ಬೆಂಗಳೂರಿನಲ್ಲಿ ವೈಮಾಂತರಿಕ್ಷ ಕ್ಷೇತ್ರದ ಥೇಲ್ಸ್ ಕಂಪನಿಯ ಇನ್-ಫ್ಲೈಟ್ ಲ್ಯಾಬ್ ಶುರು: ಭಾರತದಲ್ಲಿ ಮೊದಲ ಘಟಕ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ವೈಮಾಂತರಿಕ್ಷ ಕ್ಷೇತ್ರದ ಥೇಲ್ಸ್ ಕಂಪನಿಯ ಇನ್-ಫ್ಲೈಟ್ ಲ್ಯಾಬ್ ಶುರು: ಭಾರತದಲ್ಲಿ ಮೊದಲ ಘಟಕ

ಬೆಂಗಳೂರಿನಲ್ಲಿ ವೈಮಾಂತರಿಕ್ಷ ಕ್ಷೇತ್ರದ ಥೇಲ್ಸ್ ಕಂಪನಿಯ ಇನ್-ಫ್ಲೈಟ್ ಲ್ಯಾಬ್ ಶುರು: ಭಾರತದಲ್ಲಿ ಮೊದಲ ಘಟಕ

ಬೆಂಗಳೂರು ಪ್ರಮುಖ ಐಟಿ ಹಾಗೂ ಉತ್ಪಾದನಾ ವಲಯದ ಕೇಂದ್ರವಾಗಿ ಮಾರ್ಪಟ್ಟಿದೆ. ಈಗ ಫ್ರೆಂಚ್‌ ಮೂಲದ ಥೇಲ್ಸ್‌ ಕಂಪೆನಿಯು ತನ್ನ ಘಟಕವನ್ನು ಆರಂಭಿಸಿದೆ.

ಬೆಂಗಳೂರಿನಲ್ಲಿ  ಥೇಲ್ಸ್ ಕಂಪೆನಿ ಅತ್ಯಾಧುನಿಕ ಇನ್-ಫ್ಲೈಟ್ ಎಂಟರ್ಟೇನ್ಮೆಂಟ್ ಮತ್ತು ಸರ್ವೀಸಸ್ ಲ್ಯಾಬ್ ಉದ್ಘಾಟನೆ ವೇಳೆ ಸಚಿವ ಎಂ.ಬಿ.ಪಾಟೀಲ ಪ್ರಮುಖರನ್ನು ಸ್ವಾಗತಿಸಿದರು.
ಬೆಂಗಳೂರಿನಲ್ಲಿ ಥೇಲ್ಸ್ ಕಂಪೆನಿ ಅತ್ಯಾಧುನಿಕ ಇನ್-ಫ್ಲೈಟ್ ಎಂಟರ್ಟೇನ್ಮೆಂಟ್ ಮತ್ತು ಸರ್ವೀಸಸ್ ಲ್ಯಾಬ್ ಉದ್ಘಾಟನೆ ವೇಳೆ ಸಚಿವ ಎಂ.ಬಿ.ಪಾಟೀಲ ಪ್ರಮುಖರನ್ನು ಸ್ವಾಗತಿಸಿದರು.

ಬೆಂಗಳೂರು: ವೈಮಾಂತರಿಕ್ಷ ಕ್ಷೇತ್ರದಲ್ಲಿ ಮುಂಚೂಣಿ ಕಂಪನಿಯಾಗಿರುವ ಥೇಲ್ಸ್ ಇಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಇನ್-ಫ್ಲೈಟ್ ಎಂಟರ್ಟೇನ್ಮೆಂಟ್ ಮತ್ತು ಸರ್ವೀಸಸ್ ಲ್ಯಾಬ್ ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಸಾರ್ವಜನಿಕ ಸ್ವಾಮ್ಯದ ಬಿಇಎಲ್ ಜತೆ ದೀರ್ಘಕಾಲದಿಂದಲೂ ಸಹಭಾಗಿತ್ವ ಹೊಂದಿರುವ ಥೇಲ್ಸ್ ಕಂಪನಿಯು ಈಗ ರಾಜ್ಯದಲ್ಲಿ ತನ್ನ ಎರಡನೆಯ ಕಚೇರಿ ಆರಂಭಿಸಿರುವುದು ಸ್ವಾಗತಾರ್ಹವಾಗಿದೆ. ಇದರಿಂದಾಗಿ ಕರ್ನಾಟಕದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ವಲಯಗಳಿಗೆ ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ.

ಥೇಲ್ಸ್ ಕಂಪನಿಯ ಈ ಹೆಜ್ಜೆಯು ಸ್ಥಳೀಯವಾಗಿ ಲಭ್ಯವಿರುವ ಪ್ರತಿಭಾವಂತ ಎಂಜಿನಿಯರುಗಳಿಗೆ ಮಹತ್ವದ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಲಿದೆ. ಈ ಕೇಂದ್ರದ ಮೂಲಕ ಏವಿಯಾನಿಕ್ಸ್, ವಿಮಾನ ಸಂಚಾರ ನಿರ್ವಹಣೆ, ಸಂಪರ್ಕ ಸುಧಾರಣೆ ಮತ್ತು ವೈಮಾನಿಕ ನಿರ್ವಹಣೆ ಮುಂತಾದ ಚಟುವಟಿಕೆಗಳು ನಡೆಯಲಿವೆ. ಅಲ್ಲದೆ, ಈ ಉದ್ಯಮಗಳಿಗೆ ಬೇಕಾದ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಇದು ಸಜ್ಜುಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ಕೈಗಾರಿಕೆಗಳ ಒಟ್ಟು ವಹಿವಾಟಿನಲ್ಲಿ ರಾಜ್ಯದ ಪಾಲು ಶೇಕಡ 65ರಷ್ಟಿದೆ. ಈ ಕ್ಷೇತ್ರದಲ್ಲಿ ರಾಜ್ಯವು ಜಾಗತಿಕ ಸ್ತರದಲ್ಲಿ ತೃತೀಯ ಸ್ಥಾನದಲ್ಲಿದೆ. ಸರಕಾರದ ಉದ್ಯಮಸ್ನೇಹಿ ಕೈಗಾರಿಕಾ ನೀತಿಯ ಫಲವಾಗಿ ಟಾಟಾ ಸಮೂಹವು ನಮ್ಮಲ್ಲಿ ಎಚ್125 ದರ್ಜೆಯ ಹೆಲಿಕಾಪ್ಟರುಗಳ ಬಿಡಿಭಾಗಗಳ ಜೋಡಣೆ ಘಟಕವನ್ನು ಆರಂಭಿಸುತ್ತಿದೆ. ಇಂಡಿಗೋ ಕಂಪನಿಯ `ಎಂ.ಆರ್.ಒ ಸ್ಥಾವರ’ ಮತ್ತು ಸಾಫ್ರಾನ್ ಕಂಪನಿಯ ಏವಿಯಾನಿಕ್ಸ್ ಘಟಕಗಳು ಕೂಡ ರಾಜ್ಯದಲ್ಲಿ ಶುರುವಾಗುತ್ತಿವೆ. ಇವು ಉದ್ಯೋಗಸೃಷ್ಟಿಯ ಜತೆಗೆ ಸ್ಥಳೀಯ ಉದ್ಯಮಿಗಳು ಮತ್ತು ಸೇವಾದಾರರಿಗೂ ಉಜ್ವಲ ಅವಕಾಶಗಳನ್ನು ನಿರ್ಮಿಸುತ್ತಿವೆ ಎಂದು ಪಾಟೀಲ ಬಣ್ಣಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ವೈಮಾನಿಕ ಎಂಜಿನ್ ತಯಾರಿಸುವ ರೋಲ್ಸ್ ರಾಯ್ಸ್, ಅಡ್ವಾನ್ಸ್ಡ್ ಮೆಟೀರಿಯಲ್ಸ್ ತಯಾರಿಸುವ ನೋಪೋ ನ್ಯಾನೋಟೆಕ್ ತರಹದ ನವೋದ್ಯಮಗಳು, ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ ಅಭಿವೃದ್ಧಿಗೆ ಹೆಸರಾಗಿರುವ ಪಿಕ್ಸೆಲ್, ಮತ್ತು ಯುಎವಿ (ಅನ್-ಮ್ಯಾನ್ಡ್ ಏರಿಯಲ್ ವೆಹಿಕಲ್ಸ್) ತರಹದ ಸಾಧನಗಳನ್ನು ಅಭಿವೃದ್ಧಿಪಡಿಸುವ ನ್ಯೂಸ್ಪೇಸ್ ರೀಸರ್ಚ್ ತರಹದ ಕಂಪನಿಗಳೆಲ್ಲವೂ ರಾಜ್ಯದಲ್ಲಿ ನೆಲೆಯೂರಿವೆ. ಈ ಕಾರ್ಯಪರಿಸರವನ್ನು ಉದ್ಯಮಿಗಳು ಹೂಡಿಕೆ ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಫ್ರಾನ್ಸ್ ಕಾನ್ಸುಲ್ ಜನರಲ್ ಮಾರ್ಕ್ ಲಾಮಿ, ಥೇಲ್ಸ್ ಕಂಪನಿಯ ಉನ್ನತಾಧಿಕಾರಿ ಆಲಿವರ್ ಫ್ಲೌಸ್, ಪ್ರಿಯಾಂಕ್ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.