ಕಾಡಿನ ಕಥೆಗಳು: ಚಿರತೆ ಬಂತೆಂಬ ಭಯ ಬಿಡಿ, ಅರಣ್ಯ, ಪ್ರಕೃತಿ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡವಳಿಕೆ ಈ ರೀತಿ ರೂಪಿಸಿಕೊಂಡು ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಚಿರತೆ ಬಂತೆಂಬ ಭಯ ಬಿಡಿ, ಅರಣ್ಯ, ಪ್ರಕೃತಿ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡವಳಿಕೆ ಈ ರೀತಿ ರೂಪಿಸಿಕೊಂಡು ನೋಡಿ

ಕಾಡಿನ ಕಥೆಗಳು: ಚಿರತೆ ಬಂತೆಂಬ ಭಯ ಬಿಡಿ, ಅರಣ್ಯ, ಪ್ರಕೃತಿ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡವಳಿಕೆ ಈ ರೀತಿ ರೂಪಿಸಿಕೊಂಡು ನೋಡಿ

ಕಾಡಿನ ಕಥೆಗಳು: ಕರ್ನಾಟಕದಲ್ಲಿ ಅಂದಾಜು 2500 ಚಿರತೆಗಳಿರಬಹುದು. ಬೆಂಗಳೂರು, ಮೈಸೂರು, ತುಮಕೂರು ಸಹಿತ ಹಲವು ಕಡೆ ಚಿರತೆ ಭಯವಿದೆ. ಭಯ ಯಾರಿಗೆ ಚಿರತೆಗೋ, ಮನುಷ್ಯನಿಗೋ? ಅವುಗಳ ಪ್ರದೇಶದಲ್ಲೇ ಇರುವ ನಮ್ಮ ನಡವಳಿಕೆ ಹೇಗಿದ್ದರೆ ಚೆನ್ನ ಎನ್ನುವುದು ಈ ವಾರದ ಕಾಡಿನ ಕಥೆಗಳ ಕಥನ.

ನಮ್ಮ ನಡುವೆ ಇರುವ ಚಿರತೆಯೊಂದಿಗೆ ಸಹಬಾಳ್ವೆ ಹೀಗಿದ್ದರೆ ಚೆನ್ನ..
ನಮ್ಮ ನಡುವೆ ಇರುವ ಚಿರತೆಯೊಂದಿಗೆ ಸಹಬಾಳ್ವೆ ಹೀಗಿದ್ದರೆ ಚೆನ್ನ.. (Dhruv Patil)

ಘಟನೆ 1: ಮೈಸೂರಿನ ಇನ್ಫೋಸಿಸ್‌ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತು. ಅದನ್ನು ಸಿಸಿಟಿವಿಯಲ್ಲಿ ನೋಡಿದ ಭದ್ರತಾ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟರು. ಸತತ ಹತ್ತು ದಿನ ಕಾರ್ಯಾಚರಣೆ ನಡೆಯಿತು. ಚಿರತೆ ಸುಳಿಯಲಿಲ್ಲ. ಚಿರತೆ ಭಯದಿಂದ ಸುಮಾರು ನಾಲ್ಕು ಸಾವಿರ ಉದ್ಯೋಗಿಗಳು, ತರಬೇತುದಾರರಿಗೆ ರಜೆ ಘೋಷಿಸಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಯಿತು. ಈಗಲೂ ಅದೇ ಮುಂದುವರಿದಿದೆ.

ಘಟನೆ 2 : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಗ್ರಾಮದಲ್ಲಿ ಚಿರತೆಯದ್ದೇ ಭಯ. ಚಿರತೆಗಳು ಮನೆಬಾಗಿಲಿಗೆ ಬಂದು ಸಾಕುಪ್ರಾಣಿ ತಿಂದು ಹಾಕುತ್ತಿವೆ. ಬೈಕ್‌ನಲ್ಲಿ ಹೋಗುವವರಿಗೆ ದಾಳಿ ಮಾಡುತ್ತಿವೆ.

ಘಟನೆ 3: ರಾಮನಗರ ಜಿಲ್ಲೆಯ ಕನಕಪುರ ಹೊಸಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಚಿರತೆ ಕಂಡು ಸ್ಥಳೀಯರು ಭಯದಿಂದ ವಾಸ ಮಾಡ್ತಿದ್ದಾರೆ. ಕನಕಪುರ ಮುಖ್ಯ ರಸ್ತೆಯ ತುರಹಳ್ಳಿ ಫಾರೆಸ್ಟ್ ಸುತ್ತಮುತ್ತ ಚಿರತೆ ಠಿಕಾಣಿ ಹೂಡಿದೆ. ಹೀಗಾಗಿ ಹೊಸಹಳ್ಳಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಘಟನೆ 4 : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ,ಕಟ್ನವಾಡಿ.ಕೆಸ್ತೂರು ಗ್ರಾಮಗಳಲ್ಲಿ ಚಿರತೆ ಭಯದಿಂದ ಶಾಲೆಗೆ ರಜೆ ಘೋಷಿಸಲಾಗಿದೆ. ಬಾಲಕನ ಮೇಲೆ ಚಿರತೆ ದಾಳಿ ಮಾಡಿದ್ದೇ ಇದಕ್ಕೆ ಕಾರಣ

ಘಟನೆ 5 : ಬೆಂಗಳೂರು ಗ್ರಾಮಾಂಥರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಬಳಿ ಚಿರತೆಯಿಂದು ಓರ್ವ ಮಹಿಳೆಯನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ ಗೊಲ್ಲರಹಟ್ಟಿ ಗ್ರಾಮದ ಸುತ್ತಮುತ್ತಲಿನ ಜನರು ಚಿರತೆ ಭಯದಲ್ಲೇ ಓಡಾಡುತ್ತಿದ್ದಾರೆ.

ಘಟನೆ6 : ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬೇಗೂರು ಮತ್ತು ಬೈರನಹಳ್ಳಿ ಗ್ರಾಮದ ನಡುವೆ ಕಳೆದ ವಾರ ಪತ್ತೆಯಾಗಿದ್ದ ಚಿರತೆ ಇನ್ನೂ ಅದೇ ಜಾಗದಲ್ಲೇ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಜಮೀನಿಗೆ ತೆರಳುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಘಟನೆ 7 : ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ಬಳಿ ಸೋಮವಾರ ರಾತ್ರಿ ಚಿರತೆ ಹಾಗೂ ಮರಿಗಳು ಕಾಣಿಸಿಕೊಂಡಿವೆ. ತಮ್ಮ ಜಮೀನಿನ ಬಳಿ ಕಾಡು ಪ್ರಾಣಿಗಳನ್ನು ಗಮನಿಸಿದ ಸ್ಥಳೀಯ ರೈತ ಸುರೇಶ ಕುಬಕಡ್ಡಿ ಮಾಹಿತಿ ನೀಡಿದ್ದಾರೆ, ಇದರಿಂದ ಜನರಲ್ಲಿ ಆತಂಕ ಮೂಡಿಸಿದೆ.

ಮೇಲಿನ ಘಟನೆಗಳನ್ನು ಓದಿದರೆ ಎಲ್ಲಾ ಕಡೆ ಕಾಣುವುದು ಚಿರತೆ ಮತ್ತು ಭಯ. ಜನರಿಗೆ ಚಿರತೆ ಭಯ ಎಷ್ಟಿದೆಯೋ, ಅದರ ಮೂರು ಪಟ್ಟು ಭಯ ಮನುಷ್ಯರ ಬಗ್ಗೆ ಚಿರತೆಗೆ ಇದ್ದೇ ಇರುತ್ತದೆ. ಮನುಷ್ಯನಿಂದ ಗಾವುದ ದೂರ ಇರಲು ಚಿರತೆಗಳು ಬಯಸುತ್ತವೆ.

ದಕ್ಷಿಣ ಕರ್ನಾಟಕದಲ್ಲೇ ಅತ್ಯಧಿಕ

ಕರ್ನಾಟಕದಲ್ಲಿ ಸುಮಾರು 25 ಜಿಲ್ಲೆಗಳಲ್ಲಿಯಾದರೂ ಚಿರತೆಗಳ ಇರುವಿಕೆ ಇದೆ. ಅಂದಾಜು 2500 ಚಿರತೆ ಕರುನಾಡಲ್ಲಿ ಇರುವುದನ್ನು ಗಣತಿಯೇ ಖಚಿತಪಡಿಸಿದೆ. ಉತ್ತರ ಕರ್ನಾಟಕದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರಿನಂತಹ ಕೆಲವು ಜಿಲ್ಲೆಗಳಲ್ಲಿ ಚಿರತೆಗಳು ಕಡಿಮೆ ಇವೆ.

ಆದರೆ ಹೆಚ್ಚು ಅರಣ್ಯದೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು, ತುಮಕೂರು, ಕೊಡಗು, ಚಾಮರಾಜನಗರ, ರಾಮನಗರ, ಶಿವಮೊಗ್ಗ ಸಹಿತ ಹಲವು ಭಾಗಗಳಲ್ಲಿ ಚಿರತೆಗಳ ಪ್ರಮಾಣ ಅಧಿಕ. ಕೆಲವು ಭಾಗಗಳಲ್ಲಿ ಆಗಾಗ ದರ್ಶನ ನೀಡುವ ಚಿರತೆಗಳು ಭಯ ಹುಟ್ಟಿಸಿ ಮಾಯವಾಗಿ ಬಿಡುತ್ತವೆ. ಚಿರತೆಗಳ ಸಂಚಾರ ಮನುಷ್ಯನಿಗೆ ಗೊತ್ತಾಗದೇ ಇರುವ ಪ್ರಮಾಣವೇ ಅಧಿಕ. ಏಕೆಂದರೆ ಅವು ನಿಶಾಚರಿಗಳಾಗಿರುವುದರಿಂದ ರಾತ್ರಿಯಲ್ಲೇ ಹೆಚ್ಚು ಸಂಚರಿಸುತ್ತವೆ. ಹಗಲಲ್ಲಿ ಸಂಚಾರ ಕಡಿಮೆಯೇ.

ಆಹಾರ ಅರಸಿ ಬರುವ ಚಿರತೆಗಳ ಮೊದಲ ದಾಳಿಯೇ ಬೀದಿನಾಯಿಗಳು. ಸುಲಭವಾಗಿ ಸಿಗುವ ನಾಯಿಗಳನ್ನು ಎಳೆದುಕೊಂಡು ಹೋಗುತ್ತವೆ. ಕೆಲವೊಮ್ಮೆ ಮೇಕೆ, ಕರುಗಳ ಮೇಲೆ ದಾಳಿ ಮಾಡುತ್ತವೆ. ಹಸುಗಳ ಮೇಲೆಯೂ ಆಗಾಗ ದಾಳಿ ಮಾಡುವುದುಂಟು. ತಮ್ಮ ಪ್ರಾಣಿ ಹೋದಾಗ, ಇಲ್ಲವೇ ಪ್ರೀತಿ ಪಾತ್ರ ನಾಯಿ ಕಾಣಿಸಿದೇ ಹೋದಾಗ ಮೊದಲು ನಮ್ಮ ಅನುಮಾನ ಹೋಗುವುದು ಚಿರತೆಗಳ ಮೇಲೆ. ಚಿರತೆ ಹೊತ್ತುಕೊಂಡು ಹೋಗಿರಬೇಕು ಎಂದುಬಿಡುತ್ತೇವೆ. ಈ ವೇಳೆ ಕೆಲ ದಿನಗಳ ಹಿಂದೆ ಇಲ್ಲೇ ಚಿರತೆ ದಾಟಿದ್ದನ್ನು ನಾನು ಕಂಡಿದ್ದೆ ಎಂದು ಯಾರಾದರೂ ಹೇಳಿಬಿಟ್ಟರೆ ಮುಗಿಯಿತು. ಅಲ್ಲಿ ಚಿರತೆ ಭಯ ಖಚಿತವಾದಂತೆಯೇ.

ಭಯ ನಿಧಾನವಾಗಿ ಒಬ್ಬರಿಗೆ ಮಾತ್ರವಲ್ಲ, ಇಡೀ ಊರಿಗೆ ಹಬ್ಬಿ ಬಿಡುತ್ತದೆ. ಅದೂ ಕೆಲವೊಮ್ಮೆ ಮಕ್ಕಳ ಮೇಲೆ ದಾಳಿ ಮಾಡಿದ ಉದಾಹರಣೆಗಳೂ ಇವೆ. ಆಗ ಶಾಲೆಗೆ ರಜೆ ಘೋಷಿಸಿ ಬಿಡಲಾಗುತ್ತದೆ.

ಭಯಕ್ಕೆ ಕಾರಣ ಹಲವು

ಚಿರತೆ ಭಯಕ್ಕೆ ಕಾರಣ ಹಲವು. ಅದು ದಾಳಿ ಮಾಡಬಹುದು ಎನ್ನುವ ಭಯವಾದರೆ, ನಮ್ಮ ಜಾನುವಾರು ತಿಂದು ಹಾಕಿದರೆ ಹೇಗೆ ಚಿಂತೆಯೂ ಉಂಟು. ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಬಹುದು ಎಂಬ ಭಯವೂ ಇದೆ.

ಮೂರು ವರ್ಷದ ಹಿಂದೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಏಳೆಂಟು ಗ್ರಾಮದಲ್ಲಿ ಚಿರತೆ ಉಪಟಳಕ್ಕೆ ನಾಲ್ವರು ಬಲಿಯಾದರು. ಅದರಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳೇ. ಇದರಿಂದ ಎರಡು ತಿಂಗಳ ಕಾಲ ಅಲ್ಲಿ ಕಾರ್ಯಾಚರಣೆ ನಡೆಯಿತು. ಒಂದು ಚಿರತೆ ಹುಡುಕಲು ಹೋಗಿ ಆರೇಳು ಚಿರತೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದು ನಡೆದಿತ್ತು.

ಎರಡು ವಾರದ ಹಿಂದೆ ಮೈಸೂರಿನಲ್ಲೂ ಹೀಗೆಯೇ ಆಯಿತು. ಅದು ಚಿರತೆ ಕಂಡಿದ್ದು ಸಾಮಾನ್ಯ ಸ್ಥಳದಲ್ಲೇ ಅಲ್ಲ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಇನ್ಫೋಸಿಸ್‌ನಲ್ಲಿ. ಯಾವುದೇ ನಗರ ಪ್ರದೇಶಕ್ಕೆ ಕಡಿಮೆ ಇಲ್ಲದ ಹಾಗೆ ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಇದೆ. ಅಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಬಹುತೇಕರು ವೃತ್ತಿಯ ಬುನಾದಿ ಹಂತದ ತರಬೇತಿಗೆ ದೇಶದ ನಾನಾ ಭಾಗಗಳಿಂದ ಬಂದವರು. ಇಲ್ಲಿ ತರಬೇತಿ ಮುಗಿಸಿದವರಿಗೆ ಬೇರೆ ಕಡೆಗೆ ವರ್ಗಾಯಿಸುತ್ತದೆ ಇನ್ಫೊಸಿಸ್‌, ಎರಡು ದಶಕದ ಹಿಂದೆಯೇ ಬರೋಬ್ಬರಿ 350 ಎಕರೆ ವಿಶಾಲ ಪ್ರದೇಶದಲ್ಲಿ ಕ್ಯಾಂಪಸ್‌ ನಿರ್ಮಾಣಗೊಂಡಿದೆ. ಅಲ್ಲಿ ಎಲ್ಲವೂ ಇದೆ. ಪಕ್ಕದಲ್ಲಿಯೇ ಹಸಿರು ಪ್ರದೇಶ, ಪೊದೆಗಳು, ಕೆರೆಗಳು ಇವೆ. ಇವೆಲ್ಲಾ ಇವೆ ಎಂದರೆ ಅದು ಚಿರತೆಯ ಆವಾಸ ಸ್ಥಾನ ಎಂದು ಸುಲಭವಾಗಿ ಹೇಳಿ ಬಿಡಬಹುದು. ಎರಡು ದಶಕದಿಂದಲೂ ಅಲ್ಲಿ ಚಿರತೆ ಇದ್ದರೂ ಯಾರಿಗೂ ಕಾಣಿಸಿರಲಿಲ್ಲ. ಇನ್ಫೋಸಿಸ್‌ ಭದ್ರತೆಗೆಂದೇ ಇರುವ ನೂರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಕ್ಯಾಂಪಸ್‌ ಸುತ್ತ ಇರುವ ಸಿಸಿಟಿವಿ ಕ್ಯಾಮರಾವನ್ನು ಗಮನಿಸುವುದರಿಂದ ಅದರಲ್ಲಿ ಸೆರೆ ಬಿದ್ದಿತ್ತು. ಈ ವೇಳೆ ಅವರಿಗೆ ಅದು ಕಾಣಿಸಿಕೊಂಡಿದ್ದರಲೋ ಏನೋ ಅರಣ್ಯ ಇಲಾಖೆ ಇನ್ಫೋಸಿಸ್‌ ಎನ್ನುವ ಕಾರಣಕ್ಕೂ ಭಾರೀ ಎಚ್ಚರಿಕೆ ವಹಿಸಿತು. ಹತ್ತು ದಿನವಾದರೂ ಚಿರತೆ ಕಾಣಲಿಲ್ಲ.ಮೊದಲೇ ಐಟಿ ದೈತ್ಯ ಕಂಪೆನಿ. ಅಲ್ಲಿ ಅರಣ್ಯ ಇಲಾಖೆ ತನ್ನೆಲ್ಲಾ ತಂತ್ರಜ್ಞಾನ ಆಧರಿತ ಕಾರ್ಯಾಚರಣೆ ಕೈಗೊಂಡರು ಚಿರತೆ ಕಾಣಲಿಲ್ಲ. ಕಾರ್ಯಾಚರಣೆ ನಿಂತಿತು. ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವುದು ಮುಂದುವರಿದಿದೆ.

ಸಂಸ್ಥೆಗಳಲ್ಲಿ ಬೇಕು ತರಬೇತಿ

ಚಿರತೆ ಭಯದಿಂದ ಇನ್ಫೋಸಿಸ್‌ ಸಿಬ್ಬಂದಿ ಕೆಲಸದ ಮೇಲೆ ಪರಿಣಾಮ ಬೀರದಿರಲಿ ಎಂದು ಅಲ್ಲಿನ ಮಾನವ ಸಂಪನ್ಮೂಲ ಸಿಬ್ಬಂದಿ ಚಿರತೆ ತಜ್ಞ ಡಾ.ಸಂಜಯ್‌ ಗುಬ್ಬಿ ಅವರಿಗೆ ಕರೆ ಮಾಡಿದರು. ನಮ್ಮಲ್ಲಿ ಚಿರತೆ ಬಂದಿದೆ.ಸಿಬ್ಬಂಧಿಗೆ ಭಯ ಹೋಗಲಾಡಿಸಲು ಏನು ಮಾಡಬೇಕು ಎಂದು ಕೇಳಿದರು.

ಚಿರತೆ ತನ್ನದೇ ಪ್ರದೇಶದಲ್ಲಿ ಸಂಚರಿಸುತ್ತಿದೆ. ಅದಕ್ಕೆ ನಮಗಿಂತಲೂ ಹೆಚ್ಚು ಭಯವಿದೆ. ಬಂದು ಹೋಗುತ್ತದೆ. ಹಿಂದೆಯೂ ಬಂದಿರಬಹುದು. ಈಗ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರಬಹುದು. ಸುಮ್ಮನೇ ಇದ್ದರೆ ಅದರ ಪಾಡಿಗೆ ಅದು ಹೋಗುತ್ತದೆ. ಆದರೆ ನಿಮ್ಮ ಸಿಬ್ಬಂದಿಗೆ ನೀವು ಚಿರತೆ ನಿರ್ವಹಣೆ ಕುರಿತು ಒಂದು ತರಬೇತಿ ಕೊಡಿಸಿ. ಜಾಗೃತಿಯೊಂದೇ ಇದಕ್ಕೆ ಪರಿಹಾರ. ಚಿರತೆಯೂ ಶತಮಾನಗಳಿಂದ ನಮ್ಮೊಂದಿಗೆ ಬದುಕುತ್ತಿದೆ. ಅದರೊಂದಿಗೆ ಬದುಕುವುದನ್ನು ನಮ್ಮ ಗ್ರಾಮೀಣ ಪ್ರದೇಶದ ಜನ, ಅರಣ್ಯಂಚಿನ ಹಳ್ಳಿಯವರು ಕಲಿತುಕೊಂಡಿದ್ದಾರೆ. ಇಂತಹ ಸಂಸ್ಥೆಗಳಿಗೂ ವನ್ಯಜೀವಿಗಳ ನಡವಳಿಕೆ ಕುರಿತು ತಿಳಿಸಿಕೊಡುವುದು ಮುಖ್ಯ. ನೀವು ಕರೆದು ಬಂದ ದಿನ ಜಾಗೃತಿ ಮೂಡಿಸುತ್ತೇನೆ ಎಂದು ಗುಬ್ಬಿ ಹೇಳಿದರು.

ಇದಾದ ನಂತರ ಅವರಿಂದ ಉತ್ತರ ಬರಲಿಲ್ಲ. ಚಿರತೆ ಭಯವನ್ನು ಹೋಗಲಾಡಿಸುವ ಕೆಲಸ ಈವರೆಗೂ ಮೈಸೂರು ಇನ್ಫೋಸಿಸ್‌ನಲ್ಲಿ ಆಗಿಲ್ಲ. ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಬಳಿಯೂ ಹೀಗೆ ಚಿರತೆ ಕಾಣಿಸಿಕೊಂಡಾಗ ಇದೇ ರೀತಿ ಆಗಿತ್ತು.

ಗುಬ್ಬಿ ಅವರ ಸಹಬಾಳ್ವೆ ಪಾಠ

ಚಿರತೆಗೆ ನಮಗಿಂತಲೂ ಹೆಚ್ಚಿನ ಭಯ. ನಾಚಿಕೆ ಸ್ವಭಾವದ ಪ್ರಾಣಿಗಳಾದ ಚಿರತೆಗಳು ಮನುಷ್ಯನ ಕಣ್ಣಿಗೆ ಬೀಳದಂತೆ ಸಂಚರಿಸುತ್ತಲೇ ಇರುತ್ತವೆ. ಹಿಂದೆ ಸಿಸಿಟಿವಿ. ಮೊಬೈಲ್‌ ಕಣ್ಗಾವಲು ಇರಲಿಲ್ಲ. ಈಗ ಇವೆಲ್ಲಾ ಬಂದ ಮೇಲೆ ಚಿರತೆಗೂ ತಾಪತ್ರಯವಾಗಿದೆ. ಇದು ಸಮಸ್ಯೆ ಮಾತ್ರವಲ್ಲ. ಭಯದ ಮೂಲವೂ ಹೌದು ಎಂದರು ಡಾ.ಸಂಜಯ್ ಗುಬ್ಬಿ. ಚಿರತೆಯೊಂದಿಗೇ ನಮ್ಮ ಪರಿಸರ/ ಬದುಕು ಹೇಗಿರಬೇಕು ಎನ್ನುವ ಕುರಿತು ಗುಬ್ಬಿ ಅವರು ಪಟ್ಟಿಯನ್ನೂ ಮಾಡಿದರು.

