ಕಾಡಿನ ಕಥೆಗಳು: ಆರಾಧ್ಯರು ಅಂದು ಪ್ರೀತಿಯಿಂದ ನೆಟ್ಟ ಸಸಿ ಅರಣ್ಯವೇ ಆಯಿತು; ಚಾಮರಾಜನಗರ ಅರಣ್ಯಾಧಿಕಾರಿ ಹಸಿರು ಪ್ರೀತಿ ಆಗಲಿ ಅಜರಾಮರ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಆರಾಧ್ಯರು ಅಂದು ಪ್ರೀತಿಯಿಂದ ನೆಟ್ಟ ಸಸಿ ಅರಣ್ಯವೇ ಆಯಿತು; ಚಾಮರಾಜನಗರ ಅರಣ್ಯಾಧಿಕಾರಿ ಹಸಿರು ಪ್ರೀತಿ ಆಗಲಿ ಅಜರಾಮರ

ಕಾಡಿನ ಕಥೆಗಳು: ಆರಾಧ್ಯರು ಅಂದು ಪ್ರೀತಿಯಿಂದ ನೆಟ್ಟ ಸಸಿ ಅರಣ್ಯವೇ ಆಯಿತು; ಚಾಮರಾಜನಗರ ಅರಣ್ಯಾಧಿಕಾರಿ ಹಸಿರು ಪ್ರೀತಿ ಆಗಲಿ ಅಜರಾಮರ

ಕಾಡು ಬೆಳೆಸುವುದು ದಾಖಲೆಗಳಲ್ಲಿ ಮಾತ್ರ ಸೀಮಿತವಾದರೆ ಹೇಗೆ, ಚಾಮರಾಜನಗರ ಜಿಲ್ಲೆಯ ಸಣ್ಣ ಹಳ್ಳಿಯಿಂದ ಅರಣ್ಯ ಇಲಾಖೆಗೆ ಸೇರಿದ ಶ್ರೀಕಂಠ ಆರಾಧ್ಯರು ಮೂರು ದಶಕದ ಹಿಂದೆ ನೆಟ್ಟ ಸಸಿಗಳು ಈಗ ಮೀಸಲು ಅರಣ್ಯ ರೂಪ ಪಡೆದಿರುವುದು ನೈಜ ಅರಣ್ಯ ಬೆಳೆಸಿದ ಕಾಯಕಕ್ಕೆ ಸಿಕ್ಕ ಫಲ. ಕಾಡಿನ ಕಥೆಗಳ ಈ ವಾರದ ಅಂತಹ ಕಥನವಿದು.

ಚಾಮರಾಜನಗರದ ಶ್ರೀಕಂಠ ಆರಾಧ್ಯರ ಅರಣ್ಯ ಪ್ರೀತಿಯ ಕಥಾನಕ.
ಚಾಮರಾಜನಗರದ ಶ್ರೀಕಂಠ ಆರಾಧ್ಯರ ಅರಣ್ಯ ಪ್ರೀತಿಯ ಕಥಾನಕ.

ಕಳೆದ ವಾರ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2023 ರ ವರದಿ ಬಿಡುಗಡೆಯಾಯಿತು. ಅದರಲ್ಲಿ ಭಾರತದಲ್ಲಿ ಅರಣ್ಯ ವಿಸ್ತರಣೆಯಾದ ಮಾಹಿತಿ ಇತ್ತು. ಬಿದಿರಿನ ತೋಟ, ತೆಂಗಿನ ತೋಟವೂ ಸೇರಿದಂತೆ ಎತ್ತರದ ಮರ ಇರುವ ತೋಟಗಳೂ ಅರಣ್ಯ ವ್ಯಾಪ್ತಿಗೆ ಸೇರಿಸಿಕೊಂಡಿರುವುದು ವರದಿಯಲ್ಲಿ ಉಲ್ಲೇಖವಾಗಿತ್ತು. 2021 ರಿಂದ ಭಾರತದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು 1,445 ಚದರ ಕಿ.ಮೀ ಹೆಚ್ಚಾಗಿದೆ. 2023 ರಲ್ಲಿ ಒಟ್ಟು ಭೌಗೋಳಿಕ ಪ್ರದೇಶದ ಶೇ. 25.17 ರಷ್ಟು ಅರಣ್ಯ ತಲುಪಿದೆ ಎನ್ನುವುದು ವರದಿಯಲ್ಲಿ ಸೇರಿತ್ತು. ವರದಿಗಳಲ್ಲಿ ಅರಣ್ಯದ ಪ್ರಮಾಣ ತೋರಿಸಲು ತೋಟಗಳನ್ನೂ ಸೇರಿಸಿಕೊಳ್ಳಬೇಕೇ ಎನ್ನುವ ಕಟು ಅಭಿಪ್ರಾಯವೂ ಇದಕ್ಕೆ ವ್ಯಕ್ತವಾಗಿದೆ. ವರದಿ ಬಿಡುಗಡೆಯಾದ ಸಮಯದಲ್ಲಿಯೇ ಚಾಮರಾಜನಗರದಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿಯೇ ಮೂರೂವರೆ ದಶಕ ಕೆಲಸ ಮಾಡಿ ನಿವೃತ್ತರಾದ ಅರಣ್ಯಾಧಿಕಾರಿಯೊಬ್ಬರು ತೀರಿಕೊಂಡರು. ಅವರು ತಮ್ಮ ಜೀವಮಾನವನ್ನು ಸಸಿ ಬೆಳೆಸಲು, ಬರಡು ಭೂಮಿಯನ್ನು ಹಸಿರಾಗಿಸಲು, ಅರಣ್ಯ ಸೃಷ್ಟಿಸಲು ಬಳಸಿದ್ದರು. ಏಕೆಂದರೆ ಅವರು ಬೆಳೆಸಿದ್ದು ಅಪ್ಪಟ ಅರಣ್ಯವನ್ನೇ. ಈ ವರದಿ ಅವರ ನೈಜ ಅರಣ್ಯಕಾಯಕಕ್ಕೆ ತದ್ವಿರುದ್ದವಾಗಿದೆ ಎಂದು ಹೇಳಿಬಿಡಬಹುದೇನೋ.

ಭಾರತದಲ್ಲಿ ಶತಮಾನಗಳಿಂದಲೂ ನೈಜ ಅರಣ್ಯ ಬೆಳೆಯಲು ಹೀಗೆ ಹಳ್ಳಿಗಳಲ್ಲಿ ಕೆಲಸ ಮಾಡಿದ ಅದೆಷ್ಟೋ ವನಪಾಲಕರು ಸಿಗಬಹುದು. ಅಂಥವರು ಈಗ ವಿರಳ. ಹೀಗೆ ನಿಜ ವನಪಾಲಕರಾಗಿ ಕೆಲಸ ಮಾಡಿದ ಅರಣ್ಯ ಉಳಿಸಿ ಬೆಳೆಸಿದವರ ಪಟ್ಟಿಯಲ್ಲಿ ಚಾಮರಾಜನಗರ ತಾಲ್ಲೂಕಿನ ಕುಲಗಾಣ ಗ್ರಾಮದವರಾದ ಶ್ರೀಕಂಠ ಆರಾಧ್ಯರ ಹೆಸರನ್ನು ಉಲ್ಲೇಖಿಸಬಹುದು.

ಚಾಮರಾಜನಗರ ಜಿಲ್ಲೆಯ ದಟ್ಟಾರಣ್ಯ

ಭಾರತದಲ್ಲಿಯೇ ಈಗಲೂ ದಟ್ಟಾರಣ್ಯ ಹೊಂದಿರುವ ಜಿಲ್ಲೆಗಳಲ್ಲಿ ಚಾಮರಾಜನಗರವೂ ಉಂಟು. ಕರ್ನಾಟಕದ ಅಗ್ರ ಅರಣ್ಯ ಜಿಲ್ಲೆಗಳಾದ ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ನಂತರ ದಟ್ಟಾರಣ್ಯ ಇರುವ ಪಟ್ಟಿಯಲ್ಲಿ ಚಾಮರಾಜನಗರವೂ ಇದೆ. ಶ್ರೀಕಂಠ ಆರಾಧ್ಯರ ಊರು ಕುಲಗಾಣ ಸಮೀಪವೂ ಅರಣ್ಯವಿದೆ. ಅದು ಬಿಳಗಿರಿರಂಗನ ಬೆಟ್ಟ ಅರಣ್ಯದ ಸೆರಗು. ತಂದೆ ಚಂದ್ರಶೇಖರ ಆರಾಧ್ಯರು ಮಕ್ಕಳನ್ನು ಹೆಚ್ಚು ಓದಿಸಲು ಆಗಲಿಲ್ಲ. ಹಾಗೆಂದು ಹಿರಿಯ ಮಗ ಶ್ರೀಕಂಠರಾಧ್ಯರಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಾಗ ಮನೆಯವರೆಲ್ಲರೂ ಹಸಿರು ಮನಸಿನಿಂದಲೇ ಹರಸಿ ಕಳುಹಿಸಿದ್ದರು. ಒಂದು ಕಡೆ ಮನೆಯ ಜವಾಬ್ದಾರಿ. ಇನ್ನೊಂದು ಕಡೆ ಅರಣ್ಯ ಇಲಾಖೆ ಕಾಯಕ. ಎರಡನ್ನೂ ನಿರ್ವಹಣೆ ಮಾಡಬೇಕು.

ಪ್ರೀತಿಯ ಕಾಯಕ ಬದುಕು

ಅರಣ್ಯ ಇಲಾಖೆಗೆ ಎಪ್ಪತ್ತರ ದಶಕದಲ್ಲಿ ಸೇರುವುದೆಂದರೆ ಅದು ಸವಾಲೇ ಸರಿ. ಅಂತಹದರಲ್ಲಿ ಸಿಕ್ಕ ಅವಕಾಶಕ್ಕೆ ಮೋಸ ಮಾಡಬಾರದು ಎಂದು ಆರಾಧ್ಯರು ತಮಗೆ ಎಲ್ಲಿಗೆ ವರ್ಗ ಮಾಡಲಿ ಅಲ್ಲಿಯೇ ಮನೆ ಮಾಡಿಕೊಂಡು ಇರುತ್ತಿದ್ದರು. ಅದೂ ಆಗಿನ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಪ್ರದೇಶವೆಂದರೆ ಅದು ದಟ್ಟಾರಣ್ಯವೇ. ಮಲೈಮಹದೇಶ್ವರ, ಬಿಳಿಗಿರಿರಂಗನ ಬೆಟ್ಟ, ಬಂಡೀಪುರ ಹೀಗೆ ಹಲವು ಭಾಗದಲ್ಲಿ ಮಲೆಯಿದು. ಮೂರು ವರ್ಷಕ್ಕೊಮ್ಮೆ ವರ್ಗಾವಣೆ. ಒಂದು ಭಾಗದಿಂದ ಇನ್ನೊಂದು ಕಡೆಗೆ ವರ್ಗ ಮಾಡಿದರೂ ಪ್ರೀತಿಯಿಂದಲೇ ಹೋಗುತ್ತಿದ್ದ ಜತೆಗೆ ಅಲ್ಲಿಯೇ ಮನೆ ಮಾಡಿಕೊಂಡು ಇರಬೇಕು. ಅಲ್ಲಿ ಆರಾಧ್ಯರು ಕೆಲಸ ಮಾಡುತ್ತಿದ್ದರೆಂದರೆ ಅದು ಪಕ್ಕ ಎನ್ನುವಷ್ಟರ ಮಟ್ಟಿಗೆ ವಿಶ್ವಾಸ ಅರಣ್ಯ ಇಲಾಖೆಯಲ್ಲಿ ಅವರ ಮೇಲೆ ಮೂಡಿತ್ತು.

