ಸಮನ್ವಿತದಿಂದ ಸೈಕೋ ಹಾರರ್ ಕಥೆಗಳು ಮತ್ತು ಇತರೆ ಕೃತಿಗಳ ಬಿಡುಗಡೆ; ವಿದ್ಯಾರ್ಥಿಗಳಿಗೆ ಮನಃಶಾಸ್ತ್ರ ಪಾಠದ ಅಗತ್ಯವಿದೆ ಎಂದ ಶಾಂತಾ ನಾಗರಾಜ್
ಕನ್ನಡ ಪುಸ್ತಕ ಬಿಡುಗಡೆ: ಮನಃಶಾಸ್ತ್ರಜ್ಞೆ, ಬರಹಗಾರ್ತಿ ಡಾ. ರೂಪಾ ರಾವ್ ಬರೆದ ಸೈಕೋ ಹಾರರ್ ಕಥೆಗಳು, ಮನಸ್ಸಿಗೊಂದು ಕೈಗನ್ನಡಿ, ಎಸ್‌ಎಸ್ ಸಿಂಹ ಬರೆದ ಕನ್ನಡಿ ಸುಳ್ಳು ಹೇಳುವುದಿಲ್ಲ ಮತ್ತು ಇತರೆ ಕಥೆಗಳು, ರಮ್ಯ ಎಸ್ ಬರೆದ ವರ್ಣತಂತು, ಪ್ರಶಾಂತ್ ಶ್ರೀಕಂಠಯ್ಯ ಅವರ "ದುಶ್ಯಾಸನ ಬೇಕಾಗಿದ್ದಾನೆ ಮತ್ತು ಇತರೆ ಕಥೆಗಳು" ಬಿಡುಗಡೆಯಾಗಿವೆ.

ಬೆಂಗಳೂರು: ಸಮನ್ವಿತ ಪ್ರಕಾಶನದಡಿ ಬೆಂಗಳೂರಿನ ಉದಯಬಾನು ಕಲಾ ಸಂಘದಲ್ಲಿ ಒಟ್ಟು ನಾಲ್ವರು ಬರಹಗಾರರ ಐದು ಪುಸ್ತಕಗಳು ಭಾನುವಾರ (ಫೆ 2) ಬಿಡುಗಡೆಯಾದವು. ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಜಾಲತಾಣದ ಅಂಕಣಕಾರ್ತಿಯೂ ಆಗಿರುವ ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಅವರ ‘ಸೈಕೋ ಹಾರರ್ ಕಥೆಗಳು’, ‘ಮನಸ್ಸಿಗೊಂದು ಕೈಗನ್ನಡಿ’ ಪುಸ್ತಕಗಳು ಸಹ ಇದರಲ್ಲಿ ಸೇರಿವೆ. ಎಸ್‌ಎಸ್ ಸಿಂಹ ಅವರ ‘ಕನ್ನಡಿ ಸುಳ್ಳು ಹೇಳುವುದಿಲ್ಲ ಮತ್ತು ಇತರೆ ಕಥೆಗಳು’, ರಮ್ಯ ಎಸ್. ಅವರ ‘ವರ್ಣತಂತು’, ಪ್ರಶಾಂತ್ ಶ್ರೀಕಂಠಯ್ಯ ಅವರ "ದುಶ್ಯಾಸನ ಬೇಕಾಗಿದ್ದಾನೆ ಮತ್ತು ಇತರೆ ಕಥೆಗಳು' ಕೃತಿಗಳನ್ನು ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲೇಖಕಿ ಹಾಗೂ ಆಪ್ತ ಸಮಾಲೋಚಕಿ ಶಾಂತಾ ನಾಗರಾಜ್. ಲೇಖಕ ಹಾಗೂ ಕಾದಂಬರಿಕಾರ ವಿವೇಕಾನಂದ ಕಾಮತ್ ಮತ್ತು ವೈದ್ಯ ಹಾಗು ಲೇಖಕ ಡಾ ನಾ ಸೋಮೇಶ್ವರ್ ಭಾಗವಹಿಸಿ ಕೃತಿಗಳ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮನಃಶಾಸ್ತ್ರ ಪಾಠದ ಅಗತ್ಯವಿದೆ: ಶಾಂತಾ ನಾಗರಾಜ್
ಡಾ ರೂಪಾ ರಾವ್ ಅವರ ‘ಸೈಕೋ ಹಾರರ್ ಕಥೆಗಳು’ ಮತ್ತು ‘ಮನಸ್ಸಿಗೊಂದು ಕೈಗನ್ನಡಿ’ ಕೃತಿಗಳ ಕುರಿತು ಮಾತನಾಡಿದ ಲೇಖಕಿ ಹಾಗೂ ಆಪ್ತ ಸಮಾಲೋಚಕಿ ಶಾಂತಾ ನಾಗರಾಜ್, ‘ಡಾ ರೂಪಾ ರಾವ್ ಬರೆದ ಸೈಕೋ ಹಾರರ್ ಕಥೆಗಳು ಸಾಮಾನ್ಯ ಕಥೆಗಿಂತ ಭಿನ್ನವಾಗಿವೆ. ಈ ಕೃತಿಯನ್ನು ಎರಡು ಭಿನ್ನ ಆಯಾಮದಿಂದ ಪರಿಶೀಲಿಸಬಹುದು. ಇದನ್ನು ಸಾಹಿತ್ಯ ಕೃತಿಯಾಗಿಯೂ ಆದರದಿಂದ ಸ್ವೀಕರಿಸಬಹುದು. ಸೈಕಾಲಜಿ ದೃಷ್ಟಿಯಿಂದ ಅಧ್ಯಯನದ ದೃಷ್ಟಿಯಿಂದಲೂ ಈ ಕೃತಿಯನ್ನು ಬಳಸಿಕೊಳ್ಳಬಹುದು. ಒಂದೇ ಪುಸ್ತಕ ಎರಡು ರೀತಿಯಲ್ಲಿ ಒದಗುವುದು ಬಹಳ ಆಶಾದಾಯಕ ಬೆಳವಣಿಗೆ' ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದರು.
'ಯಾವುದೇ ಲೇಖಕಿ ಬರೆಯಲು ಅದಕ್ಕೊಂದು ಕಾರಣ ಇರುತ್ತದೆ. ಕಥೆ ಬರೆಯುವಾಗ ಜಗತ್ತಿನ ಅನೇಕ ಘಟನೆಗಳಲ್ಲಿ ಕೆಲವೊಂದು ವಿಚಾರಗಳು ಬೆರಗು ಹುಟ್ಟಿಸುತ್ತವೆ. ರೂಪಾ ಅವರಿಗೆ ಸೈಕೋ ಹಾರರ್ ಬರೆಯುವ ತುರ್ತು ಏನಿರಬಹುದು. ಅವರಿಗೆ ಕಥೆಯನ್ನೂ ಹೇಳಬೇಕು. ಸೈಕಾಲಜಿಯನ್ನೂ ಹೇಳಬೇಕು. ಆದರೆ, ನನಗೆ ಆಶ್ಚರ್ಯವೆನಿಸಿದ್ದು ಅವರು ಕಥೆ ಹೇಳಿರುವ ರಂಜನೀಯ ಶೈಲಿ. ನಮ್ಮ ನಿಮ್ಮ ನಡುವೆ ನಡೆಯುವ ಅನೇಕ ವಿಚಾರಗಳನ್ನು ಸುಲಲಿತವಾಗಿ ಓದುವಂತೆ, ವಿಸ್ಮಯಕಾರಿಯಾಗಿ ಹೇಳಿದ್ದಾರೆ. ನನಗೆ ಈ ಕಥೆಗಳನ್ನು ಓದುವಾಗ ಎನ್. ನರಸಿಂಹಯ್ಯ ಅವರ ‘ಪುರುಷೋತ್ತಮನ ಸಾಹಸ’ ನೆನಪಾಯ್ತು. ಈ ಸೈಕೋ ಕಥೆಗಳಲ್ಲಿ ರೂಪಾ ಅವರು ಮಹಿಳೋತ್ತಮೆಯಾಗಿ ಬಿಡುತ್ತಾರೆ. ಇಷ್ಟು ರೋಚಕವಾಗಿ ಬರೆದದ್ದು ಆಶ್ಚರ್ಯ, ಮೆಚ್ಚುಗೆಗೆ ಪಾತ್ರವಾಗುತ್ತದೆ' ಎಂದು ತಮ್ಮ ಮಾತನ್ನು ವಿಸ್ತರಿಸಿದರು.