• ಯಾವುದೇ ಕಾರಣಕ್ಕೂ ಭಯಪಡಬೇಡಿ ಅಥವಾ ಆತಂಕಗೊಳ್ಳಬೇಡಿ. ಚಿರತೆಗಳು ನಾಚಿಕೆ ಸ್ವಭಾವದ ಪ್ರಾಣಿಗಳು, ನಮಗೆ ಅವುಗಳ ಬಗ್ಗೆ ಇರುವಷ್ಟೇ ಭಯ ಅವುಗಳಿಗೆ ನಮ್ಮ ಬಗ್ಗೆ ಇರುತ್ತದೆ.

• ಚಿರತೆಗಳ ನಡವಳಿಕೆಗಳ ಬಗ್ಗೆ ನುರಿತರಿಂದ ಮಾಹಿತಿ ಪಡೆದುಕೊಳ್ಳಿ

• ಮನೆ, ಹಾಸ್ಟೆಲ್ ಇನ್ನಿತರ ಪ್ರದೇಶಗಳ ಹೊರವಲಯಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ

• ಇನ್ಫೋಸಿಸ್ ನಂತಹ ಆವರಣಗಳಲ್ಲಿ ರಾತ್ರಿಯ ವೇಳೆ ಓಡಾಡಬೇಕಾದರೆ ಗುಂಪಿನಲ್ಲಿ ಮಾತನಾಡುತ್ತ ಓಡಾಡಿ. ಇದರಿಂದ ಚಿರತೆಗಳಿಗೆ ನೀವು ಬರುವ ಸುಳಿವಾಗಿ ನಿಮ್ಮಿಂದ ದೂರ ಹೋಗಿಬಿಡುತ್ತವೆ.

• ರಾತ್ರಿಯ ವೇಳೆ ಒಬ್ಬರೇ ಓಡಾಡ ಬೇಕಾದ ಅನಿವಾರ್ಯತೆಯಿದ್ದರೆ ಮೊಬೈಲಿನಲ್ಲಿ ಹಾಡು ಹಾಕಿಕೊಂಡು ಹೋದರೆ ಚಿರತೆಗಳು ನಿಮ್ಮಿಂದ ದೂರ ಸರಿಯುತ್ತವೆ.

• ಕತ್ತಲಾದ ಮೇಲೆ ಪುಟ್ಟ ಮಕ್ಕಳ್ಳನ್ನು ಆಚೆ ಆಡಲು ಬಿಡಬೇಡಿ

ಚಿರತೆಗಳು ಕಂಡುಬಂದರೆ ಅದರ ವಿಡಿಯೋ ಅಥವಾ ಫೋಟೋ ತೆಗೆದು ಅಥವಾ ಸಿಸಿಟಿವಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಬೇಡ. ಇದರಿಂದ ಜನ ಅನಾವಶ್ಯಕವಾಗಿ ಆತಂಕ್ಕಕ್ಕೆ ಒಳಗಾಗುತ್ತಾರೆ.

ಅಷ್ಟೇ. ಚಿರತೆ ಇದ್ದರೆ ನಾವು. ಮನುಷ್ಯರೊಂದಿಗೆ ಚಿರತೆ. ಸಹಬಾಳ್ವೆ ನಮ್ಮ ಮುಂದೆ ಇರುವ ಅತ್ಯುತ್ತಮ ಮಾದರಿ.

-ಕುಂದೂರು ಉಮೇಶಭಟ್ಟ,ಮೈಸೂರು

Whats_app_banner