬಂದಾಗಲೆಲ್ಲಾ ರಾಜೇಂದ್ರನೂ ಬರುತ್ತಾನೆ.
ಅಭಿಮನ್ಯುಗೂ ಕೂಡ ವಿಶೇಷ ಸಾಕ್ಷ್ಯಚಿತ್ರದೊಂದಿಗೆ ಕಾಣಿಸಿಕೊಂಡ ನಂಟು ಇದೆ. ದ್ರೋಣ ಆನೆಯೂ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಧಾರಾವಾಹಿಯಲ್ಲಿ ಕಾಣಿಸಿಕೊಂಡಿತ್ತು.
ಬೆಳೆದು ನಿಂತ ಅಭಿಮನ್ಯು
ಸರ್ಗೂಜ ಎನ್ನುವುದು ಹಿಂದಿನ ಮಧ್ಯಪ್ರದೇಶ, ಈಗಿನ ಛತ್ತೀಸಗಢ ರಾಜ್ಯದಲ್ಲಿ ದಟ್ಟಾರಣ್ಯ ದಿಂದ ಅವೃತವಾದ ಜಿಲ್ಲೆ. ಈ ಸ್ಥಳಕ್ಕೂ ನಮ್ಮ ಕರ್ನಾಟಕಕ್ಕೂ ನಂಟಿದೆ. ಮೂರು ದಶಕದ ಹಾವಳಿ ಮಿತಿ ಮೀರಿತ್ತು. ಆನೆಗಳನ್ನು ಸೆರೆ ಹಿಡಿಯಬೇಕು. ಅವುಗಳ ಉಪಟಳ ತಪ್ಪಿಸಬೇಕು ಎನ್ನುವ ಬೇಡಿಕೆ ಸರ್ಗೂಜ ಭಾಗದಲ್ಲಿ ಜೋರಾಗಿತ್ತು. ಸ್ಥಳೀಯರ ಒತ್ತಡಕ್ಕೆ ಮಣಿದ ಮಧ್ಯಪ್ರದೇಶ ರಾಜ್ಯ ಸರ್ಕಾರ ಆನೆ ಸೆರೆ ಹಿಡಿಯಲು ಅನುಮತಿಯನ್ನು ನೀಡಿತು. ಸರ್ಗೂಜ ಅರಣ್ಯದಿಂದ ಹೊರ ಬರುತ್ತಿದ್ದ ಕಾಡಾನೆಗಳನ್ನು ಹಿಡಿಯುವುದು ಹೇಗೆ ಎನ್ನುವ ಪ್ರಶ್ನೆ ಎದುರಾದಾಗ ಮಧ್ಯಪ್ರದೇಶ ಅರಣ್ಯ ಇಲಾಖೆ ಚಿತ್ತ ಹರಿದಿದ್ದು ಕರ್ನಾಟಕದ ಕಡೆಗೆ. ಕರ್ನಾಟಕದ ಖೆಡ್ಡಾ ಆನೆಗಳು ಬಲಶಾಲಿ. ಅವುಗಳನ್ನು ತಂದು ಇಲ್ಲಿಯೂ ಆನೆ ಸೆರೆ ಕಾರ್ಯಾಚರಣೆ ಮಾಡಬಹುದು ಎನ್ನುವ ತೀರ್ಮಾನಕ್ಕೆ ಬಂದರು. ಅದರಂತೆ ಮೈಸೂರು ದಸರಾ ಅಂಬಾರಿ ಹೊರುವ ಗಜಪಡೆಯ ತಂಡದ ಈಗಿನ ಕ್ಯಾಪ್ಟನ್ ಅಭಿಮನ್ಯು ಸಹಿತ ಹಲವು ಆನೆಗಳನ್ನು ಆಗಲೇ ಸರ್ಗೂಜಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಕಾಡಾನೆಗಳನ್ನು ಸೆರೆ ಹಿಡಿಯುವಲ್ಲಿ ನಮ್ಮ ಆನೆಗಳ ಸಹಕಾರ ಬಹುವಾಗಿ ಬಳಕೆಯಾಗಿ ಕರ್ನಾಟಕದ ಆನೆಗಳ ಶಕ್ತಿಯ ಅರಿವೂ ಅಲ್ಲಿ ಆಗಿತ್ತು. ಮೂರು ತಿಂಗಳಿಗೂ ಅಧಿಕ ಕಾಲ ಅಲ್ಲಿ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಬಂದಿದ್ದವು. ಈ ಆನೆ ಸೆರೆ ಕಾರ್ಯಾಚರಣೆ ಆಗ The Last Migration - Wild Elephant Capture ಎನ್ನುವ ಹೆಸರಿನೊಂದಿಗೆ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಇದು ನಮ್ಮ ಅಭಿಮನ್ಯುವಿನ ಮೇಲಿನ ಅಭಿಮಾನ ಹೆಚ್ಚಿಸಿ ಈಗಲೂ ಅಪರೇಷನ್ ಎಂದರೆ ಅಭಿಮನ್ಯು ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಅದೂ ಕೂಡ ನಿವೃತ್ತಿ ಅಂಚಿಗೆ ಬಂದಿದೆ.
ಒಂದೂವರೆ ದಶಕದಿಂದ ದಸರಾಕ್ಕೆ ಬರುತ್ತಿರುವ ಅಭಿಮನ್ಯು ಶಾಂತಚಿತ್ತತೆಯಿಂದಲೇ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿ ಸತತ ಐದು ವರ್ಷ ಅಂಬಾರಿ ಹೊರುತ್ತಿದ್ದಾನೆ.
