ಕಾಡಿನ ಕಥೆಗಳು: ಕೇರಳ ವಯನಾಡಿನಲ್ಲಿ ಮತ ಹಿತಕ್ಕಾಗಿ ಅಜ್ಜಿ- ಅಪ್ಪ ಅರಣ್ಯ, ವನ್ಯಜೀವಿ ರಕ್ಷಣೆಗೆ ಹಾಕಿಕೊಟ್ಟ ಮಾದರಿ ಮರೆತ ಪ್ರಿಯಾಂಕಗಾಂಧಿ
ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎನ್ನುವ ಆಶಯದೊಂದಿಗೆ 5 ದಶಕದ ಹಿಂದೆ ಕಾಯಿದೆ ತಂದವರು ಇಂದಿರಾಗಾಂಧಿ. ಇದರ ಬಲದಲ್ಲಿಯೇ ಬಂಡೀಪುರ, ನಾಗರಹೊಳೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವಿದೆ. ಕೇರಳ ಚುನಾವಣೆ ವೇಳೆ ಪ್ರಿಯಾಂಕಾಗಾಂಧಿ ನಿಷೇಧ ತೆರವು ಕುರಿತು ಮಾತನಾಡಿ ಅಜ್ಜಿ ಆಶಯವನ್ನೇ ಪ್ರಶ್ನಿಸಿದರು. ಈ ವಾರದ ಕಾಡಿನ ಕಥೆಯಲ್ಲಿ ಪ್ರಿಯಾಂಕ ಮರೆತ ಕಾಡಿನ ಹಿತ.
Priyanka Gandhi Election Love: ಬಂಡೀಪುರ ಹುಲಿ ಸಂರಕ್ಷಿತ ಧಾಮದ ಕರ್ನಾಟಕ ಹಾಗೂ ಕೇರಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಈಗಿರುವ ವಾಹನಗಳ ರಾತ್ರಿ ಸಂಚಾರ ನಿಷೇಧ ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸುತ್ತೇನೆ, ಕೇರಳದ ವಯನಾಡು ಭಾಗದವರು ಕರ್ನಾಟಕ ಭಾಗಕ್ಕೆ ರಾತ್ರಿ ಸಂಚಾರಕ್ಕೆ ಹೋಗಲು ಆಗುತ್ತಿರುವ ತೊಂದರೆ ನನ್ನ ಗಮನದಲ್ಲಿದೆ. ಇದಕ್ಕೆ ಪರಿಹಾರ ಕೊಡಿಸುತ್ತೇನೆ ಎಂದು ಆ ನಾಯಕಿ ಹೇಳಿಕೆಯನ್ನು ನೀಡಿದರು. ಭಾರೀ ಚಪ್ಪಾಳೆಯನ್ನು ಗಿಟ್ಟಿಸಿದರು. ಅಲ್ಲಿಯೇ ಇದ್ದ ಕರ್ನಾಟಕದ ಜವಾಬ್ದಾರಿಯುತ ಸ್ಥಾನದ ನಾಯಕ ಕಾಂಗ್ರೆಸ್‌ನ ಅನೂಚಾನ ಪರಂಪರೆಯಂತೆ, ನಮ್ಮ ನಾಯಕಿ ಬಂಡೀಪುರ ಅರಣ್ಯದಲ್ಲಿನ ರಾತ್ರಿ ಸಂಚಾರದ ನಿಷೇಧ ವಿಚಾರ ಪ್ರಸ್ತಾಪಿಸಿದ್ದಾರೆ. ಇದನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಪರಿಹಾರವನ್ನು ನೀಡುತ್ತೇವೆ. ನಮ್ಮ ನಾಯಕಿ ನೀಡಿದ ಭರವಸೆಯನ್ನು ಈಡೇರಿಸಲು ನಾವು ಬದ್ದರಾಗಿದೇವೆ ಎಂದು ಹೇಳಿಕೆ ನೀಡಿದರು. ಅವರ ಮಾತಿಗೂ ಭಾರೀ ಕರತಾಡನ.
