ಇನ್ಸೂರೆನ್ಸ್ ಹಣಕ್ಕಾಗಿ ತನ್ನನ್ನೇ ಹೋಲುವ ಅಮಾಯಕನನ್ನು ಕೊಂದು ನಂಬಿಸಿದ್ದ ಪಾಪಿ; ಪತಿಗೆ ಸಾಥ್ ಕೊಟ್ಟ ಪತ್ನಿಗೂ ಜೈಲೂಟ!
Hassan Crime News: ಇನ್ಸೂರೆನ್ಸ್ನ ಹಣಕ್ಕಾಗಿ ತನ್ನನ್ನೇ ಹೋಲುವ ಅಮಾಯಕ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಹಾಸನದ ಅರಸೀಕೆರೆ ತಾಲೂಕಿ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ಸೂರೆನ್ಸ್ನಿಂದ ಬರುವ ಕೋಟಿಗಟ್ಟಲೆ ದುಡ್ಡಿಗಾಗಿ ತಾನೇ ಸತ್ತಂತೆ ನಂಬಿಸಲು ಬೇರೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಹಾಸನದ ಅರಸೀಕೆರೆ ತಾಲೂಕಿನಲ್ಲಿ ಗಂಡಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಅಮಾಯಕ ವ್ಯಕ್ತಿಯೊಬ್ಬನ ಮೇಲೆ ಲಾರಿ ಹರಿಸಿ ಕೊಂದು ತಾನೇ ಸತ್ತಿರುವುದು ಎಂಬ ಕಥೆ ಕಟ್ಟಿದ್ದ ಟೈಯರ್ ವ್ಯಾಪಾರಿ ಪೊಲೀಸರ ಅತಿಥಿಯಾಗಿದ್ದಾನೆ. ಹತ್ಯೆ ಮಾಡಲು ಪತಿಗೆ ಸಾಥ್ ನೀಡಿದ್ದ ಪತ್ನಿ ಕೂಡ ಜೈಲೂಟ ಮಾಡುತ್ತಿದ್ದಾರೆ. ದುಡ್ಡಿಗಾಗಿ ಮನುಷ್ಯ ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಹತ್ಯೆಗೆ ಸುಫಾರಿ ನೀಡಿದ್ದ ಆರೋಪಿ ಬೆಂಗಳೂರು ಗ್ರಾಮಾಂತರದ ಹೊಸಪೇಟೆಯ ಮುನಿಸ್ವಾಮಿ ಗೌಡ (49) ಹಾಗೂ ಚಿಕ್ಕಮಗಳೂರಿನ ಲಕ್ಕವಳ್ಳಿಯ ಹೋಬಳಿಯ ದೇವೇಂದ್ರ ನಾಯಕ (35) ಬಂಧಿತರು. ಲಾರಿ ಅಪಘಾತದಲ್ಲಿ ಸತ್ತಿರುವುದು ನನ್ನ ಗಂಡನೇ ಎಂದು ಡ್ರಾಮಾ ಮಾಡಿದ್ದ ಮುನಿಸ್ವಾಮಿ ಗೌಡನ ಪತ್ನಿ ಶಿಲ್ಪಾ ರಾಣಿ ಸಹ ಪೊಲೀಸರ ವಶದಲ್ಲಿದ್ದಾಳೆ. ಇವರಲ್ಲದೆ ಕೊಲೆ ಪ್ರಕರಣದಲ್ಲಿ ಭಾಗಯಾಗಿದ್ದ ಸುರೇಶ್ ಮತ್ತು ವಸಂತ ಕೂಡ ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ ಮೃತ ಯಾರೆಂದು ಪತ್ತೆಯಾಗಿಲ್ಲ.
ತನ್ನನ್ನೇ ಹೋಲುವ ವ್ಯಕ್ತಿಯ ಕೊಲೆ
ಹೊಸಕೋಟೆಯ ಮುನಿಸ್ವಾಮಿ ಗೌಡ ಅವರು ವಿಪರೀತ ಸಾಲ ಮಾಡಿಕೊಂಡಿದ್ದ. ಟೈಯರ್ ವ್ಯಾಪಾರಿಯಾಗಿದ್ದರೂ ವ್ಯಾಪಾರ ಅಂದುಕೊಂಡಂತೆ ನಡೆಯುತ್ತಿರಲಿಲ್ಲ. ಸಾಲದಲ್ಲಿ ಮುಳುಗಿ ಹೋಗಿದ್ದ. ಹೀಗಾಗಿ, ಇನ್ಸೂರೆನ್ಸ್ (ಡಬಲ್ ಆ್ಯಕ್ಸಿಡೆಂಟ್ ಬೆನಿಫಿಟ್) ಮಾಡಿದ್ದ ಹಣವನ್ನು ತಾನು ಬದುಕಿದ್ದಾಗಲೇ ಲಪಟಾಯಿಸಲು ತಂತ್ರ ರೂಪಿಸಿದ್ದ. ಅದರಂತೆ ತನ್ನನ್ನೇ ಹೋಲುವ ವ್ಯಕ್ತಿಯನ್ನು ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರ ಹಳ್ಳಿ ಬಳಿ ಪಂಚರ್ ಆಗಿದೆ ಎಂದು ಕರೆ ತಂದಿದ್ದ.
ಆಗಸ್ಟ್ 13ರಂದು ಬೆಳಗಿನ ಜಾವ 3.15ರ ಸುಮಾರಿಗೆ ಈ ಘಟನೆ ನಡೆದಿತ್ತು. ಆಗ ವಾಹನದ ಚಕ್ರವನ್ನು ಬದಲಿಸುವಂತೆ ಸೂಚಿಸಿದ್ದರು. ಬಕ್ರ ಬದಲಿಸಲು ಕುಳಿತಾಗ ಆತನ ಕುತ್ತಿಗೆಗೆ ಚೈನ್ ಹಾಕಿ ಎಳೆದು ರಸ್ತೆಗೆ ಬೀಳಿಸಿದ್ದನು. ಬಳಿಕ ಲಾರಿ ಚಾಲಕ ದೇವೆಂದ್ರ, ಅಮಾಯಕ ವ್ಯಕ್ತಿಯ ಮೇಲೆ ಲಾರಿ ಹರಿಸಿ ಕೊಲೆಗೈದನು. ನಂತರ ವಾಹನಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.
ತನ್ನ ಗಂಡನೆಂದು ಹೆಂಡತಿ ನಾಟಕ, ಅಂತ್ಯಸಂಸ್ಕಾರ
ಘಟನೆ ಬಳಿಕ ಪತ್ನಿ ಶಿಲ್ಪಾರಾಣಿ ಮೃತ ದೇಹ ನನ್ನ ಗಂಡನದ್ದು ಎಂದು ಹೇಳಿ ನಾಟಕ ಮಾಡಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಆಕೆ, ಅವತ್ತೇ ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಳು. ಆದರೂ ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯಗಳಿದ್ದ ಕಾರಣ ಅನುಮಾನ ವ್ಯಕ್ತಪಡಿಸಿ ಪೊಲೀಸರು ತನಿಖೆ ನಡೆಸಿದ್ದರು.
ಲಾರಿ ಚಾಲಕ ದೇವೇಂದ್ರನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಮುನಿಸ್ವಾಮಿ ಬದುಕಿರುವುದು ಗೊತ್ತಾಯಿತು. ಆದರೆ ಮುನಿಸ್ವಾಮಿ ಬದುಕಿರುವ ವಿಚಾರ ತಿಳಿಸದೆ ಶಿಲ್ಪಾರಾಣಿ ವಿಚಾರಣೆ ನಡೆಸಿದಾಗ ನಾಟಕ ಮುಂದುವರೆಸಿದ್ದಳು. ತಕ್ಷಣ ಪೊಲೀಸರು, ಮುನಿಸ್ವಾಮಿಯನ್ನು ಆಕೆಯ ಎದುರು ನಿಲ್ಲಿಸುತ್ತಿದ್ದಂತೆ ಶಿಲ್ಪಾ ರಾಣಿ ಕಕ್ಕಾಬಿಕ್ಕಿಯಾದಳು. ಕೊನೆಗೆ ಸತ್ಯವನ್ನು ಒಪ್ಪಿಕೊಂಡಳು.
ಹಾಸನದ ಪೊಲೀಸರ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅಪಘಾತ ಪ್ರಕರಣವನ್ನು ಹತ್ಯೆ ಪ್ರಕರಣವೆಂದು ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.