ಲಕ್ಕಿ ಭಾಸ್ಕರ್ ಸಿನಿಮಾ ನೋಡಿ ವೃದ್ಧ ದಂಪತಿಗೆ 50 ಲಕ್ಷ ರೂ ವಂಚನೆ; ಬ್ಯಾಂಕ್ ಉಪವ್ಯವಸ್ಥಾಪಕಿ ಸೇರಿ ನಾಲ್ವರು ಅರೆಸ್ಟ್
ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ವಂಚನೆ ಎಸಗಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಬ್ಯಾಂಕ್ ಒಂದರ ಉಪ ವ್ಯವಸ್ಥಾಪಕಿ ಹಣಕ್ಕಾಗಿ ವೃದ್ಧೆಗೆ ವಂಚಿಸಿದ ಘಟನೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಚಲನಚಿತ್ರಗಳನ್ನು ಒಳ್ಳೆಯ ಉದ್ದೇಶಗಳಿಗೆ ಮಾದರಿಯಾಗಿ ಸ್ವೀಕರಿಸುವ ಜಮಾನ ಇದಲ್ಲ. ಅನೇಕ ಸಿನಿಮಾಗಳ ಮಾದರಿಯಲ್ಲಿ ಕೊಲೆ ಮತ್ತು ಹಣ ಸುಲಿಗೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಕೃತ್ಯಗಳಿಗೆ ಪ್ರೇರಣೆಯಾದ ಎರಡು ಸಿನಿಮಾಗಳ ಹೆಸರು ಹೇಳುವುದಾದರೆ ಕನ್ನಡದ ದೃಶ್ಯ ಮತ್ತು ತೆಲುಗಿನ ಲಕ್ಕಿ ಭಾಸ್ಕರ್. ಲಕ್ಕಿ ಭಾಸ್ಕರ್ ಮಾದರಿಯಲ್ಲಿ ವಂಚನೆ ಎಸಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪ್ರಕರಣ ಅದಕ್ಕೆ ಮತ್ತೊಂದು ಸೇರ್ಪಡೆ ಅಷ್ಟೇ. ಖಾಸಗಿ ಬ್ಯಾಂಕ್ ಒಂದರ ಉಪ ವ್ಯವಸ್ಥಾಪಕಿ ಹಣಕ್ಕಾಗಿ ವೃದ್ಧೆಗೆ ವಂಚಿಸಿರುವ ಪ್ರಕರಣ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಂಚನೆಯಲ್ಲಿ ಭಾಗಿಯಾಗಿದ್ದ ಇಂಡಸ್ ಇಂಡ್ ಬ್ಯಾಂಕ್‌ನ ಉಪವ್ಯವಸ್ಥಾಪಕಿ ಮೇಘನಾ, ಆಕೆಯ ಪತಿ ಶಿವಪ್ರಸಾದ್, ಸ್ನೇಹಿತರಾದ ವರದರಾಜು ಮತ್ತು ಅನ್ವರ್ ಘೋಷ್ ಅವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಫಿಕ್ಸ್‌ಡ್ ಅಕೌಂಟ್ ಮಾಡಿಕೊಡುವುದಾಗಿ ವೃದ್ಧೆಯೊಬ್ಬರಿಗೆ ಸುಳ್ಳು ಹೇಳಿದ ಮೇಘನಾ ಆರ್‌ಟಿಜಿಎಸ್ ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದಾಳೆ. ನಂತರ ಮೇಘನಾ ತಮ್ಮದೇ ಹೊಸ ಬ್ಯಾಂಕ್ ಖಾತೆ ತೆಗೆದು ಆರ್‌ಟಿಜಿಎಸ್ ಮುಖಾಂತರ ರೂ. 50 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾಳೆ. ವೃದ್ಧ ದಂಪತಿ ಗಿರಿನಗರದಲ್ಲಿನ ಇಂಡಸ್ ಇಂಡ್ ಬ್ಯಾಂಕ್‌ನಲ್ಲಿ ಜಂಟಿ ಖಾತೆ ತೆರೆದಿದ್ದರು. ಬ್ಯಾಂಕ್‌ಗೆ ಬರುತ್ತಿದ್ದ ವೃದ್ಧ ದಂಪತಿಗೆ ಮೇಘನಾ ಆಗಾಗ್ಗೆ ಸಹಾಯ ಮಾಡುತ್ತಿದ್ದರು. ಇದೇ ಕಾರಣಕ್ಕೆ ವೃದ್ಧೆ ಕೂಡಾ ತಮ್ಮ ಕುಟುಂಬದ ಅನೇಕ ವಿಚಾರಗಳನ್ನು ಮೇಘನಾ ಜತೆ ಹಂಚಿಕೊಳ್ಳುತ್ತಿದ್ದರು. ಚಾಮರಾಜಪೇಟೆಯಲ್ಲಿನ ತಮ್ಮ ಹಳೆಯ ಮನೆ ಮಾರಿರುವ ವಿಚಾರವನ್ನೂ ಮೇಘನಾ ಜತೆ ಹಂಚಿಕೊಂಡಿದ್ದರು.
