Forest Tales: ಗಣ್ಯರ ಫಾರಂ ಹೌಸ್ ಗೆ ಹೊಸ ರೂಪ: ಕಾಡಂಚಿನ ಗ್ರಾಮಗಳಲ್ಲಿ ಅಡ್ಡಿ ಆತಂಕ
ಅರಣ್ಯದಂಚಿನಲ್ಲಿ ಜಮೀನು ಖರೀದಿಸಿ ಆಗಾಗ ಬಂದು ಹೋಗುವವರು ಅಧಿಕ. ಆದರೆ ಇತ್ತೀಚಿಗೆ ದೊಡ್ಡ ಕಟ್ಟಡ ನಿರ್ಮಿಸಿ, ಬೇಲಿ ಹಾಕಿಕೊಂಡು ವನ್ಯಜೀವಿ ಸಂಚಾರಕ್ಕೆ ಅಡಚಣೆಯಾಗುವುದು ಹೆಚ್ಚುತ್ತಿದೆ. ಫಾರಂ ಹೌಸ್(Farm house) ಕಲ್ಪನೆಯಡಿ ವಿಶಾಲ ಮನೆ, ಹೋಂಸ್ಟೇ ನಂತರ ಪ್ರವಾಸೋದ್ಯಮ ಭಾಗವಾಗುವುದೂ ನಡೆದಿದೆ. ಇದಕ್ಕೆ ನಿಯಂತ್ರಣ ಹೇರುವ ಒತ್ತಾಯ ಗಟ್ಟಿಯಾಗಿ ಕೇಳಿ ಬರುತ್ತಿದೆ.
ನಮ್ಮ ಊರ ಜನ ಏನಾದರೂ ಕೃಷಿ ಚಟುವಟಿಕೆಗಾಗಿಯೇ ಕಟ್ಟಡ ಕಟ್ಟಲು ಹೋದರೆ ಅರಣ್ಯ ಇಲಾಖೆಯವರು ಅನುಮತಿ ಕೊಡದೇ ಸತಾಯಿಸ್ತಾರೆ. ಶತಮಾನಗಳಿಂದ ಇಲ್ಲಿಯೇ ಬದುಕು ನಡೆಸಿಕೊಂಡು ಬಂದಿರುವ ನಾವು ಎಲ್ಲಿ ಹೋಗಬೇಕು ಹೇಳಿ. ನಮ್ಮ ಜಾನುವಾರುಗಳು ಕಾಡು ಹತ್ತಿರ ಹೋದರೆ ಕೇಸು ಹಾಕುವ ಬೆದರಿಕೆ ಹಾಕುತ್ತಾರೆ. ಸೂಕ್ಷ್ಮ ಪರಿಸರ ವಲಯ ಅಂತ ಕಾರಣಗಳನ್ನು ನೀಡಿ ನಾವು ಏನೂ ಮಾಡದಂತೆ ಭಯ ಹುಟ್ಟಿಸುತ್ತಾರೆ. ಕಾಡು ಪ್ರಾಣಿಗಳೊಂದಿಗೆ ನಮ್ಮ ಸಹ ಜೀವನ ನಡೆದಿದೆ. ಹೊರಗಿನಿಂದ ಇಲ್ಲಿ ಬಂದು ಜಮೀನು ಖರೀದಿಸಿ ದೊಡ್ಡ ಕಟ್ಟಡ ಕಟ್ಟೋರಿಗೆ ನೀತಿ, ನಿಯಮ ಅನ್ವಯಿಸೋಲ್ಲ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಾಚಹಳ್ಳಿ ಗ್ರಾಮದ ರೈತರು ಹೀಗೆ ಹೇಳುವಾಗ ಅವರ ಮಾತುಗಳಲ್ಲಿ ಆಕ್ರೋಶವೇ ಕಾಣುತ್ತಿತ್ತು.
ಇದು ಬಂಡೀಪುರಕ್ಕೆ ಹೊಂದಿಕೊಂಡ ಹಳ್ಳಿ. ಇದು ಒಂದು ಹಳ್ಳಿಯ ಕಥೆಯಲ್ಲ. ಕರ್ನಾಟಕದಲ್ಲಿ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿಧಾಮಗಳಾಗಿ ಘೋಷಣೆಯಾಗಿರುವ ಎಲ್ಲಾ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಗ್ರಾಮಗಳ ಜನರಲ್ಲೂ ಇಂತಹುದೇ ಆಕ್ರೋಶ ಕೇಳಿ ಬರುತ್ತದೆ.
ಅದೂ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಮೇಲೆಯೇ ಜನರ ಸಿಟ್ಟು ಮಾತನಾಡಿದಷ್ಟೂ ತೀರುವುದೇ ಇಲ್ಲ. ಅದರಲ್ಲೂ ಅರಣ್ಯ ಇಲಾಖೆಯವರ ಮೇಲಂತೂ ಈ ಸಿಟ್ಟಿನ ಪ್ರಮಾಣ ಕೊಂಚ ಹೆಚ್ಚೇ ಇದೆ. ಏಕೆಂದರೆ ಕಾಡಂಚಿನ ಗ್ರಾಮಗಳ ಜನರ ಒಡನಾಟ ಬರೋದು ಅರಣ್ಯ ಇಲಾಖೆಯೊಂದಿಗೆ. ಎಲ್ಲದ್ದಕ್ಕೂ ಅಡ್ಡಿಯನ್ನೇ ಎದುರಿಸುವ ರೈತರು ಅರಣ್ಯ ಇಲಾಖೆ ಯಾವದೂ ಮಿತಿ ಮೀರದಂತೆ ಎಚ್ಚರಿಕೆ ವಹಿಸಲೇಬೇಕು ಎಂದು ಹೇಳುತ್ತಾರೆ.
ಬೆಳಕಿಗೆ ಬರುತ್ತಿವೆ ಒಂದೊಂದೆ
ಹಿರಿಯ ವನ್ಯಜೀವಿ, ಪರಿಸರ ಹೋರಾಟಗಾರ ಹಾಗೂ ತಜ್ಞ ಜೋಸೇಫ್ ಹೂವರ್ ಬಂಡೀಪುರ ಅರಣ್ಯದಂಚಿನಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ನೆಪದ ಚಟುವಟಿಕೆಗಳ ಮೇಲೆ ಸದಾ ನಿಗಾ ವಹಿಸುತ್ತಾರೆ. ವನ್ಯಜೀವಿ ತಜ್ಞ ಡಾ.ಸಂಜಯ್‌ಗುಬ್ಬಿ ಬಂಡೀಪುರ ಅರಣ್ಯದಂಚಿನಲ್ಲಿ ಊರಿನಂತೆಯೇ ಮನೆ ಕಟ್ಟಿಕೊಂಡು ಅಲ್ಲಿ ದೊಡ್ಡ ಗೇಟ್, ಫೆನ್ಸಿಂಗ್ ಅಳವಡಿಸಿಕೊಂಡು ವನ್ಯಜೀವಿಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದರು. ವಾರದ ಹಿಂದೆಯಷ್ಟೇ ನಟ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಬಂಡೀಪುರ ಸಮೀಪದಲ್ಲಿಯೇ ಬೃಹತ್ ಕಟ್ಟಡ ಕಟ್ಟುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಕಷ್ಟು