ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿ 4 ಜನರ ಬರ್ಬರ ಹತ್ಯೆ; ನಿಶ್ಚಿತಾರ್ಥದ ಮಾರನೇ ದಿನ ನಡೆದ ಭೀಕರ ಕೊಲೆ
ಕನ್ನಡ ಸುದ್ದಿ  /  ಕರ್ನಾಟಕ  /  ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿ 4 ಜನರ ಬರ್ಬರ ಹತ್ಯೆ; ನಿಶ್ಚಿತಾರ್ಥದ ಮಾರನೇ ದಿನ ನಡೆದ ಭೀಕರ ಕೊಲೆ

ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿ 4 ಜನರ ಬರ್ಬರ ಹತ್ಯೆ; ನಿಶ್ಚಿತಾರ್ಥದ ಮಾರನೇ ದಿನ ನಡೆದ ಭೀಕರ ಕೊಲೆ

ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಳಕೆ ಪುತ್ರ ಕಾರ್ತಿಕ್ ಬಾಕಳೆ ಸೇರಿ 4 ಜನರ ಬರ್ಬರ ಹತ್ಯೆ ನಡೆದಿದೆ. ಕಾರ್ತಿಕ್‌ನ ವಿವಾಹ ನಿಶ್ಚಿತಾರ್ಥದ ಮಾರನೇ ದಿನವೇ ಈ ಕೊಲೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಗದಗದಲ್ಲಿ ಕೊಲೆಗೀಡಾದ ಕಾರ್ತಿಕ್ ಬಾಕಳೆ, ಕೊಪ್ಪಳದ ಪರಶುರಾಮ ಹಾದಿಮನಿ, ಆಕಾಂಕ್ಷಾ, ಲಕ್ಷ್ಮಿ.
ಗದಗದಲ್ಲಿ ಕೊಲೆಗೀಡಾದ ಕಾರ್ತಿಕ್ ಬಾಕಳೆ, ಕೊಪ್ಪಳದ ಪರಶುರಾಮ ಹಾದಿಮನಿ, ಆಕಾಂಕ್ಷಾ, ಲಕ್ಷ್ಮಿ. (special arrangement)

ಬೆಂಗಳೂರು: ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿ ನಾಲ್ವರನ್ನು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದ್ದಾರೆ. ಗದಗ ನಗರದ ಚನ್ನಮ್ಮ ವೃತ್ತದ ಬಳಿ ಇರುವ ದಾಸರ ಓಣಿಯಲ್ಲಿ ಗುರುವಾರ ಮಧ್ಯರಾತ್ರಿ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಮೃತರನ್ನು ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ ಬಾಕಳೆ (27), ಕೊಪ್ಪಳದ ಪರುಶುರಾಮ ಹಾದಿಮನಿ (55), ಲಕ್ಷ್ಮಿ ಹಾದಿಮನಿ(45) ಮತ್ತು ಆಕಾಂಕ್ಷ (17) ಎಂದು ಗುರುತಿಸಲಾಗಿದೆ. ಸುನಂದಾ ಬಾಕಳೆಯಾವರ ಪತಿ ಪ್ರಕಾಶ ಬಾಕಳೆ ಕೂಡ ನಗರಸಭೆಯ ಈ ಹಿಂದೆ ಉಪಾಧ್ಯಕ್ಷರಾಗಿದ್ದವರು.

ಕಾರ್ತಿಕ್ ಬಾಕಳೆಯ ವಿವಾಹ ನಿಶ್ಚಿತಾರ್ಥಕ್ಕೆ ಎಂದು ಕೊಪ್ಪಳದ ಈ ಕುಟುಂಬ ಪ್ರಕಾಶ್ ಅವರ ಮನೆಗೆ ಆಗಮಿಸಿತ್ತು. ನಿನ್ನೆ (ಏಪ್ರಲ್ 18) ಮನೆಯ ಮೊದಲ ಮಹಡಿಯಲ್ಲಿ ಇವರೆಲ್ಲ ಮಲಗಿದ್ದರು. ಆಗ ಈ ದಾಳಿ ನಡೆದಿದೆ. ಏಪ್ರಿಲ್ 17ರಂದು ಕಾರ್ತಿಕ್‌ ಬಾಕಳೆಯ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಕೊಲೆ ಮಾಡಿದ ದುಷ್ಕರ್ಮಿಗಳು ಯಾರು ಎಂಬುದು ಪತ್ತೆಯಾಗಿಲ್ಲ.

ಮಾಧ್ಯಮಗಳಿಗೆ ಪೊಲೀಸರು ನೀಡಿದ ಮಾಹಿತಿ ಇಷ್ಟು

ನಿನ್ನೆ (ಏಪ್ರಿಲ್ 18) ತಡರಾತ್ರಿ ಪ್ರಕಾಶ ಬಾಕಳೆ ಅವರ ಮನೆಯಲ್ಲಿ ನಾಲ್ಕು ಹತ್ಯೆ ನಡೆದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ್ದೇವೆ. ಸ್ಥಳಪರಿಶೀಲನೆ ಮಾಡಿದ್ದೇವೆ. ಕಾರ್ತಿಕ್ ಬಾಕಳೆ, ಪರಶುರಾಮ ಹಾದಿಮನಿ, ಅವರ ಪತ್ನಿ ಲಕ್ಷ್ಮಿ ಹಾದಿಮನಿ, ಪುತ್ರಿ ಆಕಾಂಕ್ಷಾ ಹಾದಿಮನಿ ಮೃತರು. ಕೇಸ್ ದಾಖಲಿಸಲಾಗಿದ್ದು, ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಮಾತನಾಡಿದ್ದು, "ಕೊಲೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಬೆಳಗಿನ ಜಾವ 2 ರಿಂದ 3 ಗಂಟೆ ಸಮಯದಲ್ಲಿ ಈ ದಾಳಿ ನಡೆದಿರಬಹುದು ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಿಸಿಟಿವಿ ದೃಶ್ಯ ಸೇರಿ ಸಾಕ್ಷ್ಯ ಸಂಗ್ರಹ ನಡೆದಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ಧಾರೆ.

ಬಾಗಿಲು ಬಡಿದರು, ತೆರೆಯದೇ 100ಕ್ಕೆ ಕರೆ ಮಾಡಿದೆ

ಮನೆಗೆ ದುಷ್ಕರ್ಮಿಗಳು ಹೇಗೆ ಬಂದರು, ಅವರು ಯಾರು, ಹೇಗಿದ್ದರು ಎಂಬುದು ಗೊತ್ತಿಲ್ಲ. ಬೆಳಗ್ಗಿನ ಜಾವ 3 ಗಂಟೆಗೆ ಬಾಗಿಲು ಬಡಿದ ಸದ್ದಾಯಿತು. ಎದ್ದು ಕುಳಿತು ಯಾರು ಎಂದು ಕೂಗಿ ಕೇಳಿದೆ. ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಕಳ್ಳರು ಬಂದಿರಬಹುದು ಎಂದು 100ಕ್ಕೆ ಕರೆ ಮಾಡಿದೆ. ಅಕ್ಕ ಪಕ್ಕದ ಮನೆಯವರಿಗೂ ಕರೆ ಮಾಡಿದೆ ಎಂದು ಪ್ರಕಾಶ್ ಬಾಕಳೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅಕ್ಕಪಕ್ಕದವರು ಬಂದಾಗ ಅಲ್ಲಿ ಯಾರೂ ಕಾಣಲಿಲ್ಲ. ಕೊನೆಗೆ ಅನುಮಾನಗೊಂಡು ಮೊದಲ ಮಹಡಿಯಲ್ಲಿದ್ದ ಪುತ್ರನಿಗೆ ಫೋನ್ ಮಾಡಿದೆ. ಅಳಿಯ ಪರಶುರಾಮ್‌ಗೂ ಕರೆ ಮಾಡಿದೆ. ಲಕ್ಷ್ಮಿಯೂ ಫೋನ್ ಸ್ವೀಕರಿಸಿಲ್ಲ. ಅನುಮಾನ, ಭಯ ಹೆಚ್ಚಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದೆ. ಪೊಲೀಸರು ಬಂದ ಬಳಿಕ ಮೊದಲ ಮಹಡಿಗೆ ಹೋಗಿ ನೋಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪ್ರಕಾಶ್ ಬಾಕಳೆ ಹೇಳಿದ್ದಾಗಿ ಈಟಿವಿ ವರದಿ ಮಾಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner