ಸೋಲಾರ್ ತಂತಿ, ಆನೆ ಕಂದಕ, ರೈಲ್ವೆ ಹಳಿ ಬೇಲಿ ಅಳವಡಿಕೆ ಎಫೆಕ್ಟ್; ಮೃತಪಟ್ಟ ಆದಿವಾಸಿಯ ಅಂತ್ಯಸಂಸ್ಕಾರಕ್ಕೆ ಪರದಾಟ
Mysore News: ಮೈಸೂರು ಜಿಲ್ಲೆ ಹೆಚ್ಡಿ ಕೋಟೆ ತಾಲೂಕಿನ ಹಿರೇಹಳ್ಳಿ ಆದಿವಾಸಿಗಳ ಪೈಕಿ ಒಬ್ಬರು ಮೃತಪಟ್ಟಾಗ ಆನೆ ಕಂದಕ, ಸೋಲಾರ್ ತಂತಿ ಬೇಲಿ, ರೈಲ್ವೆ ಹಳಿ ಬೇಲಿಯಿಂದಾಗಿ ಅಂತ್ಯಸಂಸ್ಕಾರಕ್ಕೆ ಇನ್ನಿಲ್ಲದ ಕಸರತ್ತು ನಡೆಸಲಾಗಿದೆ.
ಮೈಸೂರು: ಕಾಡುಪ್ರಾಣಿಗಳು ನಡೆಸುವ ದಾಳಿಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾದ ಆನೆ ಕಂದಕ, ಸೋಲಾರ್ ತಂತಿ ಬೇಲಿ, ರೈಲ್ವೆ ಹಳಿ ಬೇಲಿಯಿಂದಾಗಿ ಆದಿವಾಸಿಯ ಅಂತ್ಯಸಂಸ್ಕಾರಕ್ಕೆ ಇನ್ನಿಲ್ಲದ ಕಸರತ್ತು ನಡೆಸಲಾಗಿದೆ. ಹೂಳುವ ಜಾಗಕ್ಕೆ ಮೃತದೇಹ ಸಾಗಿಸಲು ಆದಿವಾಸಿಗಳು ಹರಸಾಹಸವನ್ನೇ ಮಾಡಿದ್ದಾರೆ. ಮೃತದೇಹವನ್ನು ಹೊತ್ತುಕೊಂಡು ಭಾರೀ ಆಳವಿರುವ ಕಂದಕದಲ್ಲಿ ಇಳಿದು ಸೋಲಾರ್ ತಂತಿ ಅಳವಡಿಸಿರುವ ರೈಲ್ವೆ ಹಳಿ ಬೇಲಿಯನ್ನು ದಾಟಿರುವ ದೃಶ್ಯ ಆದಿವಾಸಿಗಳು ಅನುಭವಿಸುತ್ತಿರುವ ಪಡಿಪಾಟಲುಗಳಿಗೆ ಸಾಕ್ಷಿಯಾಗಿದೆ.
ಮೈಸೂರು ಜಿಲ್ಲೆ ಹೆಚ್ಡಿ ಕೋಟೆ ತಾಲೂಕಿನ ಹಿರೇಹಳ್ಳಿ ಆದಿವಾಸಿಗಳ ದುಃಸ್ಥಿತಿ ಇದು. ಆದಿವಾಸಿಗಳ ಪೈಕಿ ಯಾರಾದರೂ ಮೃತಪಟ್ಟಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುವುದೇ ಒಂದು ರೀತಿಯ ಸವಾಲಾಗಿದೆ. ಆದಿವಾಸಿಗಳ ಸಂಪ್ರದಾಯದಂತೆ ಅರಣ್ಯ ಪ್ರದೇಶದಲ್ಲೇ ಶವಸಂಸ್ಕಾರ ಮಾಡುತ್ತಾರೆ. ಆನೆ ಕಂದಕ, ಸೋಲಾರ್ ಹಾಗೂ ರೈಲ್ವೆ ಹಳಿ ಬೇಲಿಯಿಂದ ಮೃತದೇಹವನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗದೇ ಹರಸಾಹಸ ಪಡುತ್ತಿದ್ದಾರೆ. ರೈಲ್ವೇ ಹಳಿ ಬೇಲಿಯ ನಡುವೆ ಆದಿವಾಸಿಗಳ ಅನುಕೂಲಕ್ಕಾಗಿ ಒಂದು ಗೇಟ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ಆದಿವಾಸಿಗಳು ಒತ್ತಾಯಿಸಿದ್ದಾರೆ.
ಹಾಗೊಂದು ವೇಳೆ ಗೇಟ್ ನಿರ್ಮಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಗುಡಿಸಲು ಮಧ್ಯಯೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಆದಿವಾಸಿಯೊಬ್ಬರು ಮೃತಪಟ್ಟಾಗ ನಡೆದಿರುವ ಘಟನೆ ಇದಾಗಿದೆ. ಮೈಸೂರು ಜಿಲ್ಲೆಯವರೇ ಆಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಆಗಲಿ ಇತ್ತ ಗಮನ ಹರಿಸಿ ಆದಿವಾಸಿಗಳ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡಬೇಕಿದೆ ಎಂದು ಕೇಳಿದ್ದಾರೆ. ಆದರೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.