ಡಾ ಮನಮೋಹನ ಸಿಂಗ್‌ ಕರ್ನಾಟಕ ನಂಟು: ಹುಬ್ಬಳ್ಳಿಯಲ್ಲಿ ಸಂಬಂಧ, ಮೈಸೂರಲ್ಲಿ ಗೆಳೆತನ, ಬೆಂಗಳೂರು ಪ್ರೀತಿ
ಕನ್ನಡ ಸುದ್ದಿ  /  ಕರ್ನಾಟಕ  /  ಡಾ ಮನಮೋಹನ ಸಿಂಗ್‌ ಕರ್ನಾಟಕ ನಂಟು: ಹುಬ್ಬಳ್ಳಿಯಲ್ಲಿ ಸಂಬಂಧ, ಮೈಸೂರಲ್ಲಿ ಗೆಳೆತನ, ಬೆಂಗಳೂರು ಪ್ರೀತಿ

ಡಾ ಮನಮೋಹನ ಸಿಂಗ್‌ ಕರ್ನಾಟಕ ನಂಟು: ಹುಬ್ಬಳ್ಳಿಯಲ್ಲಿ ಸಂಬಂಧ, ಮೈಸೂರಲ್ಲಿ ಗೆಳೆತನ, ಬೆಂಗಳೂರು ಪ್ರೀತಿ

Dr Manmohan Singh: ಅಗಲಿದ ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ಸ್ನೇಹಿತನ ಒಡನಾಟದಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶೇಷ ಅನುದಾನ ನೀಡಿದ್ದರು. ಇನ್ಫೋಸಿಸ್‌ ಮೈಸೂರು ಘಟಕ ಉದ್ಘಾಟನೆಗೂ ಬಂದಿದ್ದರು.

ಮನಮೋಹನ್‌ ಸಿಂಗ್‌ ಅವರು ಅಬ್ದುಲ್‌ ಕಲಾಂ ಜತೆಗೆ ಇಸ್ರೋ ವಿಜ್ಞಾನಿಗಳ ಜತೆ ಕಾಣಿಸಿಕೊಂಡಿದ್ದರು. ಮೈಸೂರು ವಿವಿ ಮೇಲೂ ಅಭಿಮಾನವಿತ್ತು.
ಮನಮೋಹನ್‌ ಸಿಂಗ್‌ ಅವರು ಅಬ್ದುಲ್‌ ಕಲಾಂ ಜತೆಗೆ ಇಸ್ರೋ ವಿಜ್ಞಾನಿಗಳ ಜತೆ ಕಾಣಿಸಿಕೊಂಡಿದ್ದರು. ಮೈಸೂರು ವಿವಿ ಮೇಲೂ ಅಭಿಮಾನವಿತ್ತು.

ಬೆಂಗಳೂರು: ವಿಶ್ವ ಕಂಡ ಅಪ್ರತಿಮ ಅರ್ಥಶಾಸ್ತ್ರಜ್ಞ, ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿದ ಡಾ.ಮನಮೋಹನಸಿಂಗ್‌ ಅವರಿಗೂ ಕರ್ನಾಟಕಕ್ಕೂ ಬಿಡಿಸಲಾಗದ ನಂಟು. ಹಲವು ಬಾರಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಬೆಂಗಳೂರಿಗೂ ಬಂದು ಹೋಗಿದ್ದಾರೆ. ಆದರೆ ಅವರಿಗೆ ಕರ್ನಾಟಕದಲ್ಲಿ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ವಿಶೇಷ ನಂಟು ಇತ್ತು. ಬೆಂಗಳೂರಿನ ಮೇಲೆ ವಿಶೇಷ ಪ್ರೀತಿಯಿತ್ತು. ಇದು ಒಂದು ರೀತಿಯಲ್ಲಿ ಕುಟುಂಬದ ಸಂಬಂಧ ಹಾಗೂ ಗೆಳೆತನದ ನಂಟು. ಅದನ್ನು ಮನಮೋಹನಸಿಂಗ್‌ ಚೆನ್ನಾಗಿಯೇ ನಿಭಾಯಿಸಿದ್ದರು. ಹಲವಾರು ಕಾರಣಗಳಿಗೆ ಕರ್ನಾಟಕದ ಮೇಲೆ ಅವರಿಗೆ ಪ್ರೀತಿಯಿತ್ತು. ಈ ನಂಟುಗಳು ಕೂಡ ಅವರ ಕರ್ನಾಟಕದೊಂದಿಗಿನ ಗಾಢ ಸಂಬಂಧಗಳನ್ನು ಬೆಸೆದಿದ್ದವು.

ಹುಬ್ಬಳ್ಳಿ ಸಂಬಂಧ

ಮನಮೋಹನಸಿಂಗ್‌ ಅವರು ಹುಬ್ಬಳ್ಳಿಗೆ ಕೆಲವು ಬಾರಿ ಭೇಟಿ ನೀಡಿದ್ದು ಉಂಟು. ಅದಕ್ಕೆ ಕಾರಣ ಅಲ್ಲಿದ್ದ ಅವರ ಸಂಬಂಧಿಕರು. ಮನಮೋಹನ್‌ ಸಿಂಗ್‌ ಅವರ ಪತ್ನಿ ಗುರುಶರಣ್‌ ಕೌರ್‌ ನಾಲ್ವರು ಸಹೋದರಿಯರಲ್ಲಿ ಒಬ್ಬರು ಹುಬ್ಬಳ್ಳಿಯಲ್ಲಿದ್ದಾರೆ. ಆ ಕುಟುಂಬ ಹುಬ್ಬಳ್ಳಿಯಲ್ಲಿಯೇ ನೆಲೆಸಿತ್ತು. ನಾದಿನಿ ಮನೆಗೆ ಮನಮೋಹನಸಿಂಗ್‌ ಬಂದಿರುವುದು ಇದೆ. ಕುಟುಂಬದ ಕಾರ್ಯಕ್ರಮಗಳಲ್ಲೂ ಮನಮೋಹನಸಿಂಗ್‌ ಭಾಗಿಯಾಗಿದ್ದಾರೆ, ಈ ಕಾರಣದಿಂದ ಅವರಿಗೆ ಹುಬ್ಬಳ್ಳಿಯೊಂದಿಗೆ ನಂಟು ಇತ್ತು. ಮನಮೋಹನ ಸಿಂಗ್‌ ಅವರ ಪತ್ನಿ ಕೂಡ ಕೆಲವು ಬಾರಿ ಇಲ್ಲಿಗೆ ಬಂದು ಹೋಗಿದ್ದಾರೆ. ಗುರುಶರಣ್‌ ಸಹೋದರಿ ಹರ್‌ಪ್ರೀತ್ ಕೌರ್ ಕೊಹ್ಲಿಯ ಪತಿ ಹರ್ನಾಮ್ ಸಿಂಗ್ ಕೊಹ್ಲಿ ಹುಬ್ಬಳ್ಳಿಯಲ್ಲಿ ಆಟೋಮೊಬೈಲ್ ಶಾಪ್ ನಡೆಸುತ್ತಿದ್ದಾರೆ.

ನಾನು ಸಚಿವನಾಗಿದ್ದಾಗ ಒಮ್ಮೆ ದೆಹಲಿಗೆ ಹೋಗಿದ್ದೆ. ಆಗ ಪ್ರಧಾನಿಯಾಗಿದ್ದ ಮನಮೋಹನಸಿಂಗ್‌ ಅವರನ್ನು ಭೇಟಿ ಮಾಡಿದಾಗ ನನ್ನೂರು ಹುಬ್ಬಳ್ಳಿ ಎಂದು ಪರಿಚಯಿಸಿಕೊಂಡಿದ್ದೆ. ಆಗ ಅವರು ಹುಬ್ಬಳ್ಳಿ ಕುರಿತು ತಮ್ಮ ನೆನಪುಗಳನ್ನು ಹೇಳಿದ್ದರು. ಆಗಾಗ ಬಂದಿದ್ದನ್ನು ಸ್ಮರಿಸಿಕೊಂಡರು ಎಂದು ಮಾಜಿ ಸಿಎಂ ಹಾಗೂ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.

ಮೈಸೂರು ಗೆಳೆತನ

ಮನಮೋಹನಸಿಂಗ್‌ ಅವರಿಗೆ ಮೈಸೂರಿನೊಂದಿಗೂ ಒಡನಾಟವಿತ್ತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೂರು ದಶಕದ ಹಿಂದೆ ಎರಡು ಅವಧಿಗೆ ಕುಲಪತಿಯಾಗಿದ್ದ ಪ್ರೊ.ಎಂ.ಮಾದಯ್ಯ ಅವರು ಮನಮೋಹನಸಿಂಗ್‌ ಅವರ ಆತ್ಮೀಯ ಗೆಳೆಯ. ಅರ್ಥಶಾಸ್ತ್ರದ ಪ್ರಾಧ್ಯಾಪಕರೂ ಆಗಿದ್ದ ಪ್ರೊ.ಮಾದಯ್ಯ ಅವರ ಒಡನಾಡಿಯಾಗಿದ್ದ ಮನಮೋಹನಸಿಂಗ್‌ ಅವರು ಸ್ನೇಹಿತನ ಜತೆಗೆ ಮೈಸೂರು ಬಗ್ಗೆಯೂ ಅಭಿಮಾನ ಹೊಂದಿದ್ದರು. ಇದನ್ನು ಪ್ರೊ. ಮಾದಯ್ಯ ಅವರು ಹಲವು ಕಾರ್ಯಕ್ರಮಗಳಲ್ಲಿ ಉಲ್ಲೇಖಿಸಿದ್ದರು ಕೂಡ. ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಅವರಿಗೆ ವಿಶೇಷ ಅಭಿಮಾನವೂ ಇತ್ತು. ಆಗ ರಾಜ್ಯಪಾಲರಾಗಿದ್ದ ಎಚ್‌ಆರ್‌ ಭಾರದ್ವಾಜ್‌ ಅವರು ಮೈಸೂರಿಗೆ ಬಂದಾಗ ಇದನ್ನು ನೆನಪಿಸಿಕೊಂಡಿದ್ದರು. ಮೈಸೂರು ವಿಶ್ವವಿದ್ಯಾನಿಲಯವು ಶ್ರೇಷ್ಠ ಸಂಸ್ಥೆಗಳಲ್ಲಿ ಒಂದು. ನೀವು ಆಗಾಗ ಅಲ್ಲಿಗೆ ಹೋಗುತ್ತೀರಿ. ವಿಶ್ವವಿದ್ಯಾನಿಲಯಕ್ಕೆ ನೂರು ಕೋಟಿ ರೂ. ಅನುದಾನವನ್ನು ನೀಡಿದ್ದೇವೆ. ಅದರ ಬಳಕೆಯೂ ಚೆನ್ನಾಗಿ ಆಗಲಿ ಎಂದು ಮನಮೋಹನ ಸಿಂಗ್‌ ಹೇಳಿದ್ದನ್ನು ಭಾರದ್ವಾಜ್‌ ನೆನಪಿಸಿಕೊಂಡಿದ್ದರು.

ಮನಮೋಹನ ಸಿಂಗ್‌ ಅವರು ಎರಡು ದಶಕದ ಹಿಂದೆ 2005ರ ಫೆಬ್ರವರಿ ತಿಂಗಳಲ್ಲಿ ಮೈಸೂರಿನಲ್ಲಿ ಇನ್ಫೋಸಿಸ್‌ ವಿಶಾಲ ಘಟಕ ಉದ್ಘಾಟನೆಗೆ ಆಗಮಿಸಿದ್ದರು. ಅಲ್ಲದೇ ಸುತ್ತೂರು ಮಠಕ್ಕೂ ಭೇಟಿ ನೀಡಿ ದಾಸೋಹ ಭವನವನ್ನು ಉದ್ಘಾಟಿಸಿದ್ದರು.

ಅಗಲಿದ ಸ್ನೇಹಿತ

ಐದಾರು ದಶಕಗಳಿಂದಲೂ ಸ್ನೇಹಿತರಾಗಿದ್ದ ಮನಮೋಹನ ಸಿಂಗ್‌ ಹಾಗೂ ಮಾದಯ್ಯ ಅವರು ಆಗಾಗ ಭೇಟಿಯಾಗುತ್ತಿದ್ದರು. ಇತ್ತೀಚಿಗೆ ವಯೋ ಸಹಜ ಕಾರಣದಿಂದ ಇಬ್ಬರ ಭೇಟಿಯೂ ಆಗಿರಲಿಲ್ಲ. ಆದರೆ ಆರ್ಥಿಕತೆ, ಅಧ್ಯಾಪಕನ ವಿಚಾರದಲ್ಲಿ ಮನಮೋಹನಸಿಂಗ್‌ ಹಾಗೂ ಮಾದಯ್ಯ ಚರ್ಚೆಗಳು ನಡೆದೇ ಇರುತ್ತಿದ್ದವು. ಮಾದಯ್ಯ ಅವರು ಇದೇ ವರ್ಷದ ಮೇ ನಲ್ಲಿ ಮೈಸೂರಿನಲ್ಲಿ ನಿಧನರಾಗಿದ್ದರು. ಈ ವೇಳೆ ನಡೆದಿದ್ದ ಶ್ರದ್ದಾಂಜಲಿ ಸಭೆಗಳಲ್ಲಿ ಮಾದಯ್ಯ ಹಾಗೂ ಮನಮೋಹನಸಿಂಗ್‌ ಅವರ ಒಡನಾಟ, ಅವರ ಸ್ನೇಹವನ್ನು ಬಳಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯದ ಪ್ರಗತಿಗೆ ಪ್ರೊ.ಮಾದಯ್ಯ ಶ್ರಮಿಸಿದ್ದರನ್ನು ಹಲವರು ನೆನಪಿಸಿಕೊಂಡಿದ್ದರು. ಇದಾಗಿ ಏಳು ತಿಂಗಳಿಗೆ ಮಾದಯ್ಯ ಅವರ ಸ್ನೇಹಿತನ ಅಗಲಿಕೆಯೂ ಆಗಿದೆ.

ಎಸ್‌ಎಂ ಕೃಷ್ಣ ಸ್ನೇಹ

ಕರ್ನಾಟಕದವರವೇ ಆದ ಎರಡು ವಾರಗಳ ಹಿಂದೆಯಷ್ಟೇ ನಿಧನರಾದ ಮಾಜಿ ಸಿಎಂ ಎಸ್‌ಎಂ ಕೃಷ್ಣ ಹಾಗೂ ಮನಮೋಹನ್‌ ಸಿಂಗ್‌ ಸ್ನೇಹಿತರೇ ಆಗಿದ್ದರು. ಕಾಂಗ್ರೆಸ್‌ ನಲ್ಲಿದ್ದ ಇಬ್ಬರೂ ರಾಜ್ಯಸಭೆ ಸದಸ್ಯರಾಗಿದ್ದರು. ಮನಮೋಹನ್‌ ಸಿಂಗ್‌ ಸಂಪುಟದಲ್ಲಿ ಎಸ್‌ ಎಂ ಕೃಷ್ಣ ಅವರು ವಿದೇಶಾಂಗ ಸಚಿವರೂ ಆಗಿದ್ದರು. ಸಿಂಗ್‌ ಅವರು ಬೆಂಗಳೂರಿಗೆ ಹಲವು ಬಾರಿ ಭೇಟಿ ನೀಡಿದ್ದೂ ಇದೆ. ಇಸ್ರೋ, ಐಐಎಸ್ಸಿ, ಐಟಿ ಪ್ರಗತಿ ವಿಚಾರದಲ್ಲಿ ಅವರು ಆಸಕ್ತ ವಹಿಸುತ್ತಿದ್ದರು.

Whats_app_banner