ಪೋಕ್ಸೋ ಪ್ರಕರಣ ರದ್ದು ಕೋರಿ ಬಿಎಸ್‌ ಯಡಿಯೂರಪ್ಪ ಅರ್ಜಿಗೆ ಪ್ರಾಸಿಕ್ಯೂಷನ್‌ ವಿರೋಧ, ವಿಚಾರಣೆ ಜನವರಿ 17ಕ್ಕೆ ಮುಂದೂಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಪೋಕ್ಸೋ ಪ್ರಕರಣ ರದ್ದು ಕೋರಿ ಬಿಎಸ್‌ ಯಡಿಯೂರಪ್ಪ ಅರ್ಜಿಗೆ ಪ್ರಾಸಿಕ್ಯೂಷನ್‌ ವಿರೋಧ, ವಿಚಾರಣೆ ಜನವರಿ 17ಕ್ಕೆ ಮುಂದೂಡಿಕೆ

ಪೋಕ್ಸೋ ಪ್ರಕರಣ ರದ್ದು ಕೋರಿ ಬಿಎಸ್‌ ಯಡಿಯೂರಪ್ಪ ಅರ್ಜಿಗೆ ಪ್ರಾಸಿಕ್ಯೂಷನ್‌ ವಿರೋಧ, ವಿಚಾರಣೆ ಜನವರಿ 17ಕ್ಕೆ ಮುಂದೂಡಿಕೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದು ಶುಕ್ರವಾರಕ್ಕೆ ಮುಂದೂಡಿಕೆಯಾಯಿತು.ವರದಿ: ಎಚ್‌.ಮಾರುತಿ. ಬೆಂಗಳೂರು

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಪೋಕ್ಸೋ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಪೋಕ್ಸೋ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ರದ್ದು ಮಾಡುವಂತೆ ಹಿರಿಯ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತು. ಪ್ರಾಸಿಕ್ಯೂಷನ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬಾರದು ಎಂದು ಪೋಕ್ಸೊ‌ ಕಾಯ್ದೆಯ ಸೆಕ್ಷನ್ ಗಳ ವಿವರಣೆ ನೀಡಿ ಕೆಲವು ಪ್ರಾಥಮಿಕ ಆಕ್ಷೇಪಗಳೀವೆ ಎಂದರು. ಯಡಿಯೂರಪ್ಪ ಅವರ ನಿವಾಸದಿಂದ ಹೊರಬಂದ ನಂತರ ಸಂತ್ರಸ್ತೆಯು ಘಟನೆಯನ್ನು ತನ್ನ ತಾಯಿಗೆ ತಿಳಿಸುತ್ತಾಳೆ. ಏನು ನಡೆಯಿತು ಎಂದು ತಿಳಿದುಕೊಂಡ ನಂತರ ಸಂತ್ರಸ್ತೆಯ ತಾಯಿ ಮರಳಿ ಯಡಿಯೂರಪ್ಪ ಅವರ ಬಳಿ ಆಗಮಿಸುತ್ತಾರೆ ಎಂದು ಸಂತ್ರಸ್ತೆಯ ಹೇಳಿಕೆಯನ್ನು ಓದಲು ಆರಂಭಿಸಿದರು. ಈ ವೇಳೆ ನಿರ್ದಿಷ್ಟ ಅಂಶಗಳನ್ನು ಓದುವುದು ಬೇಡ. ಅದು ಓದುವರೀತಿಯಲ್ಲಿಲ್ಲ ಎಂದು ನ್ಯಾಯಾಧೀಶರು ಸೂಚನೆ ನೀಡಿದರು.

