Yatnal Expulsion: ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್‌ ಆರು ವರ್ಷ ಬಿಜೆಪಿಯಿಂದ ಉಚ್ಚಾಟನೆ
ಕನ್ನಡ ಸುದ್ದಿ  /  ಕರ್ನಾಟಕ  /  Yatnal Expulsion: ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್‌ ಆರು ವರ್ಷ ಬಿಜೆಪಿಯಿಂದ ಉಚ್ಚಾಟನೆ

Yatnal Expulsion: ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್‌ ಆರು ವರ್ಷ ಬಿಜೆಪಿಯಿಂದ ಉಚ್ಚಾಟನೆ

Yatnal Expulsion: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.

ಬಸನಗೌಡ ಪಾಟೀಲ್‌ ಯತ್ನಾಳ್‌
ಬಸನಗೌಡ ಪಾಟೀಲ್‌ ಯತ್ನಾಳ್‌

Yatnal Expulsion: ಕರ್ನಾಟಕದ ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇಲೆ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ನಾಯಕ ಓಂಪಾಠಕ್‌ ತಿಳಿಸಿದ್ದಾರೆ. ಕಳೆದ ಎರಡು ವರ್ಷದಿಂದ ಪಕ್ಷದ ವಿರುದ್ದವೇ ಚಟುವಟಿಕೆಯಲ್ಲಿ ನಿರತರಾಗಿದ್ದ ಯತ್ನಾಳ್‌ ಅವರು ಹಾಲಿ ಅಧ್ಯಕ್ಷ ವಿಜಯೇಂದ್ರ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ವಿರುದ್ದವೇ ಬಹಿರಂಗ ಹೇಳಿಕೆ ನೀಡುತ್ತದ್ದರು. ಅಲ್ಲದೇ ಶಾಸಕರಾದ ರಮೇಶ್‌ ಜಾರಕಿಹೊಳಿ, ಬಿ.ಪಿ.ಹರೀಶ್‌, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ ಸಹಿತ ಕೆಲ ನಾಯಕರು ಗುಂಪು ರಚಿಸಿಕೊಂಡು ಬಂಡಾಯ ಸಾರಿದ್ದರು. ಕೆಲ ದಿನಗಳ ಹಿಂದೆ ಯತ್ನಾಳ್‌ಗೆ ನೊಟೀಸ್‌ ಜಾರಿ ಮಾಡಲಾಗಿತ್ತು. ಈಗ ಅವರನ್ನು ಪಕ್ಷದಿಂದ ಅಧಿಕೃತವಾಗಿ ಉಚ್ಚಾಟನೆ ಮಾಡಲಾಗಿದೆ.

ಬಿಜೆಪಿಯಲ್ಲಿನ ಬಣ ಬಡಿದಾಟದಿಂದ ಪಕ್ಷದ ಕಾರ್ಯಕರ್ತರು ರೋಸಿ ಹೋಗಿದ್ದರು. ಯತ್ನಾಳ್‌ ವಿರುದ್ದ ಕ್ರಮ ಕೈಗೊಂಡು ಅವರ ಬಾಯಿ ಮುಚ್ಚಿಸಿದರೆ ಮಾತ್ರ ಪಕ್ಷ ಸಂಘಟನೆ ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದೆಹಲಿಗೆ ತೆರಳಿ ವರಿಷ್ಠರಿಗೆ ಮನವರಿಕೆ ಮಾಡಿಕೊಂಡು ಬಂದಿದ್ದರು. ವಿಧಾನಸಭೆ ಚುನಾವಣೆ ಮೂರು ಕ್ಷೇತ್ರದಲ್ಲಿನ ಸೋಲಿನ ಹಿಂದೆ ಇರುವುದು ಬಿಜೆಪಿ ಬಂಡಾಯದ ಬಿಸಿಯೇ ಎನ್ನುವುದನ್ನೂ ತಿಳಿಸಿದ್ದರು.

ಇದಾದ ಬಳಿಕ ಯತ್ನಾಳ್‌ ಅವರೂ ತಮ್ಮ ತಂಢದೊಂದಿಗೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದರು. ವಿಜಯೇಂದ್ರ ಅವರನ್ನು ಬದಲಿಸಿ. ಹೊಸ ಅಧ್ಯಕ್ಷರನ್ನು ನೇಮಿಸಿ ಎನ್ನುವ ಒತ್ತಾಯವನ್ನೂ ಮಾಡಿ ಬಂದಿದ್ದರು.

ಇದರ ನಡುವೆ ಯತ್ನಾಳ್‌ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ನಾನೇನು ಹೇಳುವುದಿಲ್ಲ. ಪಕ್ಷದ ವರಿಷ್ಠರಿಗೆ ಎಲ್ಲವೂ ಗೊತ್ತಿದೆ. ಕ್ರಮ ಆಗಲಿದೆ ಎಂದು ವಿಜಯೇಂದ್ರ ಕಳೆದ ತಿಂಗಳು ಹೇಳಿದ್ದರು. ಈಗ ಯತ್ನಾಳ್‌ ಅವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

ನೀವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದೀರಿ. ಪಕ್ಷದ ಸೂಚನೆಗಳನ್ನು ಉಲ್ಲಂಘಿಸಿದ್ದೀರಿ. ಕರ್ನಾಟಕದಲ್ಲಿ ನಿಮ್ಮ ಹೇಳಿಕೆಗಳಿಂದ ಪಕ್ಷದ ಮೇಲೆ ಪರಿಣಾಮ ಬೀರಿದೆ ಎನ್ನುವುದು ಉಲ್ಲೇಖಿಸಿ ಈಗ ಯತ್ನಾಳ್‌ ಅವರನ್ನು ಆರು ವರ್ಷ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಈ ಬೆಳವಣಿಗೆಯಿಂದ ಪಕ್ಷದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಮೇಲುಗೈ ಸಾಧಿಸಿದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಪಕ್ಷದಿಂದ ಉಚ್ಚಾಟನೆಗೊಂಡಿರುವ ಯತ್ನಾಳ್‌ ಕಾರಣದಿಂದ ಈಗಾಗಲೇ ಪ್ರಬಲವಾಗಿದ್ದ ಬಣ ರಾಜಕಾರಣ ತಣ್ಣಗಾಗಲಿದೆಯೋ ಅಥವಾ ಯತ್ನಾಳ್‌ ಅವರು ಹೊಸ ಪಕ್ಷ ಕಟ್ಟಿ ಬಿಜೆಪಿಗೆ ಟಕ್ಕರ್‌ ಕೊಡುವರೋ ಎನ್ನುವ ಚರ್ಚೆಗಳು ನಡೆದಿವೆ.

ಸದ್ಯದಲ್ಲೇ ಪಕ್ಷದ ವರಿಷ್ಠರು ಕರ್ನಾಟಕ ಬಿಜೆಪಿಗೆ ಅಧಿಕೃತವಾಗಿ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಗಳು ಹೆಚ್ಚಿವೆ. ಬೇರೆ ರಾಜ್ಯಗಳಲ್ಲಿ ಸಂಘಟನೆಯನ್ನು ಬಲಪಡಿಸಿದರೂ ಕರ್ನಾಟಕದಲ್ಲಿ ಬಣ ಬಡಿದಾಟದಿಂದ ವರಿಷ್ಠರೂ ನಿರ್ಧಾರ ತೆಗೆದುಕೊಳ್ಳಲು ಆಗಿರಲಿಲ್ಲ.

ಯತ್ನಾಳ್‌ ಅವರು ಬಿಜೆಪಿಯ ಹಿರಿಯ ನಾಯಕರು. ಮೂರು ಬಾರಿ ಶಾಸಕ, ಒಮ್ಮೆ ವಿಧಾನಪರಿಷತ್‌ ಸದಸ್ಯರು, ಎರಡು ಬಾರಿ ಸಂಸದ, ಕೇಂದ್ರದಲ್ಲಿ ಸಚಿವರೂ ಆಗಿದ್ದವರು. ಆದರೆ ಅವರು ಪಕ್ಷದ ಕೆಲವು ಬೆಳವಣಿಗೆಗಳು, ನಾಯಕತ್ವದ ವಿರುದ್ದ ಬಹಿರಂಗ ಹೇಳಿಕೆ ನೀಡುವುದನ್ನು ಯಾವುದೇ ಕಾರ್ಯಕರ್ತರು ಒಪ್ಪುವುದಿಲ್ಲ. ನಮ್ಮ ಹೈಕಮಾಂಡ್‌ ನಿಧಾನ ಕ್ರಮ ತೆಗೆದುಕೊಂಡರೂ ಸರಿಯಾದ ಕ್ರಮವನ್ನೇ ಈಗ ಯತ್ನಾಳ್‌ ಮೇಲೆ ಜಾರಿ ಮಾಡಿದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದರು.

ಯತ್ನಾಳ್‌ ಉಚ್ಚಾಟನೆಯ ಪತ್ರ
ಯತ್ನಾಳ್‌ ಉಚ್ಚಾಟನೆಯ ಪತ್ರ

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner