Forest Tales: ಕಾಡಿನ ಪ್ರವಾಸ ಕಹಿಯಾಗಿ ಕಾಡದಿರಲಿ, ವನ್ಯಜೀವಿಗಳ ಖಾಸಗಿತನದ ಅರಿವಿರಲಿ; ಅರಣ್ಯದಲ್ಲಿ ನಿಮ್ಮ ನಡವಳಿಕೆ ಹೀಗಿರಲಿ
Tourists ಕಾಡು ಪ್ರವಾಸ ಈಗ ಹೆಚ್ಚಾಗಿದೆ. ಪ್ರವಾಸಿಗರ ಹುಚ್ಚಾಟವೂ ಅತಿಯಾಗಿದೆ. ಇದರಿಂದ ವನ್ಯಜೀವಿಗಳ ನಡುವೆ ಅನಾಹುತಕ್ಕೆ ಸಿಲುಕುವವರೂ ಹೆಚ್ಚಾಗಿದ್ದಾರೆ. ಕಾಡಿಗೆ ಪ್ರವಾಸ ಹೋಗುವವರ ತಯಾರಿ ಹೇಗಿರಬೇಕು ಎನ್ನುವುದನ್ನು ಕಾಡಿನ ಕಥೆಗಳಲ್ಲಿ ಬೆಳಕು ಚೆಲ್ಲಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಬಂಡೀಪುರ ಅರಣ್ಯದಲ್ಲಿ ನಡೆದ ಘಟನೆಯಿದು. ಆನೆ ದೂರದಲ್ಲಿಯೇ ನಿಂತಿದೆ. ಕಾರಿನಿಂದ ಇಳಿದ ಇಬ್ಬರು ಫೋಟೋ ತೆಗೆಯುವ ಸಾಹಸ ಮಾಡಿದರು. ಸಿಟ್ಟು ಎಲ್ಲಿತ್ತೋ. ಆನೆ ಇವರನ್ನು ಬೆನ್ನಟ್ಟಿತು. ಕೆಳಗಿಳಿದವರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಆನೆ ಓಡಿ ಬಂದೇ ಬಿಟ್ಟಿತು. ಇವರೂ ಓಡಿದರು. ಒಬ್ಬಾತ ಅಲ್ಲಿಯೇ ಬಿದ್ದು ಬಿಟ್ಟ. ಆನೆ ಕಾಲಲ್ಲಿ ಒದ್ದು ಮತ್ತೊಬ್ಬನ ಕಡೆ ಓಡಿ ಅಲ್ಲಿಂದ ತಿರುಗಿತು. ಕೆಳಕ್ಕೆ ಬಿದ್ದವನು ಹಾಗು ಮುಂದೆ ಇದ್ದ ಇನ್ನೊಬ್ಬನ ಅದೃಷ್ಟ ಚೆನ್ನಾಗಿತ್ತು ಎನ್ನಿಸುತ್ತದೆ. ಇಬ್ಬರೂ ಬದುಕುಳಿದರು. ದೊಡ್ಡ ಅನಾಹುತ ತಪ್ಪಿತು.
ಪಶ್ಚಿಮ ಬಂಗಾಳದ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚೆಗೆ ಪ್ರವಾಸಿಗರ ಗುಂಪನ್ನು ಹೊತ್ತೊಯ್ಯುತ್ತಿದ್ದ ಎಸ್‌ಯುವಿ ಮೇಲೆ ಘೇಂಡಾಮೃಗ ದಾಳಿ ನಡೆಸಿತು. ಘೇಂಡಾವನ್ನು ಹತ್ತಿರದಿಂದ ಚಿತ್ರಿಸಬೇಕು ಎನ್ನುವುದು ಪ್ರವಾಸಿಗರ ಬೇಡಿಕೆಯಾಗಿತ್ತು. ಚಾಲಕ ಹತ್ತಿರಕ್ಕೇನೋ ಹೋದ, ಆದರೆ ಘೇಂಡಾ ದಾಳಿ ಮಾಡಿದ ವೇಗಕ್ಕೆ ಚಾಲಕ ವಾಹನ ಹಿಂದೆ ತೆಗೆದುಕೊಳ್ಳಲೂ ಆಗದೇ ವಾಹನ ಕಂದಕಕ್ಕೆ ಬಿದ್ದು ಪ್ರವಾಸಿಗರ ಸ್ಥಿತಿ ಹೇಳತೀರದು. ಕೊನೆಗೆ ಘೇಂಡಾಮೃಗ ಹಿಂದಕ್ಕೆ ಸರಿದು ಅವರು ನಿಟ್ಟುಸಿರು ಬಿಟ್ಟರು.
ಎರಡು ವರ್ಷದ ಹಿಂದೆ ಆನೆಕಲ್ ತಾಲ್ಲೂಕಿನ ಕಾಡಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಗೆಂದು ಅತಿಗಣ್ಯರನ್ನು ಕರೆದೊಯ್ದಿದ್ದಿದ್ದರು. ಅವರಿಗೆ ಪ್ರಾಣಿಗಳ ದರ್ಶನವೇನೋ ಸಿಕ್ಕಿತು. ಒಳ ಹೊಕ್ಕಾಗಿ ಸಫಾರಿಗೆಂದು ತಂದಿದ್ದ ವಾಹನ ಕೆಟ್ಟು ಹೋಯಿತು. ಇದೇ ವೇಳೆ ಹುಲಿಯೊಂದು ಅದೇ ದಾರಿಯಲ್ಲಿ ಬಂದಿದ್ದು ಇದನ್ನು ಕಂಡವರಿಗೆ ಖುಷಿಯಾಗಿದೆ. ಆ ಖುಷಿ ಕ್ಷಣ ಬಹಳ ಹೊತ್ತು ಇರಲಿಲ್ಲ. ಹುಲಿ ಸಫಾರಿ ವಾಹನದ ಮೇಲೆ ದಾಳಿ ಮಾಡಿಯೇ ಬಿಟ್ಟಿತು. ಏನು ತೋಚಲಾಗದೇ ವಾಹನದಲ್ಲಿದ್ದರಿಗೆ ಭಯ. ಸದ್ಯ ವಾಹನ ಸಂಪೂರ್ಣ ಕವರ್ ಆಗಿದ್ದರಿಂದ ವಾಹನದ ಭಾಗಕ್ಕೆ ಹುಲಿ ಪಂಜದಿಂದ ಏಟು ಕೊಟ್ಟು ಅಲ್ಲಿಂದ ಹೊರಟಿದೆ. ಮತ್ತೊಂದು ವಾಹನ ತರಿಸಿ ಅರಣ್ಯ ಇಲಾಖೆಯವರು ಅವರನ್ನು ವಾಪಾಸ್ ಕರೆಯಿಸಬೇಕಾಯಿತು.
ಆರು ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿಯಲ್ಲಿ ಪ್ರವಾಸಕ್ಕೆ ಬಂದವರು ಕೆರೆಯ ಬಳಿ ಮರಿಯೊಂದಿಗೆ ನೀರಾಟವಾಡುತ್ತಿದ್ದ ಆನೆಯನ್ನು ನೋಡಿದರು. ಇವರಿಗೆ ಖುಷಿ. ಅದಕ್ಕೆ ಕಿರಿಕಿರಿ. ಆನೆ ಮಜ್ಜನದ ಕ್ಷಣಗಳನ್ನು ಜೀಪಿನಲ್ಲಿದ್ದವರು ಸೆರೆ ಹಿಡಿಯಲು ಶುರು ಮಾಡಿದರು. ಜತೆಗೆ ತರಹೇವಾರಿ ಪ್ರತಿಕ್ರಿಯೆ. ಆನೆ ಒಂಟಿಯಿದ್ದಾಗ ಇಲ್ಲವೇ ಮರಿಯೊಂದಿಗೆ ಇದ್ದಾಗ ಯಾವಾಗಲೂ ಎಚ್ಚರದಿಂದ ಇರಬೇಕು ಎಂದು ಜೀಪಿನಲ್ಲಿ ತಿಳಿದವರಿಗೆ ಗೊತ್ತೇ ಇರಲಿಲ್ಲ. ಆನೆ ಓಡಿ ಬಂದ ರಭಸಕ್ಕೆ ಇವರ ಜೀವ ಹೋಗಿಬಂದ ಹಾಗಾಯಿತು. ಏನು ಮಾಡಬೇಕೋ ತಿಳಿಯದಾದರು. ಆನೆ ಇವರನ್ನು ಹೆದರಿಸಿ ಅಲ್ಲಿಯೇ ನಿಂತಿತು. ಅಬ್ಬಾ ಎಂದವರೇ ಅಲ್ಲಿಂದ ಜೀಪನ್ನು ಮುಂದೆ ಓಡಿಸಿಕೊಂಡು ಬದುಕಿದೆಯೋ ಬಡಜೀವ ಎಂದು ಬಂದರು.
ಇಂತಹ ಘಟನೆ ಒಂದೆರಡಲ್ಲ. ಆಗಾಗ್ಗೆ ಇವು ಮರುಕಳಿಸುತ್ತಲೇ ಇರುತ್ತವೆ. ಕಾಡು ಪ್ರಾಣಿಗಳ ನಡವಳಿಕೆ ಬಗ್ಗೆ ತಿಳಿದಿದ್ದರೂ. ಹಿಂದೆ ಇದೇ ರೀತಿ ದಾಳಿ ಮಾಡಿತ್ತು ಎನ್ನುವುದು ಗೊತ್ತಿದರೂ ನಾವು ಒಮ್ಮೆ ಯಾಕೆ ಇದನ್ನು ನೋಡಿ ಬಿಡಬಾರದು ಎನ್ನುವ ಮನೋಭಾವದಿಂದ ಅರಣ್ಯಕ್ಕೆ ಹೋಗುವವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಭಾರತ, ಈಶಾನ್ಯ ರಾಜ್ಯಗಳಲ್ಲೂ ಪ್ರವಾಸಿಗರ ಮೇಲೆ ಇಂತಹ ಪ್ರಾಣಿ ದಾಳಿ ನಡೆದಿವೆ. ಅವುಗಳ ಪ್ರದೇಶಕ್ಕೆ ಹೋಗಿ ಶಿಸ್ತಿನಿಂದ ನಡೆದುಕೊಳ್ಳದೇ ಇದ್ದರೆ, ಅವುಗಳ ಬದುಕಿಗೆ ಭಂಗ ತಂದರೆ ಸುಮ್ಮನಿರಲು ಆಗುತ್ತದೆಯೇ ಎನ್ನುವ ಪ್ರಶ್ನೆ ಸಹಜ ನ್ಯಾಯದ್ದು. ಇದರ ಫಲ ಜೀವ ಹಾನಿ ಇಲ್ಲವೇ ಅಂಗವೈಕಲ್ಯದಂತ ಜೀವನಪೂರ್ತಿ ಮರೆಯಲಾಗದ ಕಹಿ ಘಟನೆ.
ಕಾಡಿಗೆ ಪ್ರವಾಸ ಹೋಗುವವರ ಸಂಖ್ಯೆ ಈಗ ಅಧಿಕವಾಗಿದೆ. ಅರಣ್ಯದಂಚಿನಲ್ಲಿಯೇ ರೆಸಾರ್ಟ್, ಹೋಂಸ್ಟೇಗಳು ಸಾಕಷ್ಟು ಬಂದಿರುವುದು. ಅರಣ್ಯ ಇಲಾಖೆಯೇ ಎಲ್ಲ ಕಡೆ ಸಫಾರಿ ಆರಂಭಿಸಿರುವುದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಹೊರ ವಲಯ,ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕಲಬುರಗಿ, ವಿಜಯನಗರ, ತುಮಕೂರು, ಚಿತ್ರದುರ್ಗ. ಬೆಳಗಾವಿ, ಧಾರವಾಡ, ಉಡುಪಿ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶವಿದೆ. ಕೆಲವು ಕಡ ಸಫಾರಿ, ದೋಣಿ ವಿಹಾರ, ಟ್ರಕ್ಕಿಂಗ್, ಬೆಟ್ಟಕ್ಕೆ ಭೇಟಿಯಂತಹ ಚಟುವಟಕೆಗಳು ನಡೆಯುತ್ತಿವೆ. ಕೆಲವರು ತಮಿಳುನಾಡು, ಕೇರಳಕ್ಕೆ ಹೋಗುವಾಗಲು ಕಾಡು ದಾಟಲೇಬೇಕು. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತ, ಉತ್ತರ ಭಾರತದ ಹಲವು ಕಡೆ ಪರಿಸರ ಪ್ರವಾಸೋದ್ಯಮವಿದೆ. ಇದು ಖುಷಿಯ ಸಂಗತಿಯಾದರೆ ಪರಿಸರ ಪ್ರವಾಸ ಹೊರಡುವವರು ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳದೇ ಅರಣ್ಯದಲ್ಲಿ ಮನಸೋ ಇಚ್ಛೆ ವರ್ತಿಸಿ ತೊಂದರೆಗೆ ಸಿಲುಕುವುದು ನಡದೇ ಇದೆ.
ಬಹುತೇಕ ಕರ್ನಾಟಕದ ಅರಣ್ಯದ ಹೆದ್ದಾರಿಗಳಲ್ಲಿ ಬರುವ ಪ್ರವಾಸಿಗರು ನಿಲ್ಲದಂತೆ ನೋಡಿಕೊಳ್ಳಲು ವಾಹನ ಗಸ್ತು ಇರುತ್ತದೆ. ಕೆಲವರಿಗೆ ದಂಡ ವಿಧಿಸಿ ಎಚ್ಚರಿಸಿ ಕಳುಹಿಸಿದ್ದು ಇದೆ. ನಾಗರಹೊಳೆಯಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಗೆ ಪ್ರವಾಸಿಗರು ಇಂತಿಷ್ಟು ಸಮಯದಲ್ಲಿಯೇ ತಲುಪಬೇಕು ಎನ್ನುವ ನಿಯಮ ಮಾಡಲಾಗಿದೆ. ಪ್ರವಾಸಿಗರು ಇವೆಲ್ಲವನ್ನೂ ಲೆಕ್ಕಿಸದೇ ಕಾಡನ್ನು ಮೋಜಿನ ತಾಣ ಮಾಡಿಕೊಂಡು ಅನಾಹುತ ತಂದೊಡ್ಡಿಕೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಗಳು ಬೇಸರದಿಂದಲೇ ಹೇಳುತ್ತಾರೆ.
ಮೊಬೈಲ್ ಬಂದ ಮೇಲೆ
ಪ್ರವಾಸ ಎನ್ನುವುದು ಮನುಷ್ಯದ ಬದುಕಿನ ಅವಿಭಾಜ್ಯ ಅಂಗ. ಅದರಲ್ಲೂ ಅರಣ್ಯ ಪ್ರವಾಸ ಎನ್ನುವುದು ಎಂತಹ ಮನುಷ್ಯನನ್ನು ಪುಳಕಿತಗೊಳಿಸುವ ಮಾರ್ಗವೂ ಹೌದು. ಹಿಂದೆಲ್ಲಾ ಅರಣ್ಯ ಪ್ರವಾಸ ಕೈಗೊಳ್ಳುವ ಸನ್ನಿವೇಶ ಕಡಿಮೆ ಇತ್ತು. ಏಕೆಂದರೆ ಅರಣ್ಯದಲ್ಲಿ ಸಫಾರಿ ಮಿತಿ ಇತ್ತು. ವಾಹನಗಳ ಸೌಕರ್ಯವೂ ಅಷ್ಟಾಗಿ ಇರಲಿಲ್ಲ. ಹೆದ್ದಾರಿಗಳೂ ಕಡಿಮೆಯೇ ಇದ್ದವು. ಸೀಮಿತವಾಗಿ ಕ್ಯಾಮರ ಬಳಸುವವರು ಇದ್ದರು.
ಈಗ ಎಲ್ಲವೂ ಬದಲಾಗಿದೆ. ಕಾಡು ನೋಡಬೇಕು ಎಂದು ಹಂಬಲಿಸುವವರ ಸಂಖ್ಯೆ ಅಧಿಕವಾಗಿದೆ. ಪರಿಸರ ಪ್ರವಾಸೋದ್ಯಮದ ನೆಪದಲ್ಲಿ ಸಫಾರಿ ಪ್ರಮಾಣವೂ ಹೆಚ್ಚಿದೆ. ಇದರೊಟ್ಟಿಗೆ ಮೊಬೈಲ್ ಎಂಬ ಮಾಯೆಯಂತೂ ಅರಣ್ಯ ಪ್ರವಾಸದಲ್ಲಿ ಖುಷಿಯನ್ನು ಸೆರೆಹಿಡಿಯುವ ನೆಪದಲ್ಲಿ ಅನಾಹುತವನ್ನೂ ತಂದೊಡ್ಡುವ ಮಾರ್ಗವೂ ಆಗಿದೆ. ಮೊಬೈಲ್‌ನಲ್ಲಿ ಪ್ರಾಣಿಗಳ ಖಾಸಗಿ ಬದುಕನ್ನೂ ಅತಿಯಾಗಿ ಸೆರೆ ಹಿಡಿಯಲು ಹೋಗಿ ಅವುಗಳು ನಮ್ಮ ಮೇಲೆ ದಾಳಿ ಮಾಡುವ ಪ್ರಮಾಣವೂ ಹೆಚ್ಚಿದೆ. ಬಹುತೇಕರು ಸಂಕಷ್ಟಕ್ಕೆ ಸಿಲುಕಿ ಅನಾಹುತ ಮಾಡಿಕೊಳ್ಳುವುದು ಮೊಬೈಲ್‌ನಿಂದಲೇ.
ಯಾರಾದರೂ ನಮ್ಮ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಗೌಪ್ಯತೆಯನ್ನು ಆಕ್ರಮಣ ಮಾಡುವ ಬಗ್ಗೆ ನಾವು ಮಾತನಾಡುತ್ತೇವೆ, ಅದು ಪ್ರಾಣಿಗಳಿಗೂ ಅನ್ವಯಿಸುತ್ತದೆ.ಪ್ರಾಣಿಗಳ ಬದುಕನ್ನು ನಾವೂ ಗೌರವಿಸುವುದು ಅತ್ಯಂತ ಮುಖ್ಯವಾದ ವಿಷಯ. .ಅರಣ್ಯ ಪ್ರದೇಶಗಳಿಗೆ ತಮ್ಮ ವಾಹನಗಳಲ್ಲಿ ಬರುವವರು ಸೂಕ್ತ ಮಾಹಿತಿ, ಮುನ್ನೆಚ್ಚರಿಕೆಯ ಸಿದ್ಧತೆಯೊಂದಿಗೆ ಪ್ರವೇಶಿಸಬೇಕು. ಅರಣ್ಯ ಪ್ರವಾಸ ಎನ್ನುವುದು ಎನ್ನುವುದು ಸುಲಭವಲ್ಲ. ಅದೊಂದು ಸುಪ್ತ ಅಪಾಯದ ಹಾದಿಯೂ ಹೌದು ಎಂದು ಪ್ರವಾಸ ಬರುವವರು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುವುದು ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನ ವಿಜ್ಞಾನಿ ಎಂ ಆನಂದ ಕುಮಾರ್ ಅಭಿಪ್ರಾಯ.
ರೀಲ್ಸ್ ಹುಚ್ಚು
ಮೊಬೈಲ್‌ನ ನಂತರ ಈಗ ರೀಲ್ಸ್ ಹುಚ್ಚು ಹಿಡಿದಿದೆ. ಎಲ್ಲರಿಗಿಂತ ಮೊದಲು, ವಿಭಿನ್ನ, ಆಸಕ್ತಿದಾಯಕ ರೀಲ್ಸ್‌ಗಳನ್ನು ಹಾಕಬೇಕು ಎನ್ನುವ ಧಾವಂತ ಎಲ್ಲರನ್ನು ಆವರಿಸಿದೆ. ಕಾಡಿಗೆ ಹೋದಾಗ ಯಾವುದೇ ವನ್ಯಜೀವಿಯೊಂದಿಗೆ ತಾವೂ ಕಾಣುವ ರೀತಿ ವಿಡಿಯೋ ಮಾಡಬೇಕು. ಹತ್ತಿರದಿಂದ ವಿಡಿಯೋ ಮಾಡುವ ಉಮೇದು. ಆಗ ವಾಹನದಿಂದ ಕೆಳಕ್ಕೆ ಇಳಿಯಲೇಬೇಕು. ಇನ್ನೇನೋ ಸಾಹಸ ಮಾಡಲೇಬೇಕಾಗುತ್ತದೆ. ರೀಲ್ಸ್ ಹುಚ್ಚಿನಿಂದಾಗಿ ಏನೇನು ಅನಾಹುತಗಳು ಆಗಿವೆ ಎನ್ನುವುದಕ್ಕೆ ವಿಡಿಯೋಗಳೇ ಸಾಕ್ಷಿ.
ಹೀಗಿರಲಿ ನಿಮ್ಮ ಕಾಡು ಪ್ರವಾಸದ ನಡಾವಳಿ ಮತ್ತು ನಡುವಳಿಕೆ
- ನಾವು ಬಂದಿರುವುದು ಪ್ರಾಣಿಗಳ ಜಾಗದಲ್ಲಿ ಎನ್ನುವ ಕನಿಷ್ಠ ಪ್ರಜ್ಞೆ ಇರಬೇಕು
- ಜೋರಾಗಿ ಕೂಗುವುದು, ಪ್ರಾಣಿಗಳ ಧ್ವನಿಯನ್ನೇ ಅನುಕರಿಸಿ ತೊಂದರೆ ಕೊಡಬೇಡಿ
- ಮೊಬೈಲ್ ಅನ್ನು ಪ್ರಾಣಿಯ ಹತ್ತಿರಕ್ಕೆ ತೆಗೆದುಕೊಂಡು ಹೋಗುವವ ದುಸ್ಸಾಹ ಬೇಡ.
- ಪ್ರವಾಸ ಹೋಗುವಾಗ ಕಾಡಿನ ರಸ್ತೆಯಲ್ಲಿ ವಾಹನ ನಿಲ್ಲಿಸುವುದು ಒಳ್ಳೆಯದಲ್ಲ
- ಹೆಚ್ಚು ಹೊತ್ತು ನಿಂತಷ್ಟು ಪ್ರಾಣಿಗಳು ವ್ಯಘ್ರಗೊಳ್ಳುವ ಸನ್ನಿವೇಶ ಹೆಚ್ಚು.
- ಕಾಡಿನಲ್ಲಿ ಹೊರಟಾಗ ವಾಹನ ನಿಲ್ಲಿಸುವುದು, ಕೆಳಕ್ಕೆ ಇಳಿಯುವುದು ಸಂಪೂರ್ಣ ನಿಷಿದ್ದ. ಇದಕ್ಕೆ ಅರಣ್ಯ ಇಲಾಖೆ ದಂಡ ವಿಧಿಸಬಹುದು
- ರಸ್ತೆಯಲ್ಲಿ ಯಾವುದೇ ಪ್ರಾಣಿಗಳು ಸಿಕ್ಕರೂ ಅವುಗಳಿಗೆ ಆಹಾರ ನೀಡುವುದೂ ಒಳ್ಳೆಯದಲ್ಲ. ಇದು ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
- ಜಿಂಕೆ, ಆನೆ, ಕಾಡೆಮ್ಮೆ, ಹುಲಿ ಸೇರಿದಂತೆ ಯಾವುದೇ ಪ್ರಾಣಿ ಕಂಡರೂ ಹತ್ತಿರದಲ್ಲಿ ನಿಲ್ಲಿಸಿ ಅವುಗಳ ಚಿತ್ರ, ವಿಡಿಯೋ ಸೆರೆ ಹಿಡಿಯುವ ಸಾಹಸಕ್ಕೆ ಹೋಗಲೇಬೇಡಿ.
- ಅದರಲ್ಲೂ ಪ್ರಾಣಿ ಮರಿಯೊಂದಿಗಿರುವುದನ್ನು ಕಂಡಾಗ ಎಚ್ಚರಿಕೆ ವಹಿಸಲೇಬೇಕು. ಯಾವ ಕ್ಷಣದಲ್ಲಾದರೂ ಮರಿ ಸುರಕ್ಷತೆಗೆ ಅವು ದಾಳಿ ಮಾಡಬಹುದು.
- ಕಾಡಿನ ಪ್ರವಾಸಕ್ಕೂ ಮುನ್ನ ಆನೆ, ಹುಲಿ, ಕರಡಿ, ಕಾಡೆಮ್ಮೆ ಸಹಿತ ಪ್ರಾಣಿಗಳ ನಡವಳಿಕೆ, ದಾಳಿಯಿಂದ ತಪ್ಪಿಸಿಕೊಳ್ಳುವ ಮಾರ್ಗದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಕಾಡಿಗೆ ಹೋಗಿ ಹಸಿರು ಲೋಕದಲ್ಲಿ ಕೆಲ ಕ್ಷಣ ಕಳೆದು ಬನ್ನಿ. ನಿಮ್ಮ ಯಾತ್ರೆ ಕಹಿ ಆಗದಿರಲಿ.
-ಕುಂದೂರು ಉಮೇಶಭಟ್ಟ, ಮೈಸೂರು