ಕಾಡನ್ನೇ ಬೆಳೆಸಿಬಿಟ್ಟರು

ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಸುತ್ತಮುತ್ತ ಬೆಟ್ಟ ಇದ್ದರೂ ಹಸಿರಿನ ವಾತಾವರಣ ಅಷ್ಟಾಗಿ ಇರಲಿಲ್ಲ. ಶ್ರೀಕಂಠ ಆರಾಧ್ಯರು ಉಮ್ಮತ್ತೂರು ಭಾಗಕ್ಕೆ ನಿಯೋಜನೆಗೊಂಡು ಸತತ ಎಂಟು ವರ್ಷ ಕೆಲಸ ಮಾಡಿದರು. ಅಲ್ಲಿನ ಭಾಗವನ್ನು ಹಸಿರು ಮಾಡಲು ಏನು ಮಾಡಬಹುದು ಎಂದು ಯೋಚಿಸಿದರು. ನರ್ಸರಿಯ ಉಸ್ತುವಾರಿಯೂ ಇದ್ದ ಕಾರಣದಿಂದ ಅವರಿಗೆ ತಾವು ಅಂದುಕೊಂಡಿದ್ದನ್ನು ಮಾಡಲು ಸಹಕಾರಿಯೂ ಆಯಿತು. ಅರಣ್ಯ ಇಲಾಖೆಯಲ್ಲಿ ಲಭ್ಯ ಇದ್ದ ಕೆಲಸವನ್ನು ಸ್ಥಳೀಯರಿಗೆ ಕೊಟ್ಟರು. ಅವರೊಂದಿಗೆ ಸೇರಿಕೊಂಡು ಸಸಿಗಳನ್ನು ನೆಡುತ್ತಲೇ ಹೋದರು. ಹಾಗೆ ನೆಟ್ಟ ಗಿಡಗಳ ಪೋಷಣೆಯನ್ನೂ ಮಾಡಿದರು. ವಿವಿಧ ಜಾತಿಯ ಮರಗಳು ಅಲ್ಲಿ ಎಂಟು ವರ್ಷದಲ್ಲಿಯೇ ಬೆಳವಣಿಗೆ ಕಂಡವು. ಬೆಳಿಗ್ಗೆ ಮನೆಯಿಂದ ಬುತ್ತಿ ಕಟ್ಟಿಕೊಂಡು ಬಂದರೆ ಕತ್ತಲಾಗುವವರೆಗೂ ಅಲ್ಲಿಯೇ ಕೆಲಸ. ಜತೆಗಿದ್ದವರೂ ಅಲ್ಲೇ ಇರುವಂತೆ ನೋಡಿಕೊಳ್ಳುತ್ತಾ ಪ್ರೀತಿಯಿಂದ ಪೋಷಿಸಿದರು ಶ್ರೀಕಂಠ ಆರಾಧ್ಯರು.

ಅರಣ್ಯ ಇಲಾಖೆ ನಮಗೆ ಅನ್ನ ಕೊಡುತ್ತದೆ. ಅರಣ್ಯ ನಮ್ಮ ಜನರಿಗೆ ಬದುಕು ಕೊಡುತ್ತದೆ. ಅರಣ್ಯ ಇದ್ದರೆ ಜನ ಹಾಗೂ ಇಲಾಖೆ ಎನ್ನುವ ನಂಬಿಕೆ ಅವರದ್ದು. ಅರಣ್ಯವನ್ನು ಎಂದಿಗೂ ಹಾಳು ಮಾಡಬೇಡಿ. ಸಾಧ್ಯವಾದರೆ ಗಿಡ ನೆಡಿ. ಎಂದಿಗೂ ಮರ ಕಡಿಯಬೇಡಿ ಎನ್ನುವ ಪ್ರೀತಿಯ ಪಾಠವನ್ನೂ ಅವರು ಮಾಡಿದರು. ಉಮ್ಮತ್ತೂರು ಮಾತ್ರವಲ್ಲದೇ ಅವರು ಕೆಲಸ ಮಾಡಿದ ಕಡೆಗಳಲ್ಲಿ ಇದೇ ರೀತಿ ಹಸಿರು ಪರಿಸರವನ್ನು ನಿರ್ಮಿಸಿದ ಹಿರಿಮೆ ಅವರದ್ದು.