ಎರಡು ಆನೆಗಳ ಅಕಾಲಿಕ ಸಾವು
ಕೆಲವು ದಸರಾ ಆನೆಗಳು ಅಕಾಲಿಕವಾಗಿ ಮೃತಪಟ್ಟಿವೆ. ಅದರಲ್ಲಿ ಹಿಂದೆ ದ್ರೋಣ ಆನೆ ವಿದ್ಯುತ್ ದುರಂತಕ್ಕೆ ಬಲಿಯಾಗಿತ್ತು. ಬಲರಾಮ ಆನೆ ಗುಂಡೇಟಿನಿಂದ ಗಾಯಗೊಂಡು ಜೀವ ಬಿಟ್ಟಿತ್ತು. ಇನ್ನು ವರ್ಷದ ಹಿಂದೆ ಅರ್ಜುನ ಹಾಸನ ಜಿಲ್ಲೆ ಆನೆ ಕಾರ್ಯಾಚರಣೆ ವೇಳೆ ಕಾಡಾನೆ ತಿವಿತಕ್ಕೆ ಬಲಿಯಾಗಿತ್ತು. ವರ್ಷದ ಅಂತರದಲ್ಲೇ ಎರಡು ಪ್ರಮುಖ ಆನೆಗಳು ಇಲ್ಲವಾದದ್ದು ಬೇಸರದಾಯಕವೇ ಹೌದು.
ಹೊಸ ಆನೆಗಳ ಕಾಲ
ದಸರಾ ಎನ್ನುವುದು ಪ್ರತಿ ವರ್ಷ ಇದ್ದೇ ಇರುತ್ತದೆ. ಮೈಸೂರು ದಸರಾವೆಂದರೆ ಅದು ಜಂಬೂ ಸವಾರಿಯೂ ಹೌದು. ಅಭಿಮನ್ಯು ನಿವೃತ್ತಿ ನಂತರ ಹಳೆ ತಲೆಮಾರಿನ ಆನೆಗಳ ಕೊಂಡಿ ಮುಗಿಯಲಿದೆ. ಬಳಿಕ ಹೊಸ ತಲೆಮಾರಿನ ಆನೆಗಳೇ. 2026ರ ನಂತರ ಹೊಸ ಕ್ಯಾಪ್ಟನ್ ಬೇಕೇ ಬೇಕು. ಇದಕ್ಕಾಗಿ ಈಗಿನಿಂದಲೇ ಅರಣ್ಯ ಇಲಾಖೆ ತಯಾರಿಯನ್ನೂ ಮಾಡಿಕೊಂಡಿದೆ.
ದಶಕದ ಹಿಂದೆಯಷ್ಟೆ ಸೆರೆ ಸಿಕ್ಕು ನಾಲ್ಕೈದು ವರ್ಷದಿಂದ ದಸರಾಕ್ಕೆ ಬರುತ್ತಿರುವ ಆನೆಗಳಿಗೂ ಅಂಬಾರಿ ಹೊರುವ ಅವಕಾಶ ಸಿಗಲಿದೆ. ಇದರಲ್ಲಿ ಧನಂಜಯ, ಮಹೇಂದ್ರ, ಭೀಮಾ, ಗೋಪಿ, ಪ್ರಶಾಂತ, ಏಕಲವ್ಯ, ಸುಗ್ರೀವ ಆನೆಗಳಿವೆ. ಇವುಗಳಲ್ಲಿ ಧನಂಜಯ ಇಲ್ಲವೇ ಮಹೇಂದ್ರ ಗೆ ಮುಂದಿನ ಅವಕಾಶ ಸಿಗಬಹುದು.
ಧನಂಜಯ ಆನೆ 2013ರಲ್ಲಿ ಹಾಸನದ ಯಸಳೂರು ಅರಣ್ಯ ವಲಯದಲ್ಲಿ ಸೆರೆಯಾಗಿತ್ತು. ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ವಯಸ್ಸು 45 ವರ್ಷ. ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ವಾಸ. 6 ವರ್ಷದಿಂದ ದಸರಾದಲ್ಲಿ ಭಾಗಿಯಾಗಿದ್ದಾನೆ ಧನಂಜಯ.ಈಗ ನಿಶಾನೆ ಆನೆ ಹೊಣೆಯನ್ನೂ ಈ ಬಾರಿ ನೀಡಲಾಗಿದೆ
ಮಹೇಂದ್ರ ಆನೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರ ನಿವಾಸಿ. 2016ರಲ್ಲಿ ರಾಮನಗರ ಅರಣ್ಯದಲ್ಲಿ ಸೆರೆ ಸಿಕ್ಕು ಬೇಗನೇ ಪಳಗಿದ್ದಾನೆ. 2 ವರ್ಷದಿಂದ ಶ್ರೀರಂಗಪಟ್ಟಣ ಗ್ರಾಮೀಣ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿ ಭಾಗಿಯಾಗಿ ಯಶಸ್ವಿಯಾಗಿ ಜವಾಬ್ದಾರಿಯನ್ನೂ ನಿಭಾಯಿಸಿದ್ದಾನೆ. 41 ವರ್ಷದ ಈತನ ಮೇಲೂ ವಿಶ್ವಾಸವಿದೆ.
-ಕುಂದೂರು ಉಮೇಶಭಟ್ಟ, ಮೈಸೂರು