ಭಾರತದಲ್ಲಿ ವನ್ಯಜೀವಿಗಳ ಬೇಟೆ ಮೋಜಿನ ಭಾಗವಾಗಿದ್ದಾಗ, ಅವುಗಳಿಗೂ ಬದುಕಿದೆ. ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು. ವನ್ಯಜೀವಿಗಳಿದ್ದರೆ ಕಾಡಿನ ಉಳಿವು, ಕಾಡಿದ್ದರೆ ನಾಡು ಉಳಿದೀತು ಎನ್ನುವ ಮಹೋದ್ದೇಶ, ದೂರದೃಷ್ಟಿ ಇಟ್ಟುಕೊಂಡು ಇಂದಿರಾಗಾಂಧಿ ಎಂಬ ನಾಯಕಿ ಐದು ದಶಕದ ಹಿಂದೆಯೆ ವನ್ಯಜೀವಿ ಸಂರಕ್ಷಣಾ ಕಾನೂನನ್ನು ಎಲ್ಲ ಒತ್ತಡಗಳು, ರಾಜಕೀಯ ಮೇಲಾಟಗಳನ್ನು ಮೀರಿ ತಂದರು. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರಯತ್ನಿಸಿ ಶಕ್ತಿ ತುಂಬಿದರು. ಭಾರತದಲ್ಲಿ ಅರಣ್ಯಕಾಯಿದೆಯನ್ನು 80ರ ದಶಕದಲ್ಲಿ ಜಾರಿಗೊಳಿಸಲು ಶ್ರಮ ಹಾಕಿದವರು ರಾಜೀವ್ ಗಾಂಧಿ. ಇಬ್ಬರೂ ಪ್ರಧಾನಿಗಳು ಅರಣ್ಯ, ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಕೈಗೊಂಡ ಗಟ್ಟಿ ನಿರ್ಧಾರದ ಫಲವಾಗಿ ಭಾರತದ ಅದೆಷ್ಟೋ ಅರಣ್ಯಗಳಲ್ಲಿ ತಮ್ಮ ಹೆಸರಿನೊಂದಿಗೆ ಈಗಲೂ ಚಿರಸ್ಥಾಯಿಯಾಗಿದ್ಧಾರೆ.
ಪ್ರಿಯಾಂಕ ಹೊಣೆಗಾರಿಕೆಯಿಲ್ಲದ ಹೇಳಿಕೆ
ಇಂದಿರಾಗಾಂಧಿ ಮೊಮ್ಮಗಳು, ರಾಜೀವ್ ಗಾಂಧಿ ಮಗಳು ಪ್ರಿಯಾಂಕ ಗಾಂಧಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಅಣ್ಣ ರಾಹುಲ್ ಗಾಂಧಿ ಬಿಟ್ಟು ಹೋದ ಕ್ಷೇತ್ರದ ಪ್ರತಿನಿಧಿಯಾಗಿ ಚುನಾಯಿತರೂ ಆಗಿದ್ದಾರೆ. ಎರಡು ವಾರದ ಹಿಂದೆ ವಯನಾಡು ಚುನಾವಣೆ ಪ್ರಚಾರ ಸಭೆ. ಅಲ್ಲಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ರಾತ್ರಿ ವಾಹನ ನಿಷೇಧ ತೆರವುಗೊಳಿಸುವ ಭರವಸೆಯನ್ನು ನೀಡಿದರು.
ಅಲ್ಲಿಯೇ ಇದ್ದ ಕರ್ನಾಟಕದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಉಪ ಅಧಿನಾಯಕಿ ಮಾತಿಗೆ ಮರು ಮಾತನಾಡದೇ ಪರಿಶೀಲಿಸುವ ಭರವಸೆ ನೀಡಿದರು. ಇದಕ್ಕೆ ಕರ್ನಾಟಕದಿಂದ ಬಲವಾದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ ಖಂಡ್ರೆ ಜವಾಬ್ದಾರಿಯುತವಾಗಿಯೇ ಹೇಳಿಕೆ ಕೊಟ್ಟರು. ವಿವಾದವೇನೋ ತಣ್ಣಗಾಯಿತು.
ಮತಗಳಿಸಬೇಕು. ವಯನಾಡು ಜನರ ಅನುಕಂಪ ಗಿಟ್ಟಿಸಬೇಕು ಎಂಬ ಉದ್ದೇಶದಿಂದಲೇ ಪ್ರಿಯಾಂಕ ಗಾಂಧಿ ಈ ಹೇಳಿಕೆ ನೀಡಿದರು ಎಂದು ಬಿಡಿಸಿ ಹೇಳಬೇಕಾಗಿಲ್ಲ. ತಾವು ಮತ ಪಡೆಯಬೇಕು. ಗೆಲ್ಲಬೇಕು ಎನ್ನುವ ಏಕೈಕ ಉದ್ದೇಶದಿಂದ ತಮ್ಮ ಅಜ್ಜಿ, ಅಪ್ಪ ಹಾಕಿಕೊಟ್ಟ ಆ ದಿಟ್ಟ ಪರಂಪರೆಯನ್ನು ಮರೆತು ಹೇಳಿಕೆ ಕೊಟ್ಟಿದ್ದು ಮಾತ್ರ ಇತಿಹಾಸದಲ್ಲಿ ದಾಖಲಾಯಿತು.
ಅಜ್ಜಿಯ ಮಾದರಿ
80 ರ ದಶಕದಲ್ಲಿ ಮಹಾರಾಷ್ಟ್ರದ ಸಿಎಂ ಆಗಿದ್ದ ಎಸ್‌ಬಿ ಚೌಹಾಣ್ ಅವರು ಮುಂಬೈನ ಬೋರಿವಲಿ ಅರಣ್ಯದಲ್ಲಿ ರಸ್ತೆ ನಿರ್ಮಿಸುವ ಪ್ರಸ್ತಾವಕ್ಕೆ ಅನುಮತಿ ನೀಡಿದ್ದರು. ಇದನ್ನು ತಡೆದವರು ಇಂದಿರಾಗಾಂಧಿ. ಪರ್ಯಾಯ ಮಾರ್ಗಕ್ಕೂ ಅವಕಾಶ ನೀಡಿದೇ ಅರಣ್ಯವನ್ನು ಯಥಾರೀತಿಯಲ್ಲೇ ಉಳಿಸಿದ್ದರು ಇಂದಿರಾ. ಈಗ ಪ್ರಿಯಾಂಕ ಬರೀ ಮತಗಳ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದು ಸರಿಯೇ ಎಂದು ಕರ್ನಾಟಕದ ಹಿರಿಯ ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ಪ್ರಶ್ನಿಸುತ್ತಾರೆ.
ಬಂಡೀಪುರ ಹೆದ್ದಾರಿ ಸುತ್ತಮುತ್ತ
ಬಂಡೀಪುರ ಇಡೀ ದೇಶದಲ್ಲೇ ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೊಂಡು, ಹುಲಿ ಯೋಜನೆ ಅನುಷ್ಠಾನಕ್ಕೆ ಬಂದಾಗ ಜಾರಿಯಾದ ಎರಡನೇ ಪ್ರದೇಶ. ಏಕೆಂದರೆ ಅಷ್ಟರಮಟ್ಟಿಗೆ ಬಂಡೀಪುರ ಹುಲಿಗಳ ಧಾಮವಾಗಿತ್ತು, ಕೇರಳ, ತಮಿಳುನಾಡು ಗಡಿಯೊಂದಿಗೆ ಕರ್ನಾಟಕದ ಬಂಡೀಪುರ ಆಗಲೇ ಅಷ್ಟು ಮಹತ್ವ ಪಡೆದಿತ್ತು. ಪಕ್ಕದಲ್ಲಿ ತಮಿಳುನಾಡಿನ ಮಧುಮಲೈ, ಕೇರಳದ ವಯನಾಡು ಹುಲಿಧಾಮಗಳು, ಕರ್ನಾಟಕದಲ್ಲಿ ನಾಗರಹೊಳೆ, ಬಿಳಿಗಿರಿ ರಂಗನ ಹುಲಿಧಾಮ ಸೇರಿ ನೀಲಗಿರಿ ಜೀವವೈವಿಧ್ಯ ತಾಣದ ಹುಲಿ ಕಾಡಿದು. ಏಷ್ಯಾದಲ್ಲಿಯೇ ಅತಿ ಹೆಚ್ಚು ಆನೆಗಳ ಸಾಂಧ್ರತೆ ಇರುವ ಪ್ರದೇಶವಿದು.
ಬಂಡೀಪುರ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯನ್ನು 766 ಅನ್ನು 1989 ರಲ್ಲಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲಾಯಿತು. ಬಳಿಕ ಇದಕ್ಕೆ ರಾಷ್ಟ್ರೀಯ ಹೆದ್ದಾರಿ 212 ಎಂದು ಹೆಸರಿಸಲಾಯಿತು. ನಂತರ ಇದನ್ನು ರಾಷ್ಟ್ರೀಯ ಹೆದ್ದಾರಿ 766 ಎಂದು ಮರುನಾಮಕರಣ ಮಾಡಲಾಯಿತು.
ರಾತ್ರಿ ನಿಷೇಧ ತಡೆ ಹಿಂದಿನ ಒತ್ತಡಗಳು
ಎನ್‌ಎಚ್ 766 ಮೈಸೂರಿನ ಮೂಲಕ ಹಾದುಹೋಗುವ ಮೂಲಕ ಕೇರಳದ ಕೋಝಿಕ್ಕೋಡ್ ಅನ್ನು ಕರ್ನಾಟಕದ ಕೊಳ್ಳೇಗಾಲಕ್ಕೆ ಸಂಪರ್ಕಿಸುತ್ತದೆ. ಇದು 272 ಕಿಮೀ ಹೆದ್ದಾರಿಯಾಗಿದ್ದು, ಕೇರಳದಲ್ಲಿ 117 ಕಿಮೀ ಮತ್ತು ಕರ್ನಾಟಕದಲ್ಲಿ 155 ಕಿಮೀ ಇದೆ. ಬಂಡೀಪುರದಲ್ಲಿ ಅಂದಾಜು 21ಕಿ.ಮಿ ಇದೆ. 766 ಹೆದ್ದಾರಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯ ಸೇರಿದಂತೆ ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳ ಮೂಲಕ ಹಾದುಹೋಗುತ್ತದೆ. ರೈಲು ಮತ್ತು ನೀರಿನ ಸಂಪರ್ಕದ ಕೊರತೆಯಿರುವ ವಯನಾಡಿನ ಜನರಿಗೆ ಇದು ಬದುಕುಳಿಯುವ ಮಾರ್ಗವೂ ಹೌದು. ಕೇರಳದ ವಯನಾಡು ಭಾಗದವರು ಮೈಸೂರಿನೊಂದಿಗೆ ಹೆಚ್ಚಿನ ವಹಿವಾಟು ಹೊಂದಲು ಇದೇ ಹೆದ್ದಾರಿಯೇ ಆಸರೆ. ತರಕಾರಿ, ಹಣ್ಣು, ಆಹಾರ ಸಹಿತ ನಿತ್ಯ ಅಗತ್ಯದ ಸಾಗಣೆ, ಮೈಸೂರು ಪ್ರವಾಸೋದ್ಯಮಕ್ಕೂ ಇದೇ ಮಾರ್ಗವೇ ವಯನಾಡು ಭಾಗದವರಿಗೆ ಬೇಕು.
ವಾಹನಗಳ ಮಿತಿ ಮೀರಿದ ಸಂಚಾರ ವನ್ಯಜೀವಿಗಳಿಗೆ ಸಂಚಕಾರ ತರುವುದು ಅತಿಯಾಗತೊಡಗಿತ್ತು. ಒಂದು ದಶಕದ ಅವಧಿಯಲ್ಲಿಯೇ ಚಿರತೆಯಂತಹ ಪ್ರಾಣಿಗಳು ಇಲ್ಲಿ ಪ್ರಾಣ ಕಳೆದುಕೊಂಡಿದ್ದವು. ಸಣ್ಣ ಪುಟ್ಟ ಪ್ರಾಣಿಗಳ ಸಾವಿಗೆ ಲೆಕ್ಕವೇ ಇರಲಿಲ್ಲ. ಅದರಲ್ಲೀ ರಾತ್ರಿ ವೇಳೆಯೂ ವನ್ಯಜೀವಿಗಳ ಸಂಚಾರಕ್ಕೆ ಆಸ್ಪದವೇ ಇರಲಿಲ್ಲ. ಇದಕ್ಕಾಗಿ ಸಮೀಕ್ಷೆಯನ್ನೂ ಕರ್ನಾಟಕ ಅರಣ್ಯ ಇಲಾಖೆ ನಡೆಸಿತ್ತು. ಸ್ವಯಂ ಸೇವಾ ಸಂಘಟನೆಗಳ ಸಹಕಾರ ನೀಡಿದವು. ಹಲವು ರಾಜ್ಯಗಳಲ್ಲಿ ರಾತ್ರಿ ವಾಹನ ನಿಷೇಧದ ಮಾದರಿಗಳ ವರದಿಯನ್ನು ಪಡೆದಿತ್ತು. ಕೊನೆಗೆ ಕರ್ನಾಟಕದ ಬಂಡೀಪುರ ಹಾಗೂ ನಾಗರಹೊಳೆ ಭಾಗದ ಐದು ರಸ್ತೆಗಳಲ್ಲಿ ರಾತ್ರಿ ವಾಹನ ಸಂಚಾರವನ್ನು 2009ರಲ್ಲಿ ಜಾರಿಗೊಳಿಸಲಾಯಿತು ಬಂಡೀಪುರದಲ್ಲಿ ರಾತ್ರಿ9 ರಿಂದ ಬೆಳಿಗ್ಗೆ 6, ನಾಗರಹೊಳೆಯಲ್ಲಿ ಸಂಜೆ 6ರಿಂದ ಬೆಳಗಿನ 6 ವರೆಗೆ ಹೆದ್ದಾರಿ ನಿಷೇಧವಿದೆ.
ಮಣಿವಣ್ಣನ್ ಪ್ರಯತ್ನ
ಆಗ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಪಿ.ಮಣಿವಣ್ಣನ್ ವಿಶೇಷ ಕಾಳಜಿ ವಹಿಸಿ ಇದನ್ನು ಜಾರಿಗೊಳಿಸಿದ್ದರು. ಬಲವಾದ ವಿರೋಧ ಬಂದರೂ ಅವರು ಅದಕ್ಕೆ ಆಸ್ಪದ ನೀಡಿರಲಿಲ್ಲ. ಕೇರಳದ ಜತೆಗೆ ಕರ್ನಾಟಕದವೂ ಇದನ್ನು ವಿರೋಧಿಸಿದ್ದರು. 2010ರಲ್ಲಿ ಕರ್ನಾಟಕ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಅಲ್ಲಿಂದ ಈಗ ಹದಿನಾಲ್ಕು ವರ್ಷ ಕಳೆದಿದೆ. ಹಲವು ಬಾರಿ ರಾತ್ರಿ ವಾಹನ ಸಂಚಾರ ತೆರವುಗೊಳಿಸುವ ಪ್ರಯತ್ನಗಳು ಆಗಾಗ ನಡೆಯುತ್ತಲೇ ಇರುತ್ತವೆ. ಕೇರಳದ ಸಿಎಂ ಆದಿಯಾಗಿ ಅಲ್ಲಿನ ಸಚಿವರು, ಜನಪ್ರತಿನಿಧಿಗಳು, ಮುಖಂಡರು ತೆರವಿನ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಕರ್ನಾಟಕದ ವಿಧಾನಸೌಧವನ್ನು ಎಡತಾಕಿದ್ದಾರೆ. ಅವಕಾಶ ಮಾತ್ರ ಸಿಕ್ಕಿಲ್ಲ. ಪ್ರಯತ್ನವೂ ನಿಂತಿಲ್ಲ. ಇದರಲ್ಲಿ ಪ್ರಿಯಾಂಕಗಾಂಧಿ ಅವರ ಹೇಳಿಕೆಯೂ ಕೂಡ ಒಂದು.
ಪಶ್ವಿಮ ಘಟ್ಟದ ಪ್ರಮುಖ ಭಾಗವೂ ಆಗಿರುವ ಇದೇ ಮಾರ್ಗದಲ್ಲಿ ನಂಜನಗೂಡು ನೀಲಂಬೂರು ರೈಲ್ವೆ ಮಾರ್ಗದ ಪ್ರಸ್ತಾವನೆಯಿದೆ. ಅದನ್ನು ಇದೇ ವೇಳೆ ಗಟ್ಟಿಯಾಗಿಯೇ ಪ್ರಸ್ತಾಪಿಸಲಾಯಿತು. ಬಂಡೀಪುರದ ನಿಷೇಧದ ಮಾರ್ಗದಲ್ಲಿ ಸುರಂಗ ಮಾರ್ಗ ರಚಿಸುವ, ಮೇಲ್ಸೇತುವೆಗಳನ್ನು ಕೆಲವು ಕಡೆ ಮಾಡಿ ಪ್ರಾಣಿಗಳ ಸಹಜ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾವನೆಗಳೂ ಬಂದವು. ಆರು ವರ್ಷದ ಹಿಂದೆ ಎಚ್‌ಡಿ ರೇವಣ್ಣ ಲೋಕೋಪಯೋಗಿ ಸಚಿವ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಇಂತಹ ಪ್ರಸ್ತಾವಗಳಿಗೆ ಜೀವವೂ ಬಂದಿತ್ತು. ಆದರೆ ಅರಣ್ಯ ಇಲಾಖೆಯ ಹಲವು ಅಧಿಕಾರಿಗಳು, ಸರ್ಕಾರೇತರ ಸಂಘಟನೆಗಳೂ ಬಲವಾಗಿ ಇದನ್ನು ವಿರೋಧಿಸಿದವು. ಆನಂತರ ಅದೂ ಕೂಡ ಬರೀ ಹೇಳಿಕೆಯಾಗಿಯೇ ಉಳಿಯಿತು. ಇದರ ಜತೆಗೆ ಕರ್ನಾಟಕದಿಂದ ಪರ್ಯಾಯವಾಗಿ ಇರುವ ಮಾರ್ಗವೊಂದನ್ನು ಕರ್ನಾಟಕದ ವೆಚ್ಚದಲ್ಲೆ ಅಭಿವೃದ್ದಿಪಡಿಸಿಕೊಡಲಾಯಿತು.
