ಮನಮೋಹನ್‌ ಸಿಂಗ್‌ ನಿಧನ; ಕರ್ನಾಟಕದಲ್ಲಿ ಇಂದು ಶಾಲಾ, ಕಾಲೇಜುಗಳಿಗೂ ರಜೆ; ವರ್ಷಾಂತ್ಯ ರಜೆ ವಿಸ್ತರಣೆಯಿಂದ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ರಶ್
ಕನ್ನಡ ಸುದ್ದಿ  /  ಕರ್ನಾಟಕ  /  ಮನಮೋಹನ್‌ ಸಿಂಗ್‌ ನಿಧನ; ಕರ್ನಾಟಕದಲ್ಲಿ ಇಂದು ಶಾಲಾ, ಕಾಲೇಜುಗಳಿಗೂ ರಜೆ; ವರ್ಷಾಂತ್ಯ ರಜೆ ವಿಸ್ತರಣೆಯಿಂದ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ರಶ್

ಮನಮೋಹನ್‌ ಸಿಂಗ್‌ ನಿಧನ; ಕರ್ನಾಟಕದಲ್ಲಿ ಇಂದು ಶಾಲಾ, ಕಾಲೇಜುಗಳಿಗೂ ರಜೆ; ವರ್ಷಾಂತ್ಯ ರಜೆ ವಿಸ್ತರಣೆಯಿಂದ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ರಶ್

ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರವೂ ಸರ್ಕಾರಿ ರಜೆ ಘೋಷಣೆಯಾಗಿದೆ. ಈಗಾಗಲೇ ವರ್ಷಾಂತ್ಯ, ವಾರಾಂತ್ಯದ ರಜೆ ಮೂಡ್‌ನಲ್ಲಿದ್ದವರಿಗೆ ಹೆಚ್ಚುವರಿ ರಜೆ ಸಿಗಲಿದೆ. ಇದರಿಂದ ಪ್ರವಾಸಿ ತಾಣಗಳು ಮತ್ತಷ್ಟು ಪ್ರವಾಸಿಗರಿಂದ ಭರ್ತಿಯಾಗಬಹುದು.

ಮನಮೋಹನ ಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ.
ಮನಮೋಹನ ಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ.

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಮನಮೋಹನಸಿಂಗ್‌ ಗುರುವಾರ ರಾತ್ರಿ ನಿಧನರಾದ ಹಿನ್ನೆಲೆಯಲ್ಲಿ 2024ರ ಡಿಸೆಂಬರ್‌ 27ರ ಶುಕ್ರವಾರದಂದು ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಶಾಲಾ, ಕಾಲೇಜುಗಳಿಗೂ ಕೂಡ ರಜೆ ಅನ್ವಯಿಸಲಿದೆ. ಬ್ಯಾಂಕ್‌ಗಳ ಸಹಿತ ಎಲ್ಲಾ ಸರ್ಕಾರಿ ಕಚೇರಿಗಳು ಮೂರು ದಿನ ಮುಚ್ಚಿರಲಿವೆ. ನಾಲ್ಕನೇ ಶನಿವಾರದ ರಜೆ ಹಾಗೂ ಭಾನುವಾರದ ರಜೆ ಸೇರಿ ಸತತ ಮೂರು ರಜೆಗಳು ಸಿಕ್ಕಂತಾಗಲಿವೆ. ಈಗಾಗಲೇ ವರ್ಷಾಂತ್ಯದ ಪ್ರವಾಸಕ್ಕೆ ಹಲವರು ರಜೆ ಹಾಕಿ ತೆರಳಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದವರ ಜತೆಗೆ ಪ್ರವಾಸವನ್ನು ಶುರು ಮಾಡಿದ್ದು. ಶುಕ್ರವಾರವೂ ರಜೆ ಸಿಕ್ಕಿರುವುದರಿಂದ ಇನ್ನಷ್ಟು ಮಂದಿ ಪ್ರವಾಸಕ್ಕೆ ಬೇಗನೇ ಹೊರಡುವ ಸಾಧ್ಯತೆಗಳು ಅಧಿಕ.

ರಜೆ ಆದೇಶ ಜಾರಿ

ಮನಮೋಹನಸಿಂಗ್‌ ನಿಧನದ ಮಾಹಿತಿ ಸಿಗುತ್ತಿದ್ದಂತೆ ಕರ್ನಾಟಕದಲ್ಲಿ ರಜೆ ಘೋಷಣೆ ಮಾಡಿ ಏಳು ದಿನಗಳ ಮೌನಾಚರಣೆಗೆ ಆದೇಶಿಸಲಾಗಿದೆ. ಗುರುವಾರ ಮಧ್ಯರಾತ್ರಿಯೇ ಸರ್ಕಾರಿ ರಜೆ ಆದೇಶ ಹೊರ ಬಿದ್ದಿದೆ.

ಮನಮೋಹನಸಿಂಗ್‌ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಸಂತಾಪ ಸೂಚಿಸಲಿದೆ. ದಿವಂಗತರ ಗೌರವಾರ್ಥವಾಗಿ ಡಿಸೆಂಬರ್‌ 27ರ ಶುಕ್ರವಾರ ರಾಜ್ಯದಾದ್ಯಂತ ಸಾರ್ವಜನಿಕ ಸರ್ಕಾರಿ ಕಚೇರಿಗಳಿಗೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ ಸಾರ್ವಜನಿಕ ರಜೆಯನ್ನು ನೀಡಲಾಗಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿ ಎಲಿಷಾ ಆಂಡ್ರೂಸ್‌ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಏಳು ದಿನ ಶೋಕಾಚರಣೆ

ಈ ರಜೆ ಆದೇಶವೂ ನೆಗೋಷಿಯಬಲ್‌ ಇನ್‌ಸ್ಟ್ರುಮೆಂಟ್‌ ಕಾಯಿದೆ 1881ರ ಪ್ರಕಾರವೂ ಕೂಡ ಸಾರ್ವಜನಿಕ ರಜೆಯೆಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದರ ಜತೆಗೆ ಡಿಸೆಂಬರ್‌ 26ರಿಂದ ಆರಂಭಗೊಂಡು ಜನವರಿ 1ವರಗಿನ ಎರಡೂ ದಿನವೂ ಸೇರಿದಂತೆ ಒಟ್ಟು ಏಳು ದಿನ ಕರ್ನಾಟಕ ರಾಜ್ಯಾದ್ಯಂತ ಶೋಕಾಚರಣೆ ಇರಲಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮವನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ಮೈಸೂರು ಅರಮನೆ ಕಾರ್ಯಕ್ರಮಗಳು ರದ್ದು

ಶೋಕಾಚರಣೆ ಇರುವುದರಿಂದ ಕರ್ನಾಟಕದ ಪ್ರಮುಖ ನಗರಗಳಲ್ಲಿ ಡಿಸೆಂಬರ್‌ 31ರಂದು ಸಾರ್ವಜನಿಕವಾಗಿ ಮನರಂಜನಾ ಕಾರ್ಯಕ್ರಮಗಳು ಬಂದ್‌ ಆಗಲಿವೆ. ಖಾಸಗಿಯಾಗಿ ಯಾವುದೇ ಚಟುವಟಿಕೆ ನಡೆಸಲು ಈ ಆದೇಶ ಅಡ್ಡಿಯಾಗುವುದಿಲ್ಲ. ಬದಲಿಗೆ ಸಾರ್ವಜನಿಕವಾಗಿ ಕುಣಿತ, ಸಂಗೀತ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲಿದೆ.

ಮೈಸೂರು ಅರಮನೆ ಆವರಣದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಮಂಂಗಳವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ಕಾರ್ಯಕ್ರಮ, ಕೇಕ್‌ ಕತ್ತರಿಸುವ ಚಟುವಟಿಕೆ, ಪಟಾಕಿ ಸಿಡಿಸುವ ಸಂಭ್ರಮವೂ ಇರುವುದಿಲ್ಲ. 

ಇದಲ್ಲದೇ ಮೈಸೂರು ಅರಮನೆ ಆವರಣದಲ್ಲಿ ಮಾಗಿ ಉತ್ಸವದ ಅಂಗವಾಗಿ ನಿತ್ಯ ಸಂಜೆ ಇದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ರದ್ದಾಗಲಿವೆ.

ಮನರಂಜನೆ ಚಟುವಟಿಕೆಗೆ ಬ್ರೇಕ್‌

ಅದೇ ರೀತಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು, ಕಲಬುರಗಿ ಸಹಿತ ಪ್ರಮುಖ ನಗರಗಳಲ್ಲಿ ಸಾರ್ವಜನಿಕವಾಗಿ ಮನರಂಜನಾ ಚಟುವಟಿಕೆಗಳು ಇರುವುದಿಲ್ಲ. 

ಹೊಸ ವರ್ಷದ ಸಂಭ್ರಮದ ಭಾಗವಾಗಿ ಈಗಾಗಲೇ ಕರ್ನಾಟಕದ ನಾನಾ ಭಾಗಗಳಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಕೊಡಗು, ಮೈಸೂರು, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಹಾಸನ, ಶಿವಮೊಗ್ಗ, ವಿಜಯನಗರ, ಬಾಗಲಕೋಟೆ, ವಿಜಯಪುರ ಸಹಿತ ಪ್ರಮುಖ ಪ್ರವಾಸಿ ಜಿಲ್ಲೆಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಈಗ ರಜೆ ಶುಕ್ರವಾರದಿಂದಲೇ ಸಿಗುವುದರಿಂದ ಕೆಲವರು ಇಂದೇ ಪ್ರವಾಸಕ್ಕೆ ಹೊರಡಲು ಅಣಿಯಾಗುತ್ತಿದ್ದಾರೆ. ಶುಕ್ರವಾರವೂ ರಜೆ ಸಿಗುವುದರಿಂದ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ಪ್ರವಾಸಿಗರು ಹೆಚ್ಚುವ ಸಾಧ್ಯತೆ ಅಧಿಕವಾಗಿದೆ.

Whats_app_banner