ಸುದ್ದಿಯೂ ಆಗಿ ಗಣೇಶ್ ನ್ಯಾಯಾಲಯ ಮೆಟ್ಟಿಲು ಏರಿದರು. ಇವೆಲ್ಲವೂ ಪ್ರತ್ಯೇಕ ಘಟನೆಗಳ ರೀತಿ ಕಾಣಬಹುದು. ಕರ್ನಾಟಕದ ಬಹುತೇಕ ಪ್ರಮುಖ ಅರಣ್ಯಗಳ ಸುತ್ತ, ಅದರಲ್ಲೂ ಪ್ರವಾಸೋದ್ಯಮ ಬಲಗೊಂಡ ಪ್ರಮುಖ ಅರಣ್ಯ ಪ್ರದೇಶದ ಕಡೆಯಲ್ಲೇ ತನ್ನದೂ ಒಂದು ಸ್ವಂತ ನೆಲೆ ಇರಲೆಂದು ಹಲವಾರು ಗಣ್ಯರು ಹೀಗೆ ಮನೆ ನಿರ್ಮಿಸುತ್ತಾ ಹೋದರೆ ವನ್ಯಜೀವಿಗಳ ಸಂರಕ್ಷಣೆ ಅರ್ಥವಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ನಮ್ಮ ನೀತಿಗಳ ಸ್ವರೂಪ ಹಾಗೂ ಅವುಗಳ ಜಾರಿಯಲ್ಲಿನ ತಾರತಮ್ಯಗಳು ಇಂತಹ ಪ್ರಶ್ನೆಯನ್ನು ಕಾಡಂಚಿನ ಗ್ರಾಮಸ್ಥರೂ ಕೇಳುವಂತೆ ಮಾಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ
ದಶಕದ ಹಿಂದೆಯೇ ಸುಪ್ರೀಂಕೋರ್ಟ್ ಭಾರತದ ಹುಲಿ ಸಂರಕ್ಷಿತ ಪ್ರದೇಶಗಳನ್ನು ಗಟ್ಟಿಗೊಳಿಸಿ ವನ್ಯಜೀವಿಗಳ ಸಹಜ ಸಂಚಾರಕ್ಕೆ ಪೂರಕವಾಗಿ ಸೂಕ್ಷ್ಮ ಪರಿಸರ ವಲಯ( ESZ)ಗಳನ್ನು ಘೋಷಿಸಿತು. ಇದಕ್ಕಾಗಿ ಆಯಾ ಹುಲಿಧಾಮಗಳ ಗಡಿಯಂಚಿನ ಹತ್ತು ಕಿ.ಮಿ ವ್ಯಾಪ್ತಿಯನ್ನು ಸೂಕ್ಷ್ಮ ಪರಿಸರ ವಲಯವಾಗಿ ರೂಪಿಸಲಾಯಿತು. ಇದಕ್ಕೆ ಸ್ಥಳೀಯರ ಸಲಹೆಯನ್ನೂ ಪಡೆಯಲಾಯಿತು. ಇಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ಅಡ್ಡಿಯಿಲ್ಲ. ಆದರೆ ವಾಣಿಜ್ಯ ಚಟುವಟಿಕೆಯನ್ನು ನಡೆಸುವಂತಿಲ್ಲ. ಶಾಶ್ವತ ಕಟ್ಟಡಕ್ಕೆ ಅವಕಾಶವಿಲ್ಲ. ತಾತ್ಕಾಲಿಕವಾಗಿ ಮಾತ್ರ ಕಟ್ಟಡ ನಿರ್ಮಿಸಿಕೊಂಡು ಅಲ್ಲಿ ಇರಲು ಅಡ್ಡಿಯಿಲ್ಲ ಎನ್ನುವ ಅನುಮತಿಯನ್ನು ನೀಡಲಾಯಿತು. ಕರ್ನಾಟಕದಲ್ಲಿ ಬಂಡೀಪುರ, ಭದ್ರಾ, ದಾಂಡೇಲಿ, ಬಿಳಿಗಿರಿರಂಗನ ಹುಲಿಧಾಮಗಳಲ್ಲಿ ಈಗಾಗಲೇ ಪರಿಸರ ಸೂಕ್ಷ್ಮ ವಲಯ ಜಾರಿಗೆ ಬಂದಿದೆ. ನಾಗರಹೊಳೆಯಲ್ಲಿ ಇನ್ನೂ ಜಾರಿಹಂತದಲ್ಲಿದೆ.
