ಕನ್ನಡ ಸುದ್ದಿ  /  Karnataka  /  Former Cm Basavaraja Bommai Advice On The Cauvery Water Issue Puts Us In A Quandary Says Dk Shivakumar Kaveri Row Mgb

ಕಾವೇರಿ ವಿಚಾರದಲ್ಲಿ ಬೊಮ್ಮಾಯಿ ಅವರದ್ದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆ: ಡಿಕೆಶಿ

Cauvery water issue: ನೀರಾವರಿ ಸಚಿವರಾಗಿದ್ದ ಬೊಮ್ಮಾಯಿ ಅವರು ಉಪಯುಕ್ತ ಸಲಹೆ ನೀಡಲಿ. ಅವರೇ ನೇಮಕ ಮಾಡಿದ ಕಾನೂನು ತಜ್ಞರೇ ಈಗಲೂ ಇದ್ದಾರೆ. ಅವರ ಮಾತನ್ನು ಕೇಳಬೇಕೊ ಅಥವಾ ಇವರ ಮಾತನ್ನು ಕೇಳಬೇಕೊ? ಒಳ್ಳೆ ಸಲಹೆ ನೀಡಿದರೆ ಮಾತ್ರ ಅವರ ಮಾತನ್ನು ಕೇಳುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ - ಡಿ.ಕೆ. ಶಿವಕುಮಾರ್
ಬಸವರಾಜ ಬೊಮ್ಮಾಯಿ - ಡಿ.ಕೆ. ಶಿವಕುಮಾರ್

ಬೆಂಗಳೂರು:"ಕಾವೇರಿ ನೀರು ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುತ್ತಿದ್ದಾರೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸದಾಶಿವನಗರದ ನಿವಾಸದ ಬಳಿ "ನೀರು ಬಿಡುಗಡೆ ಮಾಡದೆ ಕಾನೂನು ಹೋರಾಟ ನಡೆಸಬೇಕು" ಎಂಬ ಬೊಮ್ಮಾಯಿ ಅವರ ಸಲಹೆ ಬಗ್ಗೆ ಕೇಳಿದಾಗ ಉತ್ತರಿಸಿದ ಡಿಕೆಶಿ, ನೀರಾವರಿ ಸಚಿವರಾಗಿದ್ದ ಬೊಮ್ಮಾಯಿ ಅವರು ಉಪಯುಕ್ತ ಸಲಹೆ ನೀಡಲಿ. ಅವರೇ ನೇಮಕ ಮಾಡಿದ ಕಾನೂನು ತಜ್ಞರೇ ಈಗಲೂ ಇದ್ದಾರೆ. ಅವರ ಮಾತನ್ನು ಕೇಳಬೇಕೊ ಅಥವಾ ಇವರ ಮಾತನ್ನು ಕೇಳಬೇಕೊ? ಒಳ್ಳೆ ಸಲಹೆ ನೀಡಿದರೆ ಮಾತ್ರ ಅವರ ಮಾತನ್ನು ಕೇಳುತ್ತೇವೆ ಎಂದರು.

ಬೊಮ್ಮಾಯಿ ಅವರ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದರು ಎನ್ನುವ ದಾಖಲೆಗಳು ನಮ್ಮ ಬಳಿ ಇವೆ. ಆದರೆ ಸುಪ್ರೀಂ ಕೋರ್ಟ್ ಅನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ನೀರು ಬಿಡಬೇಡಿ ಎಂದು ಬೊಮ್ಮಾಯಿ ಹೇಳುತ್ತಾರೆ. ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದರೆ, ಬೊಮ್ಮಾಯಿ ಹಾಗೂ ನನ್ನ ಬಳಿ ಯಾವ ಆಯ್ಕೆ ಇದೆ? ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಅವರು ರಾಜಕಾರಣ ಬದಿಗಿಡಲಿ. ಕೂಡಲೇ ಪ್ರಧಾನಿಗಳಿಗೆ ಮಧ್ಯಸ್ತಿಕೆ ವಹಿಸುವಂತೆ ಒತ್ತಡ ತರಲಿ. ನೀರು ನಿರ್ವಹಣಾ ಸಮಿತಿಗೂ ಮನವಿ ಸಲ್ಲಿಸಲಿ. ರಾಜ್ಯದ ಹಿತವನ್ನು ಅವರು ಮೊದಲು ಕಾಪಾಡಲಿ, ರಾಜಕಾರಣ ಬದಿಗಿಡಲಿ. ನಾನು ಶೀಘ್ರದಲ್ಲೇ ದೆಹಲಿಗೆ ಹೋಗಲಿದ್ದು, ಸಂಸದರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇನೆ.‌ ಮಧ್ಯಸ್ತಿಕೆ ವಹಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದರು.

ದೇವೇಗೌಡರು ಸರಿಯಾಗಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಸೋಮವಾರ ಮಾತನಾಡಿದ ಎಚ್.ಡಿ.ದೇವೇಗೌಡರು "ನ್ಯಾಯಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳಿ" ಎಂದು ಸಲಹೆ ನೀಡಿರುವುದು ಸರಿಯಾಗಿದೆ. ಹಿರಿತನದ ಅನುಭವದ ಮೇಲೆ ಅವರು ಮಾತನಾಡಿದ್ದಾರೆ. ಅವರ ಸಲಹೆ ಸ್ವೀಕಾರ್ಹವಾಗಿದೆ ಎಂದು ಹೇಳಿದರು. ಹಿರಿಯ ವಕೀಲರಾದ ನಾರಿಮನ್ ಅವರ ಸಲಹೆ ಕೇಳಿದ್ದೀರಾ ಎನ್ನುವ ಪ್ರಶ್ನೆಗೆ "ಈಗ ಇರುವ ತಂಡದಲ್ಲಿ ಅವರ ಶಿಷ್ಯರೇ ಇದ್ದಾರೆ, ಸಲಹೆ ಕೇಳಿದ್ದೇವೆ. ಇದರ ಬಗ್ಗೆ ಆನಂತರ ಮಾತನಾಡುವೆ" ಎಂದರು.

ತಮಿಳುನಾಡಿಗೆ 5000 ಕ್ಯುಸೆಕ್‌ ಬಿಡುಗಡೆಗೆ ಆದೇಶ

ಬರಪರಿಸ್ಥಿತಿಯ ಕಾರಣ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಂತಹ ಸಂದರ್ಭದಲ್ಲೇ, ಪ್ರತಿ ನಿತ್ಯ 5000 ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೋಮವಾರ (ಸೆ.18) ಮತ್ತೊಮ್ಮೆ ಆದೇಶ ನೀಡಿದೆ.

ಆಗಸ್ಟ್ 28ರಂದು ನಡೆದ ಸಭೆಯಲ್ಲಿ ಮುಂದಿನ 15 ದಿನಗಳ ವರೆಗೆ ಪ್ರತಿದಿನ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿತ್ತು. ಇದೀಗ ಮತ್ತೊಮ್ಮೆ ಪ್ರಾಧಿಕಾರ ಸೂಚಿಸಿದೆ.

ಸೆಪ್ಟೆಂಬರ್ 12ರ ನಂತರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ, ಸುಪ್ರೀಂಕೋರ್ಟ್​ಗೆ ಅಫಿಡೆವಿಟ್ ಸಲ್ಲಿಸಿತ್ತು. ಇದರ ವಿಚಾರಣೆ ಸೆಪ್ಟೆಂಬರ್ 21ರಂದು ನಡೆಯಲಿದೆ.