ನಂತರ ಸಂತ್ರಸ್ತೆಯ ತಾಯಿಯು ಇಡೀ ಘಟನೆಯನ್ನು ಹಿರೇಮಠ ಎಂಬ ವಕೀಲರಿಗೆ ತಿಳಿಸಿದ್ದಾರೆ. ಯಡಿಯೂರಪ್ಪ ಅವರು ಪ್ರತ್ಯೇಕ ಕೊಠಡಿಯಲ್ಲಿ ಸಂತ್ರಸ್ತೆ ಬಾಲಕಿಯ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಬಾಲಕಿಗೆ ಒಂದಿಷ್ಟು ಹಣ ನೀಡಿ ಹಣದ ಜೊತೆ ಸೆಲ್ಫಿ ತೆಗೆದುಕೊಳ್ಳಲಾಗಿದೆ ಎಂದು ರವಿವರ್ಮ ಕುಮಾರ್ ನ್ಯಾಯಾಲಯದ ಗಮನಕ್ಕೆ ತಂದರು. ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಂತ್ರಸ್ತೆಯ ತಾಯಿ ಮೊಬೈಲ್‌ ಫೋನ್‌ ರೆಕಾರ್ಡಿಂಗ್‌ ಆನ್‌ ಮಾಡಿ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದಾರೆ. ವಿಡಿಯೊ ರೆಕಾರ್ಡಿಂಗ್‌ ಕೂಡಾ ಮಾಡಿಕೊಂಡಿದ್ದಾರೆ. ಬಾಲಕಿಯು ನನ್ನ ಮೊಮ್ಮಗಳಿದ್ದ ಹಾಗೆ, ಪರೀಕ್ಷೆ ನಡೆಸಿದೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇದು ಘಟನೆಯನ್ನು ಒಪ್ಪಿಕೊಂಡ ಹಾಗೆ ಎಂದು ರವಿವರ್ಮ ಕುಮಾರ್ ವಾದ ಮಂಡಿಸಿದರು.

ನಂತರ ಯಡಿಯೂರಪ್ಪ ಅವರು ಸಂತ್ರಸ್ತೆ ತಾಯಿಯ ಮೊಬೈಲ್‌ ನಂಬರ್‌ ಸಂಗ್ರಹಿಸುತ್ತಾರೆ. ಗನ್ ಮ್ಯಾನ್‌ ಆರಾಧ್ಯ ಅವರು ಫೋನ್‌ ನಂಬರ್‌ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಅವರ ವಿಡಿಯೋ ಮತ್ತು ಅವರ ಧ್ವನಿ ಮಾದರಿ ಮತ್ತು ವಿಡಿಯೋ ಆಡಿಯೋ ಧ್ವನಿಗೆ ಹೊಂದಾಣಿಕೆಯಾಗಿದೆ ಎಂದರು. ಎಫ್‌ ಎಸ್‌ ಎಲ್‌ ಪ್ರಯೋಗಾಲಯದ ವರದಿ ಪಡೆದ ನ್ಯಾಯಾಲಯ ಯಡಿಯೂರಪ್ಪ ಮತ್ತು ದೂರುದಾರೆಯ ಧ್ವನಿ ಮಾದರಿ ಹೊಂದಾಣಿಕೆಯಾಗಿದೆ ಎಂದು ಪ್ರಯೋಗಾಲಯದ ವರದಿ ಹೇಳಿದೆ ಎಂದರು.

ಯಡಿಯೂರಪ್ಪ ಅವರ ಅರ್ಜಿಯು ಏಕೆ ಊರ್ಜಿತವಾಗುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿರುವ ತೀರ್ಪುಗಳನ್ನು ರವಿವರ್ಮ ಕುಮಾರ್‌ ಅವರು ನ್ಯಾಯಾಲಯದ ಗಮನಕ್ಕೆ ತಂದು ಕೆಲವು ತೀರ್ಪುಗಳನ್ನು ಓದಿದರು. ಯಡಿಯೂರಪ್ಪ ಅವರು ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನವನ್ನು ಮಾಡಿದ್ದಾರೆ. ದೂರುದಾರೆ ಸಾವನ್ನಪ್ಪಿದ ಮೇಲೆ ನ್ಯಾಯಾಲಯದ ಮುಂದೆ ಬಂದಿದ್ದಾರೆ ಎಂದು ಪ್ರೊ. ರವಿವರ್ಮಕುಮಾರ್ ಹೇಳಿದರು. ಇವರ ವಾದವನ್ನು ಆಲಿಸಿದ ಹೈಕೋರ್ಟ್ ಜನವರಿ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಏನಿದು ಪ್ರಕರಣ ?

ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ನ್ಯಾಯಕ್ಕಾಗಿ ಸಹಾಯ ಮಾಡುವಂತೆ ಕೋರಿ ಯಡಿಯೂರಪ್ಪ ಅವರ ಬಳಿ ಹೋಗಿದ್ದಾಗಿ ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಮನೆಗೆ ತೆರಳಿ ಸಹಾಯ ಕೇಳಿದಾಗ ಅವರು ನನ್ನ ಪುತ್ರಿಯನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ನನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಒಂದಿಷ್ಟು ಹಣ ನೀಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು.

ನಂತರ ಸದಾಶಿವ ನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು ಯಡಿಯೂರಪ್ಪ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಅವರು ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

 

Whats_app_banner