ಕಾಡಿನ ಕಥೆಗಳು: ಮನೆಯಲ್ಲಿ ಅವಳಿ ಮಕ್ಕಳು ಜನಿಸಿದ ಸಂಭ್ರಮ ಬಿಟ್ಟು ಕರ್ತವ್ಯದ ಕರೆಯಂತೆ ಆನೆ ಸೆರೆಗೆ ಬಂದರು ಐಎಫ್‌ಎಸ್ ಅಧಿಕಾರಿ
ಕಾಡಿನ ಕಥೆಗಳು: ಕಾಯಕ ಎನ್ನುವುದಕ್ಕೆ ತನ್ನದೇ ಆದ ಗೌರವವಿದೆ. ಅದು ಸಾಮಾನ್ಯರು ಆಗಬಹುದು. ಅಧಿಕಾರಿಯೇ ಆಗಬಹುದು.ಕರ್ನಾಟಕದ ಐಎಫ್‌ಎಸ್ ಅಧಿಕಾರಿಯೊಬ್ಬರು ಕುಟುಂಬ ಖುಷಿ ಮೀರಿ ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.

ಕಾಡಿನ ಕಥೆಗಳು: ಹಾಸನದಲ್ಲಿ ಕಾಡಾನೆ ಹಾವಳಿ ಎಷ್ಟು ಮಿತಿ ಮೀರಿದೆ ಎಂದರೆ ಬೇಲೂರು, ಸಕಲೇಶಪುರ ತಾಲ್ಲೂಕು, ಆಲೂರು ಭಾಗದ ಅರಣ್ಯದಂಚಿನ ಜನ ಮನೆಯಿಂದ ಹೊರ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಕಂಡರೆ ಸಾಕು ಜನ ಹೊಡೆಯುವ ಮಟ್ಟಿಗೆ ಪರಿಸ್ಥಿತಿ ಹೋಗಿದೆ. ಒಂದು ಕಡೆ ಕಾಡಾನೆಗಳ ಉಪಟಳ. ಮತ್ತೊಂದು ಕಡೆ ಅರಣ್ಯ ಇಲಾಖೆಯಲ್ಲಿಯೇ ಜವಾಬ್ದಾರಿ, ಯೋಜಿತವಾಗಿ ಕೆಲಸ ಮಾಡುವ ಅಧಿಕಾರಿಗಳ ಕೊರತೆ. ಡಿಸಿಎಫ್, ಎಸಿಎಫ್‌ಗಳ ಸಾಲು ಸಾಲು ಸಸ್ಪೆಂಡ್ ಪ್ರಕರಣಗಳ ನಂತರ ಹಾಸನದ ಅರಣ್ಯ ಇಲಾಖೆಗೆ ಒಬ್ಬ ಮೇಟಿ ಬೇಕಿದ್ದರು. ಮೂರು ತಿಂಗಳ ಹಿಂದೆ ಅರಣ್ಯ ಇಲಾಖೆಗೆ ಮೇಟಿಯೊಬ್ಬರನ್ನೇನೂ ಸರ್ಕಾರ ನೇಮಿಸಿತು. ಅವರು ಬಂದು ಅಧಿಕಾರ ಕೂಡ ವಹಿಸಿಕೊಂಡರು. ಮದುವೆಯಾಗಿ ಹನ್ನೊಂದು ವರ್ಷದ ಬಳಿಕ ಮನೆಯಲ್ಲಿ ಮಗು ಹುಟ್ಟುವ ಸಂಭ್ರಮ. ಹಾಸನಕ್ಕೆ ಬಂದ ಎರಡು ತಿಂಗಳಲ್ಲೇ ಜನಿಸಿದ್ದು ಅವಳಿ ಹೆಣ್ಣುಮಕ್ಕಳು. ಮನೆಗೆ ಮಹಾಲಕ್ಷ್ಮಿಯರೇ ಬಂದ ಖುಷಿ. ಊರಿಗೆ ಹೋಗಲು ಆಗದಷ್ಟು ಇಲ್ಲಿ ಕಾಡಾನೆ ಉಪಟಳ. ಎರಡು ತಿಂಗಳ ಅಂತರದಲ್ಲೇ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆನೆ ಹಿಡಿಯಲೇಬೇಕು ಎನ್ನುವ ಒತ್ತಡ ಬೇರೆ. ಸರ್ಕಾರದಿಂದ ಪುಂಡಾನೆಗಳನ್ನು ಹಿಡಿಯಲೇ ಬೇಕು ಎನ್ನುವ ಕಟ್ಟಾಜ್ಞೆ ಕೂಡ ಜಾರಿಯಾಗಿತ್ತು. ರಜೆ ಹಾಕಿ ಮಕ್ಕಳೊಂದಿಗೆ ಕೆಲ ದಿನ ಕಳೆಯಬೇಕಾದ ಅಪ್ಪ ಡ್ಯೂಟಿಗೆ ಹೊರಟೇ ಬಿಟ್ಟರು. ಕರ್ತವ್ಯದ ಕರೆ ಎನ್ನುವಂತೆ ಹೊರಟು ಬಂದೇ ಬಿಟ್ಟರು. ಮೂರ್ನಾಲ್ಕು ದಿನದ ಅಂತರದಲ್ಲಿಯೇ ಹಾಸನದಲ್ಲಿ ಮೂರು ಪುಂಡಾನೆಗಳನ್ನು ಹಿಡಿವ ಕಾರ್ಯಾಚರಣೆ ನೇತೃತ್ವ ವಹಿಸಿ ಮತ್ತೆ ಕಾಡಿಗೆ ಅಟ್ಟಿದರು.
ಇವರ ಹೆಸರು ವಿ.ಏಡುಕೊಂಡಲು. ಕರ್ನಾಟಕ ಇಲಾಖೆಯಲ್ಲಿ ಯೋಜಿತ ಕೆಲಸ, ಬದ್ದತೆಗೆ ಹೆಸರಾದವರು.
ಸೇವೆಯಿಂದಲೇ ಗೌರವ ಎಂದು ನಂಬಿದವರು
ಹದಿನಾಲ್ಕು ವರ್ಷದ ಕರ್ನಾಟಕ ಸೇವೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ವಿ.ಏಡುಕೊಂಡಲು ಅವರು ಆಂಧ್ರಪ್ರದೇಶದವರು. ಕೃಷಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದರೂ ಅರಣ್ಯದ ಬಗ್ಗೆ ಆಸಕ್ತಿ. ಉದ್ಯೋಗದಲ್ಲಿದ್ದರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2011 ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿ ಬಂದಿದ್ದು ಕರ್ನಾಟಕದ ಸೇವೆಗೆ. ಮೈಸೂರು ವನ್ಯಜೀವಿ ಉಪವಿಭಾಗದ ಡಿಸಿಎಫ್ ಆಗಿದ್ದ ವಿ.ಏಡುಕೊಂಡಲು ಅವರು ಏಳು ವರ್ಷದ ಹಿಂದೆ ನಿಯೋಜನೆಗೊಂಡಿದ್ದು ವೀರಪ್ಪನ್ ಕಾರ್ಯಕ್ಷೇತ್ರವಾಗಿದ್ದ ಮಲೈಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದ ಡಿಸಿಎಫ್ ಹುದ್ದೆಗೆ.
ಅಲ್ಲಿ ಸತತ ನಾಲ್ಕೂವರೆ ವರ್ಷ ಕಾಲ ಅವರು ಎಡಬಿಡದೇ ಕೆಲಸ ಮಾಡಿದರು. ಅರಣ್ಯ ಸಂರಕ್ಷಣೆ ಜತೆಯಲ್ಲಿ ಪ್ರವಾಸೋದ್ಯಮಕ್ಕೂ ಒತ್ತು ನೀಡಿದರು. ಜನ ಸಂಪರ್ಕವೇ ಇಲ್ಲದೇ ಆರೋಗ್ಯ ಸೇವೆಗೆ ಪರದಾಡುವ ಜನರಿಗೆ ಸಂಪರ್ಕ ಸೇತುವೆಯಾದರು. ವಾಹನಗಳ ಸೌಲಭ್ಯವೂ ಬಂದಿತು. ವೀರಪ್ಪನ್ ಕಾಲದಲ್ಲಿ ಹತರಾಗಿದ್ದ ಐಎಫ್‌ಎಸ್ ಅಧಿಕಾರಿ ಶ್ರೀನಿವಾಸ್ ಅವರ ಸ್ಮಾರಕಕ್ಕೂ ಹೊಸ ರೂಪ ನೀಡಿದರು. ಕೊಳ್ಳೇಗಾಲ ಸಮೀಪದಲ್ಲಿ ಎಕೋ ಟೂರಿಸಂ ಅಡಿ ಹಲವಾರು ಸೌಲಭ್ಯ ತಂದರು.
ಹೀಗೆ ಹತ್ತು ಹಲವು ರೀತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದರು ವಿ.ಏಡುಕೊಂಡಲು.
ಬಳಿಕ ಕೋಲಾರದಂತಹ ಅರಣ್ಯ ಒತ್ತುವರಿ ಮಿತಿ ಮೀರಿರುವ, ಘಟಾನುಘಟಿ ರಾಜಕಾರಣಿಗಳ ಹಿಡಿತ ಇರುವ ಜಿಲ್ಲೆಗೆ ವರ್ಗಾವಣೆ ಆಯಿತು. ಅಲ್ಲಿಯೂ ತಮ್ಮದೇ ಶೈಲಿಯಲ್ಲಿ ಅರಣ್ಯ ಇಲಾಖೆ ತಂಡವಾಗಿ ಸುಮಾರು ಎರಡು ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ರಾಷ್ಟ್ರಮಟ್ಟದಲ್ಲಿ ಏಡುಕೊಂಡಲ ಗಮನ ಸೆಳೆದರು. ಅದರಲ್ಲೂ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರ ವಿರುದ್ದದ ಪ್ರಕರಣದ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಿದವರು ಏಡುಕೊಂಡಲು.
ಹಾಸನದ ವಿಭಿನ್ನ ಸವಾಲುಗಳು
ಈ ವರ್ಷದ ಆರಂಭದಲ್ಲಿ ಅವರಿಗೆ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಸಿಕ್ಕಿತ್ತು. ಹಾಸನದಲ್ಲಿದ್ದ ಆರ್. ರವಿಶಂಕರ್ ಎಂಬ ಸಿಸಿಎಫ್ ಹಂತದ ಅಧಿಕಾರಿ ವರ್ಗಗೊಂಡ ನಂತರ ಹಾಸನ ವೃತ್ತ ಸಂರಕ್ಷಣಾಧಿಕಾರಿ ಹುದ್ದೆ ಖಾಲಿಯಿತ್ತು. ಕೆಲಸ ಮಾಡುವ ಅಧಿಕಾರಿಗೆ ಹುಡುಕಾಟ ನಡೆದಾಗ ವಿ.ಏಡುಕೊಂಡಲು ಇಲ್ಲಿಗೆ ನೇಮಕಗೊಂಡರು. ಇಲಾಖೆಯಲ್ಲಿ ಯೋಜಿತವಾಗಿ ಕೆಲಸ ಮಾಡುವವರಿಗೆ ಉತ್ಸಾಹ ತುಂಬುವ ನಾಯಕತ್ವದ ಕೊರತೆ ಇತ್ತು.
ಹಾಸನದಲ್ಲಿ ಹೊಸ ಹುದ್ದೆಗೆ ಬಂದರೂ ಎರಡು ರೀತಿಯಲ್ಲಿ ಅವರಿಗೆ ಒತ್ತಡ. ಮನೆಯಲ್ಲಿ ಪತ್ನಿ ಎಂಟು ತಿಂಗಳ ಗರ್ಭಿಣಿ. ಕಚೇರಿಯಲ್ಲಿ ಆನೆ ಉಪಟಳ ತಗ್ಗಿಸುವ ಯೋಜನೆ ತತ್‌ಕ್ಷಣಕ್ಕೆ ರೂಪಿಸಬೇಕಾದ ಅನಿವಾರ್ಯತೆ. ಆನೆಗಳ ಸಾವಿಗೆ ಜನ ನಿರಂತರವಾಗಿ ಜೀವ ಕಳೆದುಕೊಂಡರೆ ಯಾವ ಅಧಿಕಾರಿಯಾದರೂ ನೆಮ್ಮದಿ ಇರಲು ಸಾಧ್ಯ. ಏಡುಕೊಂಡಲ ಕೂಡ ಅದೇ ಸನ್ನಿವೇಶ ಎದುರಿಸಿದರು. ಮನೆಯವರು ಹೆರಿಗೆ ಹೋಗಬೇಕಾದ ವೇಳೆಯಲ್ಲಿ ಆನೆ ಉಪಟಳ ಮಿತಿ ವಾರದ ಅಂತರದಲ್ಲೇ ಎರಡು ದುರಂತ ಪ್ರಕರಣಗಳು ನಡೆದಿದ್ದವು. ಖುದ್ದು ಅರಣ್ಯ ಸಚಿವರೇ ಬೇಲೂರಿಗೆ ಬಂದು ಪರಿಸ್ಥಿತಿ ಅರಿತಿದ್ದರು.
ಅರಣ್ಯ ಸಚಿವರ ಕಟ್ಟಾಜ್ಞೆ ಸವಾಲು
ಬೇಲೂರು ತಾಲೂಕಿನ ಬಿಕ್ಕೋಡು, ಅರೆಹಳ್ಳಿ ಸುತ್ತಮುತ್ತ ಜನರಿಗೆ ಉಪಟಳ ನೀಡುತ್ತಿರುವ 3 ಪುಂಡಾನೆ ಗುರುತಿಸಿದ್ದು, ಈ ಆನೆಗಳನ್ನು ಸೆರೆ ಹಿಡಿಯಲು ಮತ್ತು ಕೂಡಲೇ ಇದೇ ಪ್ರದೇಶದಲ್ಲಿ ಆನೆ ಕಾರ್ಯಪಡೆಯ ಕಚೇರಿ ಸ್ಥಾಪಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಯನ್ನು ನಿಯೋಜಿಸಬೇಕು. ಹಾಸನ ವಿಭಾಗದಕ್ಕೆ 2 ಥರ್ಮಲ್ ಕ್ಯಾಮರಾ ಸಹಿತ ಡ್ರೋನ್ ಖರೀದಿಸಿ ರಾತ್ರಿಯ ವೇಳೆ ಕೂಡ ಆನೆಗಳ ಸಂಚಾರದ ಬಗ್ಗೆ ನಿಗಾ ಇಟ್ಟು, ಸ್ಥಳೀಯರಿಗೆ ಸಕಾಲದಲ್ಲಿ ಮಾಹಿತಿ ನೀಡಬೇಕು. ಆನೆಗಳ ಸಮಸ್ಯೆ ಹೆಚ್ಚಿರುವ ಪ್ರದೇಶದಲ್ಲಿ ತುರ್ತು ಸ್ಪಂದನೆಗಳಾಗಿ 2 ಹೆಚ್ಚುವರಿ ಜೀಪುಗಳು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ, ಆನೆಗಳ ಸಂಚಾರದ ಮಾಹಿತಿ ಬಂದ ಕೂಡಲೇ ಸ್ಪಂದಿಸಬೇಕು.
ಬೇಲೂರು ಭಾಗದ ಜನರಿಗೆ, ತೋಟದ ಕಾರ್ಮಿಕರಿಗೆ ಆನೆಗಳ ಸ್ವಭಾವ, ಆನೆ ಬಂದಾಗ ಏನೆಲ್ಲಾ ಮುಂಜಾಗರೂಕತಾ ಕ್ರಮ ವಹಿಸಬೇಕು, ಹೇಗೆ ನಡೆದುಕೊಳ್ಳಬೇಕು, ಸಂಜೆ ಮತ್ತು ಬೆಳಗಿನ ವೇಳೆ ಓಡಾಡುವಾಗ ಕೈಗೊಳ್ಳಬೇಕಾದ ಎಚ್ಚರಿಕೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲು ತೋಟದ ಮಾಲೀಕರ ಸಹಕಾರ ಪಡೆದು ಜಾಗೃತಿ ಮೂಡಿಸಲು ಮತ್ತು ಗ್ರಾಮಮಟ್ಟದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಬೇಕು.ಆನೆ ಕಾರ್ಯಪಡೆ ಮತ್ತು ಎಡಿಸಿ ಹೊರಗುತ್ತಿಗೆ ಸಿಬ್ಬಂದಿಗೆ ತಿಂಗಳು ತಿಂಗಳು ವೇತನ, ಆನೆ ಕಾರ್ಯಪಡೆಯ ಸಿಬ್ಬಂದಿಗೆ ಆಹಾರಭತ್ಯೆ, ಸಮವಸ್ತ್ರ, ಶೂ, ಜಾಕೆಟ್ ಹಾಗೂ ವಿಮಾ ಸೌಲಭ್ಯ ನೀಡುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಮತ್ತು ಮೊಬೈಲ್ ಸಿಗ್ನಲ್ ದೊರಕದ ಕಡೆಗಳಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿಗೆ ವಾಕಿ ಟಾಕಿ ನೀಡುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನೀಡಿದ್ದರು.
ಸೆರೆ ಹಿಡಿದರು ಮೂರು ಆನೆ
ಸಿಎಂ ಸಿದ್ದರಾಮಯ್ಯ ಕೂಡ ಅನೆ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದರು.
ಆನೆ ಕಾರ್ಯಾಚರಣೆ ಆರಂಭಿಸಿ ಮೂರು ಆನೆ ಹಿಡಿಯಲೇಬೇಕು ಎನ್ನುವ ಡೆಡ್‌ಲೈನ್ ಕೂಡ ನಿಗದಿಯಾಗಿತ್ತು. ಮನೆಯವರಿಗೆ ಹೆರಿಗೆ ಆಗಿ ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿದ ಖುಷಿ. ಈ ಕಡೆ ಕೆಲಸದ ಕರೆ. ಕೊನೆಗೆ ಸೇನೆಯಲ್ಲಿರುವ ರೀತಿ ಹೊರಟೇ ಬಿಟ್ಟರು ವಿ.ಏಡುಕೊಂಡಲು.
ಹಾಸನಕ್ಕೆ ಬಂದವರೇ ಆನೆ ಸೆರೆ ಕಾರ್ಯಾಚರಣೆ ಯೋಜನೆ ಹಾಕಿದರು. ತಂಡವನ್ನು ಸನ್ನದ್ದಗೊಳಿಸಿದರು. ಬೇಲೂರಿನಲ್ಲಿ ಎರಡು. ಸಕಲೇಶಪುರ ತಾಲ್ಲೂಕಿನಲ್ಲಿ ಒಂದು ಆನೆಯನ್ನು ಮೂರ್ನಾಲ್ಕು ದಿನದಲ್ಲಿ ಸೆರೆ ಹಿಡಿಯುವಂತೆ ನೋಡಿಕೊಂಡರು. ಒಮ್ಮೆಯೇ ಇಡೀ ಇಲಾಖೆ ನಿಟ್ಟುಸಿರು ಬಿಡುವ ಕ್ಷಣವದು.
ರಂಗರಾವು ಅವರ ಛಾತಿ
ಇದು ಈಗಿನ ಪರಿಸ್ಥಿತಿಯಾದರೆ, ಹದಿಮೂರು ವರ್ಷದ ಹಿಂದೆ ಹಾಸನದಲ್ಲಿ ಇಂತಹುದೇ ಯಶಸ್ವಿ ಆನೆ ಸೆರೆ ಕಾರ್ಯಾಚರಣೆ ನಡೆದಿತ್ತು. ಆಗಲೂ ಇದೇ ರೀತಿ ಆನೆಗಳ ಉಪಟಳ ಹೆಚ್ಚಿ ಜನ ರೋಸಿ ಹೋಗಿದ್ದಾಗ ಕರ್ನಾಟಕ ಅರಣ್ಯ ಇಲಾಖೆ ಆನೆಗಳನ್ನು ಸೆರೆ ಹಿಡಿದಿತ್ತು. ಆಗ ಹಿರಿಯ ಐಎಫ್‌ಎಸ್ ಅಧಿಕಾರಿಯಾಗಿದ್ದ ಜಿ.ವಿ.ರಂಗರಾವು ಅವರು ಹಾಸನ ವೃತ್ತ ಮುಖ್ಯ ಸಂರಕ್ಷಣಾಧಿಕಾರಿ. ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ತಂಡ ಬರೋಬ್ಬರಿ 22 ಕಾಡಾನೆಗಳನ್ನು ಸೆರೆ ಹಿಡಿದಿತ್ತು. ಕರ್ನಾಟಕದ ಖೆಡ್ಡಾ ಕಾಲದ ಆನೆ ಸೆರೆ ಆಪರೇಷನ್ ನಂತರ ಇದೇ ದೊಡ್ಡ ಸೆರೆ ಪ್ರಯತ್ನ ಆಗಿತ್ತು. ಆಗ ಸಣ್ಣ ಗೊಂದಲಕ್ಕೂ ಅವಕಾಶ ಇಲ್ಲದಂತೆ ಆನೆಗಳನ್ನು ಒಂದೂವರೆ ತಿಂಗಳ ಅವಧಿಯಲ್ಲಿ ಸೆರೆ ಹಿಡಿದು ಉಪಟಳಕ್ಕೆ ಬ್ರೇಕ್ ಹಾಕಲಾಗಿತ್ತು.
ಅವರು ವರ್ಗವಾಗಿ ಹೋದ ಒಂದೆರಡು ವರ್ಷದ ನಂತರ ಆನೆ ಕಾಟ ಹೆಚ್ಚಾಗಿ ಹಾಸನ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಾಣ ತೆತ್ತರು. ಆನೆ ಹಿಡಿಯುವ ಪ್ರಯತ್ನಗಳು ಮತ್ತೆ ಆರಂಭವಾದವು. ಆನೆ ಶೂಟರ್ ವೆಂಕಟೇಶ್ ಕೂಡ ದಾಳಿಗೆ ಬಲಿಯಾದರು. ಅರ್ಜುನ ಎಂಬ ಅರಣ್ಯ ಇಲಾಖೆ ಜತೆಗೆ ಮೈಸೂರು ದಸರಾದ ಹೆಮ್ಮೆಯ ಆನೆಯೂ ಕೂಡ ಕಾರ್ಯಾಚರಣೆ ವೇಳೆಗೆ ಕಾಡಾನೆ ದಾಳಿಗೆ ಸಿಲುಕಿ ಜೀವ ಬಿಟ್ಟಿತು.
ಇಷ್ಟೆಲ್ಲಾ ಆಗಿ ಜನ, ಇಲಾಖೆಯವರು, ಅಮೂಲ್ಯವಾದ ಆನೆ ಜೀವ ಕಳೆದುಕೊಂಡ ಹಿಂದೆ ಇದ್ದುದು ಅರಣ್ಯ ಇಲಾಖೆಯಲ್ಲಿನ ನಾಯಕತ್ವದ ಕೊರತೆ. ಈಗ ವಿ.ಏಡುಕೊಂಡಲು ಅವರು ರಂಗರಾವು ಅವರ ಸ್ಥಾನ ತುಂಬಿ ಆನೆ ಉಪಟಳಕ್ಕೆ ತಾತ್ಕಾಲಿಕ ಪರಿಹಾರ ಕೊಟ್ಟಿದ್ದಾರೆ. ಇದು ಇಲ್ಲಿಗೆ ಮುಗಿದಿಲ್ಲ. ಇನ್ನೂ ಹಲವು ಆನೆಗಳನ್ನು ಸೆರೆ ಹಿಡಿಯುವುದು ಬಾಕಿಯಿದೆ. ಮಹಾಲಕ್ಷ್ಮಿಯರು ಜನಿಸಿದ ಖುಷಿಯಲ್ಲಿ ಕರ್ತವ್ಯದ ಕರೆ ಮೇಲೆ ಬಂದ ಏಡುಕೊಂಡಲ ಅವರು ಮತ್ತೆ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದು ಬರುವ ಸಂತಸದಲ್ಲಿದ್ದಾರೆ. ಅವರ ಈ ಬದ್ದತೆಗೆ ಹ್ಯಾಟ್ಸ್ ಅಪ್ ಹೇಳಲೇಬೇಕು.