ಮನೆ ಮಾರಾಟದಿಂದ ವೃದ್ಧ ದಂಪತಿಯ ಬ್ಯಾಂಕ್ ಖಾತೆಗೆ 1 ಕೋಟಿ ರೂ. ಹಣ ಜಮೆಯಾಗಿತ್ತು. ಒಮ್ಮೆ ಬ್ಯಾಂಕ್‌ಗೆ ಬಂದಿದ್ದಾಗ ಮೇಘನಾ ವೃದ್ಧೆಗೆ ಎರಡು ಬಾಂಡ್ ಅವಧಿ ಮುಗಿದಿದೆ ಎಂದು ಸುಳ್ಳು ಹೇಳಿ ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದು ಕಥೆ ಕಟ್ಟಿದ್ದಾಳೆ. ಸ್ವತಃ ಮೇಘನಾ, ವೃದ್ಧೆ ಮನೆಗೆ ತೆರಳಿ ಎರಡು ಖಾಲಿ ಚಕ್‌ಗಳು ಮತ್ತು ಕೆಲವೊಂದು ಕಾಗದ ಪತ್ರಗಳಿಗೆ ಸಹಿ ಪಡೆದಿದ್ದಾಳೆ. ಇದೇ ನೆಪದಲ್ಲಿ ಎಫ್‌ಡಿ ಹೆಸರಿನಲ್ಲಿ ಆರ್‌ಟಿಜಿಎಸ್ ಪತ್ರಕ್ಕೂ ಸಹಿ ಹಾಕಿಸಿಕೊಂಡಿದ್ದಾಳೆ.
ಬ್ಯಾಲೆನ್ಸ್ ಪರಿಶೀಲಿಸಿದಾಗ ಸತ್ಯಾಂಶ ಬಯಲು
ಒಂದು ದಿನ ವೃದ್ಧ ದಂಪತಿಯ ಮಗ ಮೊಬೈಲ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಿದಾಗ ಹಣ ಕಡಿಮೆ ಇರುವುದು ಕಂಡು ಬಂದಿದೆ. ಅನುಮಾನಗೊಂಡು ಬ್ಯಾಂಕ್ ಮೆಸೇಜ್‌ಗಳನ್ನು ಪರಿಶೀಲಿಸಿದಾಗ ಫೆಬ್ರುವರಿ 13ರಂದು ಬೇರೊಬ್ಬರ ಖಾತೆಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ನಂತರ ವೃದ್ಧೆ ಬ್ಯಾಂಕ್‌ಗೆ ಹೋಗಿ ಮೇಘನಾಳನ್ನು ಪ್ರಶ್ನಿಸಿದಾಗ “ನೀವು ಹೇಳಿದ ಖಾತೆಗೆ ಆರ್‌ಟಿಜಿಎಸ್ ಮಾಡಲಾಗಿದೆ” ಎಂದು ಸಬೂಬು ಹೇಳಿದ್ದಾಳೆ.
ಈ ಉತ್ತರದಿಂದ ಅನುಮಾನಗೊಂಡ ವೃದ್ಧೆ, ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಸತ್ಯ ಒಪ್ಪಿಕೊಂಡಿದ್ದಾರೆ.
ಐಷಾರಾಮಿ ಜೀವನದ ಹುಚ್ಚು
ಮೇಘನಾಗೆ ಐಷಾರಾಮಿ ಜೀವನದ ಹುಚ್ಚು ಇತ್ತು. ಆದರೆ ಸಂಬಳ ಸಾಲುತ್ತಿರಲಿಲ್ಲ. ಕಾರು ಬಂಗಲೆ ಖರೀದಿಸಿ ಹೈಫೈ ಜೀವನ ನಡೆಸುವ ಕನಸು ಕಾಣುತ್ತಿದ್ದಳು. ಅದೇ ಸಮಯಕ್ಕೆ ಸರಿಯಾಗಿ ವೃದ್ಧ ದಂಪತಿ ಪರಿಚಯವಾಗಿ ಅವರಿಗೆ ವಂಚಿಸುವ ಸಂಚು ರೂಪಿಸಿದ್ದಳು. ಈಕೆಗೆ ಪತಿ ಶಿವಪ್ರಸಾದ್ ಕೂಡಾ ಸಾಥ್ ನೀಡಿದ್ದ. ಮೇಘನಾ ದಂಪತಿಯ ಸ್ನೇಹಿತರಾದ ವರದರಾಜು ಮತ್ತು ಅನ್ವರ್ ಘೋಷ್ ಅವರ ಮೂಲಕ ಹೊಸ ಬ್ಯಾಂಕ್ ಖಾತೆ ತೆರೆದು, ಆ ಖಾತೆಗೆ ಆರ್‌ಟಿಜಿಎಸ್ ಮೂಲಕ ವೃದ್ಧ ದಂಪತಿಯ
50 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದಾಳೆ. ನಂತರ ರೂ. 30 ಲಕ್ಷ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾಳೆ. ತನಿಖೆ ನಡೆಸಿದ ಪೊಲೀಸರು ರೂ. 50 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ಮಾಡುವಾಗ ಮೇಘನಾ ಲಕ್ಕಿ ಭಾಸ್ಕರ್ ಸಿನಿಮಾ ಕಥೆ ಹೇಳಿ ಅದರಂತೆ ಹಣ ಮಾಡಲು ಮುಂದಾಗಿದ್ದಾಗಿ ತಿಳಿಸಿದ್ದಾಳೆ. ವೃದ್ಧ ದಂಪತಿಗೆ ಮೋಸ ಮಾಡುವ ಉದ್ದೇಶ ಇರಲಿಲ್ಲ. ನಮಗೆ ಹಣದ ಅವಶ್ಯಕತೆ ಇತ್ತು. ಆ ದುಡ್ಡನ್ನು ಬಂಡವಾಳ ಹೂಡಿ ಲಾಭ ಗಳಿಸಿ ಮತ್ತೆ ವೃದ್ಧೆಗೆ ಮರಳಿಸುವ ಉದ್ದೇಶವಿತ್ತು ಎಂದು ಕಾರಣ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
- ವರದಿ: ಎಚ್. ಮಾರುತಿ, ಬೆಂಗಳೂರು
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
