Gadag Crime: ಗದಗದಲ್ಲಿ ಪಾಕ್ ಧ್ವಜ ಸೇರಿಸಿದ ರಾಮ ಮಂದಿರ ಫೋಟೋ ಶೇರ್ ಮಾಡಿದಾತನ ಬಂಧನ, ಉತ್ತರ ಪ್ರದೇಶದಲ್ಲೂ ಇಂಥದ್ದೇ ಕೃತ್ಯ
Gadag Crime: ಪಾಕ್ ಧ್ವಜ ಸೇರಿಸಿದ ರಾಮ ಮಂದಿರದ ವಿಕೃತ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ವ್ಯಕ್ತಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ದಿನವೇ ಈ ಕೃತ್ಯವೆಸಗಿದ್ದರ ಉದ್ದೇಶ, ವ್ಯಕ್ತಿಯ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಗದಗ: ಪಾಕಿಸ್ತಾನದ ಧ್ವಜದೊಂದಿಗೆ ಅಯೋಧ್ಯೆ ರಾಮ ಮಂದಿರದ ಎಡಿಟ್ ಮಾಡಿದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ತಾಜುದ್ದೀನ್ ದಫೇದಾರ್ ಎಂದು ಗುರುತಿಸಲಾಗಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ದಿನವೇ ಈತ ಈ ಎಡಿಟ್ ಮಾಡಿದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಈತ ಹಾಕಿದ್ದ ಫೋಟೋದಲ್ಲಿ ರಾಮ ಮಂದಿರದ ಮೇಲೆ ಪಾಕಿಸ್ತಾನದ ಧ್ವಜನಗಳಿದ್ದವು. ಕೆಳಭಾಗದಲ್ಲಿ ಬಾಬರಿ ಮಸೀದಿ ಎಂದು ಬರೆಯಲಾಗಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸ್ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ, ತಾಜುದ್ದೀನ್ ದಫೇದಾರ್ ಅನ್ನು ಪೊಲೀಸರು ಬಂಧಿಸಿದರು. ಅಲ್ಲದೆ, ಆ ಪೋಸ್ಟ್ ಡಿಲೀಟ್ ಮಾಡುವಂತೆ ತಾಜುದ್ದೀನ್ ದಫೇದಾರ್‌ಗೆ ತಾಕೀತು ಮಾಡಿದರು. ಹಾಗೆ, ಆತ ಆ ಪೋಸ್ಟ್ ಡಿಲೀಟ್ ಮಾಡಿದ್ದ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನವೇ ತಾಜುದ್ದೀನ್ ಈ ಕೃತ್ಯವೆಸಗಿದ್ದ. ಈ ಕೃತ್ಯವೆಸಗಿದ ವ್ಯಕ್ತಿಯ ಉದ್ದೇಶ, ಆತನ ಹಿನ್ನೆಲೆ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ. ವಿಚಾರಣೆ ವೇಳೆ ಆತ, ಆ ಪೋಸ್ಟ್ ಅನ್ನು ಆಕಸ್ಮಿಕವಾಗಿ ಹಂಚಿಕೊಂಡದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಬ್ ನೇಮಗೌಡ ತಿಳಿಸಿದ್ದಾಗಿ ವರದಿ ಹೇಳಿದೆ.
ಬರೇಲಿಯಲ್ಲೂ ಪಾಕ್ ಧ್ವಜದ ಫೋಟೋ ಶೇರ್ ಮಾಡಿದಾತನ ಬಂಧನ
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲೂ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ತನ್ನ ಫೇಸ್‌ಬುಕ್ ಪುಟದಲ್ಲಿ ಪಾಕಿಸ್ತಾನಿ ಧ್ವಜವನ್ನು ಶೇರ್ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತನನ್ನು ಬುದ್ದಾನ್ ಅಲಿ ಎಂದು ಗುರುತಿಸಲಾಗಿದೆ.
ಧೌರೇರಾ ಮಾಫಿ ನಿವಾಸಿ ಅಲಿ ವಿರುದ್ಧ ಸೋನು ಪಾಠಕ್ ಎಂಬಾತ ತನ್ನ ಫೇಸ್‌ಬುಕ್ ಪುಟದಲ್ಲಿ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿ ಪಾಕಿಸ್ತಾನಿ ಧ್ವಜವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ದೂರು ದಾಖಲಾಗಿದ್ದು, ಈ ಕುರಿತು ಎಫ್‌ಐಆರ್ ದಾಖಲಿಸಿರುವುದಾಗಿ ಇಝತ್‌ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುರೇಂದ್ರ ಕುಮಾರ್ಡಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.