ಕಾಡಿನ ಕಥೆಗಳು: ಕರ್ನಾಟಕದ ಅರಣ್ಯ ಇಲಾಖೆಗೆ ಮೂರೂವರೆ ದಶಕದ ನಂತರ ಬಂತು ದೇಶಿ ನಿರ್ಮಿತ ರೇಡಿಯೋ ಕಾಲರ್‌;ಆನೆಗಳಿಗೆ ಅಳವಡಿಕೆ ಹೇಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಕರ್ನಾಟಕದ ಅರಣ್ಯ ಇಲಾಖೆಗೆ ಮೂರೂವರೆ ದಶಕದ ನಂತರ ಬಂತು ದೇಶಿ ನಿರ್ಮಿತ ರೇಡಿಯೋ ಕಾಲರ್‌;ಆನೆಗಳಿಗೆ ಅಳವಡಿಕೆ ಹೇಗೆ

ಕಾಡಿನ ಕಥೆಗಳು: ಕರ್ನಾಟಕದ ಅರಣ್ಯ ಇಲಾಖೆಗೆ ಮೂರೂವರೆ ದಶಕದ ನಂತರ ಬಂತು ದೇಶಿ ನಿರ್ಮಿತ ರೇಡಿಯೋ ಕಾಲರ್‌;ಆನೆಗಳಿಗೆ ಅಳವಡಿಕೆ ಹೇಗೆ

ಕಾಡಿನ ಕಥೆಗಳು: ಕರ್ನಾಟಕವು ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರತದಲ್ಲೇ ಮುಂಚೂಣಿಯಲ್ಲಿರುವ ದೇಶ. ಕರ್ನಾಟಕ ಅರಣ್ಯ ಇಲಾಖೆಯೂ ಹಲವು ವಿಷಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ಆನೆಗಳಿಗೆ ರೇಡಿಯೋ ಕಾಲರ್‌ ಅನ್ನು ಮೊದಲ ಬಾರಿ ಉತ್ಪಾದಿಸಿ ಮೇಕ್‌ ಇನ್‌ ಇಂಡಿಯಾಕ್ಕೆ ಸೇರಿದೆ. ರೇಡಿಯೋ ಕಾಲರ್‌ ಬಳಕೆ ಹಾದಿಯ ನೋಟ ಇಲ್ಲಿದೆ.

ಕರ್ನಾಟಕ ಅರಣ್ಯ ಇಲಾಖೆ ಭಾರತದಲ್ಲೇ ಮೊದಲ ಬಾರಿಗೆ ದೇಸಿ ಆಧರಿತ ಆನೆಗಳ ರೇಡಿಯೋ ಕಾಲರ್‌ ಆವಿಷ್ಕಾರ ಮಾಡಿದೆ.
ಕರ್ನಾಟಕ ಅರಣ್ಯ ಇಲಾಖೆ ಭಾರತದಲ್ಲೇ ಮೊದಲ ಬಾರಿಗೆ ದೇಸಿ ಆಧರಿತ ಆನೆಗಳ ರೇಡಿಯೋ ಕಾಲರ್‌ ಆವಿಷ್ಕಾರ ಮಾಡಿದೆ.

ಅದು 1990 ರ ದಶಕ. ವನ್ಯಜೀವಿಗಳ ಮೇಲೆ ವಿಚಕ್ಷಣೆ ಇಡಲು ಕರ್ನಾಟಕದ ನಾಗರಹೊಳೆಯಲ್ಲಿ ರೇಡಿಯೋ ಕಾಲರ್‌ ಅನ್ನು ಮೊದಲು ಅಳವಡಿಸಿದವರು ತಜ್ಞ ಡಾ.ಉಲ್ಲಾಸ್‌ ಕಾರಂತ್‌. ಅದೂ ಮೊದಲ ಬಾರಿಗೆ ಹುಲಿಗೆ ರೇಡಿಯೋ ಕಾಲರ್‌ ಅಳವಡಿಸಿ ಆಂಟೆನಾ ಆಧರಿತವಾಗಿ ಹುಲಿಯ ನಿತ್ಯ ಆಗು ಹೋಗುಗಳನ್ನು ದಾಖಲು ಮಾಡಲಾಗುತ್ತಿತ್ತು. ಇದು ಆಗ ಭಾರೀ ವಿವಾದವನ್ನೂ ಸೃಷ್ಟಿಸಿತ್ತು. ವಿದೇಶದಿಂದ ಹಣ ತಂದು ನಮ್ಮ ಅರಣ್ಯದಲ್ಲಿ ಪ್ರಯೋಗ ಮಾಡುವುದು ಏನಿದೆ ಎನ್ನುವುದು ವಿವಾದದ ಮೂಲವಾಗಿತ್ತು. ಆಗ ಅರಣ್ಯ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲ ಪರಿಸರವಾದಿಗಳಿಂದಲೂ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಉಲ್ಲಾಸ್‌ ಕಾರಂತ್‌ ಮೊದಲ ರೇಡಿಯೋ ಕಾಲರ್‌ ಅನ್ನು ಅಳವಡಿಸಿ ವೈಜ್ಞಾನಿಕವಾಗಿ ಕರ್ನಾಟಕ ಮುಂದೆ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ನಾಲ್ಕೈದು ವರ್ಷಗಳ ಕಾಲ ಗೊಂದಲ, ವಿವಾದದ ನಡುವೆಯೂ ಹುಲಿಗಳಿಗೆ ರೇಡಿಯೋ ಕಾಲರಿಂಗ್‌ ಹಾಕುವ ಪ್ರಯೋಗ ಮುಂದುವರಿದಿತ್ತು. ದಶಕಗಳು ಉರುಳಿ ಹೋಗಿದೆ, ಕರ್ನಾಟಕದಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಪ್ರಮಾಣ ಹಿಂದೆದಿಗಿಂತಗಲೂ ಈಗ ಅಧಿಕವಾಗಿದೆ. ಬದಲಾದ ಕಾಲಘಟ್ಟದಲ್ಲಿ ಚಿರತೆ, ಕಾಡಾನೆಗಳಿಗೂ ರೇಡಿಯೋ ಕಾಲರ್‌ ಅನ್ನು ಕರ್ನಾಟಕದಲ್ಲಿ ಅಳವಡಿಸಲಾಗಿದೆ. ಈ ಪ್ರಯೋಗ ಈಗ ಭಾರತೀಯತೆಯ ಹಾದಿ ಹಿಡಿದಿದೆ. ರೇಡಿಯೋ ಪ್ರಯೋಗದಿಂದ ಗಮನ ಸೆಳೆದಿದ್ದ ಕರ್ನಾಟಕ ಅರಣ್ಯ ಇಲಾಖೆಯೂ ಬಹುತೇಕ ಮೂರೂವರೆ ದಶಕದ ನಂತರ ಮೇಕ್‌ ಇನ್‌ ಇಂಡಿಯಾ ಹಾದಿಗೆ ಬಂದಿದೆ. ಅಂದರೆ ಭಾರತದಲ್ಲಿಯೇ ಮೊದಲ ಬಾರಿ ಕಾಡಾನೆಗಳಿಗೆ ಕರ್ನಾಟಕದಲ್ಲಿಯೇ ಅತ್ಯಾಧುನಿಕ ರೇಡಿಯೋ ಕಾಲರ್‌ ಅನ್ನು ಆವಿಷ್ಕರಿಸಲಾಗಿದೆ. ಸದ್ಯದಲ್ಲಿಯೇ ನಾಗರಹೊಳೆ ಹಾಗೂ ಬಂಡೀಪುರ ಭಾಗದಲ್ಲಿ ಸೆರೆ ಹಿಡಿದು ಮತ್ತೆ ಕಾಡಿಗೆ ಬಿಡುವ ಆನೆಗಳಿಗೆ ಕಾಲರ್‌ಗಳನ್ನು ಅಳವಡಿಸುವ ಪ್ರಕ್ರಿಯೆಯೂ ಶುರುವಾಗಲಿದೆ. ಮೊದಲ ಹಂತದಲ್ಲಿ ಆನೆಗಳ ರೇಡಿಯೋ ಕಾಲರ್ ಮಾತ್ರ ಸಿದ್ಧವಾಗಿದೆ. ಹುಲಿ ಮತ್ತು ಚಿರತೆ ಕಾಲರ್‌ ಗಳ ಅಭಿವೃದ್ಧಿಯೂ ಪ್ರಗತಿಯಲ್ಲಿದ್ದು, ಇದನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಯಾವ ಪ್ರಾಣಿಗಳಿಗೆ ರೇಡಿಯೋ ಕಾಲರ್

