ಕಾಡಿನ ಕಥೆಗಳು: ಅರ್ಜುನ-ಬಲರಾಮರ ಅಂಬಾರಿ ಕಾಲ, ಪ್ರೀತಿಯ ಮಾವುತರ ನೆನಪು; ದಸರಾ ಆನೆಗಳ ಸಲಹುವ ಅರಣ್ಯ ಇಲಾಖೆಗೆ ಹಿಂದಿನ ಘಟನೆಗಳು ಪಾಠವಾಗಲಿ
Mysore Dasara Elephants memory ಮೈಸೂರು ದಸರಾದೊಂದಿಗೆ ಬೆರೆತು ಹೋಗಿರುವ ಆನೆಗಳು ಹಾಗೂ ಅವುಗಳ ಅನೂಹ್ಯ ಕ್ಷಣಗಳು, ಮಾವುತರ ಮಮಕಾರದ ಸೇವೆಗಳು ನಿಜಕ್ಕೂ ಅರಣ್ಯ ಇಲಾಖೆಯವರಿಗೆ ಪಾಠವಾದರೆ ಒಳಿತು ಎನ್ನುವುದು ಈ ವಾರದ ಕಾಡಿನ ಕಥೆಗಳ ಆಶಯ.
Mysore Dasara Elephants and mahouts ಒಂದು ದಶಕದ ಹಿಂದಿನ ಪ್ರಸಂಗ. 2011ರಲ್ಲಿ ದಸರಾ ಜಂಬೂಸವಾರಿ ಹೊತ್ತಿದ್ಬ ಲರಾಮನಿಗೆ ನಿವೃತ್ತಿ ನೀಡಬೇಕು ಎನ್ನುವ ತೀರ್ಮಾನವಾಯಿತು. 60 ವರ್ಷದ ಆನೆಗಳಿಗೆ ಕಠಿಣ ಭಾರ ಹೊರುವುದಕ್ಕೆ ಅವಕಾಶ ನೀಡಬಾರದು ಎನ್ನುವುದು ನ್ಯಾಯಾಲಯದ ನಿರ್ದೇಶನವಾಗಿತ್ತು. ಅದರಂತೆ ಸತತ 13 ವರ್ಷ ಅಂಬಾರಿ ಹೊತ್ತಿದ್ದ ಬಲರಾಮ ಮರು ವರ್ಷದಿಂದ ಸಾಮಾನ್ಯ ಆನೆಯಾಗಿ ದಸರಾಕ್ಕೆ ಬಂದಿತ್ತು. 2012 ರಲ್ಲಿ ಯಾವ ಆನೆಗೆ ಅಂಬಾರಿ ಹೊರಿಸಬೇಕು ಎನ್ನುವ ಹೊಯ್ದಾಟ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿತ್ತು. ಅರ್ಜುನ, ಅಭಿಮನ್ಯುವಿನ ಹೆಸರು, ಬಂಡೀಪುರದಲ್ಲಿದ್ದ ಜಯಪ್ರಕಾಶ ಎನ್ನುವ ಹೆಸರನ್ನೂ ಪರಿಗಣಿಸಲಾಯಿತು. ಆಗ ಅಂತಿಮಗೊಂಡಿದ್ದೇ ಒಂದು ಕಾಲಕ್ಕೆ ಮೈಸೂರು ದಸರಾದಲ್ಲಿ ಮಾವುತನನ್ನೇ ಕೊಂದು ಹಾಕಿ ನಿಷೇಧಕ್ಕೆ ಒಳಗಾಗಿದ್ದ ಅರ್ಜುನ ಎನ್ನುವ ಆನೆ. ಇದಕ್ಕೆ ಕಾರಣ ಆ ಆನೆಯ ಮಾವುತ ದೊಡ್ಡ ಮಾಸ್ತಿ. ಒಂದು ಆನೆ ಹೇಗೆ ಬದಲಾಗಬಹುದು. ಅದರ ವರ್ತನೆಯನ್ನು ಹೇಗೆ ಬದಲಿಸಿಕೊಳ್ಳಬಹುದು ಎನ್ನುವುದಕ್ಕೆ ಮಾವುತನೇ ಮೂಲ ಕಾರಣ. ಆತ ಆನೆಯನ್ನು ನಡೆಸಿಕೊಳ್ಳುವ ರೀತಿ, ಅದನ್ನು ಪ್ರೀತಿಯಿಂದ ನೋಡಿಕೊಂಡು ಸ್ಪಂದಿಸುವ ಪರಿಯೂ ಮುಖ್ಯ. ಇದನ್ನು ದೊಡ್ಡ ಮಾಸ್ತಿ ಎಂಬ ಆ ಮಾವುತ ಪ್ರೀತಿಯಿಂದ ಮಾಡಿದ್ದ. ನನ್ನ ಅರ್ಜುನನಿಗೆ ಅವಕಾಶ ಕೊಡಿ ಸ್ವಾಮಿ. ಅಂಬಾರಿ ಹೊತ್ತು ತೋರಿಸುತ್ತೇನೆ. ನನ್ನ ಅರ್ಜುನ ಯಾವುದೇ ಗಲಾಟೆ ಇಲ್ಲದ ಹಾಗೆ ನೋಡಿಕೊಳ್ಳುತ್ತೇನೆ ಎಂದು ದೊಡ್ಡಮಾಸ್ತಿ ಅಭಯ ನೀಡಿದ್ದರು. ಆಗ ವನ್ಯಜೀವಿ ಪಶುವೈದ್ಯಾಧಿಕಾರಿಯಾಗಿದ್ದ ಡಾ.ಡಿ.ಎನ್.ನಾಗರಾಜು ಅವರ ಆನೆಯನ್ನು ಒಮ್ಮೆಲೇ ನಂಬದೇ ಇದ್ದರೂ ಮಾವುತ ಮಾತನನ್ನು ನಂಬಿದರು. ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ವರದಿಯನ್ನು ನೀಡಿದರು. ಮೂರು ದಶಕದ ಹಿಂದೆ ದಸರಾ ವೇಳೆಯೇ ಭಾರೀ ಅನಾಹುತ ಸೃಷ್ಟಿಸಿದ್ದ ಅರ್ಜುನ ಮತ್ತೆ ದಸರಾಗೆ ಬಂದಿದ್ದನ್ನು ಗಮನಿಸಿದ್ದರು. ಆತನಲ್ಲಿ ಆಗಿದ್ದ ಬದಲಾವಣೆಯನ್ನೂ ಕಣ್ಣಾರೆ ಕಂಡಿದ್ದರು. ಇದಕ್ಕಾಗಿ ದೊಡ್ಡ ಮಾಸ್ತಿ ಎಂಬ ಆ ಮಾವುತ ಪಟ್ಟ ಕಷ್ಟವನ್ನು ನೋಡಿದ್ದರು. ಏಕೆಂದರೆ ದೊಡ್ಡ ಮಾಸ್ತಿಗೆ ಇಬ್ಬರು ಗಂಡು ಮಕ್ಕಳು. ಮಾಸ್ತಿ ಹೇಳುತ್ತಿದ್ದುದು ನನಗೆ ಮೂರು ಗಂಡು ಮಕ್ಕಳು. ಅದರಲ್ಲಿ ಅರ್ಜುನ ಕೂಡ ಒಬ್ಬನು ಎಂದು. ಮನೆಯಲ್ಲಿ ಚಪಾತಿ ಮಾಡಿದರೂ ಅರ್ಜುನಿನಿಗೂ ಒಂದು ಪಾಲು ಇರುತ್ತಿತ್ತು. ಆತನ ದೇಖರೇಖಿಯನ್ನು ನೋಡಿಕೊಳ್ಳುತ್ತಿದ್ದ ದೊಡ್ಡ ಮಾಸ್ತಿ ಕೊಂಚವೂ ಕಡಿಮೆಯಾಗಲು ಬಿಡುತ್ತಿರಲಿಲ್ಲ. ಆದ ಮದವೇರಿದಾಗ ನೋವು ಆಗದಂತೆ ನೋಡಿಕೊಂಡು ಪೂರಕವಾಗಿ ಊಟ ಕೊಡುತ್ತಿದ್ದ. ಎಣ್ಣೆ ಮಜ್ಜನವೂ ನಡೆಯುತ್ತಿತ್ತು. ಪ್ರೀತಿಯ ಸಂವಹನದಿಂದ ಅರ್ಜುನ ಬದಲಾಗಿಯೇ ಹೋಗಿದ್ದ. ಈ ಕಾರಣದಿಂದಲೇ ನಾಗರಾಜು ಅವರು ದಸರಾದಲ್ಲಿ ಅಂಬಾರಿ ಹೊರಲು ಅರ್ಜುನ ಹೆಸರು ಶಿಫಾರಸ್ಸು ಮಾಡಿದ್ದರು.ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೂ ಒಪ್ಪಿದ್ದರು. ಸತತ ಎಂಟು ವರ್ಷ ಅರ್ಜುನ ಅಂಬಾರಿ ಹೊತ್ತು ಜನಮನದಲ್ಲಿ ನೆಲೆ ನಿಂತ. ಈಗ ಅರ್ಜುನನೂ ಇಲ್ಲ. ಆತನಿಗೆ ಹೊಸ ಬದುಕನ್ನೇ ಕೊಟ್ಟ ದೊಡ್ಡ ಮಾಸ್ತಿಯೂ ಇಲ್ಲ. ಆದರೆ ಇಬ್ಬರ ಬಂಧ ದಸರಾ ಬಂದಾಗಲೆಲ್ಲಾ ನೆನಪಾಗುತ್ತದೆ. ಅಷ್ಟರ ಮಟ್ಟಿಗೆ ದಸರಾದ ಇತಿಹಾಸದಲ್ಲಿ ಇಬ್ಬರ ಹೆಸರು ಸೇರಿ ಹೋಗಿದೆ.
2014ರಲ್ಲಿ ದಸರಾವನ್ನು ಮುಗಿಸಿಕೊಂಡು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂನ ಬೆಟ್ಟ ಕ್ಯಾತೇದೇವರ ಗುಡಿ ಆನೆ ಶಿಬಿರಕ್ಕೆ ಮರಳಿದ್ದ ಗಜೇಂದ್ರ ಹಾಗೂ ಶ್ರೀರಾಮ ಎಂಬ ಆನೆಗಳ ನಡುವೆ ಭಾರೀ ಕಾಳಗವೇ ನಡೆದು ಹೋಯಿತು. ಗಜೇಂದ್ರ ಎಂಬ ಆನೆ ಶ್ರೀರಾಮನನ್ನು ಕೊಂದು ಹಾಕಿತ್ತು. ಗಜೇಂದ್ರ ಆನೆ ಮೊದಲು ಇದ್ದುದು ನಾಗರಹೊಳೆಯಲ್ಲಿ. ಆನೆ ಶಿಬಿರದಲ್ಲಿದ್ದ ಮಾವುತರೊಬ್ಬರ ಪುಟ್ಟ ಕಂದಮ್ಮ ಗಜೇಂದ್ರನ ಬಳಿ ಹೋಗಿತ್ತು. ಏನಾಗುತ್ತದೋ ಎನ್ನುವ ಆತಂಕದಲ್ಲಿ ಪೋಷಕರು ನೋಡಿದರು. ಗಜೇಂದ್ರ ಮಗುವನ್ನು ನೋಡಿದ್ದ. ಮಗು ಸೊಂಡಿಲು ಮುಟ್ಟಿದಾಗಲೂ ಸುಮ್ಮನಿದ್ದ ಆಟವಾಡಿದ್ದ. ಅಂತಹ ಆನೆ ತನ್ನದೇ ಶಿಬಿರದ ಸಂಗಾತಿಯನ್ನು ಕೊಂದು ಹಾಕಿದ್ದು ಏಕೆಂದರೆ ಅದು ಮದವೇರಿದ ಕ್ಷಣ. ಮದವೇರಿದ ಸಮಯದಲ್ಲಿ ಮಾವುತ ಮುನ್ನೆಚ್ಚರಿಕೆ ವಹಿಸದೇ ದುರಂತ ನಡೆದು ಹೋಯಿತು. ಶ್ರೀರಾಮ ಸತ್ತು ಹೋದರೆ ಗಜೇಂದ್ರನಿಗೆ ಈಗಲೂ ವನವಾಸ ಮುಂದುವರಿದಿದೆ.
ಈ ಪ್ರಸಂಗಗಳು ನೆನಪಾಗಿದ್ದು ನಾಲ್ಕು ದಿನದ ಹಿಂದೆ ಮೈಸೂರು ದಸರಾ ಆನೆಗಳು ಗಲಾಟೆಗೆ ಬಿದ್ದು ಓಡಿ ಹೋಗಿ ಬೆಂಗಳೂರು-ಊಟಿ ರಸ್ತೆಗೂ ನುಗ್ಗಿದ ಸನ್ನಿವೇಶ. ಏಕೆಂದರೆ ಆನೆಗಳು ಮದಕ್ಕೇರಿದಾಗ ಬೇಕಾದ್ದು ಮಾವುತನ ಪ್ರೀತಿ ಹಾಗೂ ಆರೈಕೆ. ಅದಕ್ಕೆ ಬೇಕಾದ ಊಟ ನೀಡಿ, ನೋವಿನ ಜಾಗವನ್ನು ಗಮನಿಸಿ ಎಣ್ಣೆಯಿಂದ ನೀವಿದರೆ ಅವುಗಳು ಮದವೇರುವ ಪ್ರಮಾಣ ಕಡಿಮೆಯಾಗುತ್ತದೆ. ಇತರೆ ಗಂಡಾನೆಗಳ ಜತೆಗೆ ಸೇರದಂತೆ ನೋಡಿಕೊಳ್ಳಬೇಕು. ಮದಕ್ಕೆ ಬಂದ ಆನೆ ಇನ್ನೊಂದು ಆನೆ ಕಂಡಾಗ ಜಗಳಕ್ಕೆ ಇಳಿಯುವ ಸಾಧ್ಯತೆಯೇ ಅಧಿಕ. ಆಗ ಅನಾಹುತ ಆದರೆ ಹೊಣೆ ಯಾರು. ದಸರಾದಂತಹ ಸನ್ನಿವೇಶದಲ್ಲಿ ಆದರಂತೂ ಕಪ್ಪು ಚುಕ್ಕೆಯೇ ಆಗಿ ಬಿಡಲಿದೆ.
ಕೊಡಗಿನ ದುಬಾರೆ ಶಿಬಿರದ ಧನಂಜಯ ಎನ್ನುವ ಆನೆಗೂ ಈಗ ಮದ ಬಂದಿದೆ. ಕೆಲವು ದಿನದಿಂದ ಮದ ಬಂದು ಆರೈಕೆಯೂ ನಡೆದಿದೆ. ಆದರೆ ಇದನ್ನು ತಿಳಿಸಿದರೆ ಆನೆಯನ್ನು ವಾಪಾಸ್ ಕಳುಹಿಸಬಹುದು ಎನ್ನುವ ಭಯದಿಂದಲೋ ಏನೋ ಮಾವುತ ಮಾಹಿತಿ ನೀಡಿರಲಿಲ್ಲ. ಊಟಕ್ಕೆ ಕರೆದುಕೊಂಡು ಹೋದಾಗ ಗಂಡಾನೆ ಜತೆಯಲ್ಲಿ ಹೆಣ್ಣಾನೆಯೂ ಇರುತ್ತದೆ. ಅಂದು ಕೂಡ ಕಂಜನ್ ಎಂಬ ಆನೆ ತುಂಟಾನೆ ಅಲ್ಲಿಗೆ ಬಂದಿದ್ದ. ಮೊದಲೇ ಮದವೇರಿದ್ದ ಧನಂಜಯ ಅಟ್ಟಾಡಿಸಿಕೊಂಡು ಹೋಗಿದ್ದು ಈಗ ಇತಿಹಾಸ. ಧನಂಜಯ ಅಂದಿದ್ದ ಸನ್ನಿವೇಶದಲ್ಲಿ ಯಾವುದೇ ಹಾನಿಯಾಗದೇ ಮುಗಿದಿದ್ದು ನಿಜಕ್ಕೂ ನೆಮ್ಮದಿ ತಂದ ಸಂಗತಿಯೇ. ಧನಂಜಯ ಮಾವುತನೂ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕಂಜನ್ ಆನೆ ಮಾವುತನೂ ಕೂಡ ಗಮನ ಹರಿಸಬೇಕಿತ್ತು. ವೈದ್ಯಾಧಿಕಾರಿಗಳಂತೂ ಪ್ರತಿ ಆನೆಯ ಜೈವಿಕ ಬದಲಾವಣೆ, ಅವುಗಳ ವರ್ತನೆಯ ಮಾಹಿತಿಯನ್ನು ಪ್ರತಿದಿನವೂ ಮಾವುತರಿಂದ ಪಡೆಯಬೇಕು. ಆನೆ ಉಸ್ತುವಾರಿ ಹೊತ್ತ ಆರ್‌ಎಫ್‌ಒ. ಡಿಎಫ್‌ಒಗೂ ಕೂಡ ಇದು ಜವಾಬ್ದಾರಿಯೇ. ಕೊಂಚ ಎಚ್ಚರ ತಪ್ಪಿದರೂ ದಸರಾದಂತ ವಿಶ್ವ ವಿಖ್ಯಾತ ಉತ್ಸವದಲ್ಲಿ ಆಗುವ ಅನಾಹುತ ಕಟ್ಟಿಟ್ಟ ಬುತ್ತಿಯೇ.