ಮೀಸಲು ಅರಣ್ಯದ ಮಾನ್ಯತೆ

ಎರಡೂವರೆ ದಶಕದ ಹಿಂದೆಯೇ ಅವರು ನಿವೃತ್ತರಾದರು. ಉಮ್ಮತ್ತೂರು ಭಾಗದಲ್ಲಿ ಅವರು ನೆಟ್ಟಿದ್ದ ಸಹಸ್ರಾರು ಸಸಿಗಳು ಮರಗಳ ರೂಪ ಪಡೆದಿದ್ದವು. ಅದೊಂದು ಅರಣ್ಯವಾಗಿಯೇ ಮಾರ್ಪಾಡಾಗಿತ್ತು. ಅಲ್ಲಿ ಜಿಂಕೆ, ಕೃಷ್ಣಮೃಗಗಳು ಬಿಳಿಗಿರಿರಂಗನಬೆಟ್ಟ ಭಾಗದಿಂದ ಬಂದು ನೆಲೆ ಕಂಡುಕೊಂಡವು. ಪಕ್ಷಿ ಸಂಕುಲವೇ ಅಲ್ಲಿ ತಮ್ಮ ನೆಲೆ ಮಾಡಿಕೊಂಡವು. ಅಂದು ಶ್ರೀಕಂಠ ಆರಾಧ್ಯರೂ ತಾವೂ ಸಸಿ ನೆಟ್ಟು ನೀರೆರೆದು ಪೋಷಿಸಿ ಜತೆಗಿದ್ದರೂ ಅದೇ ಕಾಯಕ ಪ್ರೀತಿಯಿಂದ ತೊಡಗಿಸಿಕೊಳ್ಳುವಂತೆ ಮಾಡಿದ್ದು ಅರಣ್ಯ ಸೃಷ್ಟಿಯಾಗಲು ಕಾರಣವಾಗಿತ್ತು. ದಶಕದ ಹಿಂದೆಯೇ ಚಾಮರಾಜನಗರ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಇಲ್ಲಿನ ಅರಣ್ಯ, ಕೃಷ್ಣಮೃಗಗಳ ಸಂಖ್ಯೆ ಇರುವುದನ್ನು ಗಮನಿಸಿ ಇದನ್ನು ಕೃಷ್ಣಮೃಗಮೀಸಲು ರೂಪಿಸಲು ಪ್ರಸ್ತಾವನೆ ಸಲ್ಲಿಸಿದರು. ಸರ್ಕಾರ ಉಮ್ಮತ್ತೂರು ಮೀಸಲು ಅರಣ್ಯ ಪ್ರದೇಶವನ್ನು ಘೋಷಿಸಿತು. ಅಷ್ಟೇ ಅಲ್ಲದೇ ಇದನ್ನು ಕರ್ನಾಟಕದಲ್ಲಿನ ರಾಣೆಬೆನ್ನೂರು, ಜಯಮಂಗಲಿ ಕೃಷ್ಣಮೃಗಗಳ ನಂತರ ಪ್ರಮುಖ ಕೃಷ್ಣಮೃಗ ಮೀಸಲು ಪ್ರದೇಶವಾಗಿ ಪ್ರಕಟಿಸಿತು. ಈಗ ಈ ಭಾಗದ ಸಂರಕ್ಷಣೆಯೂ ಇನ್ನಷ್ಟು ಹೆಚ್ಚಿಸಿದೆ.

ಮೂರು ದಶಕದ ಹಿಂದೆ ಶ್ರೀಕಂಠ ಆರಾಧ್ಯರು ಹಾಕಿದ ಪ್ರತಿ ಹನಿ ನೀರು, ನೆಟ್ಟ ಸಸಿ ಈಗ ಅರಣ್ಯ ರೂಪವನ್ನೇ ಪಡೆದುಕೊಂಡು ಕೃಷ್ಣಮೃಗಗಳ ಆವಾಸ ಸ್ಥಾನವೂ ಆಗಿ ಮಾರ್ಪಟ್ಟಿದೆ. ಅರಣ್ಯ ಸೇರ್ಪಡೆ ಮಾಡಬೇಕು ಎನ್ನುವ ಇಲಾಖೆಯ ಯೋಜನೆಗೆ ಮನೆಗಿಂತಲೂ ಕಾಯಕವೇ ಕೊಂಚ ಹೆಚ್ಚು ಎಂದು ನಂಬಿದ ಶ್ರೀಕಂಠ ಆರಾಧ್ಯರಂತವರ ಸೇವೆ ನಿಜಕ್ಕೂ ಅವಿಸ್ಮರಣೀಯವೇ.

ವೀರಪ್ಪನ್‌ ದಾಳಿಯಿಂದ ತಪ್ಪಿಸಿಕೊಂಡರು

ಶ್ರೀಕಂಠ ಆರಾಧ್ಯರು ಉಮ್ಮತ್ತೂರಿನ ಬಳಿಕ ಚಾಮರಾಜನಗರ ಜಿಲ್ಲೆಯ ಪುಣಜನೂರು ಭಾಗಕ್ಕೆ ವರ್ಗಗೊಂಡರು. ಆ ಕಾಲಕ್ಕೆ ಪುಣಜನೂರು ಎಂದರೆ ತಮಿಳುನಾಡು ಚೆಕ್‌ ಪೋಸ್ಟ್‌ ಇದ್ದ ಸ್ಥಳ. ಅಲ್ಲಿಗೆ ಹೋಗಲು ತಾ ಮುಂದು, ನಾ ಮುಂದು ಎನ್ನುವವರೇ. ಆರು ತಿಂಗಳು ಅಲ್ಲಿ ಇದ್ದರೆ ಸಾಕು. ಅವರ ಜೀವಮಾನದ ಆದಾಯ ಆರೇ ತಿಂಗಳಲ್ಲಿ ನಿಕ್ಕಿಯಾಗಿಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಪುಣಜನೂರು ಅರಣ್ಯ ಚೆಕ್‌ ಪೋಸ್ಟ್‌ ಕುಖ್ಯಾತಿ. ಇಲ್ಲಿ ಅವರು ಕೆಲಸಮಾಡಿದರೂ ಅಂದೂ ಜೇಬು ತುಂಬಿಸಿಕೊಳ್ಳಲಿಲ್ಲ. ಕೈ ಹಾಳು ಮಾಡಿಕೊಳ್ಳಲಿಲ್ಲ ಎಂದು ಶ್ರೀಕಂಠ ಆರಾಧ್ಯರ ಪ್ರಾಮಾಣಿಕತೆಯನ್ನು ಹೋರಾಟಗಾರ ಪುಣಜನೂರು ದೊರೆಸ್ವಾಮಿ ದಾಖಲಿಸಿದ್ದರು.

ಬಿಳಿಗಿರಿ ರಂಗನ ಬೆಟ್ಟ ಭಾಗವೂ ವೀರಪ್ಪನ್‌ ದಾಳಿಯ ಭಯದಿಂದ ದಟ್ಟವಾಗಿದ್ದ ಪ್ರದೇಶ. ಒಮ್ಮೆ ವೀರಪ್ಪನ್‌ ದಾಳಿ ಮಾಡಿ ಎಂಟು ಮಂದಿಯನ್ನು ಹತ ಮಾಡಿ ಹೋಗಿದ್ದ. ಆಗ ಶ್ರೀಕಂಠ ಆರಾಧ್ಯರು ಅಲ್ಲಿಯೇ ಇದ್ದರು. ಅದೃಷ್ಟವಶಾತ್‌ ಜೀವ ಉಳಿಸಿಕೊಂಡ ಮೂರ್ನಾಲ್ಕು ಸಿಬ್ಬಂದಿಯಲ್ಲಿ ಇವರೂ ಆಗಿದ್ದರು. ಮನೆಯವರು ನೀನು ಕೆಲಸ ಬಿಟ್ಟು ಬಂದು ಬಿಡು ಎಂದು ಹಠ ಹಿಡಿದರು. ಭಯವಿದ್ದರೂ ಅಲ್ಲಿಯೇ ಉಳಿದು ಇಲಾಖೆ, ಅರಣ್ಯ ನಿಷ್ಠೆ ತೋರಿದರು ಶ್ರೀಕಂಠ ಆರಾಧ್ಯರು.

ಪುತ್ರರ ಅರಣ್ಯ ಪ್ರೇಮ

ಶ್ರೀಕಂಠ ಆರಾಧ್ಯರ.ಇಬ್ಬರು ಪುತ್ರರಾದ ಕೆ.ಎಸ್‌. ಬನಶಂಕರ ಆರಾಧ್ಯ, ಕೆ.ಎಸ್‌.ಫಾಲಲೋಚನ ಆರಾಧ್ಯ ಅರಣ್ಯ ಇಲಾಖೆ ಸೇರಲಿಲ್ಲ. ಬದಲಿಗೆ ಪತ್ರಕರ್ತರಾದರು. ಅರಣ್ಯ, ಹಸಿರು, ವನ್ಯಜೀವಿಗಳ ಕುರಿತು ಇಬ್ಬರೂ ತಾಯಿ ಹೃದಯದಿಂದಲೇ ಬರೆಯುತ್ತಾರೆ. ಅವರ ಅದೆಷ್ಟೋ ವರದಿಗಳಿಂದ ಇಲಾಖೆಯಲ್ಲಿ ಬದಲಾವಣೆಯೂ ಆಗಿದೆ. ಆ ಮೂಲಕ ತಂದೆ ಆಶಯವನ್ನು ಪರೋಕ್ಷವಾಗಿ ಬೆಂಬಲಿಸಿದರು.

ಸಣ್ಣದು ಎನ್ನಿಸಿದರೂ ಮಾದರಿ ಎನ್ನಬಹುದಾದ ಅರಣ್ಯ ಕಟ್ಟುವ ಕಾಯಕ ಮಾಡಿದ ಶ್ರೀಕಂಠ ಆರಾಧ್ಯರು ತೀರಿಕೊಂಡರು. ಇಲಾಖೆಯ ಹಲವರು ಅವರ ಸೇವೆಯನ್ನು ನೆನಪಿಸಿಕೊಂಡರು. ಒಂದು ಅರಣ್ಯವನ್ನೇ ಹುಟ್ಟು ಹಾಕಿದ ಶ್ರೀಕಂಠ ಆರಾಧ್ಯರ ಹೆಸರನ್ನು ಉಮ್ಮತ್ತೂರು ಕೃಷ್ಣಮೃಗ ಮೀಸಲು ಅರಣ್ಯಕ್ಕೆ ಇಟ್ಟು ಗೌರವ ಸಲ್ಲಿಸಬಹುದು.ಇದು ನೈಜ ಗೌರವವೂ ಆಗಲಿದೆ.

ಬರಹ: ಕುಂದೂರು ಉಮೇಶಭಟ್ಟ, ಮೈಸೂರು

Whats_app_banner