ಕನ್ನಡ ಸುದ್ದಿ  /  Karnataka  /  Former Cm Bs Yediyurappa Takes A Dig At Opposition Leaders In Mandya Rally

BS Yediyurappa: ಸಿಎಂ ಕುರ್ಚಿಯ ಕನಸು ಕಾಣುವುದನ್ನು ನಿಲ್ಲಿಸಿ: ಡಿಕೆಶಿ, ಎಚ್‌ಡಿಕೆಗೆ ಚಾಟಿ ಬೀಸಿದ ಬಿಎಸ್‌ವೈ!

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಂದ ತಲಾ ಒಬ್ಬರು ನಾಯಕರು ಮುಂದಿನ ಮುಖ್ಯಮಂತ್ರಿ ನಾವೇ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆ ಇಬ್ಬರು ನಾಯಕರ ಹೆಸರನ್ನು ನಾನು ಹೇಳುವುದಿಲ್ಲ. ಆದರೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಯುತ್ತಿರುವ ಅವರ ಪರಿ ನೋಡಿದರೆ ನಗು ಬರುತ್ತಿದೆ ಎಂದು ಮಾಜಿ ಸಿಎಂ ಬಿಎಸ್‌ವೈ ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ

ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಬಿಎಸ್‌ ಯಡಿಯೂರಪ್ಪ ಚುನಾವಣಾ ಅಖಾಡಕ್ಕಿಳಿದರೆ ಎದುರಾಳಿಗಳ ಎದೆಯಲಿ ನಡುಕ ಹುಟ್ಟದೇ ಇರದು. ತೂಕದ ಮಾತು, ಎದುರಾಳಿಗಳನ್ನು ತಮ್ಮ ಮಾತಿನ ಶೈಲಿಯಲ್ಲೇ ಕಟ್ಟಿಹಾಕುವ ಅವರ ಪರಿಯನ್ನು ವಿರೋಧಿಗಳೂ ಮೆಚ್ಚುತ್ತಾರೆ.

ಅದರಂತೆ ಬಹಳ ದಿನಗಳಿಂದ ಮೌನ ಧರಿಸಿದವರಂತೆ ಕಾಣುತ್ತಿದ್ದ ಬಿಎಸ್‌ವೈ, ಇದೀಗ ಮತ್ತೆ ಚುರುಕಾಗಿದ್ದಾರೆ. ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರನ್ನು ತಮ್ಮದೇ ಶೈಲಿಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ವೇದಿಕೆ ಕಲ್ಪಿಸಿದ್ದು ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆಯಲ್ಲಿ ನಡೆದ ಬಿಜೆಪಿಯ ಸಾರ್ವಜನಿಕ ಸಮಾರಂಭ.

ಹೌದು, ಕೆಆರ್‌ ಪೇಟೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಸಾರ್ವಜನಿಕ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಭರ್ಜರಿ ಭಾಷಣ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಪರ ಭರ್ಜರಿ ಬ್ಯಾಟ್‌ ಬೀಸಿದ ಬಿಎಸ್‌ವೈ, ಪ್ರತಿಪಕ್ಷ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಂದ ತಲಾ ಒಬ್ಬರು ನಾಯಕರು ಮುಂದಿನ ಮುಖ್ಯಮಂತ್ರಿ ನಾವೇ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆ ಇಬ್ಬರು ನಾಯಕರ ಹೆಸರನ್ನು ನಾನು ಹೇಳುವುದಿಲ್ಲ. ಆದರೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಯುತ್ತಿರುವ ಅವರ ಪರಿ ನೋಡಿದರೆ ನಗು ಬರುತ್ತಿದೆ ಎಂದು ಮಾಜಿ ಸಿಎಂ ಬಿಎಸ್‌ವೈ ವ್ಯಂಗ್ಯವಾಡಿದರು.

ಯಾರೂ ಏನೇ ಹೇಳಿದರೂ, ಅಧಿಕಾರ ಹಿಡಿಯಲು ಏನೇ ಅಡ್ಡದಾರಿಗಳನ್ನು ಹಿಡಿದರೂ ಅಷ್ಟೇ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಭಾರೀ ಬಹುಮತದಿಂದ ಮತ್ತೆ ಅಧಿಕಾರದ ಗದ್ದುಗೆಗೆ ಏರಲಿದೆ. ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಬೆಂಬಲಿಸಿ, ರಾಜ್ಯದ ಜನ ಬಿಜೆಪಿಗೆ ಮತ್ತೆ ಆಶೀರ್ವಾದ ಮಾಡಲಿದ್ದಾರೆ ಎಂದು ಬಿಎಸ್‌ವೈ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯದ ಜನ ಮನ್ನಣೆ ನೀಡಲಿದ್ದಾರೆ ಎಂದು ಬಿಎಸ್‌ವೈ ಭವಿಷ್ಯ ನುಡಿದರು. ಇದೇ ವೇಳೆ ತಮ್ಮ ತವರಿನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಸೇರಿರುವುದಕ್ಕೆ ಬಿಎಸ್‌ವೈ ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಬಸವರಜ ಬೊಮ್ಮಾಯಿ, ಮಾಜಿ ಸಿಎಂ ತವರು ಜಿಲ್ಲೆಯಾಗಿರುವ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಎಂದರೆ ಅದು ಇಂಡಿಯಾದ ಅಭಿವೃದ್ಧಿ ಎಂದು ಹೇಳಿದರು. ಸಿಎಂ ಪಟ್ಟಕ್ಕಾಗಿ ಪ್ರತಿಪಕ್ಷ ನಾಯಕರಲ್ಲಿ ಈಗಾಗಲೇ ಪೈಪೋಟಿ ಶುರುವಾಗಿದೆ. ಆದರೆ ನನಾವು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ ಎಂದು ಸಿಎಂ ಬೊಮ್ಮಾಯಿ ನುಡಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಧಿಕಾರಕ್ಕಾಗಿ ರಾಜಕಾರಣ ಮಾಡಿದರೆ, ಬಿಜೆಪಿ ಜನರಿಗಾಗಿ ರಾಜಕಾರಣ ಮಾಡುತ್ತದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಈಗಾಲೇ ಸಿಎಂ ಕುರ್ಚಿಯ ಕನಸು ಕಾಣುತ್ತಿದ್ದು, ಮುಂದಿನ ಸಿಎಂ ನಾವೇ ಎಂದು ಅಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದ ಜನತೆ ಇದೆಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಅವರಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಬೊಮ್ಮಾಯಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೂಂಕರಿಸಿರುವುದು ರಾಜ್ಯದ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆ ಅಖಾಡ ಮತ್ತಷ್ಟು ರಂಗೇರಲಿದೆ ಎಂಬ ಸಂದೇಶ ರವಾನಿಸಿದೆ.

IPL_Entry_Point