ಕಾಡಿನ ಕಥೆಗಳು: ಕರ್ನಾಟಕದಲ್ಲಿ ಕಾಡು ಉಳಿಸಿದ ಕೆಎಚ್‌ಪಾಟೀಲ್ ಹೆಸರು ಅಜರಾಮರ; ಸದಾ ನೆನಪಿಸಿಕೊಳ್ಳುವ ನಮ್ಮ ಅರಣ್ಯ ಸಚಿವರಿವರು
ಕಾಡಿನ ಕಥೆಗಳು: ಕರ್ನಾಟಕ ಕಂಡ ದಿಟ್ಟ ಹಾಗೂ ಅಪರೂಪದ ರಾಜಕಾರಣಿ ಗದಗದ ಕೆಎಚ್‌ಪಾಟೀಲರು ಅರಣ್ಯ ಸಚಿವರಾಗಿ ಮೂಡಿಸಿದ ಹೆಜ್ಜೆ ಗುರುತುಗಳು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ನೆನಪುಗಳಾಗಿ ಹೊರ ಹೊಮ್ಮಿವೆ.

ಕಾಡಿನ ಕಥೆಗಳು: ಅವರು ಭಾರೀ ಧೈರ್ಯವಿದ್ದ ರಾಜಕಾರಣಿ. ಅದರಲ್ಲೂ ಸಚಿವರಾಗಿ ಕರ್ನಾಟಕದಲ್ಲಿ ಅರಣ್ಯ ಉಳಿಸುವಲ್ಲಿ ಅವರ ಪಾತ್ರ ಬಹು ದೊಡ್ಡದು. ಎಲ್ಲರ ಅಭಿಪ್ರಾಯ ಕೇಳೋರು. ಕೊನೆಗೆ ಖಚಿತ ನಿರ್ಧಾರ ತೆಗೆದುಕೊಳ್ಳೋರು. ಅವರು ಯಾರದ್ದೇ ಜತೆಗೆ ವಿಚಾರ ಭಿನ್ನಾಭಿಪ್ರಾಯ ಹೊಂದಿದ್ದರೂ ಅದು ನಾಡಿನ ಹಿತಕ್ಕೆ ಎನ್ನುವ ರೀತಿ ಇರುತ್ತಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳಾಗಿ ಅವರ ಕೆಲವೊಂದು ಕಾರ್ಯಕ್ರಮ, ಯೋಜನೆಗಳನ್ನು ನಾವು ವಿರೋಧಿಸಿದರೂ ಅದರ ಸದುದ್ದೇಶದಿಂದ ಸೂಕ್ತ ಬದಲಾವಣೆಯೊಂದಿಗೆ ಜಾರಿ ಮಾಡಬಹುದು ಎಂದು ಹೇಳುತ್ತಿದ್ದೆವು. ಅದನ್ನು ಅಷ್ಟೇ ಗೌರವಯುತವಾಗಿ ಸ್ವೀಕರಿಸುತ್ತಿದ್ದ ಅಪ್ರತಿಮ ರಾಜಕಾರಣಿ ಅವರು, ಕರ್ನಾಟಕ ಮಾತ್ರವಲ್ಲ. ಭಾರತ ಕಂಡ ಒಬ್ಬ ಅಪ್ರತಿಮ ಸಚಿವರು ಹಾಗೂ ಅರಣ್ಯ ಸಚಿವರು ಅವರು. ಅವರ ಸೇವೆಯನ್ನು ಎಂದಿಗೂ ಮರೆಯಲಾಗದು.
ಹೀಗೆ ಕರ್ನಾಟಕದ ಹಿರಿಯ ರಾಜಕಾರಣಿ, ಗದುಗಿನ ಹುಲಕೋಟಿ ಹುಲಿ ಎಂದೇ ಹೆಸರಾಗಿದ್ದ ಕೃಷ್ಣಗೌಡ ಹನುಮಂತಗೌಡ ಪಾಟೀಲ( ಕೆಎಚ್ ಪಾಟೀಲ) ಅವರ ಬಗ್ಗೆ ಹೇಳುತ್ತಿದ್ದರೆ ಕರ್ನಾಟಕದ ನಿವೃತ್ತ ಅರಣ್ಯಾಧಿಕಾರಿ ಎ.ಎನ್.ಯಲ್ಲಪ್ಪರೆಡ್ಡಿ ಅವರು ಕೂಡ ಎಪ್ಪತ್ತರ ದಶಕದ ಆ ದಿನಗಳನ್ನು ಖುಷಿಯಿಂದಲೇ ನೆನಪಿಸಿಕೊಳ್ಳುತ್ತಾರೆ. ಕರ್ನಾಟಕ ಈಗೇನು ಅರಣ್ಯ ಸಂರಕ್ಷಣೆಯಲ್ಲಿ ಭಾರತದಲ್ಲೇ ಪ್ರಮುಖ ರಾಜ್ಯವಾಗಿ ಹೊರ ಹೊಮ್ಮುವ ಹಿಂದೆ ಅರಣ್ಯ ಇಲಾಖೆ ಸಚಿವರಾಗಿ ಕೆಎಚ್‌ಪಾಟೀಲರ ಆಡಳಿತವೂ ಕಾರಣ ಎಂದು ಅಭಿಮಾನದಿಂದಲೇ ಹೇಳುತ್ತಾರೆ.
ಕೆಎಚ್‌ಪಾಟೀಲರ ಛಾತಿ
ಯಾವುದೇ ಸರ್ಕಾರದಲ್ಲೂ ಅರಣ್ಯ ಖಾತೆ ಎನ್ನುವುದು ಅಷ್ಟೊಂದು ಮಹತ್ವವೇನೂ ಅಲ್ಲ. ಅದು ಹಲವು ಕಾರಣಗಳಿಂದಲೂ ಹೌದು. ಅರಣ್ಯ ಖಾತೆ ಎನ್ನುವುದು ಆದಾಯ ತರುವುದಲ್ಲ. ಅಲ್ಲಿ ಆಡಳಿತ ನಡೆಸುವುದು ಏನಿದೆ ಎಂದು ಮೂಗು ಮುರಿಯುವ ರಾಜಕಾರಣಿಗಳೇ ಅಧಿಕ. ಕರ್ನಾಟಕದ ಬರ ಪೀಡಿತ ಹಾಗೂ ಕನಿಷ್ಠ ಅರಣ್ಯ ಇರುವ ಧಾರವಾಡ ಜಿಲ್ಲೆಯ ಗದಗ ಭಾಗದಿಂದ ಗೆದ್ದು ಬರುತ್ತಿದ್ದ ಕೆಎಚ್‌ಪಾಟೀಲರಿಗೆ ಆಗ ಸಿಎಂ ಆಗಿದ್ದ ದೇವರಾಜ ಅರಸ್ ನಿರ್ಧರಿಸುತ್ತಾರೆ.
ಕೆಎಚ್‌ಪಾಟೀಲರಂತ ದಕ್ಷರು ಈ ಖಾತೆ ನೋಡಿಕೊಳ್ಳಲಿ, ಕಾಡೇ ಇಲ್ಲದ ಊರಿನವರು ಕಾಡು ಉಳಿಸಿ ಬೆಳೆಸಲು ಪ್ರಯತ್ನಿಸಲಿ ಎನ್ನುವುದು ಅವರ ಆಶಯವೂ ಆಗಿತ್ತು. ಕೆಎಚ್‌ಪಾಟೀಲರು ಪ್ರೀತಿಯಿಂದಲೇ ಅದನ್ನು ಒಪ್ಪಿಕೊಂಡು ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಇತಿಹಾಸ ನಿರ್ಮಿಸಿದ್ದನ್ನು ಮರೆಯಲಾಗದು.
ಮರ ಕಡಿಯುವುದಕ್ಕೆ ತಡೆ
ಅರಣ್ಯ ಸಚಿವರಾಗಿ ಕೆಎಚ್‌ಪಾಟೀಲರು ಬೆಂಗಳೂರಿನ ಎಸಿ ಕೊಠಡಿಯಲ್ಲಿ ಕುಳಿತು ಆಡಳಿತ ನಡೆಸಿದವರೇ ಅಲ್ಲ. ಅರಣ್ಯಗಳಿಗೆ ನಿಯಮಿತವಾಗಿ ಭೇಟಿ ನೀಡಿ ಅಲ್ಲಿನ ಸಮಸ್ಯೆ, ಬೇಕು ಬೇಡಗಳನ್ನು ಆಲಿಸುತ್ತಿದ್ದವರು.
ಒಮ್ಮೆ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿಗೆ ಪ್ರವಾಸ ಬಂದಿದ್ದರು. ಎಚ್‌ಡಿಕೋಟೆ ಜಿಲ್ಲೆ ಅತ್ಯಧಿಕ ಅರಣ್ಯ, ಜಲಾಶಯಗಳಿಂದ ಕೂಡಿದ ಸಮೃದ್ದ ತಾಲ್ಲೂಕು. ಇಲ್ಲಿನ ಜನ ಕಟ್ಟಿಗಾಗಿ ಅರಣ್ಯದ ಮೇಲೆಯೇ ಅವಲಂಬನೆಯಾಗಿದ್ದರು. ಎತ್ತಿನ ಗಾಡಿಯಲ್ಲಿ ಕಟ್ಟಿಗೆಯನ್ನು ತರುತ್ತಿದ್ದುದು ಅವರಿಗೆ ಅಲ್ಲಲ್ಲಿ ಕಾಣಸಿಗುತ್ತಿತ್ತು. ಅಲ್ಲಿನ ಸ್ಥಿತಿಗತಿ ಮಾಹಿತಿಯನ್ನು ಅವರು ಪಡೆದುಕೊಂಡರು. ಬೆಂಗಳೂರಿಗೆ ಬಂದು ಸಭೆ ಮಾಡಿ ಮರ ಕಡಿಯುವುದನ್ನು ನಿಲ್ಲಿಸುವ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು. ಇದು ಒಂದು ಜಿಲ್ಲೆಯ ಸಮಸ್ಯೆಯಾಗಿರಲಿಲ್ಲ. ಅರಣ್ಯದ ಅವಲಂಬನೆಯಿರುವ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೀಗೆ ಕಾಡಿನ ಮೇಲೆ ಜನ ಅವಲಂಬನೆಯ ಸ್ಥಿತಿಯಿತ್ತು. ಕಾಡಿನಿಂದ ಮರವನ್ನು ಕಡಿದು ತರುವುದಕ್ಕೆ ಕೆಎಚ್‌ಪಾಟೀಲರು ಆದೇಶ ಹೊರಡಿಸಿಯೇ ಬಿಟ್ಟರು. ಇದು ಅಲ್ಲಲ್ಲಿ ವಿವಾದ ಹುಟ್ಟು ಹಾಕಿತು. ಉರುವಲು ಎಲ್ಲಿ ತರುವುದು ಎನ್ನುವುದು ಜನ ಬೇಡಿಕೆಯಾಗಿತ್ತು. ಹೀಗೆಯೇ ಮುಂದುವರೆದರೆ ಅರಣ್ಯ ಉಳಿಸುವುದು ಹೇಗೆ ಎನ್ನುವುದು ಕೆಎಚ್‌ಪಾಟೀಲರ ಪ್ರಶ್ನೆಯಾಗಿತ್ತು.
ಇದು ದೇವರಾಜ ಅರಸರ ಗಮನಕ್ಕೂ ಹೋಯಿತು. ನಮ್ಮ ಜಿಲ್ಲೆಯ ಜನ ಭಾರೀ ವಿರೋಧಿಸುತ್ತಿದ್ದಾರೆ ಪಾಟೀಲರೇ, ಇದನ್ನು ಬದಲಿಸಲು ಏನಾದರು ಮಾಡಬಹುದಾ ಎಂದು ಕೇಳುತ್ತಾರೆ ಅರಸರು. ಇದಕ್ಕೆ ಸುತಾರಾಂ ಒಪ್ಪದ ಪಾಟೀಲರು ತಮ್ಮ ನಿರ್ಧಾರ ಸರಿಯಿದೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಕೊನೆಗೆ ಕಾಂಗ್ರೆಸ್ ಶಾಸಕರ ಚಹಾ ಕೂಟದ ನೆಪದಲ್ಲಿ ನಾಡಿನ ಹಿತಾಸಕ್ತಿಯ ಇಂತಹದೊಂದು ಆದೇಶ ಜಾರಿಯಾಗುವಂತೆ ನೋಡಿಕೊಳ್ಳುತ್ತಾರೆ. ಕೊನೆಗೆ ನಿಧಾನವಾಗಿ ಈಗ ಕಾಡಿನಲ್ಲಿ ಮರ ಕಡಿಯುವುದು ನಿಂತು ಹೋಗುತ್ತದೆ. ಈಗಂತೂ ಅದು ಕಾನೂನು ಆಗಿಯೇ ಮಾರ್ಪಟ್ಟಿದೆ. ಇಂತಹ ಪ್ರಯತ್ನದ ಹಿಂದೆ ಇದ್ದುದು ಕೆಎಚ್‌ಪಾಟೀಲರ ದೂರದರ್ಶಿತ್ವ.
ಕರ್ನಾಟಕದಲ್ಲಿ ಮರದ ಕಾನೂನನ್ನು ಜಾರಿಗೊಳಿಸಿದ್ದು, ಬೆಂಗಳೂರಿನಲ್ಲಿ ಹಸಿರು ವಾತಾವರಣ ಸೃಷ್ಟಿಸುವ ಹಿಂದೆ ಇದ್ದುದೂ ಕೆಎಚ್‌ಪಾಟೀಲರ ಚಿಂತನೆಯೇ. ಒಳ್ಳೆಯದು ಆಗಬೇಕು ಎಂದರೆ ಎಂತಹ ಕಠಿಣ ನಿರ್ಧಾರಕ್ಕೂ ಅವರು ಹಿಂಜರಿಯುತ್ತಿರಲಿಲ್ಲ. ಅಷ್ಟು ಗಟ್ಟಿ ದನಿಯ ಹಾಗೂ ನಿರ್ಧಾರದ ಮತ್ತೊಬ್ಬ ಅರಣ್ಯ ಸಚಿವರನ್ನು ಕರ್ನಾಟಕದಲ್ಲಿ ನೋಡಲೇ ಇಲ್ಲ ಎಂದು ಯಲ್ಲಪ್ಪರೆಡ್ಡಿ ಅವರು ಸ್ಮರಿಸುತ್ತಾರೆ.
ಕರ್ನಾಟಕದಲ್ಲಿ ಅರಣ್ಯಸಚಿವರಾಗಿ ಹಾಗೂ ಜನಪ್ರತಿನಿಧಿಯಾಗಿ ಸಮಾಜದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಅತ್ಯುತ್ತಮ ಅರಣ್ಯ ಸಚಿವರಲ್ಲಿ ಒಬ್ಬರು ಎಂದು ಕರ್ನಾಟಕದ ಮತ್ತೊಬ್ಬ ಹಿರಿಯ ಅರಣ್ಯಾಧಿಕಾರಿ ಎ.ಸಿ.ಲಕ್ಷ್ಮಣ ಬಣ್ಣಿಸುತ್ತಾರೆ.
ಹುಲಕೋಟಿ ಹುಲಿ
ಕೆಎಚ್‌ಪಾಟೀಲರು ಜನಿಸಿ ನೂರು ವರ್ಷ. ಗದಗ ಸಮೀಪದ ಹುಲಕೋಟಿಯಲ್ಲಿ 1925ರ ಮಾರ್ಚ್ 16ರಂದು ಜನಿಸಿದ್ದ ಪಾಟೀಲರು ಗದಗ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ರಾಜ್ಯದ ಕೃಷಿ, ಅರಣ್ಯ, ಆಹಾರ, ಕಂದಾಯ, ಗ್ರಾಮೀಣಾಭಿವೃದ್ಧಿ ಖಾತೆಯ ಮಂತ್ರಿಗಳಾಗಿ, 3 ಸಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಎಚ್.ಪಾಟೀಲರು. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ರಾಜಕೀಯ ಕಾರಣದಿಂದ ಸಿಎಂ ಗಾದಿ ತಪ್ಪಿಸಿಕೊಂಡರು. 70ರ ದಶಕದಲ್ಲಿ ಕಟ್ಟಿಗೆ ಗಾಡಿಗಳು 5 ರು. ಲೈಸೆನ್ಸ್‌ನಲ್ಲಿ ನಡೆಸುತ್ತಿದ್ದ ಅರಣ್ಯ ನಾಶವನ್ನು ತಡೆಗಟ್ಟಿ ಕರ್ನಾಟಕದ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದು ಕೂಡ ಕೆ.ಎಚ್. ಪಾಟೀಲರು. ಇತರೆ ಇಲಾಖೆಗಳಲ್ಲೂ ಅವರ ಛಾಪು ಇದೆ. ಆದರೆ ಅರಣ್ಯ ಇಲಾಖೆಯಲ್ಲಿ ಅವರು ಹಾಕಿಕೊಟ್ಟ ಮಾರ್ಗಗಳು ಕರ್ನಾಟಕಕ್ಕೆ ಹಸಿರು ಮಾರ್ಗವನ್ನಂತೂ ನೀಡಿವೆ.
ಅರಣ್ಯ ಸಚಿವರು ಹಲವರು
ಅರಣ್ಯ ಎಂದು ಬಂದರೆ ಕರ್ನಾಟಕದಲ್ಲಿ ಹತ್ತಾರು ರಾಜಕೀಯ ನೇತಾರರ ಹೆಸರು ಮುನ್ನಲೆಗೆ ಬರುತ್ತವೆ. ಅರಣ್ಯ ಸಚಿವರಾಗಿ ಹಿರಿಯೂರಿನ ಕೆ.ಎಚ್.ರಂಗನಾಥ್ ಅವರದ್ದು ಪ್ರಮುಖ ಹೆಸರು. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ರಂಗನಾಥ್ ಅವರು ಕೂಡ ಸಕ್ರಿಯವಾಗಿ ಕೆಲಸ ಮಾಡಿದವರೇ. ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸುಸ್ಥಿರ ಯೋಜನೆಗಳ ಮಾರ್ಗ ತೋರಿಸಿದವರು. ಇಲಾಖೆ ಘನತೆ ಹೆಚ್ಚಿಸಿದವರು.
ಮೈಸೂರಿನವರಾದ ಅಡಗೂರು ಎಚ್.ವಿಶ್ವನಾಥ್ ಕೂಡ ಅರಸರ ಗರಡಿಯಲ್ಲಿ ಬೆಳೆದವರು. ತೊಂಬತ್ತರ ದಶಕದಲ್ಲಿ ಅರಣ್ಯ ಸಚಿವರಾಗಿ ಕಡಿಮೆ ಅವಧಿಯಲ್ಲಿಯೇ ಗಮನ ಸೆಳೆಯುವಂತೆ ಕೆಲಸ ಮಾಡಿದವರು. ರಮಾನಾಥ ರೈ ಕೂಡ ಐದು ವರ್ಷ ಕಾಲ ಅರಣ್ಯ ಸಚಿವರಾಗಿ ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಯೋಜನೆಗಳನ್ನು ರೂಪಿಸಿದರು.
ಸದ್ಯ ಮೇಘಾಲಯ ರಾಜ್ಯಪಾಲರಾಗಿರುವ ಸಿ.ಎಚ್.ವಿಜಯಶಂಕರ್ ಕೂಡ ಕಡಿಮೆ ಅವಧಿಗೆ ಅರಣ್ಯ ಸಚಿವರಾಗಿದ್ದರು. ಆದರೆ ಶಾಲೆಗೊಂದು ವನ, ದೈವೀವನ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಿದವರು. ವನ್ಯಜೀವಿ ಸಂಘರ್ಷ ತಗ್ಗಿಸಲು ಪ್ರಯತ್ನಿಸಿದರು, ವನ್ಯಜೀವಿ ದಾಳಿಗೆ ತುತ್ತಾದವರ ಕುಟುಂಬಗಳಿಗೆ ನೀಡುವ ಪರಿಹಾರ, ಬೆಳೆ ಪರಿಹಾರ ಏರಿಸಿದರು.
ಸತೀಶ್ ಜಾರಕಿಹೊಳಿ ಕೂಡ ಕಡಿಮೆ ಅವಧಿಯಲ್ಲಿಯೇ ಗಮನ ಸೆಳೆದವರು. ಈಗ ಸತತ ಎರಡು ವರ್ಷದಿ೦ದ ಅರಣ್ಯ ಸಚಿವರಾಗಿರುವ ಈಶ್ವರ ಖಂಡ್ರೆ ಕೂಡ ಅರಣ್ಯ ಭೂಮಿ ಸಂರಕ್ಷಣೆ, ಒತ್ತುವರಿ ತೆರವು, ವನ್ಯಜೀವಿ ಸಂಘರ್ಷ ತಪ್ಪಿಸಲು ತಂತ್ರಜ್ಞಾನ ಬಳಕೆ ಸಹಿತ ಹಲವು ವಿಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇನ್ನು ಹಲವರು ಅರಣ್ಯ ಸಚಿವರಾಗಿದ್ದರೆಂಬ ಹೆಸರು ಮಾತ್ರ ಫಲಕಗಳಲ್ಲಿ ಉಳಿದಿವೆ.
ಕೆಎಚ್‌ಪಾಟೀಲರಂತವರ ಹೆಸರು ಮಾತ್ರ ಜನರ ಹೃದಯದಲ್ಲಿ ಹಸಿರಾಗಿಯೇ ಉಳಿದಿದೆ. ಅವರ ಜನ್ಮಶತಮಾನೋತ್ಸವ ನೆನಪಿನಲ್ಲಿ ಅರಣ್ಯ ಇಲಾಖೆ ಒಂದಷ್ಟು ಜನಪರ ಕೆಲಸ ಮಾಡಬೇಕಾದ್ದು ಅವರಿಗೆ ನೀಡುವ ಗೌರವವೂ ಹೌದು.