ಭಾರತದಲ್ಲಿ ಹುಲಿ, ಸಿಂಹ, ಚಿರತೆ ಹಾಗು ಆನೆಯಂತಹ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಇಲ್ಲವೇ ತಾವು ಗುರುತಿಸಿಕೊಂಡ ಆವಾಸ ಸ್ಥಾನಗಳಿಗೆ ಹೋಗುವ ಪ್ರಾಣಿಗಳು ಮಾನವನ ಮೇಲೇ ದಾಳಿ ಮಾಡುವ ಪ್ರಕರಣ ಇತ್ತೀಚಿನ ದಶಕದಲ್ಲಿ ಜಾಸ್ತಿಯಾಗಿದೆ. ಈಗ ಹುಲಿ, ಆನೆ, ಚಿರತೆ ಸಹಿತ ವನ್ಯಜೀವಿಗಳ ಸಂಖ್ಯೆಯೂ ಭಾರತದಲ್ಲಿ ಅತಿ ಹೆಚ್ಚು ಇರುವುದು ಕರ್ನಾಟಕದಲ್ಲಿಯೇ. ಸಂಘರ್ಷ ಪ್ರಮಾಣ, ವನ್ಯಜೀವಿಗಳ ಸಾವು. ಮನುಷ್ಯರ ಸಾವು ಕೂಡ ಕರ್ನಾಟಕದಲ್ಲಿಯೂ ಹೆಚ್ಚಿದೆ. ಈ ರೀತಿಯ ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇರಿಸಲೆಂದೇ ಕರ್ನಾಟಕದಲ್ಲಿ ಈಗಾಗಲೇ ಹುಲಿ ನಂತರ ಚಿರತೆ, ಆನೆಗಳಿಗೂ ರೇಡಿಯೋ ಕಾಲರ್‌ ಅಳವಡಿಕೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಚಿರತೆ ಹಾಗೂ ಹುಲಿಗೆ ರೇಡಿಯೋ ಕಾಲರ್‌ ಅಳವಡಿಸಲಾಗಿದೆ. ಕರ್ನಾಟಕದ ಅರಣ್ಯದಂಚಿನ ಭಾಗದಲ್ಲಿಯೇ ಸುತ್ತುವ ಸುಮಾರು 28 ಕಾಡಾನೆಗಳಿಗೂ ರೇಡಿಯೋ ಕಾಲರ್‌ ಅನ್ನು ಅಳವಡಿಸಿ ಅವುಗಳ ಚಲನವಲನದ ನಿಖರ ಮಾಹಿತಿಯನ್ನು ಉಪಗ್ರಹ ಆಧರಿತ ಸೇವೆಯಿಂದ ಪಡೆಯಲಾಗುತ್ತಿವೆ. ಅವು ಎಲ್ಲಿವೆ ಎನ್ನುವುದು ಇದರಿಂದ ನಿಖರವಾಗಿ ತಿಳಿಯಲಿದೆ. ವಿಶೇಷವಾಗಿ ಆನೆಗಳ ಉಪಟಳ ಹೆಚ್ಚಾಗಿರುವ ಕರ್ನಾಟಕದ ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ ಭಾಗದಲ್ಲಿ ರೇಡಿಯೋ ಕಾಲರ್‌ ಇರುವ ಆನೆಗಳಿವೆ. ಅವುಗಳು ಜನಪ್ರದೇಶಗಳಿಗೆ ಬಂದರೆ ‌ಮಾಹಿತಿ ದೊರೆತು ಮತ್ತೆ ಅರಣ್ಯದ ಕಡೆಗೆ ಹಿಮ್ಮೆಟ್ಟಿಸುವ ಪ್ರಯತ್ನವೂ ಆಗುತ್ತಿದೆ.

ಕರ್ನಾಟಕದ ಪ್ರಯೋಗಗಳ ಹಾದಿ

ರೇಡಿಯೋ ಕಾಲರ್‌ ಎನ್ನುವುದು ವನ್ಯಜೀವಿಗಳ ಕತ್ತಿಗೆ ಅಳವಡಿಸಿ ಅವುಗಳ ಚಲನವಲನ ಗುರುತಿಸುವ ಯಂತ್ರ. ವಿಶೇಷವಾಗಿ ಹುಲಿ ಉಪಟಳ ಹೆಚ್ಚಾಗಿದ್ದ ನಾಗರಹೊಳೆಯಲ್ಲಿ ಇದನ್ನು ಮೊದಲು ಪ್ರಯೋಗಿಸಿದ್ದು ಡಾ.ಉಲ್ಲಾಸ್‌ ಕಾರಂತ್‌ ಹಾಗೂ ಅವರ ತಂಡ. ಅಮೆರಿಕಾದ ಆರ್ಥಿಕ ನೆರವು ಪಡೆದು ಪ್ರಯೋಗಗಳನ್ನು ಅವರು ಮಾಡಿದರು. ಹುಲಿ ಸಂಚಸಿರುವ ಮಾಹಿತಿಯನ್ನು ಪಡೆಯಲಾಗುತ್ತಿತ್ತು. ಆದರೆ ತಂತ್ರಜ್ಞಾನ ಅಷ್ಟಾಗಿ ಮುಂದುವರಿಯದ ಆಗಲೂ ರೇಡಿಯೋಕಾಲರ್‌ ಅನ್ನು ಹುಲಿಗಳಿಗೆ ಹಾಕಿ ಮಾಹಿತಿ ಪಡೆಯಲಾಗುತ್ತಿತ್ತು. ಅಪಸ್ವರಗಳ ನಡುವೆಯೂ ಈ ಪ್ರಯೋಗ ಕರ್ನಾಟಕದ ಅರಣ್ಯದಲ್ಲಿ ಆಗಲೇ ನಡೆದಿತ್ತು.

ಕಾಲ ನಂತರ ಕರ್ನಾಟಕದಲ್ಲಿ ಚಿರತೆಗಳ ಉಪಟಳವೂ ಹೆಚ್ಚಿದಾಗ ಅವುಗಳಗೂ ರೇಡಿಯೋ ಕಾಲರ್‌ ಅಳವಡಿಸಿದ್ದು ಮತ್ತೊಬ್ಬ ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಮತ್ತು ತಂಡದವರು. ತುಮಕೂರು, ಮೈಸೂರು, ಚಾಮರಾಜನಗರ, ಹಾಸನ ಸಹಿತ ಹಲವು ಕಡೆಗಳಲ್ಲಿ ಸುಮಾರು ಹತ್ತು ಚಿರತೆಗಳಿಗೆ 2010 ರಲ್ಲಿ ಕಾಲರ್‌ಗಳನ್ನು ಅಳವಡಿಸಲಾಯಿತು. ಈಗಲೂ ಅರಣ್ಯ ಇಲಾಖೆ ಸುಪರ್ದಿಯಲ್ಲಿ ಇದು ಮುಂದುವರಿದಿದೆ.

ಆನೆಗಳ ಸಂಖ್ಯೆ ಹೆಚ್ಚಾಗಿ ಸಂಘರ್ಷ ಅಧಿಕವಾದಾಗ ಆರೇಳು ವರ್ಷದ ಹಿಂದೆ ಆನೆಗಳಿಗೆ ರೇಡಿಯೋ ಕಾಲರ್‌ ಅಳವಡಿಸಲಾಯಿತು. ಭಾರತ ಮಾತ್ರವಲ್ಲದೇ ನಾಲ್ಕೈದು ದೇಶಗಳ ಆನೆ ತಜ್ಞರಾಗಿದ್ದ ಕನ್ನಡಿಗ ಡಾ.ಅಜಯ್‌ ದೇಸಾಯಿ ಅವರ ನೇತೃತ್ವದಲ್ಲಿ ಇಂತಹೊಂದು ಪ್ರಯೋಗ ನಡೆಯಿತು. ಕರ್ನಾಟಕ ಅರಣ್ಯ ಇಲಾಖೆಯೂ ಇದಕ್ಕೆ ಸಾಥ್‌ ನೀಡಿತು. ಸುಮಾರು 17 ಕೆ.ಜಿ. ತೂಗುವ ಯಂತ್ರವದು. ಸೆರೆ ಹಿಡಿದ ಹೆಣ್ಣು ಆನೆಗಳಗೆ ಇವುಗಳನ್ನು ಅಳವಡಿಸಿ ಆ ಆನೆಗಳ ಚಲನವಲನದ ಮಾಹಿತಿಯನ್ನು ತೆಗೆದುಕೊಂಡು ಬರಲಾಗುತ್ತಿತ್ತು. ಅದರಲ್ಲೂ ಕೊಡಗು ಹಾಗೂ ಹಾಸನದಲ್ಲಂತೂ ಆನೆಗಳ ಉಪಟಳ ಇನ್ನಿಲ್ಲದಂತೆ ಹೆಚ್ಚಿದಾಗ ಅಲ್ಲಿಯೇ ಹೆಚ್ಚು ಆನೆಗಳನ್ನು ಸೆರೆ ಹಿಡಿದು ಕಾಲರ್‌ ಅಳವಡಿಸಿ ಕಾಡಿಗೆ ಬಿಡಲಾಗಿದೆ.

