Gujarat Assembly Elections 2022 Results: ಗುಜರಾತ್‌ ಬಿಜೆಪಿ ಐತಿಹಾಸಿಕ ಗೆಲುವು: ಬಿಎಸ್‌ವೈ ಪ್ರತಿಕ್ರಿಯೆ ಏನು?
ಕನ್ನಡ ಸುದ್ದಿ  /  ಕರ್ನಾಟಕ  /  Gujarat Assembly Elections 2022 Results: ಗುಜರಾತ್‌ ಬಿಜೆಪಿ ಐತಿಹಾಸಿಕ ಗೆಲುವು: ಬಿಎಸ್‌ವೈ ಪ್ರತಿಕ್ರಿಯೆ ಏನು?

Gujarat Assembly Elections 2022 Results: ಗುಜರಾತ್‌ ಬಿಜೆಪಿ ಐತಿಹಾಸಿಕ ಗೆಲುವು: ಬಿಎಸ್‌ವೈ ಪ್ರತಿಕ್ರಿಯೆ ಏನು?

ಈ ಮಧ್ಯೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಗುಜರಾತ್‌ನಲ್ಲಿ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ದೇಶದ ಜನತೆಯ ಮನ್ನಣೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಎಸ್‌ವೈ ಹೇಳಿದ್ದಾರೆ.

ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ಗುಜರಾತ್‌ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿರುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ.

ಈ ಮಧ್ಯೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಗುಜರಾತ್‌ನಲ್ಲಿ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ.

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹೊರಬರುತ್ತಿರುವ ಚುನಾವಣಾ ಫಲಿತಾಂಶಗಳು, ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣವನ್ನು ತಿರಸ್ಕರಿಸುವುದಕ್ಕೆ ಸಾಕ್ಷಿ ಎಂದು ಬಿಎಸ್‌ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಈ ಎರಡೂ ರಾಜ್ಯಗಳ ಮತದಾರರು ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ, ರಾಜ್ಯದ ಹಾಗೂ ದೇಶದ ಅಭಿವೃದ್ಧಿ ಮುಖ್ಯ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಹಿಮಾಚಲ ಪ್ರದೇಶದಲ್ಲೂ ಪಕ್ಷ ಉತ್ತಮ ಪ್ರದರ್ಶನ ತೋರುವ ಭರವಸೆ ಇದೆ ಎಂದು ಬಿಎಸ್‌ವೈ ಹೇಳಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟ ರಾಜ್ಯದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಜ್ಯದ ಜನ ಭರವಸೆ ಇಟ್ಟಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಮಾಜಿ ಸಿಎಂ ಬಿಸ್‌ವೈ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರದಿಂದ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ ಎಂಬುದು, ಗುಜರಾತ್‌ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ. ಗುಜರಾತ್‌ ಚುನಾವಣೆಯ ಫಲಿತಾಂಶವು ಒಂದು ಐತಿಹಾಸಿಕ ಅಭೂತಪೂರ್ವ ದಾಖಲೆಯನ್ನು ಸೃಷ್ಟಿಸಿದ್ದು, ಆ ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿದ ಖ್ಯಾತಿಗೆ ಬಿಜೆಪಿ ಪಾತ್ರವಾಗಿದೆ ಎಂದು ಬಿಎಸ್‌ವೈ ಸಂತಸ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕರು ಪ್ರಧಾನಿ ಮೋದಿ ಅವರನ್ನು ರಾವಣ, ಭಸ್ಮಾಸುರ ಎಂದೆಲ್ಲಾ ಕರೆದು ಹೀಯಾಳಿಸಿದರು. ಆದರೆ ಪ್ರಧಾನಿ ಮೋದಿ ಅವರ ವ್ಯಕ್ತಿತ್ವ ಹಾಳು ಮಾಡುವ ವಿಪಕ್ಷಗಳ ಹುನ್ನಾರವನ್ನು ಗುಜರಾತ್‌ ಜನತೆ ಸೋಲಿಸಿದ್ದಾರೆ ಎಂದು ಯಡಿಯೂರಪ್ಪ ಇದೇ ವೇಳೆ ಪರೋಕ್ಷವಾಗಿ ಮಲ್ಲಿಖಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶವು ಸುಭದ್ರವಾಗಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿದೆ. ಭಾರತ ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿದೆ ಎಂದು ಇದೇ ವೇಳೆ ಬಿಎಸ್‌ವೈ ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಲ್ಲಿಯೂ ಸಹ ಬಿಜೆಪಿ ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ. ವಿರೋಧ ಪಕ್ಷಗಳು ಇನ್ನಾದರೂ ಅಧಿಕಾರದ ಹಗಲು ಕನಸು ಕಾಣುವುದನ್ನು ಬಿಟ್ಟು ಹಾಗೂ ಪ್ರಧಾನಿಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ, ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಇದೇ ವೇಳೆ ಬಿಎಸ್‌ ಯಡಿಯೂರಪ್ಪ ಸಲಹೆ ನೀಡಿದರು.

ಇಂದಿನ ಪ್ರಮುಖ ಸುದ್ದಿ

Gujarat Assembly Elections 2022 Results: ಬಿಜೆಪಿ ಪಾಳೆಯದಲ್ಲಿ ಸಂಭ್ರಮ: ಐತಿಹಾಸಿಕ ಗೆಲುವಿನ ಸ್ವಾಗತಕ್ಕೆ ಕ್ಷಣಗಣನೆ

ಗುಜರಾತ್‌ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿರುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ. ಈ ಹಿನ್ನೆಲೆಯಲ್ಲಿ ಗುಜರಾತ್‌ ಬಿಜೆಪಿ ಘಟಕದಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದು, ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜಗಳೊಂದಿಗೆ ರಸ್ತೆಗಿಳಿದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner