ಕನ್ನಡ ಸುದ್ದಿ  /  Karnataka  /  Gadaikallu (Narasimha Gudde): Jyotiraj Has Created A New Record By Climbing Gadaikallu

Gadaikallu (Narasimha Gudde): ಗಡಾಯಿಕಲ್ಲು ಏರಿ ಹೊಸ ದಾಖಲೆ ಸೃಷ್ಟಿಸಿದ ಜ್ಯೋತಿರಾಜ್‌

Gadaikallu (Narasimha Gudde): ಐತಿಹಾಸಿಕ ಕೋಟೆ ಗಡಾಯಿಕಲ್ಲು(ನರಸಿಂಹ ಗುಡ್ಡೆ) ಅನ್ನು ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್‌ ಅಲಿಯಾಸ್‌ ಕೋತಿರಾಜ್‌ ಸೋಮವಾರ ಏರಿ ಹೊಸ ದಾಖಲೆ ಬರೆದಿದ್ದಾರೆ. ಯಾವುದೇ ಸುರಕ್ಷಾ ಪರಿಕರಗಳು ಇಲ್ಲದೇ ಕೋಟೆ, ಬೆಟ್ಟವೇರುವುದು ಜ್ಯೋತಿರಾಜ್‌ ಚಾರಣದ ವಿಶೇಷತೆ.

ಗಡಾಯಿಕಲ್ಲು ಏರಿ ಹೊಸ ದಾಖಲೆ ಸೃಷ್ಟಿಸಿದ ಜ್ಯೋತಿರಾಜ್‌ (ಬಾವುಟ ಹಿಡಿದು ನಿಂತವರು)
ಗಡಾಯಿಕಲ್ಲು ಏರಿ ಹೊಸ ದಾಖಲೆ ಸೃಷ್ಟಿಸಿದ ಜ್ಯೋತಿರಾಜ್‌ (ಬಾವುಟ ಹಿಡಿದು ನಿಂತವರು)

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲುಕಿನ ನಡ ಗ್ರಾಮದ ಐತಿಹಾಸಿಕ ಕೋಟೆ ಗಡಾಯಿಕಲ್ಲು(ನರಸಿಂಹ ಗುಡ್ಡೆ) ಅನ್ನು ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್‌ ಅಲಿಯಾಸ್‌ ಕೋತಿರಾಜ್‌ ಸೋಮವಾರ ಏರಿ ಹೊಸ ದಾಖಲೆ ಬರೆದಿದ್ದಾರೆ. ಯಾವುದೇ ಸುರಕ್ಷಾ ಪರಿಕರಗಳು ಇಲ್ಲದೇ ಕೋಟೆ, ಬೆಟ್ಟವೇರುವುದು ಜ್ಯೋತಿರಾಜ್‌ ಚಾರಣದ ವಿಶೇಷತೆ.

ಜ್ಯೋತಿರಾಜ್‌ ತಮ್ಮ ತಂಡದೊಂದಿಗೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದರು. ಅಲ್ಲಿ ಅರ್ಚಕ ಗಣೇಶ್ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಹೊರಟ ಜ್ಯೋತಿರಾಜ್ ಎರಡು ಕಿಮೀ ದೂರವನ್ನು ಕಾಡುದಾರಿ ಮೂಲಕ ಕ್ರಮಿಸಿದರು. ಬೆಳಗ್ಗೆ 9.50ರ ಸುಮಾರಿಗೆ ಬರಿಗೈ ಮೂಲಕ ಗಡಾಯಿಕಲ್ಲನ್ನು ಏರತೊಡಗಿದರು.

ಸಮುದ್ರ ಮಟ್ಟಕ್ಕಿಂತ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ತುತ್ತ ತುದಿಯನ್ನು 11.50ಕ್ಕೆ ತಲುಪಿ ಹೊಸ ದಾಖಲೆ ಬರೆದರು. ಅಲ್ಲಿ ತಮ್ಮ ತಂಡದೊಂದಿಗೆ ಕನ್ನಡ ಧ್ವಜ ಹಾರಿಸಿ ತಮ್ಮ ಬಹುದಿನದ ಆಸೆ ಪೂರೈಸಿಕೊಂಡರು.

ಸಾಹಸಕ್ಕೆ ಅಗತ್ಯ ಪೂರ್ವತಯಾರಿ ಮಾಡಿದ್ದರು ಜ್ಯೋತಿರಾಜ್‌

ಗಡಾಯಿಕಲ್ಲು ಏರುವ ಸಾಹಸಕ್ಕೆ ಮುನ್ನ ಜ್ಯೋತಿರಾಜ್ ತಂಡ ಅಗತ್ಯ ಪೂರ್ವಭಾವಿ ತಯಾರಿಗಳನ್ನು ಮಾಡಿತ್ತು. ಅರಣ್ಯ ಇಲಾಖೆ ಸೂಚನೆಯಂತೆ ಸೊಂಟಕ್ಕೆ ಬೆಲ್ಟ್‌ ಕಟ್ಟಿಕೊಂಡು ಹಾಗೂ ಪಕ್ಕದಲ್ಲಿದ್ದ ರೋಪ್‍ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಮೇಲೆರುವುದಕ್ಕೆ ಅಗತ್ಯ ಸುರಕ್ಷತೆ ಕೈಗೊಂಡಿತ್ತು.

ಈ ಗಡಾಯಿ ಕಲ್ಲಿನ ಮೇಲ್ಬಾಗಕ್ಕೆ ಹೋಗಲು ಬಂಡೆಗಲ್ಲನ್ನು ಕೆತ್ತಿ ನಿರ್ಮಿಸಿದ 1876 ಮೆಟ್ಟಿಲುಗಳಿವೆ. ಚಾರಣಿಗರು ಅಥವಾ ಪ್ರವಾಸ ಪ್ರಿಯರು ಈ ಮೆಟ್ಟಿಲ ಮೇಲೆ ನಡೆಯುತ್ತ ಉಸ್ಸಪ್ಪ ಅನ್ನು ಮೇಲೆ ಸಾಗುತ್ತಾರೆ. ಆದರೆ, ಜ್ಯೋತಿರಾಜ್‌ ಈ ಮೆಟ್ಟಿಲುಗಳ ನೆರವಿಲ್ಲದೆ ಇನ್ನೊಂದು ಪಾರ್ಶ್ವದಿಂದ ಗಡಾಯಿಕಲ್ಲು ಏರಿದ್ದಾರೆ.

ಗಡಾಯಿ ಕಲ್ಲು ಹತ್ತಲು ಎರಡು ತಾಸು ಪಡೆದುಕೊಂಡ ಜ್ಯೋತಿರಾಜ್ ಈ ಮಧ್ಯೆ 20 ನಿಮಿಷಗಳ ವಿಶ್ರಾಂತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಗಡಾಯಿಕಲ್ಲು ಹತ್ತಿದ ಬಳಿಕ ಅರ್ಧ ತಾಸು ವಿಶ್ರಾಂತಿ ಪಡೆದು ಮಾಮೂಲು ಮೆಟ್ಟಿಲಿನ ಮೂಲಕ ತಂಡದವರೊಂದಿಗೆ ಕೆಳಗಿಳಿದರು.

ಜ್ಯೋತಿರಾಜ್‌ ತಂಡದಲ್ಲಿ ಬಸವರಾಜ, ರಾಜಶೇಖರ್, ಪವನ್ ಜೋಸ್, ನಿಂಗರಾಜು, ಮದನ್, ನವೀನ್, ಅಭಿ, ಪವನ್ ಕುಮಾರ್ ಇದ್ದರು. ಇವರ ಜತೆಗೆ ಲಾಯಿಲ ಗ್ರಾಪಂ ಸದಸ್ಯರಾದ ಪ್ರಸಾದ್ ಶೆಟ್ಟಿ ಏಣಿಂಜೆ, ಪ್ರತೀಕ್ ಕೋಟ್ಯಾನ್, ನಿತಿನ್ ಕುಮಾರ್, ಶೌರ್ಯ ಜತೆಗೂಡಿದ್ದರು. ವಿಪತ್ತು ತಂಡದ ಸದಸ್ಯರು ಅಗತ್ಯ ಸಹಕಾರ ನೀಡಿದರು. ವನ್ಯಜೀವಿ ವಿಭಾಗದ ಡಿಆರ್‍ಎಫ್‍ಒ ಕಿರಣ್ ಪಾಟೀಲ್ ಹಾಗೂ ಸಿಬ್ಬಂದಿ ಸಾಹಸಕ್ಕೆ ಉಪಸ್ಥಿತರಿದ್ದು ನೆರವು ನೀಡಿದರು.

ಗಡಾಯಿಕಲ್ಲು ಅರ್ಥಾತ್‌ ನರಸಿಂಗಗಢ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ತಾಲೂಕಿನಲ್ಲಿದೆ ಈ ಗಡಾಯಿ ಕಲ್ಲು. ಇದು ಚಾರಣಿಗರಿಗೆ ಅಚ್ಚುಮೆಚ್ಚಿನ ಪ್ರದೇಶ. ಜಮಾಲಬಾದ್‌, ನರಸಿಂಹಗಢ ಎಂಬ ಹೆಸರುಗಳಿಂದಲೂ ಇದು ಕರೆಯಲ್ಪಡುತ್ತಿದೆ. ಉಜಿರೆ, ಧರ್ಮಸ್ಥಳಕ್ಕೆ ಸಮೀಪವೇ ಇದೆ. ಕುದುರೆಮುಖ ಪರ್ವತ ಶ್ರೇಣಿಯ ಒಂದು ಭಾಗದಲ್ಲಿದೆ. ಟಿಪ್ಪು ಸುಲ್ತಾನ್‌ ತನ್ನ ತಾಯಿಯ ಸ್ಮರಣಾರ್ಥ ಈ ಕೋಟೆಯನ್ನು ಕಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಮಂಗಳೂರು, ಉಪ್ಪಿನಂಗಡಿ, ಮೂಡಬಿದಿರೆಯಿಂದ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ಈ ಗಡಾಯಿ ಕಲ್ಲು ಕಾಣಸಿಗುತ್ತದೆ. ಗಡಾಯಿಕಲ್ಲಿಗೆ ಹೋಗಬೇಕಾದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಪ್ರವೇಶ ಶುಲ್ಕ 20 ರೂಪಾಯಿ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಚಾರಣಕ್ಕೆ ಅವಕಾಶ.

IPL_Entry_Point