ಹೊರ ದೇಶದ ಅವಲಂಬನೆ

ಈವರೆಗೆ ದಕ್ಷಿಣ ಆಫ್ರಿಕಾದೇಶದ ಆಫ್ರಿಕನ್ ವೈಲ್ಡ್ ಲೈಫ್ ಟ್ರಾಕಿಂಗ್ ಮತ್ತು ಜರ್ಮನಿಯ ವೆಕ್ಟ್ರೋನಿಕ್ ಸಂಸ್ಥೆಗಳಿಂದ ಈ ರೇಡಿಯೋ ಕಾಲರ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಸಕಾಲದಲ್ಲಿ ಈ ರೇಡಿಯೋ ಕಾಲರ್ ಲಭ್ಯವಾಗುತ್ತಿರಲಿಲ್ಲ, ಜತೆಗೆ ಒಂದು ರೇಡಿಯೋ ಕಾಲರ್ ಗೆ .6.5 ಲಕ್ಷ ರೂ.ವೆಚ್ಚವಾಗುತ್ತಿತ್ತು. ತೂಕ, ದರ, ತಂತ್ರಜ್ಞಾನವನ್ನು ಉನ್ನತೀಕರಿಸಿದ ರೇಡಿಯೋ ಕಾಲರ್‌ ಅನ್ನು ದೇಶಿಯವಾಗಿ ಅಭವೃದ್ದಿಪಡಿಸುವ ಪ್ರಯತ್ನ ಕಳೆದ ವರ್ಷ ಬೆಂಗಳೂರಿನಲ್ಲಿ ಶುರುವಾಗಿತ್ತು. ಹಿರಿಯ ಐಎಫ್‌ಎಸ್‌ ಅಧಿಕಾರಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ ಪುಷ್ಕರ್‌ ಅವರ ನೇತೃತ್ವದಲ್ಲಿ ಪ್ರಯೋಗ ನಡೆದಿತ್ತು. ಇನ್‌ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನ ತಾಂತ್ರಿಕ ತಜ್ಞ ಗುರುದೀಪ ಅವರಿಗೆ ಕುಮಾರ ಪುಷ್ಕರ್‌ ಅವರೇ ಮಾರ್ಗದರ್ಶನ ನೀಡಿ ಇದನ್ನು ಅಭಿವೃದ್ದಿಪಡಿಸಿದ್ದಾರೆ. ಜಿಎಸ್.ಎಂ ಆಧಾರಿತ ಆನೆ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಿದ್ದಾರೆ. ಈ ಕಾಲರ್‌ ಗೆ ಕರ್ನಾಟಕ ಪರಿಶೋಧಿತ ಟ್ರ್ಯಾಕರ್ ಅಥವಾ ಕರ್ನಾಟಕ ಪ್ರಡ್ಯೂಸ್ಡ್ (ಕೆ.ಪಿ. ಟ್ರ್ಯಾಕರ್) ಎಂದು ಹೆಸರಿಸಲಾಗಿದೆ. ಹೊರ ದೇಶದಿಂದ ತರಿಸಲು ಸಮಯವೂ ಬೇಕಾಗುತ್ತಿತ್ತು. ಈ ಕಾರಣದಿಂದಲೇ ನಮ್ಮಲ್ಲೇ ಈ ಪ್ರಯೋಗ ಶುರುವಾಗಿದೆ ಭಾರತದ ಮೊದಲ ಆನೆ ರೇಡಿಯೋ ಕಾಲರ್‌ ಈಗ ಬಳಕೆಗೆ ಲಭ್ಯವಾಗಿದೆ

ಈಗ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ರೇಡಿಯೋ ಕಾಲರ್ ಗೆ 1.80 ಲಕ್ಷ ರೂ. ಆಗುತ್ತದೆ. ಇದು ಹೆಚ್ಚಿನ ರೇಡಿಯೋಕಾಲರ್ ಗಳು ಲಭ್ಯವಾಗುವಂತೆ ಮಾಡುವುದಲ್ಲದೆ, ವಿದೇಶೀ ಅವಲಂಬನೆ ಹಾಗೂ ದುಬಾರಿ ವೆಚ್ಚ ತಗ್ಗಿಸುತ್ತದೆ, ವಿದೇಶೀ ವಿನಿಮಯವನ್ನೂ ಉಳಿಸುತ್ತದೆ ಜೊತೆಗೆ ಆಮದು ರೇಡಿಯೋ ಕಾಲರ್ ಗಳ ತೂಕ 16 ರಿಂದ 17 ಕೆ.ಜಿ. ಇರುತ್ತಿತ್ತು. ಆದರೆ ಈಗ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಕಾಲರ್ ಕೇವಲ 7 ಕೆ.ಜಿ. ತೂಕವಿದ್ದು, ಇದು ಹಗುರವಾಗಿರುತ್ತದೆ

ಅರಣ್ಯ ಇಲಾಖೆ ತನ್ನ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಪರಿಸರ ಸ್ನೇಹಿಯಾದ ಕಚ್ಚಾವಸ್ತುಗಳನ್ನೇ ಬಳಸಿ ಈ ರೇಡಿಯೋ ಕಾಲರ್ ತಯಾರಿಸಿದ್ದು, ವನ್ಯಜೀವಿಗಳಿಗಾಗಲೀ, ಪರಿಸರಕ್ಕಾಗಲೀ ಅಪಾಯವಾಗುವುದಿಲ್ಲ. ಒಂದೊಮ್ಮೆ ರೇಡಿಯೋ ಕಾಲರ್ ಗಳಲ್ಲಿ ದೋಷ ಕಂಡು ಬಂದರೆ ದುರಸ್ತಿ ಮಾಡಲು, ಬ್ಯಾಟರಿ, ಬಲ್ಬ್, ಸರ್ಕ್ಯೂಟ್ ಬದಲಾಯಿಸಲು ಅವಕಾಶವಿದೆ. ಆಮದು ರೇಡಿಯೋ ಕಾಲರ್ ಗಳಲ್ಲಿ ಈ ಅವಕಾಶ ಇರಲಿಲ್ಲ ಎನ್ನುವುದು ವಿಶೇಷ.

ಪುಷ್ಕರ್‌ ವಿಶೇಷ ಆಸಕ್ತಿ

ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ರೇಡಿಯೋ ಕಾಲರ್ ಗಳಿಂದ ನಮ್ಮ ಕಾಡು ಮತ್ತು ವನ್ಯಜೀವಿಗಳ ಮಾಹಿತಿ ಸೋರಿಕೆ ಆಗುವ ಅಪಾಯವೂ ಇತ್ತು. ಈಗ ದೇಶೀಯವಾಗಿ ಈ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಿರುವುದರಿಂದ ಅಂತಹ ಅಪಾಯ ಇರುವುದಿಲ್ಲ. ದತ್ತಾಂಶ ಕೂಡ ಸ್ಥಳೀಯ ಸರ್ವರ್ ಗಳಲ್ಲಿ ಸುರಕ್ಷತವಾಗಿರುತ್ತದೆ. 6395 ಆನೆಗಳನ್ನು ಹೊಂದಿರುವ ಕರ್ನಾಟಕ ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಆನೆಗಳ ಸಂಖ್ಯೆಗೆ ಅನುಗುಣವಾಗಿ ವನ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ. ಅಮೂಲ್ಯವಾದ ಜೀವ ಉಳಿಸಲು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಸ್ಥಳೀಯರಿಗೆ ಮಾಹಿತಿ ನೀಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ಆನೆಗಳು ನಾಡಿನಲ್ಲೇ ಸಂಚರಿಸುತ್ತಿದ್ದು, ಸಾಮಾನ್ಯವಾಗಿ ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ದೇಶೀ ನಿರ್ಮಿತ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಆನೆ ಚಲನ ವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು ಎನ್ನುವುದು ಕರ್ನಾಟಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿವರಣೆ.

ಮೊದಲ ಹಂತದಲ್ಲಿ ನಾಗರಹೊಳೆ ಹಾಗೂ ಬಂಡೀಪುರ ಹುಲಿ ಮೀಸಲು ವನ್ಯಧಾಮಗಳಿಗೆ ತಲಾ ಎರಡು ರೇಡಿಯೋ ಕಾಲರ್‌ ನೀಡಲಾಗಿದೆ. ಹಂತ ಹಂತವಾಗಿ ಇತರೆಡೆಯೂ ಇವುಗಳನ್ನು ನೀಡಲಾಗುತ್ತದೆ. ಬಳಕೆ ನಂತರ ಇನ್ನಷ್ಟು ಸುಧಾರಣೆಗೂ ಆದ್ಯತೆ ಸಿಗಲಿದೆ. ಭಾರತದಲ್ಲೇ ಕರ್ನಾಟಕ ತಂತ್ರಜ್ಞಾನ ಆಧರಿತ ಸೇವೆಯಲ್ಲಿ ಮುಂದೆ ಎಂದು ಹಿರಿಯ ಅಧಿಕಾರಿ ಕುಮಾರ ಪುಷ್ಕರ್‌ ವಿವರಿಸುತ್ತಾರೆ.

 

Whats_app_banner