ಕನ್ನಡ ಸುದ್ದಿ  /  Karnataka  /  Four New Metro Lines To Come Up In Bengaluru See Details

Namma Metro: ಬೆಂಗಳೂರಿಗರಿಗೆ ಸಿಹಿ ಸುದ್ದಿ; ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಆಗಲಿವೆ ನಾಲ್ಕು ಹೊಸ ಮೆಟ್ರೋ ಮಾರ್ಗಗಳು

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅಡಿಯಲ್ಲಿ ನಾಲ್ಕು ಹೊಸ ಮೆಟ್ರೋ ಕಾರಿಡಾರ್‌ಗಳನ್ನು ಪರಿಚಯಿಸುವುದಾಗಿ ಸರ್ಕಾರ ಹೇಳಿದೆ.

ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ದೇಶ ಮಾತ್ರವಲ್ಲದೆ, ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಕೈಗೆೊಳ್ಳುತ್ತಿದ್ದು, ಸಂಚಾರ ದಟ್ಟಣೆಯನ್ನು ತಗ್ಗಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಭವಿಷ್ಯದಲ್ಲಿ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರು ತಮ್ಮ ಕೆಲಸದ ಸ್ಥಳ ಅಥವಾ ಮನೆಯಿಂದ 1-2 ಕಿಲೋಮೀಟರ್ ಒಳಗೆ ಮೆಟ್ರೋವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅಡಿಯಲ್ಲಿ ನಾಲ್ಕು ಹೊಸ ಮೆಟ್ರೋ ಕಾರಿಡಾರ್‌ಗಳನ್ನು ಪರಿಚಯಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ಸರ್ಕಾರದ ಪ್ರಕಾರ, ವೈಟ್‌ಫೀಲ್ಡ್ - ಹೊಸಕೋಟೆ, ಬನ್ನೇರುಘಟ್ಟ - ಜಿಗಣಿ, ಎಂಜಿ ರಸ್ತೆ - ಹೋಪ್ ಫಾರ್ಮ್ ಜಂಕ್ಷನ್ ಮತ್ತು ಬೆಂಗಳೂರು ವಿಮಾನ ನಿಲ್ದಾಣ-ನಾಗವಾರ ನಡುವಿನ ಮೆಟ್ರೋ ಮಾರ್ಗಗಳನ್ನು ಮೆಟ್ರೋ ಯೋಜನೆಯ ಮೂರನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

16,328 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಏತನ್ಮಧ್ಯೆ, ಬಹು ನಿರೀಕ್ಷಿತ ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಮಾರ್ಗದ ಕಾರ್ಯಾಚರಣೆಗಳು ಮಾರ್ಚ್ ಅಂತ್ಯದ ವೇಳೆಗೆ ಪ್ರಾರಂಭವಾಗಲಿದ್ದು, ಇದು ಈ ಮಾರ್ಗದಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಮೆಟ್ರೋ ಮಾರ್ಗವು ಸಾವಿರಾರು ಐಟಿ ಉದ್ಯೋಗಿಗಳಿಗೆ ಯಾವುದೇ ಟ್ರಾಫಿಕ್ ಜಾಮ್ ಅನ್ನು ಎದುರಿಸದೆ ಕೆಲಸಕ್ಕೆ ಹೋಗಲು ಸಹಾಯ ಮಾಡುತ್ತದೆ. ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಎಲ್ಲಾ 12 ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ಸಿಎಂಆರ್‌ಎಸ್ ತಂಡ ಪರಿಶೀಲನೆ ನಡೆಸಿದೆ.

ಕೆಆರ್ ಪುರಂ ನಿಲ್ದಾಣದಿಂದ 1.5 ಕಿಮೀ ದೂರದಲ್ಲಿರುವ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಈ 13 ಕಿಲೋಮೀಟರ್ ಮೆಟ್ರೋ ಮಾರ್ಗದ 12 ನಿಲ್ದಾಣಗಳು ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದನಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ.

ವೈಟ್‌ಫೀಲ್ಡ್ ಬಳಿ ಇರುವ ಟೆಕ್ ಪಾರ್ಕ್‌ನಿಂದ ಮೆಟ್ರೋ ಮಾರ್ಗಕ್ಕೆ ನೇರ ಪ್ರವೇಶಕ್ಕಾಗಿ ಬಿಎಂಆರ್‌ಸಿಎಲ್ ಮತ್ತು ಐಟಿಪಿಎಲ್ (ಇನ್‌ಫರ್ಮೇಷನ್ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್) ನಡುವೆ ತಿಳುವಳಿಕೆ ಪತ್ರ (ಎಂಒಯು) ಸಹ ಸಹಿ ಮಾಡಲಾಗಿದೆ.

ಈ ಹೊಸ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾದಾಗ ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ ಮತ್ತು ಟೆಕ್ ಪಾರ್ಕ್ ಎರಡನ್ನೂ ಸಂಪರ್ಕಿಸುವ ವಾಕ್‌ವೇ ಅನ್ನು ಬಿಎಂಆರ್‌ಸಿಎಲ್ ನಿರ್ಮಿಸಿದೆ.

IPL_Entry_Point