World Lions Day 2024: ಇಂದು ಅಂತರಾಷ್ಟ್ರೀಯ ಸಿಂಹದ ದಿನ, ಕರ್ನಾಟಕದ ಕಾಡಿನಲ್ಲಿ ಸಿಂಹದ ವಾಸ ಏಕಿಲ್ಲ, ಏನಿರಬಹುದು ಕಾರಣ
Lions in Karnataka ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಹುಲಿ, ಆನೆ, ಚಿರತೆಗಳಿವೆ. ಆದರೆ ಸಿಂಹಗಳೇ ಇಲ್ಲ. ಏಕೆ ಹೀಗೆ. ವಿಶ್ವ ಸಿಂಹ ದಿನದ(World lion day) ಸಂದರ್ಭದಲ್ಲಿ ಇಲ್ಲಿದೆ ಉತ್ತರ.
ಸಿಂಹ ಎಂದಾಕ್ಷಣಾ ಥಟ್ಟನೆ ನಮಗೆ ನೆನಪಾಗುವುದು ಕಾಡಿನ ರಾಜ. ಭಾರತದಲ್ಲಿ 1973 ಕ್ಕೂ ಮುಂಚೆ ರಾಷ್ಟ್ರೀಯ ಪ್ರಾಣಿಯಾದದ್ದು ಸಿಂಹವೇ. ಭಾರತದಲ್ಲಿರುವುದು ಏಷ್ಯಾಟಿಕ್ ಸಿಂಹಗಳು. ಇವು ಗುಜರಾತಿನ ಗಿರ್ ಅರಣ್ಯದಲ್ಲಿ ಮಾತ್ರ ಕಂಡು ಬರುತ್ತವೆ. ಬೇರೆ ಯಾವುದೇ ರಾಜ್ಯದ ಅರಣ್ಯಗಳಲ್ಲೂ ಇವು ಸದ್ಯ ಕಂಡುಬರುವುದಿಲ್ಲ. ನಮ್ಮ ಕರುನಾಡಲ್ಲಿ ಸಿಂಹಗಳ ಇರುವಿಕೆಯ ಬಗ್ಗೆ ಕುರುಹುಗಳಿಲ್ಲ. ನಮ್ಮದೇನಿದ್ದರೂ ಹುಲಿಕಾಡು. ಆಫ್ರಿಕಾದ ಸಿಂಹಗಳು ಇದ್ದರೂ ಏಷ್ಯಾಟಿಕ್ ಸಿಂಹಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ನಮ್ಮಲ್ಲಿರುವುದು ಏಷಾಟಿಕ್ ಸಿಂಹಗಳೇ.
ಸಿಂಹಗಳ ದಿನ
ಎಲ್ಲಾ ಪ್ರಾಣಿಗಳಿಗೂ ಒಂದೊಂದು ದಿನ ಇರುವ ಹಾಗೆ ಕಾಡಿನ ರಾಜ ಸಿಂಹನಿಗೂ ಒಂದು ದಿನ. ಅದು ಆಗಸ್ಟ್ 10 ಅನ್ನು ವಿಶ್ವ ಸಿಂಹದ ದಿನವಾಗಿ ಆಚರಿಸಲಾಗುತ್ತವೆ. ದಶಕದ ಹಿಂದೆ ಆರಂಭವಾದ ಈ ಉಪಕ್ರಮ ಪ್ರತಿ ವರ್ಷ ಮುಂದುವರೆಸಿಕೊಂಡು ಬರಲಾಗುತ್ತಿದೆ.
ಸಿಂಹಗಳ ರಕ್ಷಣೆ ಜತೆಯಲ್ಲಿ ಅರಣ್ಯದ ಉಳಿವಿಗಾಗಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಸಿಂಹದ ದಿನವನ್ನು ಆಚರಣೆ ಮಾಡಲಾಗುತ್ತದೆ. ವಿಶ್ವ ಸಿಂಹ ದಿನವನ್ನು ಮೊದಲು ಆಚರಣೆಗೆ ತಂದವರು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಎಂಬ ದಂಪತಿಗಳು. 2013ರಿಂದ ಆಗಸ್ಟ್ 10ರಂದು ವಿಶ್ವ ಸಿಂಹಗಳ ದಿನವನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಗುಜರಾತ್ ನಲ್ಲಿ ಮಾತ್ರವಲ್ಲದೇ ಸಿಂಹದ ಕುರಿತು ಜಾಗೃತಿಗಾಗಿ ಎಲ್ಲೆಡೆ ಈ ದಿನ ಆಚರಣೆ ನಡೆಯುತ್ತದೆ.
ಸಿಂಹಗಳ ಬದುಕಿನ ಸುತ್ತಾ
ಸಿಂಹಗಳು ಕಾಡಿನಲ್ಲಿರುವ ಪ್ರಮುಖ ವನ್ಯಜೀವಿಗಳು. ಆದರೆ ಕರ್ನಾಟಕದಲ್ಲಿ ವಿಶಾಲ ಅರಣ್ಯ ಪ್ರದೇಶವಿದೆ. ಇಡೀ ದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹುಲಿ ಸಂಖ್ಯೆ ಹೊಂದಿರುವ ದೇಶ ಕರ್ನಾಟಕ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂಬರ್ 1. ಇದಲ್ಲದೇ ಹತ್ತಾರು ಬಗೆಯ ವನ್ಯಜೀವಿಗಳು ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಬದುಕು ಕಂಡುಕೊಂಡಿವೆ. ಹೀಗಿದ್ದರೂ ಸಿಂಹಗಳು ಮಾತ್ರ ಕರ್ನಾಟಕದಲ್ಲಿ ಇಲ್ಲ. ಶತಮಾನದ ಹಿಂದೆ ಸಿಂಹಗಳು ಕರ್ನಾಟಕದಲ್ಲೂ ಇದ್ದವು. ಇತ್ತೀಚಿನ ಏಳೆಂಟು ದಶಕದಲ್ಲೂ ಕಾಡಿನಲ್ಲಿ ಸಿಂಹಗಳಿಲ್ಲ. ಏಕೆ ಎನ್ನುವ ಪ್ರಶ್ನೆ ಸಹಜವಾಗಿ ಇದ್ದೇ ಇರುತ್ತದೆ.
ಸಿಂಹ ಹುಲಿಯಂತೆಯೇ ಒಂಟಿ ಜೀವಿ. ಕೆಲವೊಮ್ಮೆ ಮಾತ್ರ ಹೆಣ್ಣಿನೊಂದಿಗೆ ಇಲ್ಲವೇ ಮೂರ್ನಾಲ್ಕು ಸಿಂಹಗಳನ್ನು ನೋಡಬಹುದು ಬಿಟ್ಟರೆ ಹೆಚ್ಚು ಸಮಯ ಅವರು ಒಂಟಿಯಾಗಿ ಇರಬಲು ಬಯಸುತ್ತವೆ. ಬಹುತೇಕ ಸಂತಾನೋತ್ಪತ್ತಿ ಸಂದರ್ಭದಲ್ಲಿ ಮಾತ್ರ ಸಂಗಾತಿ ಜತೆಗೆ ಕಾಣಿಸಿಕೊಳ್ಳುತ್ತವೆ. ಒಂಟಿಯಾಗಿ ಸಂಚರಿಸುವ ಸಿಂಹವೂ ಕೂಡ ಹುಲಿ ಮಾದರಿಯಲ್ಲಿ ಮೂತ್ರ ಬಳಸುವ ಮೂಲಕ ತನ್ನ ಪ್ರದೇಶದ ಗಡಿ ಗುರುತು ಮಾಡಿಕೊಳ್ಳುತ್ತದೆ. ಗಡಿ ದಾಟಿ ಬರುವ ತನ್ನದೇ ಜಾತಿಯ ಪ್ರಾಣಿಗಳೊಂದಿಗೆ ಸಾಯುವಷ್ಟರ ಮಟ್ಟಿಗೆ ಕಾದಾಡುವುದು ವನ್ಯಜೀವಿಗಳ ವಿಶೇಷ. ಅದು ಸಿಂಹಕ್ಕೂ ಅನ್ವಯಿಸುತ್ತದೆ. ಸಿಂಹ ಬೇಕು ಬೇಕೆಂದಾಗೆಲ್ಲ ಬೇಟೆ ಆಡುವುದಿಲ್ಲ. ಹಸಿವಾದಾಗಷ್ಟೇ ಬೇಟೆ ಆಡುತ್ತವೆ.ಕಾಡಿನಲ್ಲಿರುವ ಸಿಂಹಗಳ ಜೀವಿತಾವಧಿ 15ರಿಂದ 16 ವರ್ಷಗಳು. ಸಿಂಹ 13–14ನೇ ವರ್ಷಕ್ಕೆ ಕಾಲಿಡುವ ಸಂದರ್ಭದಿಂದ ಹಲ್ಲುಗಳು ಬೀಳಲು ಶುರುವಾಗಿ. ಬೇಟೆ ಶಕ್ತಿ ಕಳೆದುಕೊಳ್ಳುತ್ತವೆ. ಅಲ್ಲಿಗೆ ಅವುಗಳ ಆಯುಷ್ಯ ಬಹುತೇಕ ಮುಗಿದ ಹಾಗೆಯೇ. ಅದೇ ರೀತಿ ಸಿಂಹ ತುಂಬ ಸೋಮಾರಿ ಜೀವಿ. ದಿನದ 15ರಿಂದ 16 ಗಂಟೆಗಳ ಕಾಲ ನಿದ್ರೆಯಲ್ಲೇ ದಿನ ಕಳೆಯುತ್ತದೆ.
ಕರ್ನಾಟಕದಲ್ಲಿ ಏಕಿಲ್ಲ
ಸಿಂಹಗಳು ಕಲ್ಲು ಬಂಡೆಗಳು, ಕುರುಚಲು ಗಿಡಗಳಿರುವ ಕಾಡುಗಳೆಂದರೆ ಇಷ್ಟವಾದ ಪ್ರದೇಶಗಳು. ಅದರಲ್ಲೂ ಸಿಂಹಗಳ ಆವಾಸಸ್ಥಾನ ಕುರುಚಲು ಪ್ರದೇಶವೇ ಆಗಿರಬೇಕು. ಅಂದರೆ ಹುಲ್ಲುಗಾವಲು ಇದ್ದರೆ ಸಿಂಹಗಳು ಸಹಜವಾಗಿ ಬದುಕು ಕಂಡುಕೊಳ್ಳುತ್ತವೆ. ಅಂತಹ ಹುಲ್ಲುಗಾವುಗಳಲ್ಲಿ ಅವುಗಳು ಸ್ವಚ್ಛಂದವಾಗಿ ಬದುಕಬಲ್ಲವು. ಹುಲ್ಲುಗಾವಲು ಇಲ್ಲದ ಪ್ರದೇಶದಲ್ಲಿ ಸಿಂಹಗಳನ್ನು ಬಿಟ್ಟರೆ ಅವು ಹೆಚ್ಚು ಕಾಲ ಬದುಕಿರಲಾರವು. ಸಿಂಹಗಳಿಗೆ ದಟ್ಟವಾದ ಅರಣ್ಯ ಪ್ರದೇಶ ಇಷ್ಟವಾಗುವುದಿಲ್ಲ. ಕರ್ನಾಟಕದಲ್ಲೂ ಹುಲ್ಲುಗಾವಲು ಮಾಯವಾಗಿ ಹೋಗಿದೆ. ಕೆಲವೇ ಪ್ರದೇಶದಲ್ಲಿ ಹುಲ್ಲುಗಾವಲಿನಂತ ಅರಣ್ಯ ಇದ್ದರೂ ಅಲ್ಲಿ ಸಿಂಹಗಳು ಇರಲು ಆಗದಷ್ಟು ಸೀಮಿತ ಪ್ರದೇಶವಿದೆ. ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿಯಂತಹ ಕಾಡುಗಳು, ಇತರೆ ಅರಣ್ಯದಲ್ಲೂ ಹುಲ್ಲುಗಾವಲು ಇಲ್ಲ. ಇವುಗಳು ಎತ್ತರದ ಮರಗಳು ಇರುವ ಕಾರಣಗಳು. ಅಲ್ಲಲ್ಲಿ ಪೊದೆಗಳಿದ್ದರೂ ಅದು ಸಿಂಹಕ್ಕೆ ಆಗಿ ಬರುವುದಿಲ್ಲ. ಈ ಕಾರಣದಿಂದ ಕರ್ನಾಟಕದಲ್ಲಿ ಸಿಂಹಗಳು ಇಲ್ಲ ಎನ್ನುವುದು ತಜ್ಞರ ನುಡಿ.