ಆನೆ ಜೀವ ಹರಣ
ಎರಡು ವರ್ಷದ ಹಿಂದೆ ಕೋವಿಡ್ ಕಾರಣದಿಂದ ಕೆಲವು ವಾಹನಗಳಿಗೆ ಬಂಡಿಪುರ ಭಾಗದಲ್ಲಿ ಅಗತ್ಯ ಸೇವೆಗಳ ಅಡಿಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಆಗ ಲಾರಿಯೊಂದು ಡಿಕ್ಕಿ ಹೊಡೆದು ಆನೆಯೊಂದು ಅರ್ಧ ಗಂಟೆ ಜೀವನ್ಮರಣದ ನಡುವೆ ಹೋರಾಡಿ ಪ್ರಾಣ ಬಿಟ್ಟಿತ್ತು. ಆನಂತರ ಆ ವಿನಾಯಿತಿಯನ್ನು ತೆಗೆದು ಹಾಕಿ ಮತ್ತೆ ಹೆದ್ದಾರಿ ನಿಷೇಧ ಬಿಗಿಗೊಳಿಸಲಾಯಿತು.
ಈ ಮಾರ್ಗದಲ್ಲಿ ಹೆದ್ದಾರಿ ಬಂದ್ ನಂತರ ಪ್ರಾಣಿಗಳ ಸಾವಿನ ಪ್ರಮಾಣ ತಗ್ಗಿದೆ. ಅವುಗಳ ಮುಕ್ತ ಸಂಚಾರಕ್ಕೂ ದಾರಿಯಾಗಿದೆ. ಈ ಭಾಗದ ಟಿಂಬರ್ ಮಾಫಿಯಾ, ಇತರೆ ಶಕ್ತಿಗಳ ಪ್ರಯತ್ನ ಆಗಾಗ ಗರಿ ಗೆದರುತ್ತಲೇ ಇರುತ್ತದೆ.
ವಯನಾಡು ಪ್ರವಾಹದ ನಂತರ
ಆರು ತಿಂಗಳ ಹಿಂದೆಯಷ್ಟೇ ವಯನಾಡು ಪ್ರವಾಹಕ್ಕೆ ಸಿಲುಕಿ ಇನ್ನಿಲ್ಲದಂತೆ ನಲುಗಿತು, ಇದಕ್ಕೆ ಕಾರಣವೂ ತಿಳಿದಿರುವ ವಿಷಯವೇ. ಇಂತಹ ಕರಾಳ ನೆನಪು ಮಾಸುವ ಮುನ್ನವೇ ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಬದಲು ರೂಪಿಸಿದ ಮಾದರಿಯೊಂದನ್ನು ಹಾಳುವ ಮಾಡುವ ಪ್ರಯತ್ನ ಸರ್ವತಾ ಸ್ವೀಕಾರವಲ್ಲ.
ಈಗ ಈ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಸುಪ್ರೀಂಕೋರ್ಟ್ ತೀರ್ಪು ಬಂದರೆ ಇಂತಹ ಹೇಳಿಕೆಗಳಿಗೆ ಪೂರ್ಣ ವಿರಾಮ ಬೀಳಬಹುದು. ಅಷ್ಟೇ ಅಲ್ಲ ವನ್ಯಜೀವಿಗಳ ಮೂಕವೇದನೆಗೆ ಫಲವೂ ಸಿಗಬಹುದೇನೋ?