ಕನ್ನಡ ಸುದ್ದಿ  /  Karnataka  /  Forest Tales World Forest Day2024 Karnataka 7th Place In Among Top 10 For Conservation Of Forest Kub

ವಿಶ್ವ ಅರಣ್ಯ ದಿನ 2024: ಕಾಡು ಸಂರಕ್ಷಣೆಯಲ್ಲಿ ಭಾರತದಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಇಂದು ವಿಶ್ವ ಅರಣ್ಯ ದಿನ. ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಅರಣ್ಯ ಮತ್ತು ನಾವೀನ್ಯತೆ: ಉತ್ತಮ ವಿಶ್ವಕ್ಕಾಗಿ ಹೊಸ ಪರಿಹಾರಗಳು ಎನ್ನುವ ಧೇಯವಾಕ್ಯದೊಂದಿಗೆ ಅರಣ್ಯ ದಿನ ಆಚರಣೆಯಾಗುತ್ತಿದೆ.

ಕಾಡಿದ್ದರೆ ನಾಡು, ಕಾಡಿದ್ದರೆ ನೀರು..
ಕಾಡಿದ್ದರೆ ನಾಡು, ಕಾಡಿದ್ದರೆ ನೀರು..

ಕಾಡಿಲಿಲ್ಲದಿದ್ದರೆ ನಾಡಿಲ್ಲ. ಮರವಿದ್ದರೆ ಬರವಿಲ್ಲ ಎನ್ನುವ ಘೋಷವಾಕ್ಯ ಹೊಸದೇನೂ ಅಲ್ಲ. ಈ ಘೋಷಣೆಗಳು ಯಾವ ಕಾಲಕ್ಕೂ ಇರುವಂತವು. ಅಂದರೆ ಕಾಡು ಇಲ್ಲದೇ ಇದ್ದರೆ ನಾಡು ಹೇಗೆ ಇರಲು ಸಾಧ್ಯ, ಮರಗಳನ್ನೆಲ್ಲ ಕಡಿದು ಹಾಕಿದರೆ ಬರ ಬಾರದೇ ಇರದೇ ಎಂದು ನಾವು ನಮ್ಮನ್ನೇ ಕೇಳಿಕೊಳ್ಳುವಂತಹ ಅನಿವಾರ್ಯ ಸನ್ನಿವೇಶ. ಏಕೆಂದರೆ ಕಾಡಿನದ್ದರೆ ನಾಡು ಎನ್ನುವುದು ಅನಾದಿ ಕಾಲದಿಂದಲೂ ನಾವು ಅನುಸರಿಸಿಕೊಂಡು ಬಂದಿರುವ ಪ್ರಕೃತಿ ನಿಯಮವೂ ಹೌದು.

ಕಾಡು ನಾಶವಾದರೆ, ಮರಗಳನ್ನು ಕಡಿದು ಹಾಕಿದರೆ ಪರಿಸ್ಥಿತಿ ಏನಾಗಲಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇರುವ ಅನಾಹುತಗಳೇ ಹೇಳುತ್ತವೆ. ವನ್ಯಜೀವಿಗಳು ನಾಡಿಗೆ ಬರುವುದು, ಮನುಷ್ಯರ ಮೇಲೆ ದಾಳಿ, ಜೀವ ಹಾನಿ, ಬೆಳೆಹಾನಿಯಂತಹ ಪ್ರಕರಣಗಳು, ನೀರಿನ ಕೊರತೆಯಿಂದ ಜನ ಎದುರಿಸುತ್ತಿರುವ ಹಾಹಾಕಾರ, ಬರದ ಸನ್ನಿವೇಶದ ಹಿಂದೆ ಅರಣ್ಯ ನಾಶದ ನಂಟು ಇದ್ದೇ ಇದೆ.

ಈ ಬಾರಿ ಭೀಕರ ಬರದ ವಾತಾವರಣ, ಮಹಾನಗರ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ನೀರಿಗಾಗಿ ಹೋರಾಡುವ ಸನ್ನಿವೇಶ ನಿರ್ಮಾಣವಾದ ಸಂದರ್ಭದಲ್ಲಿ ಈ ಬಾರಿಯ ವಿಶ್ವ ಅರಣ್ಯ ದಿನಾಚರಣೆ ಬಂದಿದೆ. ಪ್ರತಿ ವರ್ಷ ವಿಶ್ವ ಅರಣ್ಯ ದಿನವನ್ನು ಮಾರ್ಚ್‌ 21 ರಂದು ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತದ ಅರಣ್ಯ ಪ್ರಮಾಣ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಹೊರತಂದಿರುವ ಇತ್ತೀಚಿನ ಜಾಗತಿಕ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ (ಎಫ್‌ಆರ್‌ಎ) ಪ್ರಕಾರ ಕಳೆದ ದಶಕದಲ್ಲಿ ಅರಣ್ಯ ಪ್ರದೇಶದಲ್ಲಿ ಗಳಿಸಿದ ಟಾಪ್ 10 ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯು 80.9 ದಶಲಕ್ಷ ಹೆಕ್ಟೇರ್ ನಷ್ಟಿದೆ., ಇದು ದೇಶದ ಭೌಗೋಳಿಕ ಪ್ರದೇಶದ ಶೇ. 24.62ರಷ್ಟು ಎನ್ನುತ್ತವೆ ಅಂಕಿ ಅಂಶಗಳು. 2019ರಲ್ಲಿ ನಡೆಸಿದ ಸಮೀಕ್ಷೆಯಂತೆ ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ. ಈ ಪೈಕಿ 1,540 ಚ.ಕಿ.ಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೆ, ವೃಕ್ಷಗಳ ವ್ಯಾಪ್ತಿಯು 721 ಚ.ಕಿ.ಮೀ. ಹೆಚ್ಚಾಗಿದೆ.

ದಟ್ಟವಾದ ಅರಣ್ಯದ ನಂತರ ಮುಕ್ತ ಅರಣ್ಯದಲ್ಲಿ ಕಾಡಿನ ವ್ಯಾಪ್ತಿಯ ಹೆಚ್ಚಳವನ್ನು ಗಮನಿಸಬಹುದು. ಅರಣ್ಯ ಪ್ರದೇಶದಲ್ಲಿ ಹೆಚ್ಚಳವನ್ನು ಕಂಡಿರುವ ಮೊದಲ ಮೂರು ರಾಜ್ಯಗಳು ಆಂಧ್ರ ಪ್ರದೇಶ (647 ಚದರ ಕಿಮೀ) ನಂತರ ತೆಲಂಗಾಣ (632 ಚದರ ಕಿಮೀ) ಮತ್ತು ಒಡಿಶಾ (537 ಚದರ ಕಿಮೀ) ಆಗಿವೆ. ಕರ್ನಾಟಕ ಏಳನೇ ಸ್ಥಾನದಲ್ಲಿದೆ.

ಪ್ರದೇಶವಾರು ರೀತ್ಯ ಮಧ್ಯಪ್ರದೇಶವು ಅತಿ ಹೆಚ್ಚು ಅರಣ್ಯವನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ, ಛತ್ತೀಸಗಢ, ಒಡಿಶಾ ಮತ್ತು ಮಹಾರಾಷ್ಟ್ರ ಇವೆ.

ಕರುನಾಡ ಕಾಡು

ಇಡೀ ಭಾರತದಲ್ಲಿಯೇ ಕರ್ನಾಟಕದ ಕಾಡಿಗೆ ತನ್ನದೇ ಮಹತ್ವವಿದೆ. ಕರುನಾಡನ್ನು ಶ್ರೀಗಂಧದ ಬೀಡು ಎಂದು ಕರೆಯುವುದುಂಟು. ಏಕೆಂದರೆ ಪಶ್ಚಿಮ ಘಟ್ಟಗಳ ಪ್ರಮುಖ ಸರಣಿಯನ್ನೇ ಬೆನ್ನಿಗೆ ಇಟ್ಟುಕೊಂಡಿರುವ ಕರ್ನಾಟಕದ ಅರಣ್ಯ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಬ್ಬಿದೆ. ವನ್ಯಜೀವಿಗಳು, ಪ್ರಮುಖ ಮರಗಳ ನೆಲೆಯೂ ಕರ್ನಾಟಕವೇ. ಒಂದು ಕಾಲಕ್ಕೆ ಕರ್ನಾಟಕದ ಅರಣ್ಯದ ಪ್ರಮಾಣ ಶೇ. 40 ರಷ್ಟಿತ್ತು. ಈಗ ಆ ಪ್ರಮಾಣ ಅರ್ಧದಷ್ಟು ಕುಸಿದು ಹೋಗಿದೆ. ಅಂದರೆ ಶೇ. 25 ರ ಆಸುಪಾಸಿನಲ್ಲಿ ಕರ್ನಾಟಕದ ಅರಣ್ಯವಿದೆ.

ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕದ ಸುಮಾರು ಶೇ 60 ರಷ್ಟು ಅರಣ್ಯವಿದೆ.

ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ. ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ನಮ್ಮ ಜೀವನಾಡಿಯಾಗಿರುವ ಕಾವೇರಿ, ಕಪಿಲಾ, ತುಂಗಾ, ಭದ್ರಾ, ನೇತ್ರಾವತಿ ಸಹಿತ ಹಲವು ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯ ವನ್ಯಜೀವಿ ಸಂರಕ್ಷಣೆಯಲ್ಲು ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿ ತನ್ನ ಒಡಲಲ್ಲಿ ಇಟ್ಟುಕೊಂಡಿದೆ.

ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ ಎನ್ನುವುದು ಅರಣ್ಯ ಇಲಾಖೆ ನೀಡುವ ಮಾಹಿತಿ.

ವಿಶ್ವ ಅರಣ್ಯ ದಿನ ಏಕೆ

1971ರ ನವೆಂಬರ್‌ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಗಿತ್ತು, ಇದರೊಟ್ಟಿಗೆ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲೂ ವಿಸ್ತೃತ ಚರ್ಚೆ ನಡೆದು ಸದ್ಯದ ಜತೆಗೆ ಮುಂದಿನ ಪೀಳಿಗೆಗೂ ಅರಣ್ಯ ಉಳಿಯಬೇಕು ಎನ್ನುವ ಆಶಯದೊಂದಿಗೆ ಅಂತರಾಷ್ಟೀಯ ಅರಣ್ಯ ದಿನ ಆಚರಣೆ ನಿರ್ಧಾರಕ್ಕೆ ಬರಲಾಯತು. ಅರಣ್ಯ ಮತ್ತು ಮರ ಒಳಗೊಂಡ ಚಟುವಟಿಕೆಗಳನ್ನು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ರೂಪಿಸಲು ವಿವಿಧ ದೇಶಗಳು ಸಮ್ಮತಿ ಸೂಚಿಸಿದವು. ಅದರಂಎ ಹನ್ನೆರಡು ವರ್ಷದಿಂದ ಕಾರ್ಯನಿರತವೂ ಆಗಿದೆ. ಇದರ ಭಾಗವಾಗಿಯೇ ಮಾರ್ಚ್ 21ರಂದು ವಿಶ್ವ ಅರಣ್ಯ ದಿನ ಆಚರಿಸುವ ನಿರ್ಧಾರವನ್ನು ಕೈಗೊಂಡು 2012ರಿಂದಲೇ ಆರಂಭಿಸಲಾಗಿದೆ.

2012ರಲ್ಲಿ ಅಂತರಾಷ್ಟ್ರೀಯ ಅರಣ್ಯ ಸಂಶೋಧನಾ ಕೇಂದ್ರ ಆರು ದಿನಗಳ ಅರಣ್ಯ ದಿನ ಕಾರ್ಯಕ್ರಮ ರೂಪಿಸಿ ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಮಾರ್ಚ್‌ 21 ರಂದು ವಿಶ್ವ ಅರಣ್ಯದಿನ ಆಚರಿಸುವಂತೆ ಮಾಡಿತು. ವಿಶ್ವ ಸಂಸ್ಥೆಯೂ ಇದಕ್ಕೆ ಮುದ್ರೆಯನ್ನು ಒತ್ತಿತ್ತು.

ಈ ಅವಧಿಯಲ್ಲಿ ಜಗತ್ತಿನ ನಾನಾ ದೇಶಗಳಲ್ಲಿ ಅರಣ್ಯದ ಮಹತ್ವ, ಹವಾಮಾನ ವೈಪರಿತ್ಯ, ಅದರಿಂದ ಆಗುತ್ತಿರುವ ಜಾಗತಿಕ ತಾಪಮಾನದ ಏರಳಿತಗಳ ಪರಿಣಾಮದ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಮಾರ್ಗೋಪಾಯಗಳನ್ನು ಸೂಚಿಸುತ್ತಾ ಬಂದಿದೆ.

ಈ ಬಾರಿ ಧೇಯ ವಾಕ್ಯ ಏನಿದೆ

ಈ ಬಾರಿಯ ಅರಣ್ಯ ದಿನದ ಧ್ಯೇಯವಾಕ್ಯ, ಅರಣ್ಯ ಮತ್ತು ನಾವೀನ್ಯತೆ: ಉತ್ತಮ ವಿಶ್ವಕ್ಕಾಗಿ ಹೊಸ ಪರಿಹಾರಗಳು (Forests and innovation: New Solutions for a better world). ಪರಿಸರ, ಅರಣ್ಯ ಪ್ರದೇಶ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಸಮರ್ಥವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯಪೂರ್ಣ ವಿಧಾನಗಳ ಅಳವಡಿಕೆ ಅತ್ಯಗತ್ಯ ಮತ್ತು ಅನಿವಾರ್ಯವೂ ಹೌದು. ತಂತ್ರಜ್ಞಾನವನ್ನು ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಬಳಸಿಕೊಳ್ಳುವ, ಮನುಷ್ಯನ ಪ್ರಗತಿ ಪ್ರಕೃತಿಯ ಮಿಳಿತದೊಂದಿಗೆ ಮಾತ್ರ ಎನ್ನುವ ಸಂದೇಶದೊಂದಿಗೆ ಎನ್ನುವ ಅರಿವು ನಮ್ಮಲ್ಲಿ ಬಂದರೆ ವಿಶ್ವ ಅರಣ್ಯ ದಿನ ಆಚರಣೆಗೂ ಅರ್ಥ ಬರಲಿದೆ.

-ಕುಂದೂರು ಉಮೇಶಭಟ್ಟ, ಮೈಸೂರು

IPL_Entry_Point