ಆನೆಗಳಿಗೆ ಅಕ್ಟೋಬರ್‌ನಿಂದ ಮೂರ್ನಾಲ್ಕು ತಿಂಗಳು ಮದದ ದಿನಗಳು. ಅದು ಕಣ್ಣಿನ ಪಕ್ಕದಲ್ಲಿ ಮದಜಲ ಸ್ರವಿಸುತ್ತದೆ. ಈ ವೇಳೆ ದೇಹದ ಕೆಲ ಭಾಗದಲ್ಲಿ ಊತವಾಗಿ ನೋವು ನೀಡುತ್ತದೆ. ದಸರಾಕ್ಕೆ ಬಂದಾಗ ಇಲ್ಲಿ ಆನೆಗಳಿಗೆ ವಿಶೇಷ ಆಹಾರ ನೀಡಲಾಗುತ್ತದೆ. ಅದನ್ನು ಸೇವಿಸಿದಾಗಲೂ ಬೇಗನೇ ಮದವೇರುವ ಸನ್ನಿವೇಶವೂ ಇರುತ್ತದೆ. ಇಂತಹ ವೇಳೆ ಆನೆ ಮಾವುತರು ಗಮನ ಹರಿಸಿ ಸೂಕ್ತ ಆರೈಕೆ ಮಾಡಲೇಬೇಕು. ಮದ ಬಂದಾಗ ಆನೆಗಳನ್ನು ಯಾರಿಂದಲೂ ನಿಯಂತ್ರಿಸಲು ಆಗೋಲ್ಲ. ಪ್ರೀತಿಯ ಆರೈಕೆಯೊಂದೇ ಅವುಗಳನ್ನು ನಿಯಂತ್ರಿಸಬಹುದು. ಮುನ್ನೆಚ್ಚರಿಕೆ ಕ್ರಮಗಳನ್ನು ಮೈಯೆಲ್ಲಾ ಕಣ್ಣಾಗಿ ನೋಡಿಕೊಂಡಾಗ ಮಾತ್ರ ಅನಾಹುತಕ್ಕೆ ದಾರಿಯಾಗದು.
ದಸರಾ ಆನೆಗಳೊಂದಿಗೆ ನನ್ನ ಒಡನಾಟ ಎರಡು ದಶಕಕ್ಕೂ ಮಿಗಿಲಾದದ್ದು. ಆನೆಗಳ ಜತೆಗೆ ಅವುಗಳ ಸೇವಕರ ಬೇಕು ಬೇಡಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಜವಾಬ್ದಾರಿಯೇ. ಅರ್ಜುನನೇ ಮದ ಬಂದ ಹಲವಾರು ಸನ್ನಿವೇಶವನ್ನು ದಸರಾ ವೇಳೆ ಕಂಡಿದ್ದೇವೆ. ಅದು ಅರ್ಜುನನಾಗಿಯೇ ಉಳಿದಿದ್ದು ಮಾವುತನ ಪ್ರೀತಿಯ ಆರೈಕೆಯಿಂದಲೇ. ಅರ್ಜುನನಂತ ದೈತ್ಯನನ್ನೇ ಮಾವುತ ನಿಗ್ರಹಿಸಿ ನೋಡಿಕೊಂಡಿರುವ ಉದಾಹರಣೆ ಇರುವಾಗ ಈಗಲೂ ಮಾವುತರು ಗಮನ ಹರಿಸಬೇಕು. ಅಧಿಕಾರಿಗಳ ಕಣ್ಗಾವಲು ಇರಲೇಬೇಕು. ಇಲ್ಲದೇ ಇದ್ದರೆ ಆಗುವ ಅನಾಹುತದ ಪರಿಣಾಮ ದೊಡ್ಡದು ಎಂದು 21 ವರ್ಷ ದಸರಾದಲ್ಲಿ ಭಾಗಿಯಾಗಿದ್ದ ಡಾ.ನಾಗರಾಜು ಹೇಳುತ್ತಾರೆ.
ಮಸ್ತಿಯಲ್ಲಿರುವ ಆನೆಯ ಮಾವುತರು ಆನೆಯನ್ನು ಶಿಬಿರಕ್ಕೆ ವಾಪಸ್ಸು ಕಳಿಸುತ್ತಾರೆ ಎಂದು ಅದನ್ನು ಮುಚ್ಚಲು ಮದಜಲ ಬರುವ ಜಾಗದಲ್ಲಿ ನೀರಲ್ಲಿ ತೊಳೆದು ನಂತರ ಮಣ್ಣನ್ನು ಸವರುತ್ತಾರೆ ಹಾಗೆ ಮಾಡಿದರೆ ಮಸ್ತಿಗೆ ಬಂದಿರುವುದು ಕಾಣುವುದಿಲ್ಲ. ಅವರು ಮಸ್ತಿ ಕಾಣಬಾರದೆಂದು ಈ ರೀತಿ ಮಾಡುತ್ತಾರೆ. ಆನೆ ಶಿಬಿರದ ಪಶುವೈದ್ಯಾಧಿಕಾರಿ ಇವುಗಳನ್ನೆಲ್ಲ ಪರೀಕ್ಷಿಸಿ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಮದದಲ್ಲಿರುವ ಆನೆಯ ವಾಸನೆಯನ್ನು ಕಂಡರೆ ಗಂಡು ಆನೆಗಳು ಬೆದರುತ್ತವೆ. ಓಡಿ ಹೋಗುತ್ತವೆ. ಆನೆ ಸಿಬ್ಬಂದಿ ಮಸ್ತಿ ಲಿರುವ ಆನೆಯನ್ನು ಬೇರೆ ಕಡೆ ಕಟ್ಟಿ ಹಾಕಬೇಕು . ಧನಂಜಯ ವಿಚಾರದಲ್ಲೂ ಹೀಗೆ ಆಗಿದೆ ಎಂಬುದು ಮತ್ತೊಬ್ಬ ಹಿರಿಯ ಪಶುವೈದ್ಯಾಧಿಕಾರಿ ಡಾ.ಉಮಾಶಂಕರ್ ಅವರ ಸಲಹೆ.
ಮೈಸೂರು ದಸರಾ ಆನೆಗಳನ್ನು ಜನ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಅಭಿಮಾನದಿಂದಲೇ ನೋಡುತ್ತಾರೆ. ಆರಾಧಿಸುತ್ತಾರೆ ಕೂಡ. ಹೀಗೆ ಜನಮಾನಸದಲ್ಲಿ ಉಳಿದಿರುವ ಆನೆಗಳು ನಾಗರಹೊಳೆ ಸಹಿತ ಹಲವು ಶಿಬಿರ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಒಂದು ವರ್ಷದೊಳಗೆ ತೀರಿಕೊಂಡವು. ಅರ್ಜುನ ಆನೆ ಹಾಗೂ ಅದರ ಮಾವುತ ದೊಡ್ಡ ಮಾಸ್ತಿ, ಬಲರಾಮ ಹಾಗೂ ಅದರ ಮಾವುತರಾಗಿದ್ದ ಸಣ್ಣಪ್ಪ ಕೂಡ ನೆನಪಿನಲ್ಲಿ ಉಳಿಯುತ್ತಾರೆ. ಈಗಿನ ಕ್ಯಾಪ್ಟನ್ ಅಭಿಮನ್ಯು ಹಾಗೂ ಮಾವುತ ವಸಂತ ಕೂಡ ಅಭಿನಂದನಾರ್ಹರೇ. ಅವರ ನಡೆ ಇತರೆ ದಸರಾ ಆನೆಗಳ ಹೊಸ ತಲೆಮಾರಿನ ಮಾವುತರಿಗೆ ಮಾದರಿಯಾಗಬೇಕಷ್ಟೇ. ಆನೆಗಳ ಹೆಸರಲ್ಲೇ ಸಂಬಳ ತೆಗೆದುಕೊಳ್ಳುವ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಪಾಠವಾಗಬೇಕು.
-ಕುಂದೂರು ಉಮೇಶಭಟ್ಟ, ಮೈಸೂರು