ನಮ್ಮಲ್ಲಿ ಯಾವುದೇ ಕಾನೂನನ್ನು ತಮಗೆ ಬೇಕಾದ ನೆಲೆಯಲ್ಲಿ ನೋಡುವ ಮನೋಭಾವ ಹೊಸದೇನೂ ಅಲ್ಲ. ಅದು ಆರಂಭವಾಗವಾಗುವುದು ಹೊಸ ಶೈಲಿಯ ಫಾರಂ ಹೌಸ್. ಅಲ್ಲಿ ಮೇಲ್ನೋಟಕ್ಕೆ ಕೃಷಿ ಚಟುವಟಿಕೆ ನಡೆಯುವಂತಹ ಹೆಸರು ಕಂಡು ಬಂದರೂ ಅಲ್ಲ ವಾಣಿಜ್ಯ ಚಟುವಟಿಕೆಯಾಗಿ ಪರಿವರ್ತನೆಯಾದ ಉದಾಹರಣೆಗಳೂ ಇಲ್ಲವೆಂದೇನೂ ಅಲ್ಲ. ಅನುಮತಿ ಪಡೆಯುವವರೆಗೂ ಕಾನೂನು ಚೌಕಟ್ಟಿನ ಕಾರಣ ನೀಡಿ ಆನಂತರ ಅದನ್ನು ವೈಯಕ್ತಿಕದಿಂದ ವಾಣಿಜ್ಯ ಉದ್ದೇಶಕ್ಕೆ ಬಳಸುವ, ನಿಗದಿತ ಮಿತಿ ಮೀರಿ ಭವ್ಯ ಬಂಗಲೆ ಇಲ್ಲವೇ ಕಟ್ಟಡ ನಿರ್ಮಿಸಿ ಸುರಕ್ಷತೆಗಾಗಿ ತಂತಿ ಬೇಲಿ ಅಳವಡಿಸಿ ಪ್ರಾಣಿಗಳ ಸಂಚಾರಕ್ಕೆ ಅಡ್ಡಿಪಡಿಸುವುದು ನಡೆದಿದೆ. ಇಂತಹ ಹಲವು ಪ್ರಕರಣಗಳು ಅರಣ್ಯದಂಚಿನಲ್ಲಿವೆ. ಅಧಿಕಾರಿಗಳು, ರಾಜಕೀಯ ನೇತಾರರು, ಸೆಲೆಬ್ರೆಟಿಗಳು, ವನ್ಯಜೀವಿ ತಜ್ಞರೂ ಹೀಗೆ ಕಟ್ಟಡ ನಿರ್ಮಿಸಿ ನೊಟೀಸ್ ಶಾಸ್ತ್ರ ಎದುರಿಸಿದವರೇ. ಆದರೆ ಅಲ್ಲೆಲ್ಲಾ ಹೊಟೇಲ್, ಹೋಂಸ್ಟೇ, ಯೋಗ ಕೇಂದ್ರ, ಆಯುರ್ವೇದ ಕೇಂದ್ರಗಳೂ ನಡೆಯುತ್ತವೆ.
ಗಣೇಶ್ ಬರೆದುಕೊಟ್ಟ ಪತ್ರ
ನಟ ಗಣೇಶ್( Golden Star Ganesh) ಬಂಡೀಪುರ ಬಳಿ ಮನೆ ನಿರ್ಮಾಣಕ್ಕೆ ಬರೆದುಕೊಟ್ಟ ಮುಚ್ಚಳಿಕೆ ಪತ್ರ ಹಾಗೂ ಅರಣ್ಯ ಇಲಾಖೆ ನೀಡಿರುವ ನೊಟೀಸ್‌ವೇ ಸೂಕ್ಷ್ಮಪರಿಸರ ವಲಯ ವ್ಯಾಪ್ತಿಯಲ್ಲಿ ಕೈಗೊಳ್ಳುವ ಚಟುವಟಿಕೆಗಳ ಮಿತಿಯನ್ನು ತಿಳಿಸುತ್ತದೆ.
