Gadag News: ಗದಗ ಪೊಲೀಸರ ಭರ್ಜರಿ ದಾಳಿ, ಬಡ್ಡಿ ದಂದೆಯಲ್ಲಿ ತೊಡಗಿದ್ದ ಭಾರೀ ಕುಳ ಸೆರೆ, 5 ಕೋಟಿ ನಗದು, ಚಿನ್ನಾಭರಣ, ದಾಖಲೆ ವಶ
Gadag News: ಗದಗ ನಗರದಲ್ಲಿ ಬಡ್ಡಿ ವಹಿವಾಟು ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಎಂಬಾತನ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಪ್ರಮಾಣದ ಹಣ, ಆಭರಣ, ದಾಖಲೆಗಳನ್ನು ಗದಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗದಗ: ಗದಗ ನಗರದ ಬೆಟಗೇರಿಯಲ್ಲಿ ಹಲವು ವರ್ಷಗಳಿಂದ ಬಡ್ಡಿ ವಹಿವಾಟು ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಎಂಬ ವ್ಯಕ್ತಿಯನ್ನು ಗದಗ ಜಿಲ್ಲಾ ಪೊಲೀಸರು ವಶಕ್ಕೆ ಪಡದುಕೊಂಡು ಆತನ ಬಳಿ ಸಂಗ್ರಹಿಸಿಕೊಟ್ಟುಕೊಂಡಿದ್ದ ಸುಮಾರು ಐದು ಕೋಟಿ ರೂ. ನಗದು ಹಾಗು ಚಿನ್ನಾಭರಣಗಳು, ಕೋಟ್ಯಂತರ ರೂ. ಮೌಲ್ಯದ ಬಾಂಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ ಸಂಗ್ರಹ, ದಾಖಲೆ ವಿನಿಮಯಕ್ಕೆ ಆತ ಕಚೇರಿ ಸ್ಥಾಪಿಸಿಕೊಂಡು ಲಾಕರ್‌ಗಳಲ್ಲಿ ಹಣ, ದಾಖಲೆಗಳನ್ನು ಆತ ಬಚ್ಚಿಟ್ಟಿದ್ದು ವಿಚಾರಣೆ ವೇಳೆ ಬಯಲಾಗಿದ್ದು, ದೊಡ್ಡ ಟ್ರಂಕ್‌ನಲ್ಲಿ ಹಣ ಹಾಗೂ ಆಭರಣಗಳನ್ನು ತುಂಬಿಕೊಂಡು ಚೀಲಗಳಲ್ಲಿ ದಾಖಲೆ ಪತ್ರ ಕಟ್ಟಿಕೊಂಡು ಪೊಲೀಸರು ಹೋಗಿದ್ದಾರೆ. ಒಟ್ಟು13 ಕಡೆ ಸತತ ಎರಡು ದಿನಗಳ ಕಾಲ ದಾಖಲೆ ಪರಿಶೀಲನೆ ನಡೆದಿದೆ.
ಕರ್ನಾಟಕದಲ್ಲಿ ಕೆಲ ದಿನಗಳಿಂದ ಮೈಕ್ರೋಫೈನಾನ್ಸ್ ದಂದೆ ನಡೆಸುತ್ತಿರುವ ಕುರಿತು ದೂರುಗಳು ಎಲ್ಲೆಡೆ ಬರುತ್ತಿವೆ. ಗದಗದಲ್ಲೂ ಅಶೋಕ ಗಣಾಚಾರಿ ಎಂಬುವವರು ಯಲ್ಲಪ್ಪ ಮಿಸ್ಕಿನ್ ಎಂಬಾತ ಬಡ್ಡಿ ದಂದೆ ನಡೆಸುತ್ತಿರುವವ ಕುರಿತು ದೂರು ನೀಡಿದ್ದರು. ಇದನ್ನಾಧರಿಸಿ ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರು ತಂಡ ರಚಿಸಿ ದಾಳಿ ಮಾಡಿದ್ದರು. ದಾಳಿ ಮಾಡಿದಾಗ ಮನೆಯಲ್ಲಿ ಕಂತೆ ಕಂತೆ ಹಣ ಎಲ್ಲೆಂದರಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಅಪಾರ ಪ್ರಮಾಣದ ಚಿನ್ನ.. ಖಾಲಿ ಬಾಂಡ್, ಖಾಲಿ ಚೆಕ್ ಕೂಡ ಸಿಕ್ಕಿವೆ. ಒಂದೊಂದು ಲಾಕರ್ ಗಳು ಓಪನ್ ಮಾಡಿದ್ರೆ 500ಮುಖಬೆಲೆಯ ಕೋಟಿ ಕೋಟಿ ಹಣದ ಕಂತೆಗಳು ಪತ್ತೆಯಾಗಿವೆ. ಎರಡು ದಿನಗಳ ದಾಳಿಯಲ್ಲಿ ಬರೊಬ್ಬರಿ 4 ಕೋಟಿ 90ಲಕ್ಷ 98 ಸಾವಿರ ಹಣ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಕರ್ ಓಪನ್ ಮಾಡಲು ಯಲ್ಲಪ್ಪ ಮಿಸ್ಕಿನ್ ಪೊಲೀಸ್ ಅಧಿಕಾರಿಗಳನ್ನು ಸಾಕಷ್ಟು ಸತಾಯಿಸಿದ್ದು, ನನಗೆ ಬಿಪಿ ಲೋ ಆಗ್ತಾಯಿದೆ. ಅರೋಗ್ಯ ಸರಿಯಿಲ್ಲ ಬೆದರಿಸಿದ್ದಾನೆ. ಪೊಲೀಸ್ರು ತಕ್ಷಣ ಆಸ್ಪತ್ರೆಗೆ ಕರೆದ್ಯೊಯ್ದು ಆರೋಗ್ಯ ತಪಾಸಣೆ ಮಾಡಿದ್ದಾರೆ. ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದಾಗ ತಕ್ಷಣ ಯಲ್ಲಪ್ಪ ಕಚೇರಿ ಪಕ್ಕದ ಹಳೆಕಲ್ಲಿನ ಮನೆಯ ಬಾಗಿಲು ತೆಗೆದಿದ್ದಾರೆ. ಲಾಕರ್ ಓಪನ್ ಮಾಡದಿದ್ರೆ ಒಡೆದು ತೆಗೆಯುವುದಾಗಿ ತಾಕೀತು ಮಾಡಿದ್ದಾರೆ.
ಆಗ 500 ರೂ. ಮುಖಬೆಲೆಯ ಕಂತೆ ಕಂತೆ ಕೋಟ್ಯಂತರ ಹಣ ಪತ್ತೆಯಾಗಿದೆ. ಹಣ ಎಣಿಸಿ ಎಣಿಸಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಆತನ ಬಳಿ ಅಂದಾರು 5 ಕೋಟಿ ನಗದು, ಬಾಂಡ್ 650, ಬ್ಯಾಂಕ್ ಎಟಿಎಂ 4, ಬ್ಯಾಂಕ್ ಪಾಸ್ ಬುಕ್ 9, ಎಲ್ಐಸಿ ಬಾಂಡ್ 2 ಹಾಗೂ ಅಕ್ರಮವಾಗಿ ಸಂಗ್ರಹ ಮಾಡಿದ 62 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ನೇಮಗೌಡ ತಿಳಿಸಿದ್ದಾರೆ.
ಸತತ ಎರಡು ದಿನ ದಾಳಿ ನಡೆಸಿ ಯಲ್ಲಪ್ಪ ಜತೆಗೆ ವಹಿವಾಟಿಗೆ ಸಾಥ್ ನೀಡಿದ್ದ ವಿಕಾಸ್ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ ಬೂದಿಹಾಳ, ಮೋಹನ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿವೆ. ಅವರು ಎಷ್ಟು ವರ್ಷದಿಂದ ಬಡ್ಡಿ ವಹಿವಾಟು ನಡೆಸುತ್ತಿದ್ದರು. ಎಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೆ. ಎಲ್ಲೆಲ್ಲಿ ಹಣ ಇಟ್ಟಿದ್ದಾರೆ ಎನ್ನುವ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಈತನಿಂದ ಕಿರುಕುಳಕ್ಕೆ ಒಳಗಾದವರ ಮಾಹಿತಿ ಪಡೆದು ಇನ್ನಷ್ಟು ಪ್ರಕರಣಗಳನ್ನು ದಾಖಲಿಸಲು ಸಿದ್ದತೆ ನಡೆಸಿದ್ದಾರೆ. ಅದರಲ್ಲೂ ಅಶೋಕ ಗಣಾಚಾರಿ ಎಂಬುವವರಿಗೆ ಸಾಲ ನೀಡಿ ಹಣ ವಸೂಲಿ ಮಾಡಿದ್ದೂ ಅಲ್ಲದೇ ಕಲ್ಯಾಣ ಮಂಟಪ ಬರೆಸಿಕೊಂಡ ಕುರಿತು ವಿಚಾರಣೆ ನಡೆಸಿದ್ದಾರೆ. ಇಡೀ ಪ್ರಕರಣದ ತನಿಖೆ ಮುಂದುವರಿದಿದೆ ಎನ್ನುವುದು ಗದಗ ಎಸ್ಪಿ ಹೇಳಿಕೆ.