ಗುಜರಾತ್‌ನಲ್ಲಿ ಅಧಿಕ
ಆದರೆ ಗುಜರಾತ್‌ನ ಗಿರ್ ಪ್ರದೇಶದಲ್ಲಿ ಮಾತ್ರ ಸಿಂಹಗಳು ಈಗಲೂ ಇವೆ. ಅಲ್ಲಿನ ಅರಣ್ಯ ಹುಲ್ಲುಗಾವಲು ಮಾದರಿಯಲ್ಲಿರುವುದು, ಕುರುಚಲು ಪ್ರದೇಶಗಳು ಹೆಚ್ಚಾಗಿರುವುದರಿಂದ ಸಿಂಹಗಳು ಗಿರ್ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆ ಅಲ್ಲಿವೆ. ಅಲ್ಲಿ ಬಿಟ್ಟು ಭಾರತದ ಯಾವುದೇ ಅರಣ್ಯದಲ್ಲೂ ಸಿಂಹಗಳಿಲ್ಲ. ಆವಾಸಸ್ಥಾನವನ್ನು ನಾಶ ಮಾಡಿದರೆ ಸಿಂಹಗಳ ಸಂತತಿ ತಂತಾನೇ ಅವನತಿಯ ಹಾದಿ ಹಿಡಿಯುತ್ತದೆ. ಗಿರ್‌ನಲ್ಲೂ ಒಮ್ಮೆ ಹೀಗೆಯೇ ಆಯಿತು. ಆದರಲ್ಲೂ ಅಲ್ಲಿನ ಅರಣ್ಯ ಇಲಾಖೆ ಬೇಗನೆ ಪಾಠ ಕಲಿಯಿತು. ಆನಂತರ ಅಲ್ಲಿನ ಹುಲ್ಲುಗಾವಲು ಪ್ರದೇಶ ಉಳಿಸಿಕೊಂಡಿದ್ದರಿಂದ ಸಿಂಹಗಳು ಬದುಕಿದವು. ಯಾವುದೇ ಒಂದು ಪ್ರಾಣಿ ಬದುಕಲು ಬೇಕಿರುವ ಕನಿಷ್ಠ ಸ್ಥಳಾವಕಾಶವನ್ನು ನಾವು ಒದಗಿಸಿಕೊಡಬೇಕು. ಸಿಂಹಗಳ ಸಂತತಿ ಉಳಿಸಲು ಅಗತ್ಯವಿರುವ ನಿಸರ್ಗದತ್ತ ಆವಾಸಸ್ಥಾನವನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕು ಎನ್ನುವ ಸಲಹೆಯನ್ನು ತಜ್ಞರು ನೀಡುತ್ತಾರೆ.
ಮೃಗಾಲಯದಲ್ಲಿ ಸಿಂಹಗಳು
ಕರ್ನಾಟಕದ ಬೆಂಗಳೂರು, ಮೈಸೂರು, ಗದಗ ಸೇರಿದಂತೆ ಹಲವು ಮೃಗಾಲಯಗಳಲ್ಲಿ ಸಿಂಹಗಳಿವೆ. ಶಿವಮೊಗ್ಗದ ತ್ಯಾವರೇಕೊಪ್ಪದಲ್ಲಿ ಸಿಂಹ ಸಫಾರಿಯೇ ಇದೆ, ಬನ್ನೇರಘಟ್ಟದಲ್ಲೂ ಸಿಂಹ ಸಫಾರಿ ಕರೆದುಕೊಂಡು ಹೋಗಲಾಗುತ್ತದೆ. ಇಲ್ಲಿಗೆ ಬಂದರೆ ಮಾತ್ರ ಕರ್ನಾಟಕದಲ್ಲಿ ಸಿಂಹ ದರ್ಶನ ಮಾತ್ರ ಸಾಧ್ಯ .