BS Yediyurappa: ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್; ಮುಂದಿನ ಆದೇಶದವರೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ
BS Yediyurappa: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ಖುದ್ದು ಹಾಜರಾತಿ ವಿಚಾರಣೆಯಿಂದ ವಿನಾಯಿತಿ ನೀಡಿ ಹೈಕೋರ್ಟ್ ಆದೇಶಿಸಿದೆ.ವರದಿ: ಎಚ್. ಮಾರುತಿ, ಬೆಂಗಳೂರು

BS Yediyurappa: ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಈ ಪ್ರಕರಣದಲ್ಲಿ ಮಾರ್ಚ್ 15 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಯಡಿಯೂಪ್ಪ ಅವರಿಗೆ ಜಾರಿ ಮಾಡಿದ್ದ ಸಮನ್ಸ್ಗೆ ಹೈಕೋರ್ಟ್ ತಡೆ ನೀಡಿದೆ. ಹಾಗೆಯೇ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ. ಮುಂದಿನ ಆದೇಶದವರೆಗೂ ಅವರು ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಯಡಿಯೂರಪ್ಪ ಪುತ್ರಿ ವೈ.ಎಂ. ಅರುಣಾ ಮತ್ತು ಅವರ ಆಪ್ತ ಎಂ. ರುದ್ರೇಶ್ ಅವರಿಗೂ ಅಂದೇ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಅವರಿಗೂ ವಿನಾಯಿತಿ ಸಿಕ್ಕಿದೆ.
ಈ ಹಿಂದೆ 1ನೇ ತ್ವರಿತಗತಿ ನ್ಯಾಯಾಲಯ ಮಾರ್ಚ್ 15ರಂದು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿತ್ತು. ಇದರ ವಿರುದ್ದ ಎರಡು ದಿನಗಳ ಹಿಂದೆ ಈ ಸಮನ್ಸ್ ಅನ್ನು ಯಡಿಯೂರಪ್ಪ ಅವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಯಡಿಯೂರಪ್ಪ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ವಾದಿಸಿದರೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಮಧ್ಯಂತರ ತಡೆಯಾಜ್ಞೆಯನ್ನು ವಿರೋಧಿಸಿದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯ್ಕ್ ಹಾಜರಾಗಿದ್ದರು.
ಕೋರ್ಟ್ ಸೂಚನೆ ಏನು
ಸಿ.ವಿ.ನಾಗೇಶ್ ವಾದಿಸಿ ವಿಚಾರಣೆ ವೇಳೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿತ್ತು. ಖುದ್ದು ಹಾಜರಾತಿಯಿಂದಲೂ ಹೈಕೋರ್ಟ್ ವಿನಾಯಿತಿ ನೀಡಿತ್ತು. 2024ರ ಫೆಬ್ರವರಿ 2ರಂದು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಒಂದು ತಿಂಗಳ ನಂತರ ಬಾಲಕಿಯ ತಾಯಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸ್ಥಳದಲ್ಲಿದ್ದ ಸಾಕ್ಷಿಗಳು ಆ ರೀತಿಯ ಘಟನೆ ನಡೆದಿಲ್ಲ ಎಂದು ಸಾಕ್ಷ್ಯ ಹೇಳಿದ್ದಾರೆ. ಬಾಲಕಿ, ಬಾಲಕಿಯ ತಾಯಿಯ ಹೇಳಿಕೆ ಆಧಾರದಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ. ತಾಯಿಯ ಮೊಬೈಲ್ ನಲ್ಲಿದ್ದ ಸಂಭಾಷಣೆಯನ್ನು ಯಡಿಯೂರಪ್ಪ ಅವರು ಅಳಿಸಿಲ್ಲ ಎಂದು ವಾದಿಸಿದರು.
42 ದಿನ ತಡವಾಗಿ ಪೊಕ್ಸೋ ಪ್ರಕರಣ ದಾಖಲಿಸಲಾಗಿದೆ. ಇಂತಹ ಘಟನೆ ನಿಜವಾಗಿಯೂ ನಡೆದಿದ್ದರೆ ಯಾರೂ ಇಷ್ಟು ತಡವಾಗಿ ದೂರು ದಾಖಲಿಸುತ್ತಿರಲಿಲ್ಲ ಎಂದರು. ಸಮನ್ಸ್ ರದ್ದುಪಡಿಸಿ ಹೊಸದಾಗಿ ಪರಿಶೀಲನೆಗೆ ಹಿಂದೆ ಆದೇಶಿಸಲಾಗಿತ್ತು. ಈಗ ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ಸಮನ್ಸ್ ಜಾರಿಗೊಳಿಸಿದೆ ಎಂದು ನಾಗೇಶ್ ವಾದಿಸಿದರು. ಅಡ್ವೊಕೇಟ್ ಜನರಲ್ ಅವರು ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಸೂಚನೆಯಂತೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಹೀಗಾಗಿ ಸಮನ್ಸ್ಗೆ ತಡೆ ನೀಡದಂತೆ ಮನವಿ ಮಾಡಿಕೊಂಡರು.
ಪ್ರಕರಣದ ಹಿನ್ನೆಲೆ
ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ನ್ಯಾಯಕ್ಕಾಗಿ ಸಹಾಯ ಮಾಡುವಂತೆ ಕೋರಿ ಯಡಿಯೂರಪ್ಪ ಅವರ ಬಳಿ ಹೋಗಿದ್ದಾಗಿ ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಮನೆಗೆ ತೆರಳಿ ಸಹಾಯ ಕೇಳಿದಾಗ ಅವರು ನನ್ನ ಪುತ್ರಿಯನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ನನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಒಂದಿಷ್ಟು
ಹಣ ನೀಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು. ನಂತರ ಸದಾಶಿವ ನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ವರದಿ: ಎಚ್. ಮಾರುತಿ, ಬೆಂಗಳೂರು
