ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಜಿಐ ಟ್ಯಾಗ್‌ನ ಗರಿಮೆ, ಕೈಮಗ್ಗದ ಪರಿಶುದ್ಧ ಕಾಟನ್ ಸೀರೆಗೆ 4 ಶತಮಾನಗಳ ಇತಿಹಾಸ
Gajendragad Pattedanchu Saree: ಕೈಮಗ್ಗ ಪರಂಪರೆಯ ಸಂಕೇತವಾಗಿರುವ ಉತ್ತರ ಕರ್ನಾಟಕದ ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಜಿಐ ಟ್ಯಾಗ್ ಅರ್ಥಾತ್ ಭೌಗೋಳಿಕ ಗುರುತು ಸಿಕ್ಕಿದೆ. ಕೈಮಗ್ಗದ ಪರಿಶುದ್ಧ ಕಾಟನ್ ಸೀರೆಗೆ 4 ಶತಮಾನಗಳ ಇತಿಹಾಸವಿದೆ.

Gajendragad Pattedanchu Saree: ಗದಗ ಜಿಲ್ಲೆ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘಕ್ಕೆ ಕೈಮಗ್ಗದಲ್ಲಿ ಪರಿಶುದ್ಧ ಕಾಟನ್ ಪಟ್ಟೆದಂಚು ಸೀರೆ ಉತ್ಪಾದನೆಗೆ ಸಂಬಂಧಿಸಿದ ಜಿಐ ಟ್ಯಾಗ್ ಸಿಕ್ಕಿದೆ. ಜವಳಿ ಇಲಾಖೆಯ ಸಹಕಾರದೊಂದಿಗೆ 2019ರಲ್ಲಿ ಜಿಐ ಟ್ಯಾಗ್‌ಗೆ ಸಂಘ ಅರ್ಜಿ ಸಲ್ಲಿಸಿತ್ತು. ಖಾಸಗಿಯವರ ಆಕ್ಷೇಪಣೆಯ ನಡುವೆ 1944ರಷ್ಟು ಹಳೆಯ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘಕ್ಕೆ ಕೈಮಗ್ಗದಲ್ಲಿ ಪರಿಶುದ್ಧ ಕಾಟನ್ ಪಟ್ಟೆದಂಚು ಸೀರೆ ಉತ್ಪಾದನೆ ಭೌಗೋಳಿಕ ಗುರುತು ಸಿಕ್ಕಿದೆ.
ಗಜೇಂದ್ರಗಡ ಪಟ್ಟೆದಂಚು ಸೀರೆಗೆ ಜಿಐ ಟ್ಯಾಗ್‌ನ ಗರಿಮೆ
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘವು ರಾಮಯ್ಯ ಕಾಲೇಜ್ ಆಫ್ ಲಾ ಸೆಂಟರ್ ಫಾರ್ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಸಹಯೋಗದಲ್ಲಿ ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಏಜೆನ್ಸಿಯಾಗಿರುವ ದಿ ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್‌ನಲ್ಲಿ ಕೈಮಗ್ಗದ ಪಟ್ಟೆದಂಚು ಸೀರೆಯ ಜಿಐ ಟ್ಯಾಗ್ ನೋಂದಣಿ ಮಾಡಿಸಿಕೊಂಡಿದೆ.
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘ 1944ರಲ್ಲಿ ಸ್ಥಾಪನೆಯಾಗಿದೆ. ಸಂಘದಲ್ಲಿ 130ರಷ್ಟು ನೇಕಾರರು ಇದ್ದು, 50ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಕೈಮಗ್ಗದಲ್ಲಿ ಪರಿಶುದ್ಧ ಕಾಟನ್ ಪಟ್ಟೆದಂಚು ಸೀರೆ ಉತ್ಪಾದನೆಗೆ ಸಂಬಂಧಿಸಿದ ಜಿಐ ಟ್ಯಾಗ್ ಸಿಕ್ಕಿದೆ. ಇದು ಸೀರೆಯ ಅಧಿಕೃತ ಗುರುತನ್ನು ದೃಢೀಕರಿಸಿದೆ ಎಂದು ಸಂಘದ ಅಧ್ಯಕ್ಷ ಅಶೋಕ .ಹನಮಂತಪ್ಪ ವನ್ನಾಲ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
ಖಾಸಗಿ ವ್ಯಕ್ತಿಯೊಬ್ಬರು ಪಟ್ಟೆದಂಚು ಸೀರೆಗೆ ಜಿಐ ಟ್ಯಾಗ್ ಪಡೆಯುವುದಕ್ಕೆ ಪ್ರಯತ್ನಿಸಿದ್ದರು. ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘವು 2019ರಲ್ಲೇ ಪಟ್ಟೆದಂಚು ಸೀರೆಗೆ ಜಿಐ ಟ್ಯಾಗ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದ್ದರೂ, ಅದು ಸಿಗುವಾಗ ವಿಳಂಬವಾಯಿತು. ಈ ಹೆಗ್ಗುರುತಿಗಾಗಿ ಸ್ವಲ್ಪ ಹೋರಾಟವೇ ಆಯಿತು ಎಂದು ಸಂಘದ ಕಾರ್ಯದರ್ಶಿ ಮಾರುತಿ ಕಳಕಪ್ಪ ಶಾಬಾದಿ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದರು.
ಗಜೇಂದ್ರಗಡ ಪಟ್ಟೆದಂಚು ಸೀರೆಗೆ 4 ಶತಮಾನದ ಇತಿಹಾಸ
ಗಜೇಂದ್ರಗಡ ಪಟ್ಟೆದಂಚು ಸೀರೆಗೆ 4 ಶತಮಾನ ಅಥವಾ 400 ವರ್ಷಗಳ ಇತಿಹಾಸವಿದೆ. ಸುಮಾರು 400ವರ್ಷಗಳ ಹಿಂದೆಯೇ ಗಜೇಂದ್ರಗಡದಲ್ಲಿ ಪರಿಶುದ್ಧವಾದ ಹತ್ತಿಯ ನೂಲಿನಿಂದ ತಯಾರಿಸಿದ ಸೀರೆಗಳನ್ನು ಕುಣಿ ಮಗ್ಗದಲ್ಲಿ (Fit loom) ಉತ್ಪಾದಿಸಲಾಗುತ್ತಿತ್ತು. ಗಜೇಂದ್ರಗಡ ಸುತ್ತಮುತ್ತಲಿನ ಜನ ಇದೇ ಕೈಮಗ್ಗದ ಸೀರೆಗಳನ್ನೇ ಧರಿಸುತ್ತಿದ್ದರು. ಹಳೆಯ ಕಾಲದ ಪಟ್ಟೆದಂಚು ಸೀರೆಗಳ ಬಾಡಿಬಣ್ಣ ಕೆಂಪು, ಕರಿ ಬಣ್ಣದಲ್ಲಿ ಇದ್ದು ರಾಗಾವಳಿ (Big checks) ಸಾಸವಿಕಡ್ಡಿ, ಪಪ್ಪಳಿ, ಬಾಡಿ ಆಕಾರವನ್ನು ಹೊಂದಿರುತ್ತಿದ್ದವು ಮತ್ತು ಬಾರ್ಡರ್ ಹಳದಿ ಬಣ್ಣವನ್ನು ಹೊಂದಿದ್ದು ಬಾರ್ಡರನಲ್ಲಿ ಕೆಂಪು ಪಟ್ಟಿಯನ್ನು ಹೊಂದಿರುತ್ತಿದ್ದವು. ಇದಕ್ಕೆ 'ರುದ್ರಾಕ್ಷಿ ಗಂಟೆ' ಎನ್ನುತ್ತಾರೆ. ಇನ್ನು, ಗಜೇಂದ್ರಗಡ ಪಟ್ಟೆದಂಚು ಸೀರೆಗಳಿಗೆ “ಪಟ್ಟೆದಂಚು” ಎನ್ನುವ ಹೆಸರು ಹೇಗೆ ಬಂತೆಂದರೆ ಪಟ್ಟಿಯ ಅಂಚನ್ನು ಹೊಂದಿರುವ ಸೀರೆ ಎಂಬ ಕಾರಣಕ್ಕೇ “ಪಟ್ಟೇದಂಚು ಸೀರೆ” ಎಂಬ ಹೆಸರು ಬಂತು..
ಸುಮಾರು 70-80 ವರ್ಷದ ಹಿಂದೆ ಪಟ್ಟೆದಂಚು ಸೀರೆಗಳನ್ನು ನೇಯುವ ನೂಲಿಗೆ ನೈಸರ್ಗಿಕ ಬಣ್ಣ ಅಂದರೆ ವನಸ್ಪತಿ, ಜನ್ಯಬಣ್ಣಗಳನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ ನೀಲಿ ಬಣ್ಣದ ಸಲುವಾಗಿ ಇಂಡಿಗೋ ವನಸ್ಪತಿಯನ್ನು ಕೆಂಪು ಬಣ್ಣದ ಸಲುವಾಗಿ ಎಕ್ಕಿಗಿಡದ ರಸ, ಅರಗು, ಕುಸುಬಿ, ಗಂಧಕ, ನಾಸೀಪುಡಿ, ಸಲುವಾಗಿ ಕಾಚುಪುಡಿ, ಹಳದಿ ಬಣ್ಣದ ಸಲುವಾಗಿ ಅರಿಷಿಣ ಮತ್ತು ಕೇಸರ್ ಇಂಥ ಬೇರೆ ಬೇರೆ ಬಣ್ಣಗಳ ಉಗಮಸ್ಥಾನವಾದ ಭಾರತದಿಂದ ಈ ಬಣ್ಣಗಳು ಪರದೇಶಗಳಿಗೆ ಹೆಚ್ಚಾಗಿ ರಫ್ತು ಆಗುತ್ತಿದ್ದವು.
ಪ್ರಸ್ತುತ 38 ನಮೂನೆಯ ಪಟ್ಟೆದಂಚು ಸೀರೆಗಳನ್ನು ಉತ್ಪಾದಿಸಲಾಗುತ್ತಿದೆ. ಭಾರತದ ನಾನಾ ಭಾಗಗಳಿಂದ ಈ ಸೀರೆಗಳಿಗೆ ಬೇಡಿಕೆ ಬರುತ್ತಿದೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೂಲಕವೂ ಬೇಡಿಕೆ ಬರುತ್ತಿದ್ದು, ರಿಜಿಸ್ಟರ್ಡ್ ಪೋಸ್ಟ್ ಮೂಲಕ ಸೀರೆಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದೇವೆ ಎಂದು ಸಂಘದ ಕಾರ್ಯದರ್ಶಿ ಮಾರುತಿ ಕಳಕಪ್ಪ ಶಾಬಾದಿ ತಿಳಿಸಿದರು.