ಗಣೇಶ್ ಹೇಳಿದ್ದು: ಸ್ವಂತಕ್ಕೆ ಮಾತ್ರ ವಾಸಕ್ಕೆ ಮನೆ ಹಾಗೂ ತೋಟಗಾರಿಕೆ ಉದ್ದೇಶದಿಂದ ಸುತ್ತಲೂ ಕಾಂಪೌಂಡ್ ವಾಲ್ ನಿರ್ಮಾಣ ಮಾಡಿಕೊಳ್ಳಲು ಪ್ಲಾನ್ ಹಾಜರಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ವಿಸ್ತೀರ್ಣ ಅಥವಾ ಮಾದರಿ ಬದಲಿಸುವುದಿಲ್ಲ
ಅನುಮತಿ ನೀಡಿರುವ ಸ್ಥಳದಲ್ಲಿ ವಾಸದ ಮನೆಯನ್ನು ಮಾತ್ರ ನಿರ್ಮಾಣ ಮಾಡಿ ಸ್ವಂತಕ್ಕೆ ಮಾತ್ರ ಉಪಯೋಗಿಸಿಕೊಳ್ಳುವೆ. ಯಾವುದೇ ಕಾರಣಕ್ಕೂ ವಾಣಿಜ್ಯ ಹೊಟೇಲ್ ರೆಸಾರ್ಟ್ ಹೋಂಸ್ಟೇ ಬಾಡಿಗೆ ಉದ್ದೇಶಕ್ಕೆ ಉಪಯೋಗಿಸುವುದಿಲ್ಲ
ಸ್ವಂತ ಉಪಯೋಗಕ್ಕಾಗಿ ಮಾತ್ರ ತಾತ್ಕಾಲಿಕ ವಾಸದ ಮನೆ ಕಟ್ಟಡ ನಿರ್ಮಾಣ ಮಾಡಿಕೊಳ್ಳುತ್ತಿದ್ದೇನೆ. ವಸತಿ ಉದ್ದೇಶಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳ ನಿಯಮಗಳನ್ನು ಪಾಲನೆ ಮಾಡಲಾಗುವುದು.
ಯಾವುದೇ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡುವುದಿಲ್ಲ ಹಾಗೂ ವನ್ಯಪ್ರಾಣಿಗಳ ಚಲನ ವಲನಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ
ಕಟ್ಟಣ ನಿರ್ಮಿಸುತ್ತಿರುವ ಪ್ರದೇಶದಿಂದ ಯಾವುದೇ ರೀತಿಯ ದ್ರವ ತ್ಯಾಜ್ಯನ್ನು ನೈಸರ್ಗಿಕ ಹಳ್ಳ ನದಿಗಳಿಗಾಗಲಿ ಅಥವಾ ಕೆರೆ ಕಟ್ಟೆಗಳಿಗಾಗಲಿ ಹರಿ ಬಿಡುವುದಿಲ್ಲ. ಪ್ಲಾಸ್ಟಿಕ್ ಬಳಕೆ ಮತ್ತು ಘನ ತ್ಯಾಜ್ಯಗಳನ್ನು ಸುಡುವುದಿಲ್ಲ.
ಕಟ್ಟಡ ನಿರ್ಮಾಣದ ಪ್ರದೇಶದ ವಿಸ್ತರಣೆ, ಬೇರೆ ರೀತಿಯ ಉಪಯೋಗ ಅಥವಾ ಬೇರೆಯವರಿಗೆ ಹಸ್ತಾಂತರಿಸುವ ಸಂದರ್ಭ ಎದುರಾದಲ್ಲಿ ಪುನಃ ಸೂಕ್ಷ್ಮ ವಲಯದ ನಿರ್ವಹಣಾ ಸಮಿತಿಯ ಮೇಲ್ವಿಚಾರಣೆಗೆ ಸಲ್ಲಿಸುತೇನೆ. ಷರತ್ತುಗಳನ್ನು ಪಾಲಿಸಲು ಬದ್ದನಾಗಿದ್ದು, ಯಾವುದೇ ಸಂದರ್ಭದಲ್ಲಿ ಷರತ್ತು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಅಥವಾ ನಾನು ಸಲ್ಲಿಸಿರುವ ದಾಖಲಾತಿಗಳು ನಕಲಿ ಎಂದು ತಿಳಿದುಬಂದಲ್ಲಿ ಅನುಮತಿ ರದ್ದುಪಡಿಸಬಹುದು.
ಅರಣ್ಯ ಇಲಾಖೆ ನೊಟೀಸ್ : ಜೆಸಿಬಿ ಸಹಾಯದಿಂದ ಭೂಮಿ ಸಮತಟ್ಟು ಮಾಡಿ ಬೃಹತ್ ಕಟ್ಟಡದ ನಿರ್ಮಾಣಕ್ಕೆ ತಯಾರಿ ನಡೆಸುತ್ತಿರುವುದು ಕಂಡು ಬಂದಿದೆ. ಸೂಕ್ಷ್ಮ ಪರಿಸರ ವಲಯದ ಸಮಿತಿಯಲ್ಲಿ ಹಾಗೂ ಕಛೇರಿಗಳಿಗೆ ನೀಡಿರುವ ಪತ್ರದಲ್ಲಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಕಾಮಗಾರಿ ಸ್ಥಗಿತಗೊಳಿಸಿ ಹಾಗೂ ನಿಯಮಾನುಸಾರ ಕ್ರಮ ಕೈಗೊಳ್ಳಿ
ತಾತ್ಕಾಲಿಕ ಕಟ್ಟಡ ದ ಅನುಮೋದಿತ ನೀಲಿ ನಕ್ಷೆ, ಕಂದಾಯ ಇಲಾಖೆ ಮತ್ತು ಇತರೆ ಸಂಬಂಧಿತ ಇಲಾಖೆಗಳಿಂದ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿ ಪಡೆದುಕೊಂಡಿರುವ ಅನುಮೋದಿತ ದಾಖಲೆಗಳನ್ನು ಏಳು ದಿನಗಳೊಳಗೆ ಸಲ್ಲಿಸುವುದು.
ಕಟ್ಟಡಗಳ ಸುತ್ತ
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸೂಕ್ಷ್ಮ ಪರಿಸರ ವಲಯದಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಿಸಲು ಅನುಮತಿ ನೀಡುವ ಹಾಗಿಲ್ಲ. ಅದಕ್ಕೆ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿರುವ ನಿರ್ವಹಣಾ ಸಮಿತಿ ಅನುಮತಿ ನೀಡುತ್ತದೆ. ಆಯಾ ಹುಲಿಧಾಮಗಳ ನಿರ್ದೇಶಕರೇ ಸದಸ್ಯ ಕಾರ್ಯದರ್ಶಿಗಳು. ನಿಯಮ ಉಲ್ಲಂಘಿಸಿದಾಗ ಸದಸ್ಯ ಕಾರ್ಯದರ್ಶಿ ನೇರವಾಗಿ ನ್ಯಾಯಾಲಯದಲ್ಲಿಯೇ ಮೊಕದ್ದಮೆ ದಾಖಲಿಸಲು ಅವಕಾಶವಿದೆ. ಹಾಗೆ ಮೊಕದ್ದಮೆ ದಾಖಲಿಸಿದ ಪ್ರಕರಣಗಳು ಇಲ್ಲ.
ಹೀಗೆ ನಡೆಯುವ ನೊಟೀಸ್ ಸಂವಾದ ಮುಂದೆ ನಿಂತೇ ಹೋಗುತ್ತದೆ. ಕಟ್ಟಡ ನಿರ್ಮಾಣಗೊಂಡು ಚಟುವಟಿಕೆಗಳು ಮುಂದುವರಿಯುತ್ತವೆ. ಪಕ್ಕದ ಜಮೀನ ಸಣ್ಣ ರೈತರು ತೊಂದರೆ ಎದುರಿಸುವುದು ಮಾತ್ರ ತಪ್ಪುವುದೇ ಇಲ್ಲ.
ತಮಿಳುನಾಡು ಮಾದರಿ ಬೇಡ
ಕರ್ನಾಟಕದಿಂದ ತಮಿಳುನಾಡಿಗೆ ಹೋಗುವ ಮಾರ್ಗ. ಗುಂಡ್ಲುಪೇಟೆಯಿಂದ ಹೊರಟರೆ ಹಚ್ಚ ಹಸಿರಿನ ಪರಿಸರ. ಹತ್ತು ಕಿ.ಮಿ. ಕ್ರಮಿಸಿದರೆ ಮಾರ್ಗದುದ್ದಕ್ಕೂ ಕಾಡಿನ ವಾತಾವರಣವೇ ಕಾಣುತ್ತದೆ. ಸುತ್ತಮುತ್ತಲೂ ನೋಡಿದರೆ ಅಲ್ಲಲ್ಲಿ ಕಟ್ಟಡಗಳ ದರ್ಶನವೂ ಆಗುತ್ತದೆ. ಒಳ ಹೊಕ್ಕರೆ ಪ್ರತಿ ಹಳ್ಳಿಯಲ್ಲೂ ಹೀಗೆ ಕನಿಷ್ಠ ಎಂಟರಿಂದ ಹತ್ತು ಮಂದಿಯಾದರೂ ಜಮೀನು ಖರೀದಿಸಿ ಕಟ್ಟಡ ನಿರ್ಮಿಸಿಕೊಂಡ ಉದಾಹರಣೆಯಿದೆ. ಇದು ಮುಂದುವರಿದೇ ಇದೆ. ಬಂಡೀಪುರ ದಾಟಿ ಊಟಿ ಕಡೆ ಹೊರಟರೆ ಮಸನಗುಡಿ ಸಿಗುತ್ತದೆ. ಇಲ್ಲೆಲ್ಲವೂ ಆಗಿರುವುದು ಇದೇ. ಕೃಷಿ ಹೆಸರಲ್ಲಿ ಕಟ್ಟಡ ನಿರ್ಮಿಸಿ ನಂತರ ಅದು ಅನಧಿಕೃತವಾಗಿಯೇ ವಾಣಿಜ್ಯ ವಹಿವಾಟಾಗಿ ಪರಿವರ್ತನೆಯಾಗಿ ಅರಣ್ಯ ಪರಿಸರ ಪ್ರವಾಸೋದ್ಯಮದ ಗಂಭೀರತೆಯನ್ನೇ ಕಳೆದುಕೊಂಡಿದೆ. ನಮ್ಮಲ್ಲೂ ಹೀಗೆ ಮಿತಿ ಇಲ್ಲದೇ ಹೋದರೆ ಮಸನಗುಡಿಯ ಸ್ಥಿತಿಯೇ ಬರಲಿದೆ ಎಂದು ಜೋಸೆಫ್ ಹೂವರ್ ಅವರು ಎಚ್ಚರಿಸುವ ಮಾತುಗಳಲ್ಲಿ ಸತ್ಯವೂ ಇದೆ.
ಏನು ಮಾಡಬಹುದು
ಕರ್ನಾಟಕದಲ್ಲಿ ಸೂಕ್ಷ್ಮ ಪರಿಸರ ವಲಯದ ಗಡಿ ಯಾವುದು. ಎಲ್ಲಿವರೆಗೂ ಈ ಚಟುವಟಿಕೆಗಳಿಗೆ ಮಿತಿ ಇದೆ ಎನ್ನುವುದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು, ಯಾವುದು ಅನುಮತಿ ಪಡೆದಿರುವ ಕಟ್ಟಡ, ಅನುಮತಿ ಇಲ್ಲದೇ ಇರುವುದು ಯಾವುದು ಎನ್ನುವ ವಿವರಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿಯೇ ಗುರುತಿಸಿ ವೆಬ್‌ಸೈಟ್ ಮೂಲಕ ತಿಳಿಸಿದರೆ ಸಾರ್ವಜನಿಕರಿಗೂ ಮಾಹಿತಿ ಇರಲಿದೆ. ಇದನ್ನು ಕರ್ನಾಟಕದಲ್ಲಿ ತುರ್ತಾಗಿ ಮಾಡಬೇಕು. ಮಿತಿ ಮೀರಿ ಕರ್ನಾಟಕವೂ ತಮಿಳುನಾಡು ಮಾದರಿಗೆ ಹೋಗುವ ಮುನ್ನ ಮುನ್ನೆಚ್ಚರಿಕೆ ವಹಿಸಲೇಕು ಎನ್ನುವ ಸಲಹೆಗಳಲ್ಲೂ ಅರಣ್ಯ, ಅರಣ್ಯದಂಚಿನ ಗ್ರಾಮಗಳು, ಅಲ್ಲಿನ ನೈಜ ಜನರ ಹಿತಾಸಕ್ತಿ, ವನ್ಯಜೀವಿಗಳ ಉಳಿವೂ ಅಡಗಿದೆ.
-ಕುಂದೂರು ಉಮೇಶಭಟ್ಟ
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)