‘ಮಂಪರು ಪರೀಕ್ಷೆ ಎನ್ನುವುದೆಲ್ಲ ಮೋಸ. ಅದು ಮೇಲುಮೇಲಿನ ವಿಚಾರಗಳನ್ನಷ್ಟೇ ಹೇಳುವುದು. ಆಳದಲ್ಲಿ ಮನುಷ್ಯ ಮುಚ್ಚಿಟ್ಟಿರುವುದನ್ನು ಅವನಾಗಿಯೇ ಬಿಚ್ಚಿಟ್ಟರೆ ಮಾತ್ರ ಹೊರತರಬಹುದೇ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ರೂಪಾ ಅವರ ಕಥೆಗಳಲ್ಲಿ ಕೊನೆಗೆ ರೂಪಾ ಅವರೇ ಹೀರೋಯಿನ್ ಆಗುತ್ತಾರೆ. ಈ ಕೃತಿಯಲ್ಲಿ ರೂಪಾ ಸೈಕಾಲಜಿ ಪಾಠ ಮಾಡುವುದಿಲ್ಲ. ತಾನು ಹೇಳಬೇಕಾದ ವಿಚಾರಗಳನ್ನು ಬಹಳ ರಂಜನೀಯವಾಗಿ ನೀಡುತ್ತಾರೆ’ ಎಂದರು.
ಮರುಚಿಂತಿಸುವಂತೆ ಮಾಡುವ ಪುಸ್ತಕ ಮನಸ್ಸಿಗೊಂದು ಕೈಗನ್ನಡಿ
ರೂಪಾ ರಾವ್ ಅವರ ಮತ್ತೊಂದು ಪುಸ್ತಕ ‘ಮನಸ್ಸಿಗೊಂದು ಕನ್ನಡಿ’ ಕುರಿತು ಮಾತನಾಡಿದ ಶಾಂತಾ ನಾಗರಾಜ್, 'ಈ ಕೃತಿಯು ಇನ್ನೊಂದು ರೀತಿಯದ್ದು. ಪ್ರಾಚೀನ ಕವಿಗಳು ಲೌಖಿಕ ಕೃತಿಗಳನ್ನೂ ಬರೆಯುತ್ತಿದ್ದರು. ಜತೆಗೆ ಜೀನಾಗಮನ ಕೃತಿಯನ್ನೂ ಬರೆಯುತ್ತಾರೆ. ಅದಕ್ಕೆ ಜನ್ನ ಯಶೋದರ ಚರಿತ್ರೆಯನ್ನೂ ಬರೆಯುತ್ತಾರೆ. ಅಲ್ಲಿ ಅನಂತನಾಥ ಪುರಾಣವನ್ನೂ ಬರೆಯುತ್ತಾರೆ. ನಮ್ಮ ರೂಪಾ ಅವರು ಕಥೆಯನ್ನೂ ಬರೆಯುತ್ತಾರೆ. ಮನಃಶಾಸ್ತ್ರವನ್ನೂ ಬರೆಯುತ್ತಾರೆ. ನಮ್ಮ ಶರೀರಗಳ ನೋವುಗಳಿಗೆ ನಾವೇ ಕಾರಣವೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ನಮ್ಮ ಮನಸ್ಸಿನ ನೋವುಗಳಿಗೆ ನಾವೇ ಕಾರಣ ಎಂದು ನಾವು ಒಪ್ಪಿಕೊಳ್ಳುವುದಿಲ್ಲ. ಆದರೆ, ಇದೆಲ್ಲ ತಪ್ಪು, ಮನಸ್ಸಿಗೊಂದು ಕೈಗನ್ನಡಿ ಇಟ್ಟುಕೊಳ್ಳಿ ಎಂದು ರೂಪಾ ಈ ಕೃತಿಯಲ್ಲಿ ಹೇಳಿದ್ದಾರೆ. ಈ ಪುಸ್ತಕ ಓದುತ್ತ ನಮ್ಮ ಭಾವನೆಗಳಿಗೆ, ನಮ್ಮ ನೋವುಗಳಿಗೆ, ನಮ್ಮ ಅತಿರೇಕಗಳಿಗೆ ನಾವೇ ಕಾರಣ ಅಲ್ವಾ ಎಂದು ಯೋಚಿಸುವಂತೆ, ಮರುಚಿಂತಿಸುವಂತೆ ಮಾಡುತ್ತದೆ" ಎಂದು ಅಭಿಪ್ರಾಯಪಟ್ಟರು.
‘ನಮ್ಮ ಮಕ್ಕಳಿಗೆ ಇತಿಹಾಸ, ಭೂಗೋಳ ಎಂದೆಲ್ಲ ಪ್ರೈಮರಿಯಲ್ಲಿ, ಹೈಸ್ಕೂಲ್‌ನಲ್ಲಿ, ಎಲ್‌ಕೆಜಿಯಲ್ಲಿ ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಲ್ಲೆಲ್ಲ ನೀಡಲಾಗುತ್ತದೆ. ನಿಜವಾಗಿಯೂ ಮಿಡಲ್ ಸ್ಕೂಲ್, ಹೈಸ್ಕೂಲ್ ಮಕ್ಕಳಿಗೆ ಈ ರೀತಿಯ ಸರಳವಾದ ಮನಶಾಸ್ತ್ರ ಪಾಠಗಳು ಬೇಕಿರುತ್ತವೆ. ಮಕ್ಕಳು ಇಂತಹ ಪುಸ್ತಕಗಳನ್ನು ಓದಬೇಕು. ನಮ್ಮ ಶರೀರದ ಬಗ್ಗೆ, ಅಂಗರಚನೆ ಬಗ್ಗೆ ಬಯಾಲಜಿಯಲ್ಲಿ ಬೇಕಾದಷ್ಟು ಪಾಠ ಮಾಡುತ್ತೇವೆ. ಆದರೆ, ನಮ್ಮ ಮೆದುಳಿನ ಕೆಲಸದ ಬಗ್ಗೆ, ಮೆದುಳಿನ ಭಾವನೆಯ ಬಗ್ಗೆ, ಮನಸ್ಸಿನ ಬಗ್ಗೆ ಯಾರೂ ಹೇಳಿಕೊಡುವುದಿಲ್ಲ. ಇದನ್ನು ಪಠ್ಯದಲ್ಲಿ ಸೇರಿಸಿ ಹೇಳುವ ಅಗತ್ಯವಿದೆ’ ಎಂದು ಶಾಂತಾ ನಾಗರಾಜ್ ಸಲಹೆ ಮಾಡಿದರು.
ಲೇಖಕ ಹಾಗೂ ಕಾದಂಬರಿಕಾರ ವಿವೇಕಾನಂದ ಕಾಮತ್ ಅವರು ಕೂಡ ಡಾ. ರೂಪಾ ರಾವ್ ಪುಸ್ತಕಗಳ ಕುರಿತು ಮಾತನಾಡಿದರು. ಡಾ ನಾ ಸೋಮೇಶ್ವರ್ ಅವರು ‘ವರ್ಣತಂತು’ ಕೃತಿಯ ಕುರಿತು ವಿವರವಾಗಿ ವಿಮರ್ಶೆ ಮಾಡಿದ್ದಾರೆ. ‘ಸಮನ್ವಿತ’ ಪ್ರಕಾಶನದ ರಾಮಕೃಷ್ಣ ಕೌಂಡಿನ್ಯ ಕಾರ್ಯಕ್ರಮ ನಿರೂಪಿಸಿದರು.
(ಲೇಖಕರು ಪ್ರಕಾಶಕರ ಗಮನಕ್ಕೆ: ಪರಿಚಯಕ್ಕಾಗಿ ಪುಸ್ತಕಗಳನ್ನು ಕಳಿಸುವಂತಿದ್ದರೆ ನಮ್ಮನ್ನು ಸಂಪರ್ಕಿಸಿ. ವಾಟ್ಸಾಪ್: 95991 30861)
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.

ವಿಭಾಗ